(ಇದು ಸಿನಿಮಾ ವಿಮರ್ಶೆಯಲ್ಲ, ಸಿನಿ ಅನಿಸಿಕೆ ಅಷ್ಟೇ. ಐ ಸಿನಿಮಾದ ಬಗ್ಗೆ ನನ್ನ ಅನಿಸಿಕೆಯನ್ನು ಇಲ್ಲಿ ದಾಖಲಿಸಿದ್ದೇನೆ. ಪರ ವಿರೋಧ ಅಭಿಪ್ರಾಯಗಳೇನೇ ಇದ್ದರೂ ಕಾಮೆಂಟ್ ಮಾಡಿ)
ಒಂದು ಕಾಲ ಇತ್ತು, ರಾಜ್ ಕುಮಾರ್ ಜಮಾನದ ಸಿನಿಮಾಗಳು ಅಂದ್ರೆ ಕಥೆಯಲ್ಲಿ, ಪಾತ್ರಧಾರಿಗಳ ಆಯ್ಕೆಯಲ್ಲಿ, ಹಾಡುಗಳಲ್ಲಿ ತಪ್ಪುಗಳು ಅಥವಾ ಎಡವಟ್ಟುಗಳು ಕಾಣುತ್ತಿದ್ದದ್ದು ತೀರಾ ವಿರಳ. ಪ್ರಾಯಶಃ ಆಗಿನ ನಟರೆಲ್ಲರೂ ರಂಗಭೂಮಿಯಿಂದ ಬಂದವರು ಎಂಬುದೂ ಕೂಡ ಕಾರಣವೆನಿಸುತ್ತೆ. ಆಗಿನ ಜನರು ಕೂಡ ಹಾಗೆಯೇ ಸಿನಿಮಾಗಳ ಬಗ್ಗೆ ಒಮ್ಮತದ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದರು. ಗಡಿನಾಡ ನೆಂಟರು ಹಬ್ಬ, ತೇರು ಅಂತ ಬಂದಾಗ ಬೇರೆ ಭಾಷೆ ಮಾತನಾಡೋದು ಕಂಡರೆ ಸಾಕು, "ಏನ್ರೀ ಇವ್ರು, ಯಾವ್ ಯಾವ್ದೋ ಹೊಸ ಭಾಷೆ ಕಲಿತಿದ್ದಾರೆ!" ಅಂತ ಆಶ್ಚರ್ಯ ವ್ಯಕ್ತಪಡಿಸುತ್ತಿದ್ದರು.
ಕಟ್ ಮಾಡಿದ್ರೆ 2014. ಮಂಡ್ಯ ಹೈಕ್ಳಿಗೆ ಟಾಮ್ ಕ್ರೂಸ್ ಗೊತ್ತು. ಆಂಧ್ರ ಹುಡುಗರಿಗೆ ಸುದೀಪ್ ಅಂದ್ರೆ ಪ್ರಾಣ, ಬಿಹಾರಿ ಹುಡುಗಿಯರು ಎನ್ರಿಕೀ ಹಾಡು ಗುನುಗುತ್ತಾರೆ, ಜಪಾನಿ ಪ್ರೇಕ್ಷಕರು ಉಪೇಂದ್ರನನ್ನು ಆರಾಧಿಸುತ್ತಾರೆ. ಇದೆಲ್ಲಾ ಜಾಗತೀಕರಣದ ಮಹಿಮೆ ಎಂದೇ ಹೇಳಬಹುದು. ಭಾಷೆಯ ಎಲ್ಲೆಯನ್ನು ಮೀರಿ ಸಿನಿಮಾ ಬೆಳೆದಿರುವುದೇ ಇದಕ್ಕೆ ಸಾಕ್ಷಿ.
ಐ ಸಿನಿಮಾದ ಕಥೆ ಹೇಳಿಕೊಳ್ಳುವಂಥ ಹೊಸದೇನಲ್ಲ. ಅವನು ಅವಳು ಪ್ರೀತಿಸಿ, ಅವರ ಪ್ರೀತಿಗೆ ಅಡ್ಡ ಬಂದವರನ್ನು ಅಡ್ಡಡ್ಡ ಮಲಗಿಸೋ ಕಥೆ ಎಷ್ಟೋ ವರ್ಷದಿಂದ ಎಲ್ರೂ ನೋಡ್ಕೊಂಡೇ ಬಂದಿರೋದು. ಮಹಾಭಾರತವು ಅದೇ ಆದರೂ ಕಥೆ ಹೇಳುವ ಶೈಲಿಯಿಂದ ನೋಡುಗರನ್ನು ಸೆಳೆಯಬಹುದು ಎಂದು ದೂರದರ್ಶನದಲ್ಲಿ ಪ್ರಸಾರವಾಗುತಿದ್ದ ಮಹಾಭಾರತ ಧಾರವಾಹಿ ತೋರಿಸಿಕೊಟ್ಟಿತ್ತು. ಅದಕ್ಕೆ ತಾಜಾ ಉದಾಹರಣೆ, ತೆಲುಗು ಚಿತ್ರ ಈಗ, ಶ್ರೀ ಮುರಳಿ ಅಭಿನಯದ ಉಗ್ರಂ ಮತ್ತು ವಿಕ್ರಮ್ ಅಭಿನಯದ ಐ.
'ಐ' ಚಿತ್ರದಲ್ಲಿ ವಿಕ್ರಮ್ ಮತ್ತು ಏಮಿ ಜಾಕ್ಸನ್
ಎಲ್ಲೋ ಮಧ್ಯಮ ವರ್ಗದ ಅಪಾರ್ಟ್ ಮೆಂಟ್ ನಲ್ಲಿ ವಾಸಿಸುತ್ತಾ ತನ್ನದೇ ಜಿಮ್ ನೆಡೆಸಿಕೊಂಡು ಆರಾಮಾಗಿದ್ದವನ ಬದುಕಲ್ಲಿ ತನ್ನ ನೆಚ್ಚಿನ ಮಾಡೆಲ್ ನ ಪ್ರವೇಶವಾಗುತ್ತದೆ. ಇಬ್ಬರೂ ಪ್ರೀತಿಸುತ್ತಾರೆ. ಮುಂದಿನದನ್ನು ಮಾಮೂಲಿನಂತೆ ಊಹಿಸಬಹುದು. ಆದರೆ ಈ ಸಿನಿಮಾದಲ್ಲಿ ನನಗೆ ಮೆಚ್ಚುಗೆಯಾದ ಅಂಶಗಳು ಹಲವಾರಿವೆ. ಅಂದವೇ ಒಂದು ಊರು ಎಂದಾದರೆ, ಆ ಊರಿನ ರಾಜ, ಚಿತ್ರದ ನಾಯಕ ಲಿಂಗೇಶ. ಅವನಿಗೆ ತಕ್ಕ ರಾಣಿ ದಿಯಾ, ಚಿತ್ರದ ನಾಯಕಿ. ದಡ್ಡನಿಗೆ ದೊಣ್ಣೆ ಪೆಟ್ಟು ಎನ್ನುವ ಹಾಗೆ, ಸುಂದರನಿಗೆ ಕುರೂಪದ ಪೆಟ್ಟು ಎಂದು ಸೇರಿಸಲು ಅಡ್ಡಿಯಿಲ್ಲ ಎಂದು ಈ ಸಿನಿಮಾ ನೋಡಿದ ಮೇಲೆ ನಿಮಗನಿಸುತ್ತದೆ. ಅಜಾನುಬಾಹು body builder ನ ರೂಪದಲ್ಲಿ ಕಾಣುವ ನಾಯಕ ನಗಿಸಿದರೆ, hunchback ನ ತೆಳು ಶರೀರದಲ್ಲಿ ಕಾಡುತ್ತಾನೆ. ಒಬ್ಬ ನಟನಿಗಿರುವ ಈ ಮಟ್ಟದ dedication ಗೆ ಒಂದು ಸಲಾಂ. ಮಿಕ್ಕಂತೆ ಎ ಆರ್ ರೆಹಮಾನ್ ಸಂಗೀತ ಯಾವುದೋ ಕಾಣದ ಪ್ರದೇಶಕ್ಕೆ ಕರೆದುಕೊಂಡು ಹೋಗುತ್ತದೆ. ಒಟ್ಟಾರೆಯಾಗಿ ಹೇಳುವುದಾದರೆ ಸರಳವಾಗಿ ಹೇಳಬಹುದಾದ ಕಥೆಯನ್ನು ಅದ್ಭುತ ಕ್ಯಾನ್ವಾಸ್ ಪೇಂಟಿಂಗ್ ನಂತೆ ಚಿತ್ರಿಸಿದ್ದಾರೆ ನಿರ್ದೇಶಕ ಶಂಕರ್.
ಬಾಟಮ್ ಲೈನ್: ಆಪ್ತಮಿತ್ರ ಚಿತ್ರದ ಡೈಲಾಗ್ - Experience cannot be explained, ಅನುಭವನಾ ಅನುಭವಿಸಬೇಕು ಅಷ್ಟೇ.
Super. ..
ಪ್ರತ್ಯುತ್ತರಅಳಿಸಿ