ಜನವರಿ 29, 2017

ಅಮ್ಮನ FC ಭಾಗ್ಯ ಯೋಜನೆ


ಹಿಂದಿನ ಅಂಕಣದ ಶುರುವಿನಿಂದ ಶುರು ಮಾಡುವೆ. ಹೆಣ್ಣಿರದ ಭೂಮಿ ಹಂಗೇಕೆ, ಹೆಣ್ಣಿರದ ಸ್ವರ್ಗ ನಂಗೇಕೆ? ಎಂಬುದು ಸರ್ವಕಾಲಿಕ ಸತ್ಯ. ಹೆಣ್ಣು ಅಂದರೆ GF ಅಥವಾ ಹೆಂಡತಿಯಾಗಿ ಮಾತ್ರ ಆಗಬೇಕೆಂದಿಲ್ಲ. ತಾಯಿ, ತಂಗಿ, ಅತ್ತಿಗೆ, ಸ್ನೇಹಿತೆ ಹೀಗೆ ಹಲವಾರು ರೂಪಗಳಲ್ಲಿ ನಮ್ಮ ಜೀವನವನ್ನು ರೂಪಿಸುವಲ್ಲಿ ಅವರ ಪಾಲು ಹಿರಿದು. Being a man, ನಾವು woman ಮೇಲೆ ಎಷ್ಟು ಅವಲಂಬಿತರಾಗಿದ್ದೇವೆ ಅಂದರೆ ಅವರಲ್ಲಿದ ಜಗತ್ತನ್ನು ಊಹಿಸಿಕೊಳ್ಳುವುದೂ ಅಸಾಧ್ಯ. ಇಷ್ಟೆಲ್ಲಾ ಇದೆ, ಆದರೆ ನಾವು ಅವರನ್ನು ತಮಾಷೆ ಮಾಡಬಾರದು ಅಂತ ಎಲ್ಲೂ ಇಲ್ಲವಲ್ಲಾ?! ಆಗಿನ ಹಾಸ್ಯಗಾರರ ಮೆಚ್ಚಿನ ತಮಾಷೆಯ ವಸ್ತು ಯಾವುದು? ಈಗಿನ ಉತ್ಸಾಹಿ ಯುವ standup comedian ಗಳ ನೆಚ್ಚಿನ ಟಾಪಿಕ್ ಯಾವುದು? Yes, ಎರಡಕ್ಕೂ ಒಂದೇ ಉತ್ತರ: ಹೆಣ್ಣು ಮಕ್ಕಳು. ಹೆಂಡತಿ ಅಥವಾ GF ಬಗ್ಗೆ ಈಗಾಗಲೇ ಸುಮಾರು ಜೋಕ್ಸ್ ಹೇಳಿ ಕೇಳಿ ನಕ್ಕಿದ್ದೇವೆ. ಆದರೆ ಅಮ್ಮನ ವಿಷಯದಲ್ಲಿ ಹಾಸ್ಯ ಸ್ವಲ್ಪ ಕಮ್ಮಿಯೇ ಎನ್ನಬಹುದು. 'ಅಮ್ಮ ಎಂದರೆ ಏನೋ ಹರುಷವು, ನಮ್ಮ ಪಾಲಿಗೆ ಅವಳೇ ದೈವವು' ಎಂಬಿತ್ಯಾದಿ ಹಾಡುಗಳ ಪ್ರಭಾವವೇನೋ, ಅಮ್ಮ ಹಾಸ್ಯದ ವ್ಯಾಪ್ತಿಗೆ ಬರಲೇ ಇಲ್ಲ. ಕಾಲ ಬದಲಾಗಿದೆ, ಅಂತೆಯೇ ಅಮ್ಮನೂ ಕೂಡ ಬದಲಾಗಿದ್ದಾರೆ. ಈಗೆಲ್ಲಸ ಅಮ್ಮ ಹೇಳಿದ್ದು ಕೇಳಲಿಲ್ಲ ಅಂದರೆ ಪೊರಕೆ ಕೈಗೆ ತಗೋತಾರೆ, ತಲೆ ಕೆಡಿಸಿದರೆ ನಮ್ಮ ತಲೆಗೆ ಸೌಟಲ್ಲಿ ನಾಲ್ಕು ಕೊಡುತ್ತಾರೆ. ಆದೇನೇ ಆದರೂ Amma is a feel that never ends. ಅಂತಹ ನಮ್ಮ ಮೆಚ್ಚಿನ ಅಮ್ಮ ನಮಗೆ 'Flying Chappal' ಅಥವಾ 'ಮೆಟ್ಟಿನ ಸುರಿಮಳೆ' ಪ್ರಶಸ್ತಿ ನೀಡಿದ ಸನ್ನಿವೇಶಗಳನ್ನು ಇಲ್ಲಿ ಪ್ರಸ್ತುತ ಪಡಿಸುತ್ತಿದ್ದೇನೆ. ಇದನ್ನು ಓದಿ ನಿಮ್ಮ ಲೈಫಿನೊಂದಿಗೆ ನೀವು relate ಮಾಡಿಕೊಂಡ್ರಿ ಅಂದರೆ ಅದೇ ನಮಗೆ weekend bonus. Let's Start.


1. ಕಡೆಲೆ ಬೇಳೆ V/s ಕಡಲೆ ಕಾಳು
ಮಗನಾಗಿ ಪುದೀನ, ಕೊತ್ತಂಬರಿ, ಉಪ್ಪು, ಉಪ್ಪಿನಕಾಯಿ, ಮತ್ತು ಅಮ್ಮ ಆಗಾಗ ಏನು ಏನು ಹೇಳ್ತಾರೋ ಅದನ್ನು ಬಾಯಿ ಮುಚ್ಕೊಂಡು ಅಂಗಡಿಗೆ ಹೋಗಿ ತರಬೇಕು. ಎಷ್ಟೇ ಉಂಡಾಡಿ ಗುಂಡ ಎಂದರೂ ಅಷ್ಟಾದರೂ ಜವಾಬ್ದಾರಿ ಇರಲೇಬೇಕು ಬಿಡಿ. ಇಲ್ಲಾಂದರೆ ನಮ್ಮನ್ನೇ ಜಜ್ಜಿ ಉಪ್ಪಿನಕಾಯಿ ಮಾಡಿ ಬಿಡ್ತಾರೆ ನಮ್ಮಮ್ಮ. ಇದು ಎಲ್ಲರ ಕಥೆ, ಅದರಲ್ಲಿ ಹೊಸತೇನಿಲ್ಲ. ಆದರೆ ಜಸ್ಟ್ ಒಂದು ಸಲ ಕಡಲೆ ಬೇಳೆ ತರೋಕೆ ಹೇಳಿದಾಗ ಕಡಲೆ ಕಾಳು ತನ್ನಿ, ಚಟಾರ್ ಅಂತ ಕೆನ್ನೆ ಮೇಲೆ ಮಾರ್ಕ್ ಬಿದ್ದಿರುತ್ತೆ, ಕೈ ಮಾರ್ಕ್ ಅಲ್ಲ, ಸೌಟು ಮಾರ್ಕ್ ಅಲ್ಲ, flying chappal ದು.


2. ಸ್ನಾನ ಮಾಡಿ, ಪೂಜೆ ಮಾಡೋ. ಆಯ್ತಮ್ಮ.
ವಾರಕ್ಕೆ ಒಂದೇ ಭಾನುವಾರ. ಅಮ್ಮ ಊರಿಂದ ಬಂದಿದ್ದಾರೆ ಅಂತ ರಾತ್ರಿ ಆಫೀಸ್ ಪಾರ್ಟಿಗೆ ಕೂಡ ಹೋಗಿಲ್ಲ. ಗೀತಾ, ಭಾಗ್ಯ, ರುಕ್ಮಿಣಿ ಎಲ್ಲಾ ಎಷ್ಟು ಬೇಜಾರು ಮಾಡ್ಕೊಂಡ್ರೋ ಏನೋ ಅಂತ ನಮ್ ಒನ್ ಸೈಡ್ ಕ್ರಷ್ ಗಳ ನೆನಪಲ್ಲಿ ರಾತ್ರಿ 1 ಗಂಟೆ ವರೆಗೆ ಅವರ dp ನೋಡುತ್ತಾ ಕಾಲ ಕಳೆದಿರುತ್ತೇವೆ. ಇಷ್ಟಾದ ಮೇಲೂ ಬೆಳಿಗ್ಗೆ 10 ಗಂಟೆಗೇ ಎದ್ದೇಳಬೇಕು ಅಂದರೆ ಹೆಂಗೆ ಸ್ವಾಮಿ? ಹೋಗಪ್ಪ, ನಮ್ ಅಮ್ಮ ಭಾರಿ ಕಷ್ಟ ಕೊಡ್ತಾರೆ. ಅಮ್ಮ ಸ್ನಾನ ಮಾಡಿ ಪೂಜೆ ಮಾಡೋ ಅಂದು ಆಗಲೇ 3 ಗಂಟೆ ಆಯ್ತು, ಇನ್ನೂ ಅರ್ಟಿಕಲ್ ಟೈಪ್ ಮಾಡ್ತಾ ಇದ್ದೀನಿ. ಇನ್ನೂ ತಡ ಮಾಡಿದ್ರೆ ದೇವರ ಜೊತೆ ನಮಗೂ ಪೂಜೆ ಗ್ಯಾರಂಟಿ, ಹೂವಿಂದ ಅಲ್ಲ ಅನ್ನೋದು ಬೇರೆ ಮಾತು!


3. ಯಮ್ಮೋ ಯಮ್ಮೋ
ಮೇಲಿನ ಶೀರ್ಷಕೆ ಯಾವು ಹಾಡು ಅಂತ ಗೊತ್ತಾದ್ರೆ ಒಳ್ಳೆಯದು, ಇಲ್ಲವಾದರೆ ಚಿಂಟು ಟಿವಿ ನೋಡಿ, ಡೋರಾ ಚೆನ್ನಾಗಿರುತ್ತೆ. Okay, coming to topic, ಹೀಗೇ ಒಂದು ದಿನ Game of Thrones ಧಾರವಾಹಿಯನ್ನು ನೋಡುತ್ತಿದ್ದೆ. ಇನ್ನೂ ಮೊದಲನೇ ಎಪಿಸೋಡ್ ಬೇರೆ, ಹಾಗಾಗಿ ಏನೇನೆಲ್ಲಾ ಇದೆ ಅನ್ನೋದರ ಬಗ್ಗೆ ಅಷ್ಟು ಕ್ಲ್ಯಾರಿಟಿ ಇರಲಿಲ್ಲ. ಅಡುಗೆ ಕೋಣೆಯಿಂದ ಅಮ್ಮ ಕಾಫಿ ತಗೊಂಡು ಬಂದ್ರು. ಟೈಮು ಅನ್ನೋ ಪಕ್ಕಾ ಅಂದರೆ ಪಕ್ಕಾ 420 ಕಣ್ರೀ, ಕರೆಕ್ಟು ಅದೇ ಸಮಯಕ್ಕೆ Emilia Clarke ಸೀನ್ ಬರಬೇಕಾ! ಹಂಗೇ ಸುಯ್ ಟಪಕ್ ಅಂತ N ಹೊತ್ತಿದೆ. ನಮ್ ಪುಣ್ಯ ಪ್ಲೇಲಿಸ್ಟ್ ಅಲ್ಲಿ 'ಬೆಳ್ಳಿ ಮೂಡಿತೋ, ಕೋಳಿ ಕೂಗಿತೋ' ಸಾಂಗ್ ಇತ್ತು. ಇಲ್ಲಾಂದ್ರೆ ಅವತ್ತೇ, ಅಲ್ಲೇ, ಕ್ಷಣದಲ್ಲೇ ನಮಗೂ flying chappal ಗೂ ಮದುವೆ ಆಗ್ತಿತ್ತು. ಅಷ್ಟ್ರಲ್ಲೇ ಜಸ್ಟ್ ಮಿಸ್ಸು!


4, ಹಲೋ ಹಲೋ
ಫೋನನ್ನೇ ದುರುಗುಟ್ಟಿಕೊಂಡು ದಿನಾ ಪೂರ್ತಿ ನೋಡುತ್ತಾ ಕುಳಿತರೂ ಒಂದೂ ಫೋನ್ ಬರಲ್ಲ, ಸಾಕು ಬಿಡಪ್ಪಾ ಬೋರ್ ಆಯ್ತು, ಕ್ಲಾಸಿಗೆ ಆದರೂ ಹೋಗಿ ಬರೋಣ ಅಂತ ಹೋಗಿ, ಪಾಠ ಕೇಳುವಾಗಲೇ ನಮ್ ಹುಡುಗರು ಫೋನ್ ಮಾಡ್ತಾರೆ, ಅಂಥ ಬ್ಯಾಡ್ ಲಕ್ ನಮ್ದು. ಹಿಂಗಿದ್ದಾಗ, ಅಮ್ಮ ಮನೆಯಲ್ಲಿ ಇದ್ದಾಗ, ಸ್ನಾನಕ್ಕೆ ಹೋದರೆ, ಮರೆಯದೇ ಫೋನ್ ಸೈಲೆಂಟ್ ಮಾಡಿ ಹೋಗ್ತೀನಿ, ಅದೊಂದು safety precaution. ಒಂದು ಸಲ ಅರ್ಜೆಂಟಲ್ಲಿ ಮರೆತು ಹೋಯಿತು. ಫೋನ್ ರಿಂಗ್ ಆಗಿದೆ, ಕಡೆ ಲೈನಲ್ಲಿ ನಮ್ ಕ್ರಷ್, ಯಾರಿಗೋ ಫೋನ್ ಮಾಡಲು ಹೋಗಿ ನನಗೆ ಫೋನ್ ಮಾಡಿದ್ದರು ಅಂತ ಕಾಣುತ್ತೆ. ಅಮ್ಮ ಫೋನ್ ಎತ್ಕೊಂಡ್ರು, ಬರೀ ಇಷ್ಟೇ ಆಗಿದ್ರೆ ಪ್ರಾಬ್ಲಮ್ ಆಗ್ತಾ ಇರಲಿಲ್ಲ. ನಾವು ಯಾವುದೋ ಕನಸಿನ ಜೋಷಲ್ಲಿ ನಮ್ ಕ್ರಷ್ ನಂಬರ್ ಅನ್ನು 'ನಮ್ ಅಮ್ಮನ ಸೊಸೆ' ಅಂತ ಸೇವ್ ಮಾಡಿದ್ದೆ. ಸ್ನಾನದಿಂದ ಬಂದ ಮೇಲೆ ಏನಾಯ್ತು ಗೊತ್ತಿಲ್ಲ, ಎರಡು ದಿನದ ನಂತರ ICU ಅಲ್ಲಿ ಎಚ್ಚರ ಆಯ್ತು. ಪೊರಕೆ ಏಟಿಗೆ ಇಷ್ಟೊಂದು ತಾಕತ್ತು ಇದೆಯಾ ಗುರೂ!


5, ಭಾನುವಾರ ತಿಂಡಿ ಏನು? Obviously ಉಪ್ಪಿಟ್ಟು
ಆಫೀಸಲ್ಲಿ ದಿನಾ ಹೃದಯ ಕರಗುವಂತೆ ಕ್ರಷ್ ಲುಕ್ ಕೊಡ್ತಾಳೆ, routine ಅನಿಸಲ್ಲ. ಅಮೆರಿಕಾ ಹೋಗಬೇಕು ಅಂತ ದಿನಾ ವಿಸಾ ಪ್ರೊಸೀಜರ್ PDF ಓದುತ್ತೇವೆ, ಬೋರ್ ಅನಿಸಲ್ಲ, ಆದರೆ ಭಾನುವಾರ ಬೆಳಿಗ್ಗೆ ಉಪ್ಪಿಟ್ಟು ಅನ್ನೋ ಪದ ಕೇಳಿದರೆ ಧಿಡೀರ್ ಅಂತ Monday Blues ಶುರುವಾಗುತ್ತೆ. ಹೋಗಲಿ ಬಿಡಪ್ಪಾ ಬರೀ ತಿಂಡಿ‌‌ ಅಲಾ ಅಂತ ತಿಂದು, ಮಧ್ಯಾಹ್ನ non veg ಅಥವಾ ಪನ್ನೀರು ಊಟ ಮಾಡಿ, ಎರಡು ರೌಂಡು ಎಮ್ಮೆ ಥರ ನಿದ್ದೆ ಹೊಡೆದು, ಸಂಜೆ ಹುಡುಗರೆಲ್ಲಾ ಸಿಗ್ತಾರೆ ಅಂತ ಆಚೆ ಹೋಗಿರ್ತೀವಿ. ಏನೋ ಜೋಷಲ್ಲಿ ಪಾನಿ ಪೂರಿ ಇಲ್ಲಾ ಫ್ರೈಡ್ ರೈಸ್ ತಿಂದು ಮನೆಗೆ ಬಂದು 'ಅಮ್ಮ ನನ್ನ ಊಟ ಹೊರಗೇನೇ ಆಯ್ತು, ನೀನು ಮಾಡು' ಅಂತ ಹೇಳೋಕೆ ಧಮ್ ಬೇಕು. ಫಲಿತಾಂಶ ಗೊತ್ತಿಲ್ಲದವರು ಮಾತ್ರ ಟ್ರೈ ಮಾಡಿ, ನಮ್ ಸಂಘ ಸೇರ್ಕೊಳ್ಳಿ.


6. ಏ, ನಂಗೂ ಹುಳಿಸೊಪ್ಪು ಹೇಳಿಕೊಡೋ
ಮೊದಲ ಸಂಬಳ, ನಮ್ ಅಮ್ಮಂಗೆ surprise ಆಗಿ ಏನಾದರೂ ಕೊಡಿಸಬೇಕು ಅಂತ ಒಬ್ಬನೇ ಸೀರೆ ಅಂಗಡಿಗೆ ಹೋದೆ. ಕಂಬದಲ್ಲಿ, ಕಂಬದಲ್ಲಿ, ಎಲ್ಲೆಲ್ಲಿಯೂ ಹರಿ ಇರುವಂತೆ, ಸೀರೆ ಅಂಗಡಿಯಲ್ಲಿ ಅವತ್ತು ಬರೀ ಕಾಲೇಜ್ ಹುಡುಗಿಯರೇ ತುಂಬಿದ್ದರು. ಎಷ್ಟೋ ಹೊತ್ತು focus pt, focus ಅಂತ ಸೀರೆಯನ್ನೇ ನೋಡಲು ಹೋದರೂ ಕಣ್ಣುಗಳು ದಾರಿ ತಪ್ಪಿದ ಮಗ ಅಣ್ಣಾವ್ರು ಥರ ಕಾಲೇಜ್ ಹುಡುಗಿಯರ ಕಡೆ ದೃಷ್ಟಿ ಹರಿಯುತ್ತಿತ್ತು. ಇಲ್ಲಿದ್ದರೆ ಎಲ್ಲಾ ಮರೆತು ಹೋಗುತ್ತೆ ಅಂತ ಸಿಂಪಲ್ ಆಗಿ ಒಂದು ಮೊಬೈಲ್ ಗಿಫ್ಟ್ ಕೊಟ್ಟೆ. ಎಲ್ಲಾ ಚೆನ್ನಾಗಿತ್ತು, ಒಂದುದಿನ, ಇದ್ದಕ್ಕಿದ್ದ ಹಾಗೇ ಅಮ್ಮ, "ಏನೋ ಅದು WhatsApp?" ಅಂತ ಕೇಳಿ ಬಿಟ್ಟರು. ಒಂದು ಕ್ಷಣ ನಾವು ಮಾಡಿರೋ ತಪ್ಪುಗಳೆಲ್ಲಾ ಕಣ್ಣ ಮುಂದೆ ಹಾದು ಹೋಯಿತು, ಎಲ್ಲೋ ಏನೋ ಮಿಸ್ ಹೊಡೆದು ಪಕ್ಕಾ ಸಿಕ್ಕಿ ಹಾಕ್ಕೊಂಡೆ ಅಂತ ಗಾಬರಿಯಾದರೂ calm ಆಗಿ ಯಾಕೆ ಅಂದೆ. “ನಮ್ ಫ್ರೆಂಡ್ಸ್ ಎಲ್ಲಾ ನಿನ್ ಫೋನ್ ಗೆ ನಾವೇ WhatsApp ಬರೋ ಥರ ಮಾಡಿದ್ದೀವಿ, ಆದರೂ ನೀನು ಯಾಕೆ ರಿಪ್ಲೈ ಮಾಡಲ್ಲ ಅಂತ ಕೇಳ್ತಾರೆಅಂತ ಹೇಳಿದರು. ಉಸ್ಸಪ್ಪ, ಬದುಕಿದೆಯಾ ಬಡಜೀವ ಅಂತ ನಿಟ್ಟುಸಿರು ಬಿಟ್ಟೆ. The point is, ನಮ್ ಅಮ್ಮ WhatsApp ಬಳಸಿದರೆ ನಮಿಗೇನೂ ಪ್ರಾಬ್ಲಮ್ ಇಲ್ಲ, 'ನಮ್ ಅಮ್ಮನ ಸೊಸೆ' contact ಗೆ ಕಳುಹಿಸುವ ಮೆಸೇಜ್ ಮಿಸ್ ಆಗಿ ಅಮ್ಮನಿಗೆ ಕಳುಹಿಸಿದರೆ ಮತ್ತೊಮ್ಮೆ ICU ಸೇರಬೇಕಲ್ಲಾ ಅಂತ ಬೇಜಾರು!


7. ಊಟಗಳಲ್ಲಿ ನಿನಗೇನಿಷ್ಟ? ಮುದ್ದೆ ಇಷ್ಟ, ನುಂಗೋದ್ ಕಷ್ಟ
ನಮ್ ಅಮ್ಮ ಅಡುಗೆ ಸೂಪರ್, ಅದರಲ್ಲಿ ಎರಡು ಮಾತಿಲ್ಲ. ಆದರೆ ಪಲ್ಯ, ಸೊಪ್ಪು, ಕಾಳು ಅಂತ ಮಾಡಿದರೆ ಯಾರು ತಿಂತಾರೆ ನೀವೇ ಹೇಳಿ. ಹಿಂಗಾದಾಗ ಎಷ್ಟು ತಿನ್ನೋಕಾಗುತ್ತೋ ಅದಕ್ಕಿಂತ ಕಡಿಮೆಯೇ ತಟ್ಟೆಗೆ ಹಾಕಿಸಿಕೊಂಡು ತಿನ್ನುತ್ತಾ ಇರುತ್ತೇವೆ. 'ನೂರೊಂದು ನೆನಪು, ಎದೆಯಾಳದಿಂದ', 'ನಗುವ ಗುಲಾಬಿ ಹೂವೇ', 'ಪ್ರೇಮಾ ಗೀಮ ಜಾನೇ ದೋ' ಇತ್ಯಾದಿ ಹಳೇ ಹಾಡುಗಳು ಬಂದು ಜಮಾನದಲ್ಲಿ ಪ್ರಪೋಸ್ ಮಾಡಲಾಗದ ಹುಡುಗಿ ನೆನಪಾಗಿ ಪಲ್ಯ ತಟ್ಟೆಯಲ್ಲಿ ಬಿಟ್ಟಿರುತ್ತೇವೆ. ಅದಿಕ್ಕೆ ಸೌಟಲ್ಲಿ ಹೊಡೆಯೋದಾ ಗುರೂ!



8. ಬಾರೇ ಸಂತೆಗೆ ಹೋಗೋಣ ಬಾ, ಸಿನಿಮಾ ಟೆಂಟಲ್ಲಿ ಕೂರೋಣ ಬಾ
ಹುಡುಗರಾಗಿ ಹುಡುಗಿ ಜೊತೆ ಸಿನಿಮಾಗೆ ಹೋಗುವ ಆನಂದವೇ ಬೇರೆ, ಹುಡುಗರ ಜೊತೆ ಸಿನಿಮಾಗೆ ಹೋಗುವ ಗಮ್ಮತ್ತೇ ಬೇರೆ. Obviously ಕೆಲಸ ಮುಗಿಸಿಕೊಂಡು ಫಸ್ಟ್ ಷೋ ಅಂದರೆ 6pm ಷೋಗೆ ಹೊರಡೋದು ಬ್ಯಾಂಕಲ್ಲಿ ಕೆಲಸ ಮಾಡುವ ನನಗೇ ಇನ್ನೂ ಸಾಧ್ಯವಾಗಿಲ್ಲ. ಆದ್ದರಿಂದ ಸಾಮಾನ್ಯವಾಗಿ ಎಲ್ಲರೂ prefer ಮಾಡುವ ಷೋ ಸೆಕೆಂಡ್ ಷೋ ಅಂದರೆ 9.30 ಷೋ ಎನ್ನಲಡ್ಡಿಯಿಲ್ಲ. ಏನೋ ತಿಂಗಳಿಗೆ ಒಂದು ಸಲ ಸೆಕೆಂಡ್ ಷೋ ಹೋಗಬಹುದು. ಅದಿಕ್ಕೆ ನಮ್ ಅಮ್ಮ "ನಾಳೆ ನಿನ್ನ ಹೆಂಡತಿ ಬಂದಾಗಲೂ ಹಿಂಗೇ ಸೆಕೆಂಡ್ ಷೋ ಹೋಗ್ತೀಯೇನೋ ಅಂತ ನಾನೂ ನೋಡ್ತೀನಿ ಕಣಪ್ಪಾ ರಾಜಕುಮಾರ" ಅನ್ನಬೇಕಾ? ನಾವು ಬೇರೆ ಜೋಷಲ್ಲಿ "ಮೊದಲು ನಿನ್ನ ಸೊಸೆ ಬರಲಿ ಇರಮ್ಮಾ, ಆಮೇಲಿಂದ್ ಆಮೇಲೆ" ಅಂತ ನಾನೂ ಒಂದು ಪಂಚ್ ಕೊಟ್ಟೆ. ಫ್ಲೋ ಅಲ್ಲಿ ಅಮ್ಮನ ಕೈಯಲ್ಲಿ ಚೊಂಬು ಇದ್ದದ್ದು ನೋಡೇ ಇರಲಿಲ್ಲ. ಅವರೂ ಒಂದು ಪಂಚ್ ಕೊಟ್ಟರು, ಮುಖ ಮೂರು ದಿನ ಪಂಚರ್.


9. ‘ಬಾರಮ್ಮ ಬೇಗ, ನೋಡು ನಿನ್ನ ಸೊಸೆ ಬಂದಿದ್ದಾಳೆ
ನಾನು ಒಂದು ಹುಡುಗಿಯನ್ನು ತುಂಬಾ ಇಷ್ಟ ಪಡುತ್ತಿದ್ದೆ. ಹೆಂಗೋ ಅದೃಷ್ಟ ಕೈ ಹಿಡಿದು ಪ್ರಪೋಸ್ ಮಾಡಿ two way ಕೂಡ ಆಯ್ತು ಬಿಡಿ. ತುತ್ತಾ ಮುತ್ತಾ ಫಿಲಂ ನೋಡಿ ನಮ್ ಹುಡುಗಿಗೂ ನಮ್ ಅಮ್ಮನಿಗೂ ವಾರ್ ಆದರೆ ಕಷ್ಟ ಅಂತ ತುಂಬಾ ಸಲ ಅವಳನ್ನೂ ನಮ್ ಮನೆಗೆ ಕರೆದುಕೊಂಡು ಬಂದಿರಲಿಲ್ಲ. ಒಂದು ದಿನ ಅವಳು ತುಂಬಾ ಹಠ ಮಾಡಿದಳು ಅಂತ ಮನೆಗೆ ಕರೆದುಕೊಂಡು ಬಂದೆ. ಬಲಗಾಲಿಟ್ಟು ಒಳಗೆ ಬಾ ಚಿನ್ನು ಅಂತ ಅವಳಿಗೆ ಒಂದು ಉಚಿತ ಡೈಲಾಗ್ ಅಂಟಿಸಿ ನಿಂತಿದ್ದೆ. ಅಮ್ಮ ಒಳಗಿಂದ ಬಂದರು, ಅದೇನೋ ಫ್ಲೋ ಅಲ್ಲಿ, "ಬಾರಮ್ಮ ಬೇಗ, ನೋಡು ನಿನ್ನ ಸೊಸೆ ಬಂದಿದ್ದಾಳೆ" ಅಂತ ಹಳೇ ಫಿಲಂ ಡೈಲಾಗ್ ಬಂದೇ ಬಿಡ್ತು. ಅಮ್ಮ ಗಾಬರಿ, ಅವಳೂ ಗಾಬರಿ ಮತ್ತು ನಾನೂ ಗಾಬರಿ. ಟೀ ಮಾಡ್ಕೊಂಡು ಬರ್ತೀನಿ ಅಂತ ಅಮ್ಮ ಒಳಗೆ ಹೋದರು, ಸಹಾಯ ಮಾಡ್ತೀನಿ ಅಂತ ಅವಳೂ ಒಳಗೆ ಹೋದಳು. ಹೊರಗೆ ನಮ್ಮ ತಳಮಳ ಯಾಕೆ ಕೇಳ್ತೀರಾ?! ಹೊರಗೆ ಬರ್ತಿದ್ದಂಗೆ ನನ್ನ ಎಲ್ಲಾ embarrassing story ಗಳನ್ನು ಅಮ್ಮ ಹೇಳಿ, ಅಮ್ಮ ಅವಳು ಫುಲ್ ದೋಸ್ತಿ. ಈಗ ನಮ್ ಎಲ್ಲಾ ಕಥೆಗಳೂ ಇಬ್ಬರಿಗೂ ಗೊತ್ತಿರೋದರಿಂದ ಏನೇ ಡವ್ ಮಾಡಿ ಹಾರಿಸೋಕೆ ಹೋದರೂ ಎರಡೆರಡು ಕಡೆ ಇಂದ 'Flying Chappal' ಭಾಗ್ಯ. ಇಸ್ಕೊಳ್ರಪ್ಪಾ ಇವಾಗ.


10. ಸ್ವಚ್ಛ ಭಾರತ ಅಭಿಯಾನ
A man can make a house, but only a woman will make it a home ಎಂಬ ಮಾತಿದೆ. ನಮ್ ಕನ್ನಡ ಕಾವ್ಯ ಪ್ರಕಾರದಲ್ಲಿ ಮನೆಯ ನಂದಾದೀಪ ಬೆಳಗೋದು ಹೆಣ್ಣು ಅಂತಾರಲ್ಲ, ಮಾತು ಅಕ್ಷರಶಃ ನಿಜ ಕಣ್ರೀ. ಊರಲ್ಲಿ ಜಾತ್ರೆ ಅಂತ ನಮ್ ಅಮ್ಮ ಅವರ ಅಮ್ಮನ ಊರಿಗೆ ಹೋದರೆ ಮುಗೀತು ಮನೆಯೆಲ್ಲಾ ಮಂಡೂರು ಆಗಿರುತ್ತೆ. ಊರಿಂದ ಬರುತ್ತಿದ ಹಾಗೆ ಪೊರಕೆ ತಗೊಂಡು ಅಮ್ಮ ಮನೆ ಗುಡಿಸುವುದಕ್ಕಿಂತ ಜಾಸ್ತಿ ನಮ್ ಮಾನ ಮರ್ಯಾದೆ ಗುಡಿಸಿರ್ತಾರೆ ಎಂದರೆ ತಪ್ಪಾಗಲಾರದು. ನಮ್ ಪ್ರಧಾನಿ ಮೋದಿಯವರು 2014 ರಲ್ಲಿ ಆಡಳಿತಕ್ಕೆ ಬಂದ ಮೇಲೆ ಸ್ವಚ್ಛ ಭಾರತ ಅಭಿಯಾನ ಮಾಡಿದರು, ನಮ್ಮ ಅಮ್ಮ ಅದಕ್ಕಿಂತಲೂ ಮೊದಲಿಂದಲೇ ಖಾತೆ ನೋಡಿಕೊಳ್ತಾ ಇದ್ದಾರೆ. ಏನೋ ಬಿಗ್ ಬಾಸ್ ನೋಡ್ತಾ ಮೈ ಮರೆತು ಚಿಪ್ಸ್ ಕವರ್ ಅಲ್ಲೇ ಎಸೆದರೆ ಮುಗೀತು, ಅದೇ ಕ್ಷಣ 'Flying Chappal' punishment ಗ್ಯಾರಂಟಿ. ಎಲ್ಲರ ಮನೆಯ ಬಿಗ್ ಬಾಸ್ ಅಮ್ಮನೇ, ಅಪ್ಪ ಅಲ್ಲ ಅಂತ ಮರೆತದ್ದಕ್ಕೆ ಮರೆಯಲಾಗದ reward ಸಿಕ್ಕಿತು ಬಿಡಿ.

That's all, ಜೀವನ ಎಂದರೆ ಹೀಗೇನೇ, ಆಗಾಗ FC ಗೌರವ ಸಿಗುತ್ತಾ ಇರುತ್ತೆ. ಬಹಳ ಸಲ ತಪ್ಪಿಸಿಕೊಂಡು, ಒಂದೊಂದು ಸಲ ಸಿಕ್ಕಿ ಹಾಕ್ಕೊಂಡು ಮುಂದೆ ಹೋಗುತ್ತಿರಬೇಕಷ್ಟೇ. ಮೇಲೆ ಹೇಳಿದ ಹತ್ತು ಘಟನೆಗಳ ಹಾಗೆ ನೀವೂ ನಿಮ್ಮ ಮನೆಯವರಿಂದ FC ಪಾರಿತೋಷಕ ಪಡೆದಿದ್ದರೆ, congratulations, ಭಾಗ್ಯವಂತರು, ನಾವೇ ಭಾಗ್ಯವಂತರು.