ಅವ್ವ ಪುಸ್ತಕಾಲಯದ ವತಿಯಿಂದ ಆಯೋಜಿಸಿದ್ದ ನ್ಯಾನೋ ಕಥೆ ಸ್ಪರ್ಧೆಗಾಗಿ ಕಳುಹಿಸಿದ್ದ ಕಥೆ, ಆಯ್ಕೆಯಾಗಲಿಲ್ಲ ಆ ಮಾತು ಬೇರೆ!!
***
ಶುಕ್ರವಾರ ಆಫೀಸ್ ಮುಗಿಸಿ ಮನೆಗೆ ಬಂದೆ. ವಾರಾಂತ್ಯ ಮತ್ತು ಹಬ್ಬದ ಪ್ರಯುಕ್ತ ನಾನು ಮತ್ತು ಕಾವ್ಯ ಒಂದು ವಾರ ರಜೆಯನ್ನು ಊರಲ್ಲಿ ಕಳೆಯೋಣ ಎಂದು ನಿರ್ಧರಿಸಿ ಶನಿವಾರ ಬೆಳಿಗ್ಗೆ 6ಕ್ಕೆ ಬನಶಂಕರಿ ಬಿಟ್ಟು ಚಿತ್ರದುರ್ಗಕ್ಕೆ ಹೊರಟೆವು. ಬರುವಾಗ ದಾರಿಯಲ್ಲಿ ಕ್ಯಾತ್ಸಂದ್ರದ ಹತ್ತಿರ ತಟ್ಟೆ ಇಡ್ಲಿ ತಿಂದು ಮುಂದೆ ಸಾಗಿದೆವು. ಮನೆ ಹತ್ತಿರ ಬಂದ ಹಾಗೆ ಊರಿಗೆ ಹೋಗಿ ಏನು ಮಾಡಬೇಕು? ಒಂದು ವಾರ ರಜೆಯನ್ನು ಎಲ್ಲೆಲ್ಲಿ ಹೋಗಬಹುದು? ತಿರುಗಿ ಬೆಂಗಳೂರಿಗೆ ಬಂದಾಗ ಆಫೀಸ್ ನಲ್ಲಿ ಎದುರಾಗಬಹುದಾದ ಹೆಚ್ಚುವರಿ ಕೆಲಸ ಹೇಗೆ ಏನು ಅಂತ ಚಿಂತೆಯಾಗತೊಡಗಿತು. ಯೋಚನೆಗಳ ಸುಳಿಯಲ್ಲಿ ಹಿರಿಯೂರಿನ ಬಳಿ ತಿರುವು ತಗೊಂಡು ಎಡಕ್ಕೆ ಹೋಗಬೇಕಾದವನು ಹಾಗೇ ಮುಂದೆ ಹೋಗಿ ಬಿಟ್ಟೆ. ಪಕ್ಕದಲ್ಲಿ ಕಾವ್ಯ ಇನ್ನೂ ಮಲಗೇ ಇದ್ದಳು. ಮುಂದೆ ಹೋಗಿ ಯೂ ಟರ್ನ್ ಹೊಡೆದು ವಾಪಸ್ ಬಂದು ಚಿತ್ರದುರ್ಗದ ಕಡೆ ತಿರುವು ಪಡೆದು ಹಳೇ ಹಾಡು ಗುನುಗುತ್ತಾ ಸಾಗುತ್ತಿದ್ದೆ. ಹಾಗೇ ನಿಧಾನವಾಗಿ ಹೋಗುವಾಗ ಪಕ್ಕದಲ್ಲೇ ಎಳನೀರು ಅಂಗಡಿ ಕಾಣಿಸಿತು. ಎಳನೀರು ಕುಡಿಯುತ್ತಾ ನಿಂತಾಗ ರೇಡಿಯೋದಲ್ಲಿ ಈ ಮೊದಲು ಗುನುಗುತ್ತಿದ್ದ ಅದೇ ಹಾಡು ಶುರುವಾಯಿತು. ಹಾಡು ಮುಗಿದು ಎಳನೀರು ಖಾಲಿಯಾಗುವ ಹೊತ್ತಿಗೆ ಆಫೀಸ್ ಮತ್ತು ಭವಿಷ್ಯದ ಯೋಚನೆ ಮತ್ತೆ ಆವರಿಸಿತು.
ಕಾವ್ಯ: ಏನು ಚಿಂತೆ?
ನಾನು: ಏನಿಲ್ಲ.
ಕಾವ್ಯ: ಇಂದಿನ ಚಿಂತೆ ಇಂದಿಗೆ ಸಾಕು, ಮುಂದಿನ ಚಿಂತೆ ಬಂದಾಗ ನೋಡೋಣ. ಈಗ ಹೋಗೋಣ?
ನಾನು: ಹ್ಹ ಹ್ಹ, ಬನ್ನಿ ಹೋಗೋಣ.
ಎಳನೀರಿನ ಒಳಗೆ ನನ್ನ ಚಿಂತೆ ಆಲೋಚನೆಗಳನ್ನು ತುಂಬಿ ಅದನ್ನು ಅಲ್ಲೇ ಎಸೆದೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ