ಎರಡು ಕಿರುಅಂಕಣಗಳಿವೆ, ಎರಡಕ್ಕೂ ಒಂದೇ ಆರಂಭ, ಆದರೆ ಅಂತ್ಯ ಬೇರೆ ಬೇರೆ. ಇದು ಸೀಕ್ವೆಲ್ ಸಿನಿಮಾಗಳ ರೀತಿಯಲ್ಲ, ಅವು ಒಂದರ ನಂತರ ಒಂದು ತೆರೆದುಕೊಳ್ಳುತ್ತವೆ. ಈ ಅಂಕಣ ಆ ಥರ ಅಲ್ಲ, ಇದರಲ್ಲಿರೋ ಎರಡು ಕಿರುಅಂಕಣಗಳು ಒಂಥರಾ ಬಿ.ಹೆಚ್. ರಸ್ತೆಯಲ್ಲಿ ನಿಂತ ಎರಡು ಬಸ್ಸುಗಳ ಹಾಗೆ. ಒಂದು ಬೆಂಗಳೂರಿಗೆ ಹೊರಟರೆ ಇನ್ನೊಂದು ಹೊನ್ನಾವರಕ್ಕೆ ಹೋಗುತ್ತದೆ. ಎರಡು ಬೇರೆ ಬೇರೆ ದಿಕ್ಕಲ್ಲಿ ಹೋಗ್ತವೆ ಅದು ಇದು ಅಂತ ವರ್ಣನೆ ಮಾಡಿ ಹೇಳೋಣ ಅಂದ್ಕೊಂಡೆ, ಕೆಟ್ಟು ಹೋಯ್ತು. ಹೋಗ್ಲಿ ಬಿಡಿ, ಪೀಠಿಕೆಯಲ್ಲೇ ಜಾಸ್ತಿ ಪಿಟೀಲು ನುಡಿಸೋದನ್ನು ಬಿಟ್ಟು ವಿಷಯಕ್ಕೆ ಬರ್ತೀನಿ.
ಹೊನ್ನಾವರ
ಬಸ್:
"ಎಷ್ಟೋ ಸಲ ನಾವು ಸಂತೋಷನ ಎಲ್ಲೆಲ್ಲೋ ಹುಡುಕ್ತೀವಿ, ಏನೇನೋ ಮಾಡ್ತೀವಿ. ಆದರೆ ಸಂತೋಷ ಅಡಗಿರೋದು ಬದುಕಿನ ದೊಡ್ಡ ದೊಡ್ಡ ಸಂಭ್ರಮದ ದಿನಗಳು / ಘಟನೆಗಳಲ್ಲಿ ಅಲ್ಲ, ಚಿಕ್ಕ ಚಿಕ್ಕ ಕ್ಷಣಗಳಲ್ಲಿ. ಎಷ್ಟೋ ಸಲ ಸಂತೋಷನ ಹುಡುಕುತ್ತಾ ಹೋಗುವ ನಾವು, ಚಿಕ್ಕ ಚಿಕ್ಕ ಕ್ಷಣಗಳಲ್ಲಿ ಅಡಗಿರೋ ಸಂತೋಷನ ನೋಡೋದೇ ಇಲ್ಲ.
ಮೇಲಿನ ಸಾಲು ಅಥವಾ ಇದೇ ಅರ್ಥದ ಸಂಭಾಷಣೆ #73, ಶಾಂತಿ ನಿವಾಸ ಚಿತ್ರದಲ್ಲಿದೆ. ಇದೇ ಡೈಲಾಗ್ ನೆನೆಸಿಕೊಂಡು ಬಹಳ ಹೊತ್ತು ಯೋಚನೆ ಮಾಡಿದ ಮೇಲೆ ಒಂದು ಡೌಟ್ ಬಂತು, "ನಮ್ ಅಣ್ಣತಮ್ಮ ಸಂತೋಷ ಯಾವಾಗಿಂದ ಕೆಲಸ ಬಿಟ್ಟು ಅಲ್ಲಿ ಇಲ್ಲಿ ಅಡಗಿಕೊಳ್ಳೋದಕ್ಕೆ ಶುರು ಮಾಡಿದ ಅಂತ?"
(ಸಂತು ಪರಿಚಯ ಇದ್ದವರಿಗೆ ಈ ಪಿಜೆ ಸ್ವಲ್ಪ ನಗು ತರಿಸಬಹುದು, ಇಲ್ಲಾಂದ್ರೆ ಕ್ಷಮಿಸಿ, ಬನ್ನಿ, ಬೆಂಗಳೂರು ಬಸ್ ಹತ್ತಿಸ್ತೀನಿ)
ಸಾಂದರ್ಭಿಕ ಚಿತ್ರ
ಬೆಂಗಳೂರು
ಬಸ್:
"ಎಷ್ಟೋ ಸಲ ನಾವು ಸಂತೋಷನ ಎಲ್ಲೆಲ್ಲೋ ಹುಡುಕ್ತೀವಿ, ಏನೇನೋ ಮಾಡ್ತೀವಿ. ಆದರೆ ಸಂತೋಷ ಅಡಗಿರೋದು ಬದುಕಿನ ದೊಡ್ಡ ದೊಡ್ಡ ಸಂಭ್ರಮದ ದಿನಗಳು / ಘಟನೆಗಳಲ್ಲಿ ಅಲ್ಲ, ಚಿಕ್ಕ ಚಿಕ್ಕ ಕ್ಷಣಗಳಲ್ಲಿ. ಎಷ್ಟೋ ಸಲ ಸಂತೋಷನ ಹುಡುಕುತ್ತಾ ಹೋಗುವ ನಾವು, ಚಿಕ್ಕ ಚಿಕ್ಕ ಕ್ಷಣಗಳಲ್ಲಿ ಅಡಗಿರೋ ಸಂತೋಷನ ನೋಡೋದೇ ಇಲ್ಲ"
ಬೆಳಿಗ್ಗೆ ಎದ್ದು, ಸ್ನಾನ ಮಾಡಿ, ತಿಂಡಿ ತಿಂದು, ಕಾಫಿ ಕುಡಿದು, ಬಸ್ ಗಾಗಿ ಕಾಯುತ್ತ ನಿಂತಿದ್ದೆ. ಚಳಿಗಾಲದ ಈ ಸಮಯದಲ್ಲಿ, ಬಸ್ ನಿಲ್ದಾಣದ ನೆರಳಿನಿಂದ ಸ್ವಲ್ಪ ಹೊರಗೆ ಬಂದು, ಮುಂಜಾನೆಯ ಎಳೆಬಿಸಿಲಿನಲ್ಲಿ ನಿಂತಾಗ ಒಂಥರಾ ಸಂತೋಷ ಆಯ್ತು. ಥಟ್ಟನೆ ಹೊಳೆದ #73, ಶಾಂತಿ ನಿವಾಸ ಚಿತ್ರದ ಮೇಲಿನ ಸಾಲು ಅಥವಾ ಇದೇ ಅರ್ಥದ ಸಂಭಾಷಣೆ ಎಷ್ಟು ನಿಜಾ ಅಲ್ವಾ! ಸಂತೋಷ ಅಡಗಿರೋದೇ ಬದುಕಿನ ಚಿಕ್ಕ ಚಿಕ್ಕ ಕ್ಷಣಗಳಲ್ಲಿ. ಮಳೆಗಾಲದಲ್ಲಿ ಕಿಟಕಿಯ ಬಳಿ ಕುಳಿತು ಜನರನ್ನು ನೋಡೋದು, ವಾರಾಂತ್ಯದಲ್ಲಿ ಗೆಳೆಯರನ್ನು ಭೇಟಿಯಾದಾಗ "ಏ ಕಣ್ಣು ಮುಚ್ಚೋ, ಅವಳು ನಿಮ್ ಅತ್ತಿಗೆ" ಅಂತ ಪಂಚ್ ಕೊಡೋದು, ಇಷ್ಟವಾದ ಹಾಡನ್ನು ಬೇಜಾರಾಗುವ ತನಕ ರಿಪೀಟ್ ಮೋಡಿನಲ್ಲಿ ಕೇಳೋದು, ಇವು ಹಾಗು ಇದೇ ಬಗೆಯ ಚಿಕ್ಕ ಚಿಕ್ಕ ಕ್ಷಣಗಳು ಇಂಗ್ಲೀಷ್ ಭಾಷೆಯಲ್ಲಿ ಹೇಳುವ ಹಾಗೆ Underrated Pleasure
Moments. ಛೇ, ನಾನು IAS ಆಫೀಸರ್ ಆಗಬೇಕು ಅಂತಿದ್ದೆ, ಆಲಿಯ ಭಟ್, ಆಶಾ ಭಟ್, ಆಕ್ಸಾ ಭಟ್ ಥರ ನಾನೂ ಮಾಡೆಲಿಂಗ್ ನಲ್ಲಿ ಒಂದ್ ಟ್ರೈ ಮಾಡಬಹುದಿತ್ತಲ್ವಾ, ನಮ್ ಅಪ್ಪ ಹತ್ರ ಈ ಪುಟ್ಟ Lamb ಬದಲು ದೊಡ್ಡ Lamborhini Car ಇದ್ದಿದ್ರೆ ಚೆನ್ನಾಗಿರ್ತಾ ಇತ್ತಲ್ಲ, ಹಂಗಲ್ವಾ ಹಿಂಗಲ್ವಾ ಅಂದ್ಕೊಂಡು ನಾವು ಯಾವಾಗಲೂ ದೊಡ್ಡ ದೊಡ್ಡ ಕನಸುಗಳ ಬೆನ್ನೇರಿ ಹೊರಟಿರುತ್ತೇವೆ, ಆಗುತ್ತೋ ಬಿಡುತ್ತೋ ಅದು ಬೇರೆ ಮಾತು. ದೊಡ್ಡ ಕನಸು, ಗುರಿ, ಆಕಾಂಕ್ಷೆಗಳು ಇರಬಾರದು ಅಂತ ಕೂಡ ನಾನು ಹೇಳುತ್ತಿಲ್ಲ. ಜೊತೆಯಲ್ಲಿ ಈ ಥರ ಸಣ್ಣ ಪುಟ್ಟ ಆನಂದದ ಕ್ಷಣಗಳನ್ನು ಅನುಭವಿಸುವ ಮನಸ್ಸಿದ್ದರೆ ಸಾಕು. ಓಡಿಸೋದು TVS XL 50 ನೇ ಆದರೂ ಬುಲೆಟ್ ಓಡಿಸ್ತಾ ಇದ್ದೀನಿ, ಹಿಂದೆ ಖುಷಿ ಇದ್ದಾಳೆ, ಮುಂದೆ ಹೋಗ್ತಾ ಇರೋ ಕಾರಲ್ಲಿ ಎಡಕಲ್ಲು ಗುಡ್ಡದ ಮೇಲೆ ಚಿತ್ರದ “ಸಂತೋಷ... ಆಹಾ... ಒಹೋ...” ಹಾಡು ಕೇಳಿಸುತ್ತಿದೆ ಅಂತ ನನ್ನ ಹಾಗೆ ನೀವೂ ಕೂಡ ಅಂದ್ಕೊಳ್ಳುವವರಾದರೆ ಫೋನ್ ಮಾಡಿ “ಸಂತೋಷ ವೆಡ್ಸ್ ಖುಷಿ” ಅಂತ ಒಂದು ಬೋರ್ಡ್ ಮಾಡಿಸಿ ಬಿಡ್ತೀನಿ, ಅದೂ ಆಗಿ ಬಿಡ್ಲಿ ಅತ್ಲಾಗೆ.