ಜೂನ್ 22, 2021

ದೇವನಿರುವನು ನಮ್ಮೊಳಗೆ ಇರುವನು

ಕನ್ನಡಿಗರ ವೇದಿಕೆ‌ ಕಥಾ ಸ್ಪರ್ಧೆ
ವಿಷಯ: ಕೊರೊನ
ಕಥೆ ಹೆಸರು: *ದೇವನಿರುವನು, ನಮ್ಮೊಳಗೆ ಇರುವನು*



ಬೆಳಿಗ್ಗೆ ಬ್ಯಾಂಕ್ ಗೆ ಕೆಲಸಕ್ಕೆ ಬರುವಾಗ ಸಂಜೆ ಡ್ಯೂಟಿ ಮುಗಿಸಿಕೊಂಡು ಆದಷ್ಟು ಬೇಗನೇ ಹೊರಡುವ ಲೆಕ್ಕಾಚಾರ ಹಾಕಿಕೊಂಡೇ ಬಂದಿದ್ದೆ. ಮಧ್ಯಾಹ್ನ ಊಟ ಮಾಡಿ ಕೆಲಸ ಮುಗಿಸಿ ಇನ್ನೇನು ಹೊರಡುವ ಹೊತ್ತಿಗೆ ಕಾಲೇಜ್ ವಾಟ್ಸಾಪ್ ಗ್ರೂಪಿನಲ್ಲಿ ಕಾವ್ಯ ಅವರು ತಂಗಿಯ ಹೆರಿಗೆ ಆಪರೇಷನ್‌ ನಾಳೆ ಇರುವುದರಿಂದ ಬಿ ಪಾಸಿಟಿವ್ ರಕ್ತದ ಅಗತ್ಯವಿದೆ ಎಂದು ಮೆಸೇಜ್ ಕಳುಹಿಸಿದ್ದರು. ನನಗೆ ಸಹಾಯ ಮಾಡಬೇಕೆಂಬ ಮನಸ್ಸಿದ್ದರೂ ನನ್ನದು ಎಬಿ ಪಾಸಿಟಿವ್ ರಕ್ತ ಆಗಿದ್ದರಿಂದ ಏನೂ ಸಹಾಯ ಮಾಡಲಾಗದ ಪರಿಸ್ಥಿತಿಯಲ್ಲಿದ್ದೆ. ಮತ್ತು ಹೊರಗೆ ಮಳೆ ಇನ್ನೂ ಜೋರಾಗಿ ಬರುತ್ತಿದ್ದರಿಂದ ಸ್ವಲ್ಪ ಹೊತ್ತು ಬ್ಯಾಂಕ್ ನಲ್ಲೇ ಇದ್ದು ನಂತರ ಹೋಗೋಣ ಅಂತ ಕಾಯುತ್ತಿದ್ದೆ. ಅಷ್ಟರಲ್ಲಿ ಬೇರೆ ಯಾವುದೇ ರಕ್ತದ ಗುಂಪಾದರೂ ನೆಡೆಯುತ್ತೆ, ಏಕೆಂದರೆ ರಕ್ತ‌ನಿಧಿಗೆ ಬದಲಿ ರಕ್ತ ಒದಗಿಸಿದರೆ ಆಯಿತು ಎಂಬ ಮಾಹಿತಿ ಬಂತು. ಮಾಸ್ಕ್ ಧರಿಸಿ, ಸ್ಯಾನಿಟೈಸರ್ ಡಬ್ಬಿ ಕಾರ್ ನಲ್ಲಿ ಇಟ್ಟುಕೊಂಡು ಶಿವಮೊಗ್ಗಕ್ಕೆ ಹೊರಟೆ. ಶಿವಮೊಗ್ಗ ತಲುಪಿ ರಕ್ತ ನೀಡಿ, ಅವರು ಕೊಟ್ಟ ಆರೆಂಜ್ ಜ್ಯೂಸ್ ಕುಡಿದು ಹೊರಗೆ ಬಂದು ಕುರ್ಚಿಯ ಮೇಲೆ ಕುಳಿತೆ. ಕಾವ್ಯ ಮತ್ತು ಅವರ ಅಮ್ಮ ಬಂದು ಮಾತನಾಡಿಸಿದರು. ಸರಿ, ಇನ್ನೇನು ಹೊರಡುವ ಸಮಯವಾಯಿತು, ಕತ್ತಲಾದರೆ ಪ್ರಯಾಣ ತೊಂದರೆಯಾಗುತ್ತದೆ ಎಂದು ನಾನು ಹೊಹೊರಡುತ್ತೇನೆ ಎಂದು ಹೇಳಿ ಹೊರಟೆ. 

ಬರುವಾಗ ಪಿಇಎಸ್ ಕಾಲೇಜ್ ನಿಂದ ಮುಂದೆ ಒಂದು ಹಳ್ಳಿಯಲ್ಲಿ ಹೋಟೆಲ್ ನಲ್ಲಿ ಊಟ ಪಾರ್ಸಲ್ ತೆಗೆದುಕೊಂಡು ಸಾಗರದ ಕಡೆ ಹೊರಟೆ.  
ಮುಂದೆ ಆನಂದಪುರದಲ್ಲಿ ಪೊಲೀಸ್ ಸಬ್‌ ಇನ್ಸ್ಪೆಕ್ಟರ್ ಒಬ್ಬರು ಲಿಫ್ಟ್ ಕೇಳಿದರು. ಕಾರ್‌ ನಿಲ್ಲಿಸಿ ಹಿಂದಿನ‌ ಸೀಟ್ ಗೆ‌ ಹತ್ತಿಸಿಕೊಂಡೆ. ಅಲ್ಲೇ‌ ಪಕ್ಕದಲ್ಲಿ ಸ್ಯಾನಿಟೈಸರ್ ಡಬ್ಬಿಯಿಂದ ಸ್ವಲ್ಪ ಕೈಗೆ ಹಾಕಿಕೊಂಡು ಕೈ ತೊಳೆದುಕೊಂಡರು. ಮತ್ತೆ ಮುಂದೆ ಹೊರಟು ಒಂದ್ ಐದು ಕಿಲೋಮೀಟರ್ ಸಾಗಿದ ನಂತರ ಒಂದು ನದಿ ಸೇತುವೆ ಹತ್ತಿರ ಮಳೆ ಬಂದು ನೀರೆಲ್ಲಾ ತುಂಬಿ ರಸ್ತೆ ತುಂಬಾ ಗುಂಡಿ ಬಿದ್ದು ಹೋಗಿತ್ತು. ಇರೋದರಲ್ಲೇ ಸ್ವಲ್ಪ ಅನುಸರಿಸಿಕೊಂಡು ನಿಧಾನವಾಗಿ ಹೋಗೋಣ ಅಂತ ಕಾರ್ ನಿಧಾನವಾಗಿ ಚಲಾಯಿಸುತ್ತಿದ್ದಾಗ ಪೊಲೀಸ್ ಇನ್ಸ್‌ಪೆಕ್ಟರ್ ಪ್ರದೀಪ್ ಅವರು ಕಾರ್ ನಿಂದ ಇಳಿದು ಓಡಿ ಹೋಗಿ ಸೇತುವೆಯ ಹತ್ತಿರ ನಿಂತರು. ಚಲಿಸುತ್ತಿದ್ದ ಕಾರ್ ನಿಂದ ಏಕಾ ಏಕಿ ಅವರು ಇಳಿದು ಹೋಗಿದ್ದು ನೋಡಿ ನನಗೂ ಆತಂಕವಾಯಿತು. ಕಾರ್‌ ನಿಲ್ಲಿಸಿ ಸೇತುವೆಯ ಹತ್ತಿರ ಹೋದೆ, ಅಲ್ಲಿ ಒಬ್ಬ ವ್ಯಕ್ತಿ ಆತ್ಮಹತ್ಯೆ ಮಾಡಿಕೊಳ್ಳಲು ಸೇತುವೆಯಿಂದ ಇನ್ನೇನು ಜಿಗಿಯುವನಿದ್ದ. ಪ್ರದೀಪ್ ಸರ್ ಇಳಿದು ಹೋಗಿ ಓಡುವ ಹೊತ್ತಿಗೆ ಅವನು ನಿಂತ. ನಾನೂ ಅವರ ಪಕ್ಕ ಹೋಗಿ ನಿಂತೆ. ಹತ್ತಿರ ಬಂದರೆ ಕೂಡಲೇ ನದಿಗೆ ಬೀಳುವುದಾಗಿ ಹೆದರಿಸಿದ. ಪ್ರದೀಪ್ ಸರ್ ಅವರ ಫೋನ್ ನನಗೆ ಕೊಟ್ಟು ಲೋಕೇಶ್ ಅನ್ನುವ ನಂಬರ್ ಗೆ ಕರೆ ಮಾಡಿ ಬೇಗ ಬರಲಿಕ್ಕೆ ಹೇಳಿ ಎಂದರು. ನಾನು ಈ ಕಡೆ ಬಂದು ಲೋಕೇಶ್ ಅವರಿಗೆ ಫೋನ್ ಮಾಡಿ ಎಲ್ಲಾ ವಿಷಯ ವಿವರಿಸಿ ಬೇಗ ಬರಲು ಹೇಳಿ ಫೋನ್ ಇಟ್ಟೆ. ಅಷ್ಟರಲ್ಲಿ ಈ ಕಡೆ ಪ್ರದೀಪ್ ಸರ್ ಆ ವ್ಯಕ್ತಿಯನ್ನು ಆತ್ಮಹತ್ಯೆ ಪ್ರಯತ್ನವನ್ನು ನಿಲ್ಲಿಸುವಂತೆ ಮನವೊಲಿಸಿ ಅವನನ್ನು ಕಾಪಾಡಿ ಕಾರ್ ನಲ್ಲಿ ಕೂರಿಸಿದ್ದರು. ನಾನು ಕುಡಿಯಲು ನೀರು ಮತ್ತು ಆರೆಂಜ್ ಜ್ಯೂಸ್ ಕೊಟ್ಟು, ಮಾಸ್ಕ್ ನೀಡಿದೆ. ಅಷ್ಟರಲ್ಲಿ ಕಾನ್ ಸ್ಟೇಬಲ್ ಲೋಕೇಶ್ ಮತ್ತು ಅವರ ತಂಡ ಪೊಲೀಸ್ ಜೀಪ್ ನಲ್ಲಿ ಸೇತುವೆ ದಾಟಿ ಬಂದು ವಿಷಯದ ಬಗ್ಗೆ ಮಾಹಿತಿ ಪಡೆದರು. 

ಕೊರೋನ ಮಹಾಮಾರಿಯ ಹೊಡೆತದಿಂದ ಬೆಂಗಳೂರಿನಲ್ಲಿ ಕೆಲಸ ಕಳೆದುಕೊಂಡು, ಲಾಕ್ ಡೌನ್ ನಲ್ಲಿ ಊರಲ್ಲಿ ಕೆಲಸ ಸಿಗದೆ, ನೊಂದು ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ್ದಾಗಿ ಬಿಕ್ಕಿ ಬಿಕ್ಕಿ ಅಳುತ್ತಾ ವಿವರಿಸುತ್ತಿದ್ದ. ಆಗ ಕಾವ್ಯ ಅವರ ಫೋನ್ ಬಂತು. ಅವರ ತಂಗಿಯ ಹೆರಿಗೆಯ ವಿಷಯದಲ್ಲಿ ಏನೋ ಸಮಸ್ಯೆಯಾಗಿ ನಾಳೆ ಮಾಡಬೇಕಿದ್ದ ಆಪರೇಷನ್ ಈಗಲೇ ಮಾಡಿದ್ದಾರೆ. ಎಲ್ಲಾ ಚೆನ್ನಾಗಿ ಆಗಿ ಹೆಣ್ಣು ಮಗುವಿಗೆ ಜನ್ಮ ನೀಡಿ, ತಾಯಿ ಮಗು ಇಬ್ಬರೂ ಆರೋಗ್ಯವಾಗಿದ್ದಾರೆ ಅಂತ ಹೇಳಿದರು. ನಾನು‌ ಪ್ರದೀಪ್ ಸರ್ ಗೆ ಆ ವ್ಯಕ್ತಿಯ ಜೀವ ಉಳಿಸಿದ್ದಕ್ಕೆ ಧನ್ಯವಾದ ಹೇಳಿ, ಶಿವಮೊಗ್ಗಕ್ಕೆ ಹೋಗಿ ವಾಪಸ್ ಬರುತ್ತಿದ್ದ ಬಗ್ಗೆ ಹೇಳಿ ಹೆಣ್ಣು ಮಗು ಹುಟ್ಟಿದ ಗುಡ್ ನ್ಯೂಸ್ ತಿಳಿಸಿದೆ. ಎಲ್ಲಾ ಸರಿ ಆಗಿ, ಎಲ್ಲಾ ಒಳ್ಳೆಯದಾಯಿತು ಬಿಡಿ, Thank God ಅಂತ ಅವರು ಜೀಪ್ ಹತ್ತಿ, ನಾನು ನನ್ನ ಕಾರ್ ಹತ್ತಿ ಹೊರಡುವ ಹೊತ್ತಿಗೆ ಎದುರಿಗಿದ್ದ ಸೇತುವೆ ಕುಸಿಯಿತು. ಎಲ್ಲೋ ಹೋರಾಟ ಮಾಡುತ್ತಿದ್ದ ಎರಡು ಜೀವಗಳು ನನ್ನ ಮತ್ತು‌ ಪ್ರದೀಪ್‌ ಸರ್ ‌ಸಹಾಯದಿಂದ ಮತ್ತೊಂದು ಸೂರ್ಯೋದಯ ನೋಡುವಂತಾಯಿತು. ಅಲ್ಲೆಲ್ಲೋ ಉಳಿದ ಜೀವಗಳು ಹರಸಿ ನಮ್ಮೆರಡು ಜೀವಗಳು ಸೇಯುವೆ ಕುಸಿತದಿಂದ ನಮ್ಮ ಪ್ರಾಣ ಹೋಗುವುದನ್ನು ತಪ್ಪಿಸಿದವು. ಕೊರೊನದಿಂದ ಇಡೀ ಜಗತ್ತೇ ಸಂಕಷ್ಟದಲ್ಲಿ ಸಿಲುಕಿ ನರಳುತ್ತಿರುವಾಗ ದೇವರು ನಮ್ಮ ಮುಖದ ‌ಮೇಲೆ ಮಂದಹಾಸ ಮೂಡಲು ಸಣ್ಣ ಸಣ್ಣ ಕಾರಣ ಕೊಡುತ್ತಾನೆ, ಅವುಗಳಿಗೆ ನಾವು ಕಾಯಬೇಕು ಎಂದುಕೊಂಡು ಕಾರ್ ನಲ್ಲಿ ಬೇರೆ ಹಳ್ಳಿ ದಾರಿಯಲ್ಲಿ ‌ಮನೆ‌ಕಡೆ‌ ಹೋಗುತ್ತಿದ್ದೆ. ಅಷ್ಟರಲ್ಲಿ ಕಾವ್ಯ ಅವರಿಂದ ಮತ್ತೊಂದು ಸಂದೇಶ ಬಂದಿತು. ಏನು‌ ಅಂತ ನೋಡಿದಾಗ ತಾಯಿ ಮಗು ಜೊತೆಯಾಗಿ ನಗುತ್ತಿದ್ದ ಫೋಟೋ ಅದರಲ್ಲಿತ್ತು. ನೋಡಿ ಸಂತಸದಿಂದ ಮನೆ ಕಡೆ ಹೊರಟೆ. 

ಜೂನ್ 13, 2021

ಮುಂದೆ ನೋಡೋಣ

ಅವ್ವ ಪುಸ್ತಕಾಲಯದ ವತಿಯಿಂದ ಆಯೋಜಿಸಿದ್ದ ನ್ಯಾನೋ ಕಥೆ ಸ್ಪರ್ಧೆಗಾಗಿ ಕಳುಹಿಸಿದ್ದ ಕಥೆ, ಆಯ್ಕೆಯಾಗಲಿಲ್ಲ ಆ ಮಾತು ಬೇರೆ!!


***

ಶುಕ್ರವಾರ ಆಫೀಸ್‌ ಮುಗಿಸಿ ಮನೆಗೆ ಬಂದೆ. ವಾರಾಂತ್ಯ ಮತ್ತು ಹಬ್ಬದ ಪ್ರಯುಕ್ತ ನಾನು ಮತ್ತು ಕಾವ್ಯ ಒಂದು ವಾರ ರಜೆಯನ್ನು ಊರಲ್ಲಿ ಕಳೆಯೋಣ ಎಂದು ನಿರ್ಧರಿಸಿ ಶನಿವಾರ ಬೆಳಿಗ್ಗೆ 6ಕ್ಕೆ ಬನಶಂಕರಿ ಬಿಟ್ಟು ಚಿತ್ರದುರ್ಗಕ್ಕೆ ಹೊರಟೆವು. ಬರುವಾಗ ದಾರಿಯಲ್ಲಿ ಕ್ಯಾತ್ಸಂದ್ರದ ಹತ್ತಿರ ತಟ್ಟೆ ಇಡ್ಲಿ ತಿಂದು ಮುಂದೆ ಸಾಗಿದೆವು. ಮನೆ ಹತ್ತಿರ ಬಂದ ಹಾಗೆ ಊರಿಗೆ ಹೋಗಿ ಏನು‌ ಮಾಡಬೇಕು? ಒಂದು ವಾರ ರಜೆಯನ್ನು ಎಲ್ಲೆಲ್ಲಿ ಹೋಗಬಹುದು? ತಿರುಗಿ ಬೆಂಗಳೂರಿಗೆ ಬಂದಾಗ ಆಫೀಸ್ ನಲ್ಲಿ‌ ಎದುರಾಗಬಹುದಾದ ಹೆಚ್ಚುವರಿ ಕೆಲಸ ಹೇಗೆ ಏನು ಅಂತ ಚಿಂತೆಯಾಗತೊಡಗಿತು. ಯೋಚನೆಗಳ ಸುಳಿಯಲ್ಲಿ ಹಿರಿಯೂರಿನ ಬಳಿ ತಿರುವು ತಗೊಂಡು ‌ಎಡಕ್ಕೆ ಹೋಗಬೇಕಾದವನು ಹಾಗೇ ಮುಂದೆ ಹೋಗಿ ಬಿಟ್ಟೆ. ಪಕ್ಕದಲ್ಲಿ ಕಾವ್ಯ ಇನ್ನೂ ಮಲಗೇ ‌ಇದ್ದಳು. ಮುಂದೆ‌ ಹೋಗಿ ಯೂ‌ ಟರ್ನ್ ಹೊಡೆದು ವಾಪಸ್ ಬಂದು ಚಿತ್ರದುರ್ಗದ ಕಡೆ ತಿರುವು ಪಡೆದು ಹಳೇ ಹಾಡು ಗುನುಗುತ್ತಾ ಸಾಗುತ್ತಿದ್ದೆ. ಹಾಗೇ ನಿಧಾನವಾಗಿ ಹೋಗುವಾಗ ಪಕ್ಕದಲ್ಲೇ ಎಳನೀರು ಅಂಗಡಿ‌ ಕಾಣಿಸಿತು. ಎಳನೀರು‌ ಕುಡಿಯುತ್ತಾ ನಿಂತಾಗ ರೇಡಿಯೋದಲ್ಲಿ ಈ ಮೊದಲು ಗುನುಗುತ್ತಿದ್ದ ಅದೇ ಹಾಡು ಶುರುವಾಯಿತು. ಹಾಡು ಮುಗಿದು ಎಳನೀರು ಖಾಲಿಯಾಗುವ ಹೊತ್ತಿಗೆ ಆಫೀಸ್ ಮತ್ತು ಭವಿಷ್ಯದ ಯೋಚನೆ ಮತ್ತೆ ಆವರಿಸಿತು.

ಕಾವ್ಯ: ಏನು ಚಿಂತೆ?

ನಾನು: ಏನಿಲ್ಲ.

ಕಾವ್ಯ: ಇಂದಿನ ಚಿಂತೆ‌ ಇಂದಿಗೆ ಸಾಕು, ಮುಂದಿನ ಚಿಂತೆ ಬಂದಾಗ‌ ನೋಡೋಣ. ಈಗ ಹೋಗೋಣ?

ನಾನು: ಹ್ಹ ಹ್ಹ, ಬನ್ನಿ ಹೋಗೋಣ.

ಎಳನೀರಿನ ಒಳಗೆ ನನ್ನ ಚಿಂತೆ ಆಲೋಚನೆಗಳನ್ನು‌ ತುಂಬಿ ಅದನ್ನು ಅಲ್ಲೇ ಎಸೆದೆ.