ಹಾಡು ಹಾಡು ಹಾಡು... ನನ್ನೆದೆಯ ಹಾಡು...
ಯಾವ ಕಟ್ಟುಪಾಡು... ಇಲ್ಲದಿರೋ ಹಾಡು...
ಪ್ರೇಮ್ ಕುಮಾರ್ ಅಭಿನಯದ 'ಸವಿ ಸವಿ ನೆನಪು' ಚಿತ್ರಕ್ಕಾಗಿ ಹಾಡಿನ ಬಗ್ಗೆ ಹಾಡಿನಲ್ಲೇ ವರ್ಣನೆ ಮಾಡಿರುವ ಇಂಥದೊಂದು ಹಾಡನ್ನು ಹೃದಯಶಿವ ಬರೆದಿದ್ದಾರೆ. ಹಾಡುಗಳನ್ನು ಬರೆಯಬೇಕು ಅಂತ ಒಮ್ಮೆ ನಿರ್ಧರಿಸಿದರೆ ಆಯಿತು, ಯಾವುದರ ಬಗ್ಗೆ ಬೇಕಾದರೂ ಬರೆಯಬಹುದು. ಅದಕ್ಕೆ ಏನೋ ಹಾಡುಗಳಲ್ಲಿ ಇಷ್ಟೊಂದು ವೈವಿಧ್ಯತೆ ಇರುವುದು. Jazz, Pop, Fusion ನಿಂದ ಹಿಡಿದು ಶಾಸ್ತ್ರೀಯ, ಜಾನಪದ, ನವ್ಯ ಹಾಡುಗಳ ವರೆಗೂ ಏನೇನೆಲ್ಲಾ ಇದೆ. ಒಬ್ಬೊಬ್ಬರಿಗೆ ಒಂದೊಂದು ಬಗೆಯ ಹಾಡುಗಳಿಷ್ಟ. ಯಾವ ಬಗೆಯ ಹಾಡು ಯಾರಿಗೆ ಯಾಕೆ ಇಷ್ಟ? ಹೇಳೋದು ತುಂಬಾನೇ ಕಷ್ಟ!
ಸಾಂದರ್ಭಿಕ ಚಿತ್ರ: Rockstar
ಕೆಲವು ಹಾಡುಗಳೇ ಹಾಗೆ, ಅವು ಒಮ್ಮೆ ಇಷ್ಟ ಆಗಿಹೋದರೆ ಮುಗಿಯಿತು, ಅವುಗಳನ್ನು ಮರೆಯೋದು ಅಸಾಧ್ಯ. ಆ ಹಾಡುಗಳು ಶ್ರೋತೃಗಳ (ಕೇಳುಗರ) ಉಸಿರಲ್ಲಿ ಬೆಸೆದು ಹೋಗಿರುತ್ತವೆ. “ನಾವು ಹುಟ್ಟಿನಿಂದ ಸಾವಿನವರೆಗೂ ಉಸಿರಾಡುತ್ತಲೇ ಇರುತ್ತೇವೆ, ಆದರೆ ಆಗೊಂದು ಸಲ ಈಗೊಂದು ಸಲ ಏದುಸಿರು ಬಿಡುವ ಸಂದರ್ಭ ಬಂದಾಗ ಮಾತ್ರ, ನಾವು ಇನ್ನೂ ಉಸಿರಾಡುತ್ತಿದ್ದೇವೆ ಅಂತ ಗೊತ್ತಾಗುತ್ತದೆ. ಪ್ರೀತಿ ಕೂಡ ಹಾಗೆಯೇ, ನಮ್ಮೊಳಗೇ ಇರುತ್ತದೆ, ಅದು ಎಲ್ಲೂ ಮರೆಯಾಗಿರೋದಿಲ್ಲ, ಅವಳು ಇದ್ದರೂ... ಇರದಿದ್ದರೂ...” ಎಂದು ನಮ್ ಅಣ್ಣತಮ್ಮ ಒಮ್ಮೆ ಒಂದು ಸಲ ತನ್ನವಳ ಬಗ್ಗೆ ಹೇಳುವಾಗ ಈ ಮಾತುಗಳನ್ನು ಹೇಳಿದ್ದ. ಹಂಗೇ ಅದರ ಬಗ್ಗೆನೇ ಯೋಚನೆ ಮಾಡ್ತಿದ್ದೆ, ಈ ಮಾತು ಮೆಚ್ಚಿನ ಹಾಡುಗಳಿಗೂ ಅನ್ವಯಿಸುತ್ತದೆ ಅನಿಸಿತು. ಎಲ್ಲರಿಗೂ ಒಂದಲ್ಲ ಒಂದು ಮೆಚ್ಚಿನ ಹಾಡು ಇದ್ದೇ ಇರುತ್ತದೆ, ಆ ಹಾಡು ಸಿ ಅಶ್ವಥ್ ಹಾಡಿರುವ ಕೋಡಗನ ಕೋಳಿ ನುಂಗಿತ್ತ ಆಗಿರಬಹುದು, ಅಣ್ಣಾವ್ರು ಹಾಡಿರುವ ಹಾಲಲ್ಲಾದರೂ ಹಾಕು ಹಾಡಾಗಿರಬಹುದು, ಇಲ್ಲವೇ ಪ್ರತಿಮಾ ರಾವ್ ಗಾಯನದ ಏನಿಲ್ಲ ಏನಿಲ್ಲ ಹಾಡಾಗಿರಬಹುದು. ಅಂತಹ ಮೆಚ್ಚಿನ ಹಾಡನ್ನು ನಾವು ಪ್ರತಿ ದಿನ ಕೇಳದೇ ಇರಬಹುದು, ಆದರೆ ಎಲ್ಲೋ ಒಂದು ದಿನ ಮೊಬೈಲ್ ನಲ್ಲಿ ಹಾಡು ಕೇಳುವಾಗಲೋ ಇಲ್ಲ ಬಸ್ ನಲ್ಲಿ ಹೋಗುವಾಗಲೋ ಆ ಹಾಡು ಆಕಸ್ಮಿಕವಾಗಿ ಕಿವಿಗೆ ಬಿದ್ದರೆ, ಅದರ ಭಾವ ಮನಸನ್ನು ಪೂರ್ಣವಾಗಿ ಆವರಿಸಿಬಿಡುತ್ತದೆ.
ಆಗಲೇ ಹೇಳಿದಂತೆ, ಕೆಲವು ಹಾಡುಗಳು, ಕೆಲವರಿಗೆ ತುಂಬಾ ಇಷ್ಟ, ಅದೇ ಹಾಡು ಕೆಲವರಿಗೆ ರುಚಿಸುವುದೇ ಇಲ್ಲ. ಅದು ಅವರವರ ಅಭಿರಚಿಯ ಮೇಲೆ ಹೋಗುತ್ತದೆ. ಆದರೆ ಕೆಲವು ಹಾಡುಗಳು ಕೆಲವರಿಗೆ ತಮ್ಮ ಜೀವನದ ಯಾವುದೋ ಒಂದು ಭಾಗದ ಯಥಾರೂಪ ಆ ಹಾಡಿನಲ್ಲಿ ಕಾಣುವುದರಿಂದ ಆ ಹಾಡು ಅವರಿಗೆ ಇನ್ನಿಲ್ಲದಂತೆ ಇಷ್ಟವಾಗುತ್ತದೆ. ಉದಾಹರಣೆಗೆ ಬಾಲ್ಯದ ನೆನಪುಗಳು ಗಾಢವಾಗಿದ್ದರೆ 'ಮೈ ಆಟೋಗ್ರಾಫ್' ಚಿತ್ರದ ಸವಿ ಸವಿ ನೆನಪು ಹಾಡು, ಬ್ರೇಕ್ ಅಪ್ ಪರ್ವದಲ್ಲಿದ್ದರೆ Enrique Iglesias ಹಾಡಿರುವ Heart Attack ಹಾಡು, ಕಾಲೇಜು ದಿನಗಳ ನೆನಪುಗಳೇ ಸಂಪೂರ್ಣವಾಗಿ ಮನಸ್ಸನ್ನು ಆವರಿಸಿದ್ದರೆ Happy Days ಚಿತ್ರದ O My Friend ಹಾಡು ಇಷ್ಟವಾಗಬಹುದು. ಹೀಗೆ ಮನುಷ್ಯ ತನ್ನ ವಯಸ್ಸಿನ ಹಲವು ಘಟ್ಟಗಳಲ್ಲಿ ತಾನು ಆಗಾಗ ಎದುರಿಸುವ ನೋವು / ನಲಿವು / ಸಂಕಷ್ಟಗಳನ್ನು ಹಾಡಿನಲ್ಲಿ ಸಮೀಕರಿಸಿಕೊಂಡು ಅದರೊಂದಿಗೆ ಒಂದು ಭಾವನಾತ್ಮಕ ಸಂಬಂಧ ಬೆಸೆದುಕೊಳ್ಳುತ್ತಾನೆ.
ಸಾಂದರ್ಭಿಕ ಚಿತ್ರ: ಲೂಸಿಯಾ
ಹಾಡು, ಸಂಗೀತ, ಮಾಧುರ್ಯ, ಇನ್ನಿತರ ವಿಷಯಗಳ ಬಗ್ಗೆ ತುಂಬಾ ಹೇಳೋದಿದೆ, ಸದ್ಯಕ್ಕೆ ಇದನ್ನು ಚಿಕ್ಕದಾಗಿ ಮುಗಿಸುವೆ. ಹಾಡಿನ ಬಗ್ಗೆ ಬರೆಯಲು ಮುಖ್ಯ ಕಾರಣ ಏನಪ್ಪಾ ಅಂದ್ರೆ, ಮೊನ್ನೆ ಬಸ್ಸಿನಲ್ಲಿ ಹೋಗುವ ಹೀಗೆ ಹಾಡು ಕೇಳುತ್ತಿದ್ದೆ. ಹೆಂಗಿದ್ರೂ ನಾನು ಕುಳಿತುಕೊಳ್ಳೋದು ಯಾವುದಾದರೂ ಹಿಂದಿನ ಸಾಲಿನ ಕಿಟಕಿ ಬದಿಯ ಸೀಟಿನಲ್ಲಿ. ಹಾಗಾಗಿ ಹಾಡಿಗಿಂತ ನನ್ನ ಗಮನ ದಾರಿಯಲ್ಲಿ ಕಾಣುವ ಮೋಡ, ಸೂರ್ಯ ಹಾಗೂ ಏನು ಮಾಡಿದ್ದೆ? ಏನು ಮಾಡಬೇಕಿತ್ತು? ಏನು ಮಾಡಬಹುದು ಎಂಬಿತ್ಯಾದಿ ಯೋಚನೆಗಳಲ್ಲೇ ಕಾಲಹರಣವಾಗಿರುತ್ತದೆ ಇಂತಿಪ್ಪ ಸಂದರ್ಭದಲ್ಲಿ 'ಕಲಾವಿದ' ಚಿತ್ರದ ಹೇ ನವಿಲೇ ಹಾಡು ಕಿವಿಗೆ ಬಿತ್ತು. ಈ ಪ್ರೀತಿ ಮಾಡೋ ಹುಡುಗ / ಹುಡುಗಿಯರಿಗೆ ತನ್ನ ಹುಡುಗಿ / ಹುಡುಗ ನೆನಪಾಗೋ ಒಂದು ಹಾಡು ಇದ್ದೇ ಇರುತ್ತದೆ ಅನ್ನೋದು ಎಲ್ಲರಿಗೂ ಗೊತ್ತಿರುವ ವಿಷಯ. ನಾವು ಆ ಕಡೆ ಎಲ್ಲಾ ಹೋಗಿಲ್ಲ, ಆದರೂ ಇದೊಂದು ಹಾಡಿನ ಈ ಕೆಳಗಿನ ಸಾಲುಗಳು ತುಂಬಾನೇ ಇಷ್ಟ ಆಗೋಯ್ತು.
ನೀನಿಲ್ಲಿ ಬಂದಿರೆ.. ಹೂನಗುವ ತಂದಿರೆ..
ನೋಡಲ್ಲಿ ತಾರೆ ನಾಚಿದೆ.. ಮಿಂಚದೆ..
ಆ ತಾರೆ ಎನಾದರೇನಾಯಿತು?
ನೀ ದೂರ ಹೋಗದೇ ಇದ್ದರಾಯಿತು..
ನೀನಾಯಿತು.. ಇನ್ನು ನಾನಾಯಿತು..
ಪ್ರೀತಿಸುವ ಹುಡುಗರು ಒಂದೊಂದು ಸಲ ಎಷ್ಟು involve ಆಗಿರ್ತಾರಪ್ಪ ಅಂದ್ರೆ ಆ ಕಡೆ ಏಮಿ ಜಾಕ್ಸನ್ ಬಂದರೂ ಈ ಕಡೆ ನಿಂತಿರುವ ನನ್ನ ಹುಡುಗಿಯೇ ಚೆಂದ ಎಂದು ಅವಳೊಂದಿಗೆ ಹರಟುತ್ತ ನಿಲ್ಲುವುದನ್ನು ನಾವೆಲ್ಲರೂ ಕಾಲೇಜ್ ದಿನಗಳಲ್ಲಿ ಕಂಡಿರುತ್ತೇವೆ. ಆ ರೀತಿ ಪ್ರೀತಿಯ ಆಳದಲ್ಲಿ ಇಳಿದ ಪ್ರೇಮಿಯೊಬ್ಬ ತನ್ನ ಪ್ರೇಯಸಿಯ ನಗುವನ್ನು ನೋಡಿದ ಮೇಲೆ ಅಲ್ಲೆಲ್ಲೋ ಮಿನುಗುವ ನಕ್ಷತ್ರ ನಾಚಿ, ಮಿಂಚದೆ ನಿಂತಿದೆ ಎಂದು ಹಾಡುತ್ತಾನೆ ಅಂಬ ಹಂಸಲೇಖ ಅವರ ಕಲ್ಪನೆ ತುಂಬಾನೇ ವಿಶಿಷ್ಟ ಅಲ್ಲವೇ? ಇದಕ್ಕಿಂತಲೂ ಮಿಗಿಲಾದ ಕಲ್ಪನೆಗಳು, ವರ್ಣನೆಗಳು ಇರಬಹುದು, ಅಂಥದೇ ಚೆಂದದ ಸಾಲುಗಳಲ್ಲಿ ಇದೂ ಒಂದು ಎಂದರೆ ತಪ್ಪಾಗಲಾರದು. ಆ ಹಾಡಿನ ಪರಿಚಯವಿರದಿದ್ದರೆ ಈ ಅಂಕಣ ಓದಿದ ಮೇಲೆ ಕೆಳಗಿನ ಕೊಂಡಿಯನ್ನು ಕ್ಲಿಕ್ಕಿಸಿ ಹಾಡನ್ನು ಒಮ್ಮೆ ನೋಡಿ
ಕಲಾವಿದ ಚಿತ್ರದ 'ಹೇ ನವಿಲೇ' ಹಾಡು
ಇತ್ತೀಚೆಗೆ ಬಿಡುಗಡೆಯಾದ ಹೊಸ ಚಿತ್ರ Tamasha ದ Matargashti ಹಾಡಾಗಿರಲಿ, ಇಲ್ಲವೇ ಹಳೆ ಕನ್ನಡ ಚಿತ್ರ ಕರುಳಿನ ಕರೆಯ ಮೈಸೂರು ದಸರಾ ಎಷ್ಟೊಂದು ಸುಂದರ ಹಾಡಾಗಿರಲಿ, ಹಾಡಿನ ಭಾವ ಒಂದು ಸಲ ಮನಸ್ಸಿಗೆ ತಾಕಿದರೆ ಮುಗಿಯಿತು, ಮುಂದೊಂದಿನ ಆ ಹಾಡನ್ನು ಮತ್ತೆ ಕೇಳಿದಾಗ ಕಾಣದ ಉತ್ಸಾಹ ಮನಸ್ಸನ್ನು ಆವರಿಸದೇ ಇರದು. ಪ್ರಾಯಶಃ ಇದೇ ವಿಚಾರವನ್ನು ಮನಗಂಡು ಆಗಿನ ಕಾಲದಲ್ಲೇ “ಹಾಡು ಹಳೆಯದಾದರೇನು, ಭಾವ ನವನವೀನ” ಎಂದು ಬರೆದಿದ್ದಾರೆ. ಎಲ್ಲಾ ಕಾಲಕ್ಕೂ ಸಲ್ಲುವ ಹಾಡುಗಳು ಕೆಲವು, ಅದರಲ್ಲಿ ಇದೂ ಒಂದು.