ಮಾರ್ಚ್ 9, 2020

ಸಂತೆಯಲ್ಲಿ ನಿಂತ ನಿನಗೇನು ಬೇಕು?

ಸಾಂದರ್ಭಿಕ ಚಿತ್ರ
ಚಿತ್ರ ಕೃಪೆ: ಪ್ರದೀಪ್ ಎಂ ಆಚಾರ್


ಹೀಗೆ ಒಂದು ದಿನ ಬ್ಯಾಂಕಲ್ಲಿ ಸುಮಾರು ಹತ್ತು ಜನ ಇದ್ದರು ಅಷ್ಟೇ. ಒಬ್ಬ 30ರ ಆಸುಪಾಸಿನ ಹೆಂಗಸು ಯಾವುದೋ ಮದುವೆ ಕಾರ್ಯಕ್ರಮಕ್ಕೆ ಹೋಗುವವರ ಹಾಗೆ ರೆಡಿ ಆಗಿ, 4 ವರ್ಷದ ಮಗಳನ್ನು ಹಾಗೇ ರೆಡಿ ಮಾಡಿ ಕರೆದುಕೊಂಡು ಬಂದಿದ್ದರು. ರೇಷ್ಮೆ ಸೀರೆ, 3-4 ಚಿನ್ನದ ಆಭರಣ ಇತ್ಯಾದಿ. ಆ ಹೆಂಗಸು ಆ ಮಗುವನ್ನು ಕೂರಿಸಿ ಹಣ ಜಮಾ ಮಾಡಿ ಬರಲು ಕೌಂಟರ್ ಬಳಿ ನಿಂತಳು. ನಾನು ಹಾಗೇ ಆ ಮಗುವನ್ನು ನೋಡಿದೆ, 30,000/- ಫೋನು, ರೇಷ್ಮೆ ಲಂಗ, ಬಂಗಾರದ ಸರ, ಬಳೆ, ಪುಟ್ಟ ಬ್ಯಾಗು ಇತ್ಯಾದಿ.

ಆ ಮಗುಗೆ ಇದ್ದಕ್ಕಿದ್ದ ಹಾಗೆ ಕೈಯಲ್ಲಿ ಇದ್ದದ್ದನ್ನು‌ ಇದ್ದಲ್ಲಿಯೇ ಬಿಟ್ಟು ಅಮ್ಮ ಎಂದು ಅಳುತ್ತಾ ಓಡಿ ಬಂದು ಕೌಂಟರ್ ಬಳಿ ಇದ್ದ ಅಮ್ಮನ ತಬ್ಬಿಕೊಂಡಳು.

ನಾನು ಆ ಚಿಕ್ಕ ಮಗುವನ್ನು ನೋಡಿದಾಗ ಫೋನ್, ಬ್ಯಾಗು, ಸರ, ಬಳೆ, ಹೀಗೆ ಬರೀ ಲೌಕಿಕ ವಿಷಯಗಳೇ ಕಂಡವು. ಆ ಮಗುವಿಗೆ ಕಂಡಿದ್ದು ಅವಳ ತಾಯಿ ಮಾತ್ರ.