ಜೂನ್ 7, 2015

ಈ ಜನುಮವೇ ಆಹಾ ದೊರಕಿದೆ...



ಜನುಮವೇ ಆಹಾ ದೊರಕಿದೆ ರುಚಿ ಸವಿಯಲು,
ಆಹಾ ಜಗವಿದೆ ನವರಸಗಳ ಉಣಬಡಿಸಲು.
-
ಜಯಂತ್ ಕಾಯ್ಕಿಣಿ

ಬೇಸಿಗೆ ಕಾಲ ಮುಗಿಯುತ್ತಾ ಬಂದಿದೆ. ಮುಂದೆ ಗೊತ್ತಲ್ಲ, ಮಳೆಗಾಲ! ರಾಜ್ಯದ ಹಲವೆಡೆ ಈಗಾಗಲೇ ಮುಂಗಾರು ಮಳೆ ಪಾದಾರ್ಪಣೆ ಮಾಡಿದೆ. ಮಳೆಗಾಲ ಅಂದರೆ ಒಂಥರಾ ಹಾಗೇ, ಆಫೀಸಲ್ಲಿ ಜಾಸ್ತಿ ಹೊತ್ತು ಇರೋಕಾಗಲ್ಲ, ಮನೆಗೆ ಹೋಗುವಾಗ ಮಳೆ ಬರದಿದ್ದರೆ ಸಾಕು ಎಂಬ ಪ್ರಾರ್ಥನೆ, ಒಂದೊಳ್ಳೆ ಫಿಲ್ಟರ್ ಕಾಫಿಗಾಗಿ ಹಂಬಲಿಸುವ ಮನಸ್ಸು, ಇದೆಲ್ಲವೂ ಸಾಮಾನ್ಯ symptom ಗಳು. ಪ್ರಾಯಶಃ ಎಲ್ಲರಿಗೂ ಜೀವನದ ಯಾವುದೋ ಒಂದು ಹಂತದ ನೆನಪು ಮಳೆಗಾಲದ ಜೊತೆಯಲ್ಲಿ ಸೇರಿಕೊಂಡಿರುತ್ತದೆ ಎಂದು ಆರಾಮಾಗಿ ಹೇಳಬಹುದು. ಚಿಕ್ಕವರಿದ್ದಾಗ ಅಜ್ಜನ ಮನೆಯಲ್ಲಿ ಕಂಬಳಿ ಹೊದ್ದುಕೊಂಡು ಸೀಮೆಎಣ್ಣೆ ಬುಡ್ಡಿ ದೀಪದ ಬೆಳಕಲ್ಲಿ 'ಗೊಗ್ಗಯ್ಯ' ಬರಬಾರದೆಂದು ಪ್ರಾರ್ಥಿಸುತ್ತಾ ಮಲಗಿದ್ದು, ಇಲ್ಲವೇ 'ಮಳೆಯ ಕಾರಣದಿಂದ ಶಾಲಾ ಕಾಲೇಜುಗಳಿಗೆ ರಜಾ' ಅಂತ ನ್ಯೂಸಲ್ಲಿ ಬಂದಾಕ್ಷಣ ಡಂಕಣಕ ಸ್ಟೆಪ್ ಹಾಕಿದ್ದು, ಹೈ ಸ್ಕೂಲ್ crush ನೆನಪಿನಲ್ಲಿ ಮುಂಗಾರು ಮಳೆ ಸಿನಿಮಾ ನೋಡಿ 'ಫೀಲ್' ಆಗಿದ್ದು, ಹೀಗೆ ಹತ್ತು ಹಲವು ನೆನಪುಗಳು ಹೆಚ್ಚುಕಡಿಮೆ ಎಲ್ಲರ ನೆನಪಿನ ಗ್ಯಾಲರಿಯಲ್ಲಿ ದಾಖಲಾಗಿರುತ್ತದೆ ಎಂಬುದು ನನ್ನ ಅನಿಸಿಕೆ. ಮಳೆಗಾಲದ ಸಂಜೆಯಲ್ಲಿ ಯಾರು ಯಾರನ್ನ ನೆನಪಿಸಿಕೊಳ್ಳುತ್ತಿದ್ದಾರೋ ಗೊತ್ತಿಲ್ಲ, ಆದರೆ ನನಗೆ ಮಾತ್ರ ಟೈಮಲ್ಲಿ ಬ್ರೂ ಕಾಫಿ ಜೊತೆ ಬಿಸಿ ಬಿಸಿ ಮೆಣಸಿನಕಾಯಿ ಬಜ್ಜಿ ಸಿಕ್ಕರೆ ಸಾಕಪ್ಪ ಅನಿಸ್ತಾ ಇದೆ. "There is no greater love than the love of food." ಅಂತ ಜಾರ್ಜ್ ಬರ್ನಾರ್ಡ್ ಷಾ ಹೇಳಿದ್ದಾರೆ. ಪ್ರೀತಿಯಲ್ಲಿ ಹಲವಾರು ವಿಧಗಳಿವೆ. ವಯಸ್ಸಿನ ಹುಡುಗ / ಹುಡುಗಿಯರ ನಡುವೆ ಅಂಕುರಿಸುವ ಪ್ರೀತಿಯ ಬಗ್ಗೆ ಹೆಚ್ಚು ಹೇಳುವುದೇ ಬೇಕಾಗಿಲ್ಲ, ಯಾಕಂದ್ರೆ ಬಿಡುಗಡೆಯಾಗುವ ಹೆಚ್ಚುಕಡಿಮೆ ಎಲ್ಲಾ ಸಿನಿಮಾಗಳು ಸುತ್ತೋದೇ ವಿಷಯದ ಸುತ್ತ. ಇನ್ನು ಆಗಾಗ ತಾಯಿ-ಮಗನ ನಡುವಿನ ಪ್ರೀತಿ 'ಜೋಗಿ' ಮತ್ತು ಇತರ ಸಿನಿಮಾಗಳಲ್ಲಿ, ತಂದೆ-ಮಗಳ ಪ್ರೀತಿ 'ನಾನು ನನ್ನ ಕನಸು' ಮತ್ತು ಇತರ ಸಿನಿಮಾಗಳಲ್ಲಿ ವ್ಯಕ್ತವಾಗಿರುವುದನ್ನು ಕಾಣಬಹುದು. ದೇಶ-ಭಾಷೆಗಳ ಎಲ್ಲೆಯನ್ನು ಮೀರಿದ ಪ್ರೀತಿಯೆಂದರೆ Love of Food! ಸಣ್ಣವರಾಗಲೀ ಇಲ್ಲವೇ ದೊಡ್ಡವರಾಗಲೀ, ಒಳ್ಳೆಯ ರುಚಿಯಾದ ಊಟ/ತಿಂಡಿ/ತಿನಿಸು ತಿನ್ನಬೇಕೆನ್ನುವ ಆಸೆ ಎಲ್ಲರಿಗೂ ಇದ್ದೇ ಇರುತ್ತದೆ. ಅಲ್ಲಿಗೆ ಒಂದು ವಿಷಯ ಕ್ಲೀಯರ್ ಆಯ್ತು, ಬ್ಲಾಗ್ ಅಂಕಣ ಭೋಜನಪ್ರಿಯರಿಗಾಗಿ.

ಸಾಂದರ್ಭಿಕ ಚಿತ್ರ: ಒಗ್ಗರಣೆ

"ನಾವು ತಿನ್ನೋದಕ್ಕಾಗಿ ಬದುಕಲ್ಲ ಮಗಾ, ಬದುಕುವುದಕ್ಕಾಗಿ ತಿನ್ನುತ್ತೀವಿ" ಅಂತ ಕೆಲವರು ಹೇಳುವುದನ್ನು ನಾವು ಆಗೊಮ್ಮೆ ಈಗೊಮ್ಮೆ ಕಂಡಿರುತ್ತೇವೆ. ನಿಜ ಹೇಳಬೇಕೆಂದರೆ ಇದೆಲ್ಲಾ showoff ಡೈಲಾಗ್ ಗಳು. ಪುಕ್ಕಟೆ buildups ತಗೊಳ್ಳೋದು ಅಂತಾರಲ್ಲಾ, ಹಾಗೆ! ಒಳ್ಳೆ ಊಟ ಮಾಡ್ಬೇಕು, ಚೆನ್ನಾಗಿರೋ ರುಚಿ ರುಚಿಯಾಗಿರೋ ತಿಂಡಿ/ಊಟವನ್ನು ಸವಿಯಬೇಕು ಅನ್ನೋ ಆಸೆ ಯಾರಿಗೆ ಇರಲ್ಲ ಹೇಳಿ? ಆದರೆ ಯಾಕೋ ಗೊತ್ತಿಲ್ಲ, ಊಟದ ಬಗ್ಗೆ ಆಸೆ ಪಡುವವರನ್ನು ಇಲ್ಲವೇ ಅತಿಯಾಗಿ ತಿನ್ನುವವರನ್ನು ಜನ ಸಿಕ್ಕಾಪಟ್ಟೆ ಗೇಲಿ ಮಾಡ್ತಾರೆ. ಯಾರ್ ಮೇಲೋ ಯಾಕೆ ಅಪವಾದ ಎತ್ತಿ ಹಾಕ್ಬೇಕು? ನಾವೇ ಇದ್ದೀವಲ್ಲಾ! ನಮ್ ಹುಡುಗ ಒಬ್ಬ ಇದ್ದಾನೆ. ಸದ್ಯಕ್ಕೆ ಅವನ ಹೆಸರು ಹೆಬ್ಬುಲಿ ಅಂತ ಇಟ್ಟುಕೊಳ್ಳೋಣ. ನಮ್ ಹೆಬ್ಬುಲಿ ಹೆಂಗಪ್ಪ ಅಂದ್ರೆ, ಅವನದ್ದು ಒಂಥರಾ ಮಿಲಿಟರಿ ಟೈಮ್ ಟೇಬಲ್ಲು. ಬೆಳಿಗ್ಗೆ 9 ಗಂಟೆಗೆ ತಿಂಡಿ, 1 ಗಂಟೆಗೆ ಊಟ, ರಾತ್ರಿ 7 ರಿಂದ 8 ಗಂಟೆಯೊಳಗೆ ಊಟ ಆಗಿಬಿಡಬೇಕು. ತಿನ್ನೋಕೆ ಅದೇ ಆಗ್ಬೇಕು / ಇದೇ ಬೇಕು ಅನ್ನೋ ರೂಲ್ಸ್ ಏನೂ ಇಲ್ಲ, ಒಟ್ನಲ್ಲಿ ಏನಾದ್ರೂ ತಿನ್ನಬೇಕು ಅನ್ನೋದು ಅವನ ಲಾಜಿಕ್ಕು. ದಿನಾಲೂ ಊಟದ ಟೈಮ್ ಆಯ್ತು ಅಂದ್ರೆ "ಹೆಬ್ಬುಲಿ alarm on ಆಯ್ತು, ಬೇಗ ಊಟಕ್ಕೆ ಎಲ್ಲಿಗೆ ಹೋಗೋದು ಯೋಚನೆ ಮಾಡ್ರಪ್ಪ" ಅಂತ ಹೇಳುವ ಮೂಲಕ ಲೈಟಾಗಿ ತಮಾಷೆ ಮಾಡ್ತಾ ಇರ್ತೀವಿ. ತಿನ್ನೋಕೆ ಎಲ್ರಿಗೂ ಅರ್ಜೆಂಟೇ, ಆದ್ರೆ ತಮಾಷೆಗೆ ಗುರಿ ಆಗ್ತಾ ಇದ್ದದ್ದು ಮಾತ್ರ ನಮ್ ಹುಡುಗ ಹೆಬ್ಬುಲಿ! ಯಜಮಾನ ಫಿಲಂ ಅಲ್ಲಿ ಟೈಟಾನಿಕ್ ಸಿನಿಮಾ ನೋಡಲು ಹೋಗ್ತಾ ಇದ್ದ ಟೆನ್ನಿಸ್ ಕೃಷ್ಣ ಎಲ್ಲಾ ಬಿಟ್ಟು ನಾನ್-ವೆಜ್ ಊಟ ಮಾಡೋಕೆ ರೆಡಿಯಾಗೋ ಸೀನ್ ಕೂಡ ಒಳ್ಳೆ ಮಜಾ ಇದೆ. ಊಟದ ಬಗೆಗಿನ ಹಾಸ್ಯ ಘಟನೆಗಳಿಗೆ ಕೊನೆಯೇ ಇಲ್ಲ ಬಿಡಿ.

ನನ್ನ ಲೈಫಲ್ಲಿ love of food ಶುರುವಾಗಿದ್ದು ತುಂಬಾ ಹಿಂದೆ. ತುಂಬಾ ಹಿಂದೆ ಚಿಕ್ಕವನಿದ್ದಾಗ ಮನೆಯಲ್ಲಿ ಅಮ್ಮ, ಅಂಗಡಿಗಯಿಂದ ಏನಾದರೂ ತರಲು ಹೇಳಿದಾಗ ಚಿಲ್ಲರೆ ಉಳಿಯಲಿ ದೇವರೇ ಅಂತ 'ಗಂಭೀರವಾಗಿ' ಪ್ರಾರ್ಥನೆ ಮಾಡುತ್ತಿದ್ದೆ. ಆಗೆಲ್ಲಾ ಇನ್ನೂ ಪೈಸೆಗಳು ಚಲಾವಣೆಯಲ್ಲಿದ್ದವು. ಉಳಿಯುವ ಚಿಲ್ಲರೆಯಲ್ಲಿ ಶುಂಠಿ ಪೆಪ್ಪರಮೆಂಟು, ನಿಂಬೆಹುಳಿ ಚಾಕ್ಲೇಟು, ಬೆಣ್ಣೆ ಬಿಸ್ಕತ್ತು, ಕಾರ್ ಥರ ಇರೋ ಚಾಕ್ಲೇಟು, ಚಕ್ಕುಲಿ, ಕೋಡುಬಳೆ, ನಿಪ್ಪಟ್ಟು, ಹಳದಿ ಬೋಟಿ, ಇನ್ನೂ ಏನೇನೋ ಇರ್ತಾ ಇದ್ವು. ಹಲವು ಸುತ್ತುಗಳು ಯೋಚನೆ ಮಾಡಿದ ಮೇಲೆ ಯಾವ್ದಾದ್ರೂ ಒಂದನ್ನು ತರುತ್ತಿದ್ದೆ. ನಮ್ಮನ್ನು ಅಂಗಡಿಯಿಂದ ವಾಪಸ್ ಕಳಿಸೋದಷ್ಟರಲ್ಲಿ ಪಾಪ ಶೆಟ್ರು ಅಂಕಲ್ ಸುಸ್ತಾಗಿ ಬಿಡ್ತಿದ್ರು. ಯಾವಾಗಲೋ ಕೆಲವೊಮ್ಮೆ ಮಾತ್ರ ಕೆಲವು ಅಂಗಡಿಗಳಲ್ಲಿ 'ಆಲ್ಕೋ' ಸಿಗುತ್ತಿತ್ತು. ಅದು ಒದ್ರೆ ಹಬ್ಬ ನನಗೆ. ಅದು ಆಲ್ಕೋ ಅಲ್ಲ 'ಹಾಲು-ಕೋವಾ' ಅಂತ ಈಗೀಗ ಗೊತ್ತಾಗಿದ್ದು. ಆಮೇಲೆ ಸ್ಕೂಲ್ ಜೀವನ ಶುರುವಾದ ಮೇಲೆ ಅನ್ನ-ಚಟ್ನಿ ಅಂದ್ರೆ ಯಾಕೋ ಭಾರಿ ಇಷ್ಟ ಆಗ್ತಿತ್ತು. ಅದನ್ನು ಸ್ಕೂಲ್ ಗೆ ತಗೊಂಡು ಹೋಗಿದ್ದ ದಿನ ಮತ್ತೇನೋ ಒಂಥರಾ ಖುಷಿ. ಎಷ್ಟೋ ಸಲ 1 ಅಥವಾ 2ನೇ ಕ್ಲಾಸಲ್ಲಿದ್ದಾಗ ನಿದ್ದೆ ಮಾಡುತ್ತಾ ಸಿಕ್ಕಿ ಬಿದ್ದರೆ ಮಿಸ್, ಇವತ್ತು ಲಂಚ್ ಬಾಕ್ಸಲ್ಲಿ ಅನ್ನ ಮೊಸರು ತಂದಿದ್ದೆ ಮಿಸ್, ಅದಿಕ್ಕೆ ನಿದ್ದೆ ಬಂತು ಮಿಸ್, ಸಾರಿ ಮಿಸ್, ಪ್ಲೀಸ್ ಮಿಸ್ ಅಂತ ಸುಳ್ಳು ಹೇಳಿ ಎಸ್ಕೇಪ್ ಆಗ್ತಿದ್ವಿ. ಕೋತಿ ಮೊಸರು ತಿಂದು ಮೇಕೆ ಬಾಯಿಗೆ ಒರಸಿದರೆ, ನಾವು ಮೊಸರನ್ನ ತಿನ್ನದೇ ಮೊಸರನ್ನವನ್ನು ಬಲಿ ಕಾ 'ಬಕ್ರಾ' ಮಾಡ್ತಿದ್ವಿ.

ಸಾಂದರ್ಭಿಕ ಚಿತ್ರ: The Big Bang Theory

ಯಾರ್ ಏನೇ ಅಂದ್ಕೊಂಡ್ರೂ ಅಡ್ಡಿ ಇಲ್ಲ, ನಾನಂತೂ ಸ್ವಘೋಷಿತ ಭೋಜನ ಪ್ರಿಯ (ಜಾಸ್ತಿ ತಲೆ ಕೆರೆದುಕೊಳ್ಳಬೇಡಿ ಆಮೇಲೆ hairstyle ಹೋಗಿ ನನ್ನ ಹಾಗೂ ನಮ್ ಶಿವಾಜಿ ಬಾಸ್ ಥರ hairless style ಆಗಿಬಿಡುತ್ತೆ, ಸ್ವಘೋಷಿತ ಭೋಜನ ಪ್ರಿಯ ಅಂದ್ರೆ self-declared food lover ಅಂತ ಅರ್ಥ ಅಷ್ಟೇ!). ನಿಮಗೇ ಗೊತ್ತಲ್ಲ, ನಾವು ಶಾಂತಿ ನಿವಾಸ ಸುದೀಪ್ ಥರ, ತುಂಬಾ ಸಿಂಪಲ್ಲು. ಅಯ್ಯೋ ಹೋಟೆಲ್ ಊಟಾನ? ಅಂತ ಬೇಜಾರು ಮಾಡ್ಕೊಳ್ಳೋದಿಲ್ಲ, ಪ್ರತಿ ಬಾರಿಯೂ ರುಚಿಯಾಗಿರೋದೇ ಆಗ್ಬೇಕು ಅಂತ ಕಂಡೀಷನ್ ಕೂಡ ಇಲ್ಲ, ಆದರೆ ಒಳ್ಳೆ ತಿಂಡಿ/ಊಟ ಸಿಕ್ಕರೆ ಮಾತ್ರ ಮೊಬೈಲ್ ಸೈಲೆಂಟ್ ಮಾಡಿ ನಿಧಾನವಾಗಿ ತಿನ್ನುವುದು ನಮ್ಮ ವಾಡಿಕೆ, ಇಂಗ್ಲೀಷ್ ಭಾಷೆಯಲ್ಲಿ savour the moment ಅಂತಾರಲ್ಲಾ ಹಾಗೆ. ಅದಕ್ಕೋಸ್ಕರ ನಮಿಗೆ ನಾವೇ ಇಟ್ಟುಕೊಂಡ ಟೈಟಲ್ಲು - ಸ್ವಘೋಷಿತ ಭೋಜನಪ್ರಿಯ. ಬದಲಾದ ಫಾಸ್ಟ್ ಫುಡ್ ಯುಗದಲ್ಲಿ ಮೊಬೈಲನ್ನು ಸೈಲೆಂಟ್ ಮಾಡಿ ಒಬ್ಬರೊಂದಿಗೆ ಕಾಲ ಕಳೆಯೋದನ್ನು ಪ್ರಪಂಚದಲ್ಲಿ ಒಬ್ಬ ವ್ಯಕ್ತಿ ಇನ್ನೊಬ್ಬರಿಗೆ ಕೊಡುವ ಉನ್ನತ ಗೌರವ ಅಂತ ಭಾವಿಸಲಾಗುತ್ತೆ, ನೆನಪಿರಲಿ. ಊಟದಲ್ಲಿ ಹೇಗೆ Mexican, Chinese, Italian, ಆಂಧ್ರ ಶೈಲಿ, ಉಡುಪಿ ಬ್ರಾಹ್ಮಣರ ಶೈಲಿ, North Indian, Continental ಅಂತ ನೂರಾರು ವಿಧಗಳಿವೆಯೋ ಹಾಗೆ, ತಿನ್ನುವವರಲ್ಲೂ ಅನೇಕ ಬಗೆಯನ್ನು ಕಾಣಬಹುದು. ಕೆಲವರು ಕಡೆಯಿಂದ ಬಡಿಸಿಕೊಂಡು ಬರೋದ್ರೊಳಗೆ ಕಡೆ ಆಗಲೇ ತಿಂದು ಖಾಲಿ ಮಾಡುವಷ್ಟು ಬೇಗ ತಿಂತಾರೆ, ಇನ್ನು ಕೆಲವರಿಗೆ ಊಟಕ್ಕೆ ಬಡಿಸಿ ನಮ್ ಪಾಡಿಗೆ ನಾವು ಯಾವ್ದಾದ್ರೂ T20 ಮ್ಯಾಚ್ ನೋಡ್ಕೊಂಡು ಬರಬಹುದು - ಅಷ್ಟು ನಿಧಾನ. ಕೆಲವರು ತಟ್ಟೆಯಲ್ಲಿ ಏನೂ ಉಳಿಸದೆ ಕ್ಲೀನ್ ಸ್ವೀಪ್ ಮಾಡಿದ್ರೆ, ಇನ್ನು ಕೆಲವರು ಕೋಳಿ ಥರ ಕಡೆ ಚೂರು ತಿಂದು, ಕಡೆ ಚೂರು ತಿಂದು, ಅದು ಇದು ಎಲ್ಲಾ ಮಿಕ್ಸ್ ಆಗಿ ಯಪ್ಪಾ, ತಟ್ಟೆ ನೋಡಿದ್ರೆ ಕಣ್ಣು ಹೋಗೋದು ಗ್ಯಾರಂಟಿ. ಇನ್ನೊಬ್ಬ ನಮ್ ಹುಡುಗ 'ಗ್ಯಾಪ್' ಅಂತ ಇದ್ದಾನೆ. ಅವನು ಸುಮ್ನೆ ಊಟ ಮಾಡಿದ್ದು ನಾವ್ಯಾರು ನೋಡೇ ಇಲ್ಲ. ಊಟ ಮಾಡ್ತಾ derivations ಮಾಡ್ತಿದ್ದ, ಊಟ ಮಾಡ್ತಾ ಮೆಸೇಜ್ ಮಾಡ್ತಿದ್ದ, ಊಟ ಮಾಡ್ತಾ ವರ್ಕ್ ಔಟ್ ಕೂಡ ಮಾಡ್ತಿದ್ದ. ಈಗಲೂ ಹಾಗೇ ಇದ್ದಾನೆ, ಅದೇ ನಮ್ಗೆ ಸಮಾಧಾನ. ಇನ್ನು ಕೆಲವರಿದ್ದಾರೆ, ಅವರಿಗೆ ಅಮ್ಮ ಮಾಡಿದ ಕೈರುಚಿ ಅಂದ್ರೆ ಪ್ರಾಣ, ಅದಕ್ಕಾಗಿ ವಾರಕ್ಕೊಮ್ಮೆ ದೂರದ ಊರಿಂದ ಪ್ರಯಾಣ ಮಾಡಿ ಬಂದು ತಿಂದು ಸಂತೃಪ್ತರಾಗುತ್ತಾರೆ, ಅವರಿಗೆಲ್ಲಾ ಒಳ್ಳೆ ಅಡುಗೆ ಮಾಡುವ ಗಂಡ (ಹುಡುಗರಿಗೆ ಹೆಂಡತಿ) ಸಿಗಲಿ. ಇನ್ನು ಕೆಲವರು ಹೊಸ ಹೊಸ ಅಡುಗೆ ರೆಸಿಪಿಗಳನ್ನು ಕಲಿತು ಅದನ್ನು ತಮ್ಮ ಗೆಳೆಯ / ಗೆಳತಿಯರಿಗಾಗಿ ಮಾಡಿ ಉಣಬಡಿಸುತ್ತಾರೆ. ಚೆನ್ನಾಗಿದ್ದರೆ ತೊಂದರೆ ಇಲ್ಲ, ಇಲ್ಲಾಂದ್ರೆ ಗೊತ್ತಲ್ಲ ಕಾಲಿಂಗ್ 108, ಹಲೋ ಹಲೋ



ಸಾಂದರ್ಭಿಕ ಚಿತ್ರ:  How I Met Your Mother



ಪ್ಯಾರಿಸ್ ಗೆ ಹೋಗಿ ಐಫೆಲ್ ಟವರ್ ನೋಡಿಕೊಂಡು ಬರದೇ ಇದ್ರೂ ಓಕೆ, ದಾವಣಗೆರೆಗೆ ಹೋಗಿ ಬೆಣ್ಣೆ ದೋಸೆ ತಿನ್ನದೇ ಬರಬಾರದು ಅನ್ನೋದು ನಮ್ ತತ್ವ. ಹಾಗೆ ನೋಡಿದ್ರೆ ಒಂದೊಂದು ಬೇರೆಯದೇ ಆದ ವಿಶಿಷ್ಟ ತಿಂಡಿ / ಊಟ ತಯಾರಿಸುವುದನ್ನು ಕಾಣಬಹುದು. ಮೈಸೂರಲ್ಲಿ ಮಲ್ಲಿಗೆ ಇಡ್ಲಿ ಚೆನ್ನಾಗಿರುತ್ತೆ, ಮಂಡ್ಯ ಕಡೆ ರಾಗಿ ಮುದ್ದೆ - ನಾಟಿಕೋಳಿ ಸಾರು ಫೇಮಸ್ಸು, ಮಂಗಳೂರಿನ ಮೀನು ಸಾರಿನ ಗಮ್ಮತ್ತು, ತಿಂದವರಿಗೇ ಗೊತ್ತು. ಮಲೆನಾಡಿನ ಸ್ಪೆಷಲ್ ಅಣಬೆ ಸಾರು, ಚಳ್ಳಕೆರೆಯ ಚೌಚೌ ಮೆಣಸಿನಕಾಯಿ ಬಜ್ಜಿ, ಗೋಕಾಕ್ ಕರದಂಟು, ಧಾರವಾಡ ಪೇಡಾ, ಬೆಳಗಾವಿ ಖಡಕ್ ರೊಟ್ಟಿ ಚಟ್ನಿಪುಡಿ, ಆಂಧ್ರ ಪಪ್ಪು, ಇವೆಲ್ಲಾ ಇತರೆ awesome ಅಡುಗೆಗಳು. ಚಾನ್ಸ್ ಸಿಕ್ಕರೆ ಮಿಸ್ ಮಾಡದೇ ತಿನ್ನಿ. ಹಾಸ್ಟೆಲ್ ಗಳಲ್ಲಿ ಇರುವ advantage ಗಳಲ್ಲಿ ಇದೂ ಒಂದು, ಎಲ್ಲಾ ಊರಿನ ಟೇಸ್ಟ್ ಒಂದೇ ಕಡೆ ಟೇಸ್ಟ್ ಮಾಡಬಹುದು. ಇಲ್ಲಾಂದ್ರೆ ಇಷ್ಟೆಲ್ಲಾ ವೆರೈಟಿ ನಮಿಗ್ ತಾನೇ ಹೇಗೆ ಗೊತ್ತಾಗ್ತಾ ಇತ್ತು!


ಕೊನೆಯಲ್ಲಿ ಚೂರು ಸೋಪಿನ ಕಾಳು / ಪಾನ್ ಬೀಡಾ (ಬಾಟಮ್ ಲೈನ್): ನಾನು ಹಲವು ಊರಿನ ಹೋಟೆಲ್ / ಮನೆಯಲ್ಲಿ ತಿಂದ ಒಳ್ಳೊಳ್ಳೆ ತಿಂಡಿ / ಊಟದ ಬಗ್ಗೆ, ಸಿಹಿಕಹಿ ಚಂದ್ರು, ಮುರಳಿ ನೆಡೆಸಿಕೊಡುವ ಅಡುಗೆ ಕಾರ್ಯಕ್ರಮಗಳ ಬಗ್ಗೆ, ಇನ್ನೂ ಏನೆಲ್ಲಾ ಬರೀಬೇಕು ಅಂತಿದ್ದೆ, ಆದರೆ ಬರೀ introduction ಪರಿ ಜೋರಾಗಿರುತ್ತೆ ಅಂತ ನಾನಂತೂ ಅಂದ್ಕೊಂಡಿರಲಿಲ್ಲ. ಇರಲಿ, ಭಾಗವನ್ನು ಇನ್ನೊಂದು ದಿನ ನೋಡ್ಕೊಂಡ್ರೆ ಆಯ್ತು. ಇಲ್ಲಿ ಈಗ ಮೋಡ ಕವಿದ ವಾತಾವರಣವಿದ್ದು ಮಳೆಯಾಗುವ ಮುನ್ಸೂಚನೆಯಿದೆ. ನಮ್ಮ ಬ್ರೂ ಕಾಫಿ ನನ್ನನ್ನು ಕರೀತಾ ಇದೆ. ಬೇಗ ಹೋಗದಿದ್ರೆ ಕಷ್ಟ ಕಷ್ಟ. ನಿಮ್ಮ ಕೈಗೂ ಒಂದು ಟೀ / ಕಾಫಿ ತಗೊಂಡು ನಿಮ್ಮ ಜೀವನಕ್ಕೆ ವಾಪಸ್ಸಾಗಿ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ