ಜುಲೈ 27, 2013

ಕಾಲೇಜ್ ಹೈಕಳ ಫಜೀತಿ

"ಈ ಅಂಕಣ ಧೈರ್ಯವಂತರಿಗೆ ಮಾತ್ರ, ಹೃದಯ ಗಟ್ಟಿ ಇರುವವರು ಮಾತ್ರ ಓದಿ"

ಕಾಲೇಜ್ ಲೈಫೇ ಹಿಂಗೆ ಕಣ್ರೀ, ಎಲ್ಲಿಗೆ ಹೋಗ್ತಿವಿ, ಏನ್ ಮಾಡ್ತಿವಿ, ಯಾವುದಕ್ಕೋ ಪ್ಲಾನಿಂಗ್ ಇರಲ್ಲ. ಸುಮ್ನೆ ಕುಳಿತುಕೊಳ್ಳುವ ಜಾಯಮಾನ ನಮ್ಮದು ಮೊದಲೇ ಅಲ್ಲ. ಬೆಳಿಗ್ಗೆ ಎದ್ದರೆ ಸಂಜೆ ಯಾವಾಗಾಗುತ್ತೋ ಗೊತ್ತೇ ಆಗಲ್ಲ. ನಾವೇನು ಗುಡ್ಡ ಕಡಿದು ಪಕ್ಕಕ್ಕೆ ಇಡೋದಿಲ್ಲ, ಆದರೂ ಒಂಥರಾ ಬ್ಯುಸಿ ಆಗಿರ್ತೀವಿ.


ದಿನ ಇನ್ನೂ ನೆನಪಿದೆ. CET ಕೌನ್ಸೆಲಿಂಗ್ ಗೆ ಹೋದಾಗ "ಅಪ್ಪಾ ದೇವ್ರೇ, ಜೆ.ಎನ್ಎನ್.ಸಿ.ಯಿ ಕಾಲೇಜ್ ಮೆಕ್ಯಾನಿಕಲ್ ಬ್ರಾಂಚ್ ಸೀಟ್ ಖಾಲಿ ಆಗಬಾರದಪ್ಪ" ಅಂತ ದೇವರಿಗೆ ಒಂದ್ ಐವತ್ತು ಸಲ ಬೇಡಿಕೊಂಡಿದ್ದು, ಸೀನಿಯರ್ಸ್ rag ಮಾಡ್ತಾರೆ ಅಂತ ಮೊದಲ ದಿನ ಕ್ಲಾಸ್ ಗೆ ಚಕ್ಕರ್ ಹಾಕಿದ್ದು, ಇಂಟರ್ನಲ್ಸ್ ಗೆ ಕೊಶ್ಚನ್ಸ್ ಕೊಡಿ ಅಂತ ಟೀಚರ್ಸ್ ಪ್ರಾಣ ತಿಂದಿದ್ದು (ತುಂಬಾ ರುಚಿಯಾಗಿತ್ತು, ಅದು ಬೇರೆ ಮಾತು), ಯಾರಾದ್ರೂ ಮೆಸೇಜ್ ಮಾಡ್ಲಿ ಅಂತ ಕವನ ಗೀಚಿ ಕೆಳಗೆ ಫೋನ್ ನಂಬರ್ ಬರೆದು ಸಿ.ಎಸ್. ಬ್ಲಾಕ್ ಹತ್ರ ಎಸೆದು ಬಂದಿದ್ದು, ಎಕ್ಸಾಮ್ ಹಿಂದಿನ ದಿನ ದೇವಸ್ಥಾನಕ್ಕೆ ಹೋಗಿ ಪೆನ್ ಗೆ ಪೂಜೆ ಮಾಡಿಸ್ಕೊಂಡು ಬಂದಿದ್ದು, ಹಾಸ್ಟೆಲ್ ನಲ್ಲಿ ಮಧ್ಯರಾತ್ರಿ ಮ್ಯಾಗಿ ಮಾಡ್ಕೊಂಡು ತಿಂದಿದ್ದು, ಅಯ್ಯಯ್ಯೋ ಬ್ರಾಂಚ್ ಯಾಕಾದ್ರೂ ತಗೊಂಡೆ ಅಂತ ಮೈಯೆಲ್ಲಾ ಪರಚಿಕೊಂಡಿದ್ದು, ಬಿ.ಟಿ.ಡಿ., .ಟಿ.ಡಿ. ಓದೋಕೆ ನೈಟ್ ಔಟ್ ಮಾಡಿದ್ದು, ಬಸ್ ಶೆಲ್ಟರ್ ತುಂಬಾ " ಪ್ರೀತಿ, ಪ್ರೇಮ, ಎಲ್ಲಾ ಪುಸ್ತಕದ ಬದನೇಕಾಯಿ" ಅಂತ ಉಪೇಂದ್ರ ಸ್ಟೈಲ್ ನಲ್ಲಿ ಕೂಗಾಡಿದ್ದು, ಒಂದು ಹುಡುಗನಿಗೆ ಇನ್ನೊಂದು ಹುಡುಗಿನ ಜೋಡಿ ಮಾಡಿ ಕಾಡಿಸಿದ್ದು, ಕ್ಲಾಸ್ ನಲ್ಲಿ ಮೊಬೈಲ್ ರಿಂಗ್ ಆದಾಗ ಸರ್ ಹೊರಗೆ ಕಳಿಸಿದ್ದು, ಮ್ಯಾನೇಜ್ ಮೆಂಟ್ ಕ್ಲಾಸ್ ಮಾಸ್ ಬಂಕ್ ಮಾಡಿದ್ದು, ಜೀವನ ಬೇಜಾರ್ ಆಗಿ ಫ್ಲಾಪ್ ಸಿನಿಮಾ ಎರಡು ಸಲ ನೋಡಿದ್ದು, ಕೈ ಕೈ ಹಿಡ್ಕೊಂಡು ಓಡಾಡೋರನ್ನ ನೋಡಿ ಹೊಟ್ಟೆ ಉರಿದುಕೊಂಡಿದ್ದು, ಈವೆಂಟ್ ಮಾಡೋಣ ಅಂತ ಹೋಗಿ ಕೈ ಸುಟ್ಟಿಕೊಂಡಿದ್ದು, ಎಥ್ನಿಕ್ ಡೇ ದಿನ ಸೀರೆ ಉಟ್ಟುಕೊಂಡು ಬಂದಿದ್ದ ಹುಡುಗೀರನ್ನ ಕಾಡಿಸೋಕೆ ಹೋಗಿ ಮಿಸ್ ಹತ್ರ ಸೀಜ್ ಆಗಿದ್ದು, ಸೆಕೆಂಡ್ ಶೋ ಸಿನಿಮಾ ಇಂದ ಬರುತ್ತಾ  ಪೋಲಿಸ್ ಹತ್ರ ಸಿಕ್ಕಿ ಹಾಕ್ಕೊಂಡಿದ್ದು, ಗರ್ಲ್ಸ್ ಹಾಸ್ಟೆಲ್ ಹತ್ರ ಜೋರು ಹಾರನ್ ಮಾಡ್ತಾ ಗಾಡಿ ಓಡಿಸಿದ್ದು, ಏನೋ ಮಾಡೋಕೆ ಹೋಗಿ ಅನ್ಯಾಯವಾಗಿ ವಿಲನ್ ಆಗಿದ್ದು...

ಅಯ್ಯಯ್ಯೋ, ಏನ್ರಿ ಇದು?!! ನಮ್ ಹಗರಣಗಳು ಮುಗಿತಾನೆ ಇಲ್ಲ. ಹೋಗ್ಲಿ ಬಿಡಿ. ಅದೆಲ್ಲ ಈಗ್ಯಾಕೆ? ಲೈಫ್ ಅಂದ್ರೆ ನನ್ನ ಪ್ರಕಾರ ನಾವು ಅತ್ತರೂ ಇನ್ನೊಬ್ಬರನ್ನ ನಗಿಸೋದು. ಎಲ್ಲ ಹೇಳ್ತಾರೆ, "ಸ್ಟೂಡೆಂಟ್ ಲೈಫ್ ಇಸ್ ಗೋಲ್ಡನ್ ಲೈಫ್" ಅಂತ. ಆದರೆ ನನ್ನ ಅನಿಸಿಕೆ "ಕಾಲೇಜ್ ಲೈಫ್ ಒಂಥರಾ ಮಾಯಾ ಜಿಂಕೆ ಇದ್ಹಂಗೆ. ಅದನ್ನ ಫಾಲೋ ಮಾಡ್ತಾ ಮಾಡ್ತಾ ನಾವ್ ಎಲ್ಲೋ ಹೋಗಿಬಿಡ್ತೀವಿ. ತಿರುಗಿ ನೋಡೋ ಹೊತ್ತಿಗೆ ಗೆಳೆಯರೂ ಇರಲ್ಲ, ಕಾಲೇಜೂ ಇರಲ್ಲ. ಅವಾಗ ಕಣ್ಣೇರು ಹಾಕೋ ಬದಲು, ಕಾಲೇಜ್ ನಲ್ಲಿ ಇರುವಾಗಲೇ ಸಿಟ್ಟು ದ್ವೇಷ ಮರೆತು ಹಾಯಾಗಿರಿ"

ನಾಲ್ಕು ದಿನದ ಜೀವನ
ನಾಲ್ಕೇ ವರ್ಷದ ಇಂಜಿನಿಯರಿಂಗ್
ಹೇಗೆ ವರ್ಣಿಸಲಿ ನಾನು
ನಾಲ್ಕೇ ಸಾಲಿನ ಕವನದಲಿ


ಜುಲೈ 20, 2013

ನೆನಪಿದೆಯೇ ಅಂದು?


ನೆನಪಿದೆಯೇ ಅಂದು?
ನಮ್ಮೂರ ಹಳ್ಳಿಯಲಿ
ಮುಂಜಾನೆ ಇಸ್ಕೂಲ್ ಗೆ ಲೇಟಾಗಿ
ನಾವಿಬ್ಬರೂ ಬಿಸಿಲಲ್ಲಿ ನಿಂತದ್ದು

ನೆನಪಿದೆಯೇ ಅಂದು?
ಕಾಲೇಜಿಗೆ ಹೋಗದೆ
ಸಿನಿಮಾ ನೋಡಲು ಹೋಗಿ
ಇಳಿಸಂಜೆ ಮಳೆಯಲ್ಲಿ ನೆನೆದದ್ದು

ನೆನಪಿದೆಯೇ ಅಂದು?
ನಿನ್ನ ನಗಿಸಲು ನಾನು
ದಿನವೆಲ್ಲ ಹೋರಾಡಿ
ಕಡೆಗೆ ಸೋತು ಶರಣಾಗಿದ್ದು

ನೆನಪಿದೆಯೇ ಅಂದು?
ನಿನ್ನ ನೆನಪಲಿ ನಾನು
ನಿನ್ ಹೆಸರ ಬರೆಯಲು ಹೋಗಿ
ಈ ಕವನ ಬರೆದದ್ದು