“ಅಂಕಲ್, ಅಂಕಲ್, ಒಂದು ಪುಸ್ತಕಕ್ಕೆ ₹10/- ಆದರೆ, 10 ಪುಸ್ತಕಕ್ಕೆ ಎಷ್ಟು ಆಗುತ್ತೆ?”
“ಗೊತ್ತಿಲ್ಲಮ್ಮ, ಗೆಸ್ ಮಾಡ್ತೀನಿ, ₹99/-?”
“ಅಯ್ಯೋ ಅಂಕಲ್, ಟೆನ್ ಟೆನ್ಜ಼ಾ ಹಂಡ್ರೆಡ್, ಅಷ್ಟೂ ಗೊತ್ತಿಲ್ಲವಾ, ಆ ಬ್ಯಾಂಕಲ್ಲಿ ಅದೇನು ಲೆಕ್ಕ ಮಾಡ್ತೀರೋ ಏನೋ?!!”
ನಾನು ಮನಸ್ಸಲ್ಲೇ ಅಂದುಕೊಂಡೆ, ಈ ಪುಟ್ಟ ಹುಡುಗಿ, ತಮಾಷೆಗೆ ತಪ್ಪು ಉತ್ತರ ಹೇಳೋಣ ಅಂದ್ಕೊಂಡೆ, ಈಕೆ ನೋಡಿದರೆ ನನಗೇ ದಡ್ಡ ಅಂತ ಬಾಂಬ್ ಇಟ್ಟು ನಿಂತ್ಕೋತಾಳೆ, ಮಾಡ್ತೀನಿ ಇರು ಅಂತ ಪ್ರಶ್ನೆ ಶುರು ಮಾಡಿದೆ.
“ವಾಟ್ ಈಸ್ ಯುವರ್ ನೇಮ್?”
“ಮೈ ನೇಮ್ ಈಸ್ ರಿಧಿಮಾ”
“ಅದರ ಸ್ಪೆಲ್ಲಿಂಗ್ ಹೇಳು ನೋಡೋಣ”
“R I D H I M A, ಅಂದರೆ ಸಂಪತ್ತು ಮತ್ತು ಅದೃಷ್ಟ ಅಂತ”
“ಓಹೋ ಹಾಗಾ?! ಸರಿ, ಅದರ ಸ್ಪೆಲ್ಲಿಂಗ್ ಉಲ್ಟಾ ಹೇಳು ನೋಡೋಣ?”. ಈ ಪ್ರಶ್ನೆಗೆ ಅವಳು ತಯಾರಾಗಿರಲಿಲ್ಲ. ಈ ಪ್ರಶ್ನೆಗೆ ರಿಧಿಮಾ ತಲೆ ಕೆಟ್ಟು ಚಿತ್ರಾನ್ನ ಆಯ್ತು ಅಂದರೆ ತಪ್ಪಾಗಲ್ಲ ಅನ್ನಬಹುದು. ಯಾಕೆಂದರೆ ಈ ಮಾತನ್ನು ಅವಳೇ ಹೇಳಿದ್ದು, “ಅಯ್ಯೋ ಅಂಕಲ್, ನಿಮ್ ಪ್ರಶ್ನೆಗೆ ನನ್ ತಲೆ ಕೆಟ್ಟು ಚಿತ್ರಾನ್ನ ಆಯ್ತು, ರಿಧಿಮಾ ಉಲ್ಟಾ ಬರೆದರೆ M A H I D, ಆಮೇಲೆ R I, ಕರೆಕ್ಟ್ ಕರೆಕ್ಟ್, ಈಗ ಚಾಕೊಲೇಟ್ ಕೊಡಿ” ಅಂದಳು. ಅದು ತಪ್ಪು ಉತ್ತರ ಅಂತ ನನಗೆ ಗೊತ್ತಾಯ್ತು, ಇರಲಿ ಅಂತ ಬಿಟ್ಟು ಮುಂದೆ ಹೋದೆ.
“ಸರಿ ಅವತ್ತು ಕಥೆ ಹೇಳು ಅಂತಿದ್ದಲ್ಲಾ, ಇವತ್ತು ಹೇಳಲಾ, ಓಕೆನಾ?”
“ಏನೋ ಒಂದು, ಚಾಕ್ಲೇಟ್ ಮಾತ್ರ ಬೇಕೇ ಬೇಕು”
“ಸರಿ, ಶುರು ಮಾಡೋಣ, ಒಂದು ವಿಶಾಲವಾದ ಕಾಡು, ಆ ಕಾಡಲ್ಲಿ ಒಂದು ಒಂಟಿ ಮರ ಇರುತ್ತದೆ.”
“ವಿಶಾಲವಾದ ಕಾಡಲ್ಲಿ ಒಂಟಿ ಮರ ಯಾಕೆ ಇರುತ್ತೆ, ಜಾಸ್ತಿ ಇರಬೇಕು ಅಲ್ವಾ?”
“ಅಯ್ಯೋ, ಶಿವಾ ಕೃಷ್ಣ ಭಗವಂತ, ಪೂರ್ತಿ ಕೇಳಮ್ಮ ನೀನು. ಆ ಒಂದು ಮರ ಒಂದು ದಿನ ನಾನು ಮನುಷ್ಯ ಆಗಿದ್ರೆ ಎಷ್ಟು ಚೆನ್ನಾಗಿ ಇರುತಿತ್ತು ಅಂತ ಅಂದ್ಕೊಂಡಿತು, ಆಗ ಆ ದೇವರು ಪ್ರತ್ಯಕ್ಷ ಆಗಿ ತಥಾಸ್ತು ಅಂತ ಹೇಳಿ ಮಾಯವಾದರು. ಅರೇ ಶಿವಾ ಈಗ ಬಂದು ಮಾಯವಾಗಿದ್ದು ನಿಜವಾಗಿಯೂ ದೇವರೇನಾ ಅಂತ ಮರ ಕಣ್ಣ್ ಮುಚ್ಚಿ ತೆಗೆದು ನೋಡುತ್ತೆ, ಅದು ಒಂದು ಮನುಷ್ಯ ಆಗಿದೆ. ಆ ಕಡೆ ನೋಡಿ ಈ ಕಡೆ ನೋಡಿ ಥ್ಯಾಂಕ್ ಗಾಡ್ ಅಂತ ಮನದಲ್ಲೇ ಖುಷಿ ಪಟ್ಟು ಪ್ರಕೃತಿಯ ಅಂದವನ್ನು ಸವೆಯುತ್ತಾ ನಿಂತಿತು. ಅದರ ಸುತ್ತ ಮುತ್ತ ಇದ್ದ ಸಣ್ಣ ಪುಟ್ಟ ದೊಡ್ಡ ಗಿಡ ಮರ ಬಳ್ಳಿ ಎಲ್ಲವನ್ನು ಮುಟ್ಟಿ ಅದರ ಅನುಭವವನ್ನು ಪಡೆಯಿತು. ಆಗ ಆ ಮರಕ್ಕೆ ಬಾಯಾರಿಕೆ ಆದಂತೆ ಆಗಿ ನೀರಿನ ಕಡೆ ನೋಡಿತು, ಆಗ ಅಲ್ಲೇ ಪಕ್ಕ ಇದ್ದ ನದಿಯ ಬಳಿ ಹೋಯಿತು. ಆ ನದಿಯನ್ನು ನೋಡಿ ನೀರನ್ನು ಮುಟ್ಟಲು ಭಯವಾಗಿ ದೂರ ನಿಂತಿತು. ಹಾಗೆ ಧೈರ್ಯ ಮಾಡಿ ನೀರನ್ನು ಮುಟ್ಟಿ ನದಿಯ ಒಳಗೆ ಇಳಿದು ಮುಳುಗಿ ಎದ್ದೇಳಿತು, ಈಜು ಕಲಿಯಿತು, ಹಾಗೆ ಕೆಲವು ದಿನಗಳು ಕಳೆದವು. ಅದು ಮನುಷ್ಯ ಜೀವನದ ಎಲ್ಲ ಕಷ್ಟ ಸುಖ ನೋವು ನಲಿವು ಎಲ್ಲವನ್ನು ಒಂದೊಂದಾಗೆ ಅನುಭವಿಸುತ್ತಾ ಬಂತು. ಒಂದು ದಿನ ಹೀಗೆ ಮನುಷ್ಯ ಜೀವನ ಸಾಕಾದಂತೆ ಅನಿಸಿ ಅದು ದೇವರನ್ನು ಪ್ರಾರ್ಥನೆ ಮಾಡಿ "ಓ ದೇವರೇ ನನ್ನನ್ನು ಮತ್ತೆ ಮರವನ್ನಾಗಿ ಮಾಡು, ನಾನು ಮರವಾಗಿ ಏನೇನು ನೋಡಲಾಗಲಿಲ್ಲವೋ ಅದನ್ನೆಲ್ಲ ನೋಡಿದೆ, ಆನಂದಿಸಿದೆ ಸುಖ ದುಃಖ ಅನುಭವಿಸಿದೆ, ಈಗ ನಾನು ವಾಪಸ್ ಮರವಾಗ ಬಯಸುತ್ತೇನೆ” ಎಂದು ಕೇಳಿತು. ಆಗ ಆ ದೇವರು ಪ್ರತ್ಯಕ್ಷವಾಗಿ, ಮನುಷ್ಯವಾಗಿದ್ದ ಮರವನ್ನು ಮರಳಿ ಮರವನ್ನಾಗಿ ಮಾಡಿ ಮಾಯವಾದರು. ಆ ಮರ ದೇವರಿಗೆ ಧನ್ಯವಾದ ಹೇಳಲು ಕೈ ಮುಗಿಯಲು ಹೋಯಿತು, ಆದರೆ ಆಗಲಿಲ್ಲ, ಅದು ಅದಾಗಲೇ ಮರವಾಗಿ ಹೋಗಿತ್ತು. ಅಲ್ಲಿರುವುದು ನಮ್ಮನೆ ಇಲ್ಲಿ ಬಂದೆ ಸುಮ್ಮನೆ ಅಂತ ಪುರಂದರ ದಾಸರ ಮಾತಿನಂತೆ ಮನುಷ್ಯ ಜೀವನ ಮರದ ಜೀವನ ಇತ್ಯಾದಿಗಳ ಅನುಭವಗಳನ್ನು ತುಲನೆ ಮಾಡುತ್ತಾ ನಿಂತಿತು. ಆಗ ಒಂದು ರಾತ್ರಿ ಒಬ್ಬ ವ್ಯಕ್ತಿ ಬಂದು ಮರದ ಕೆಳಗೆ ಕುಳಿತು ಧ್ಯಾನ ಮಾಡುತ್ತಿದ್ದರು. ಬೆಳಗ್ಗೆ ಆಗುವ ಹೊತ್ತಿಗೆ ಆ ವ್ಯಕ್ತಿಗೆ ಜ್ಞಾನೋದಯವಾಗಿ ಅವರು ಬೇರೆ ಊರಿಗೆ ಹೋಗಿದ್ದರು. ಮರು ದಿನ ಹೀಗೆ ಮರ ಹಾಗೆ ಏನನ್ನೋ ಯೋಚನೆ ಮಾಡುತ್ತಾ ನಿಂತಿತ್ತು. ಆಗ ಒಬ್ಬ ಮರ ಕಡಿಯುವ ವ್ಯಕ್ತಿ ಈ ಮರ ತುಂಬಾ ಚೆನ್ನಾಗಿದೆ, ಇದನ್ನು ಕಡಿದು ಮಾರುಕಟ್ಟೆಗೆ ಸಾಗಿಸಿದರೆ ಒಳ್ಳೆ ಹಣ ಸಂಪಾದನೆ ಆಗುತ್ತದೆ ಅಂತ ಯೋಚನೆ ಮಾಡಿ, ಆ ಮರವನ್ನು ಕಡಿಯಲು ಶುರು ಮಾಡಿದನು. ಸ್ವಲ್ಪ ಹೊತ್ತಿನ ನಂತರ ಏಕಾಏಕಿ ಬಿಸಿಲು ಶುರುವಾಗಿ ಆ ಮರ ಕಡಿಯುವ ವ್ಯಕ್ತಿ ಒಂದೇ ಸಮನೆ ಬೆವರಲು ಶುರು ಮಾಡಿದನು. ಸಾಯಂಕಾಲದ ಒಳಗೆ ಇದನ್ನು ಕಡಿದು ಮಾರುಕಟ್ಟೆಗೆ ಸೇರಿಸಲೇ ಬೇಕು ಅಂತ ಪಣ ತೊಟ್ಟು ಬೇಗ ಬೇಗ ಕಡಿಯಲು ಶುರು ಮಾಡಿದನು ಆಗ, ಕೈ ಕೊಂಚ ಬೆವರು ಹೆಚ್ಚಾಗಿ ಕೊಡಲಿ ಜಾರಿ ನದಿಗೆ ಬಿದ್ದಿತು. ಆ ವ್ಯಕ್ತಿ ಚಿಂತಾಕ್ರಾಂತನಾಗಿ ದೇವರಲ್ಲಿ ಪ್ರಾರ್ಥನೆ ಮಾಡಿದನು. ಆ ದೇವರು ಪ್ರತ್ಯಕ್ಷವಾಗಿ ಆ ವ್ಯಕ್ತಿಗೆ ಬಂಗಾರದ ಕೊಡಲಿಯನ್ನು ಕೊಟ್ಟರು, ಆ ವ್ಯಕ್ತಿ ಪ್ರಾಮಾಣಿಕತೆಯಿಂದ ಈ ಕೊಡಲಿ ನನ್ನದಲ್ಲ ಎಂದು ಹೇಳಿದನು, ಆ ದೇವರು ಆಗ ಬೆಳ್ಳಿಯ ಕೊಡಲಿಯನ್ನು ಕೊಟ್ಟರು, ಆ ವ್ಯಕ್ತಿ ಮತ್ತೆ ಪ್ರಾಮಾಣಿಕತೆಯಿಂದ ನಿರಾಕರಿಸಿದನು. ಆಗ ಆ ದೇವರು ಆ ವ್ಯಕ್ತಿಯ ಪ್ರಾಮಾಣಿಕತೆಯನ್ನು ಮೆಚ್ಚಿ ಅವನ ಸ್ವಂತ ಕೊಡಲಿಯನ್ನು ನೀರಿಂದ ಎತ್ತಿ ಕೊಟ್ಟು, ಬಂಗಾರ ಮತ್ತು ಬೆಳ್ಳಿ ಕೊಡಲಿಯನ್ನು ಮಾರಿ ಜೀವನ ಸುಧಾರಿಸಿಕೊಳ್ಳಲು ಹೇಳಿ ಆ ದೇವರು ಮಾಯವಾದರು. ಆ ವ್ಯಕ್ತಿ ಮರವನ್ನು ಕಡಿದು ಕಟ್ಟಿಗೆ ಮಾಡಿ ತಲೆ ಮೇಲೆ ಹೊತ್ತುಕೊಂಡು ಹೊರಟನು. ಆ ಮರ ತುಂಡಾಗಿ ದಾರಿ ಉದ್ದಕ್ಕೂ ದೇವರೇ ದೇವರೇ ನನ್ನನ್ನು ಕಾಪಾಡು ಅಂತ ಎಷ್ಟು ಬೇಡಿದರೂ ದೇವರು ಪ್ರತ್ಯಕ್ಷವಾಗಲಿಲ್ಲ. ಆ ವ್ಯಕ್ತಿ ಆ ಕಡಿದ ಮರವನ್ನು ಮಾರುಕಟ್ಟೆಯಲ್ಲಿ ಮಾರಿ ಹಣ ಸಂಪಾದನೆ ಮಾಡಿ ಮನೆಗೆ ಸೊಪ್ಪು ತರಕಾರಿ ಹಾಲು ಇತ್ಯಾದಿ ತೆಗೆದುಕೊಂಡು ಹೋದನು. ಆ ಮರದ ತುಂಡು ಕೊಂಡ ವ್ಯಕ್ತಿ ಸಾಮಿಲ್ ಗೆ ತಗೊಂಡು ಹೋಗಿ ‘ಗೂಡು’ ಎಂದು ಚಿತ್ತಾಕರ್ಷವಾಗಿ ಕಾರ್ವಿಂಗ್ ಮಾಡಿ ತನ್ನ ಹೊಸದಾಗಿ ಕಟ್ಟಿದ ಮನೆಯ ಮುಂದೆ ಬೋರ್ಡ್ ಆಗಿ ಹಾಕಿಕೊಂಡನು. ಅಲ್ಲಿಗೆ ಈ ಕಥೆ ಮುಗಿಯಿತು, ಈ ಮೂರು ಕಥೆ ಉಳ್ಳ ಕಥೆ ಇಂದ ನಿನಗೆ ಏನು ಅರ್ಥವಾಯಿತು ಹೇಳು?”.
ರಿಧಿಮಾ ಏನೋ ಯೋಚನೆ ಮಾಡುತ್ತಾ ನಿಂತಳು. ನಾನು ಕಥೆಯ ನೀತಿ ಹೇಳಿದೆ. ಈ ಕಥೆಯ ಪ್ರಾಮಾಣಿಕ ಮರ ಕಡಿಯುವ ವ್ಯಕ್ತಿಯ ಕಥೆ ನಿನಗೆ ಗೊತ್ತೇ ಇದೆ, ಆ ವ್ಯಕ್ತಿ ಎಲ್ಲರಿಗೂ ಒಳ್ಳೆಯದನ್ನು ಮಾಡುವವನು ಆಗಿದ್ದನು, ಅವನಿಗೆ ಎಲ್ಲವೂ ಒಳ್ಳೆಯದೇ ಆಯಿತು. ಈ ಕಥೆಯಲ್ಲಿ ಬರುವ ಮರ ಯಾರಿಗೂ ಕೆಡುಕು ಮಾಡಲಿಲ್ಲ, ಆದರೂ ಆ ಮರಕ್ಕೆ ಒಳ್ಳೆಯದು ಆಗಲಿಲ್ಲ. ಹಾಗೆ ಆ ಮರದ ಕೆಳಗೆ ಜ್ಞಾನೋದಯ ಆದ ವ್ಯಕ್ತಿಗೆ ಜೀವನದಲ್ಲಿ ಒಳ್ಳೆಯದೂ ಆಗಿತ್ತು, ಕೆಟ್ಟದೂ ಆಗಿತ್ತು, ಆದರೂ ಆ ವ್ಯಕ್ತಿ ತನ್ನ ಜೀವನದ ಮುಂದಿನ ಭಾಗದಲ್ಲಿ ಇತರರಿಗೆ ಒಳ್ಳೆಯದನ್ನು ಮಾಡುವುದನ್ನು ನಿಲ್ಲಿಸಲಿಲ್ಲ. ಕೆಟ್ಟ ಜನ ಅಂತ ಇರಲ್ಲ, ಎಲ್ಲರಲ್ಲೂ ಒಳ್ಳೆ ಮನಸ್ಸು ಕೆಟ್ಟ ಮನ್ಸಸು ಅಂತ ಇರುತ್ತೆ, ಅದು ಕೆಲವೊಮ್ಮೆ ಕೆಟ್ಟ ಘಳಿಗೆಯಲ್ಲಿ ಇನ್ನೊಬ್ಬರಿಗೆ ಕೆಡುಕನ್ನು ಮಾಡಿಬಿಡುತ್ತದೆ. ಇನ್ನೊಬ್ಬರಿಗೆ ಕೆಡುಕು ಮಾಡುವುದು ಎಷ್ಟು ಸುಲಭವೂ, ಒಳಿತು ಮಾಡುವುದು ಅಷ್ಟೇ ಕಷ್ಟ. ನಾವು ಎಲ್ಲರಿಗೂ ಒಳ್ಳೆಯದು ಮಾಡಬೇಕು ನಮಗೆ ಒಳ್ಳೆಯದು ಆಗುತ್ತದೆ ಎಂಬ ಸ್ವಾರ್ಥ ಬಿಟ್ಟು, ನಮಗೆ ಆಗುವ ಒಳಿತು ಕೆಡುಕು ಆಮೇಲೆ, ನಾನು ಯಾರಿಗೂ ಕೆಡುಕು ಮಾಡುವುದಿಲ್ಲ ಎಂದು ಜೀವನ ಮಾಡಬೇಕು, ಆ ರೀತಿ ಒಳಿತನ್ನು ಪಾಠ ಮಾಡುವ ದೇವರು ನಮ್ಮ ಒಳಗೆ ಇರುತ್ತಾರೆ, ನಮ್ಮ ನಡುವೆಯೇ ಓಡಾಡುತ್ತಾ ಇರುತ್ತಾರೆ, ಅವರು ಬಂದು ಹೋಗುವುದು ಒಮ್ಮೊಮ್ಮೆ ನಮಗೆ ಅರಿವಾಗುವುದೇ ಇಲ್ಲ. ಬಹುಮಾನದ ಆಸೆ ಮೇಲೆ ಒಳಿತನ್ನು, ಒಳ್ಳೆ ಗುಣವನ್ನು ನಮ್ಮದಾಗಿಸಿಕೊಳ್ಳಬಾರದು. ಪ್ರಯತ್ನ ನಮ್ಮದು, ಫಲವನ್ನು ನೀ ನೀಡು ದೇವಾ, ಏನು ಬಂದರೂ ನಾ ಸ್ವೀಕರಿಸುವೆ ಎಂಬ ನೇರ ಮತ್ತು ಸೋಜಿಗ ಮನಸ್ಸು ನಮ್ಮದಾಗಬೇಕು. You miss 100% of the shots you don't take ಎಂಬ Wayne Gretzky ಮಾತಿನಂತೆ ಪ್ರಯತ್ನದ ಮೇಲೆ ಮಾತ್ರ ನಮ್ಮ ಗಮನ ಇರಬೇಕು.”
“ಅಂಕಲ್ ಚಾಕ್ಲೆಟ್ ಕೊಡಿ, ಹೋಂ ವರ್ಕ್ ಮಾಡ್ಬೇಕು ಲೇಟ್ ಆಗುತ್ತೆ” ರಿಧಿಮಾ ಹೇಳಿದಳು. ಮನೆ ಒಳಗೆ ಹೋಗಿ ಫ್ರಿಜ್ ಇಂದ ಚಾಕೊಲೇಟ್ ತೆಗೆದುಕೊಂಡು ಬರುವ ಹೊತ್ತಿಗೆ ಹೊರಗೆ ರಿಧಿಮಾ ಇರಲಿಲ್ಲ, ಅರೇ ಎಲ್ಲಿ ಹೋದಳು ಅಂತ ಆ ಕಡೆ ನೋಡಿ ಈ ಕಡೆ ನೋಡಿ ಕಣ್ಣು ಮುಚ್ಚಿ ತೆರೆದಾಗ ನಾನು ಮರವಾಗಿ ಹೋಗಿದ್ದೆ. ಅಯ್ಯೋ ಅಂತ ಕಿರುಚಿದಾಗ ನಿದ್ದೆ ಇಂದ ಎಚ್ಚರವಾಯಿತು. ದೇವರಿನುವನು ನಮ್ಮೊಳಗೆ ಇರುವನು ಹಾಡು ಗುನುಗುತ್ತಾ ಬ್ಯಾಂಕ್ ಗೆ ಹೊರಡಲು ತಯಾರಿ ನೆಡೆಸಿದೆ.