ಡಿಸೆಂಬರ್ 21, 2016

Best of Shankar Nag



ಶಂಕರ್ ನಾಗ್, ಹೆಸರು ಕೇಳಿದರೇನೇ ಇಂದಿಗೂ ಎಲ್ಲಾ ಕನ್ನಡ ಸಿನಿಮಾ ಅಭಿಮಾನಿಗಳಿಗೆ ರೋಮಾಂಚನ ಆಗುತ್ತದೆ. ಕಲೆಗೆ ಸಾವುಂಟು, ಕಲಾವಿದನಿಗಲ್ಲ ಎಂಬುವಂತೆ ಅವರಿಂದು ನಮ್ಮ ನಡುವೆ ಇರದಿದ್ದರೂ ಅವರ ಚಿತ್ರಗಳು ನಮ್ಮನ್ನು ಇಂದಿಗೂ ಆವರಿಸಿವೆ. ಇಂತಹ ಶಂಕರ್ ನಾಗ್ ಅವರ ಹೆಚ್ಚು ಕಮ್ಮಿ ಎಲ್ಲಾ ಚಿತ್ರಗಳ ಬಗ್ಗೆ ಬರೆಯಬೇಕೆಂಬುದು ನನ್ನ ಇರಾದೆ, ಆದರೆ ಸದ್ಯಕ್ಕೆ ಒಂದು ಕಿರು ಅಂಕಣ ಸಾಕೆಂದು The Best of Shankar Nag ಎಂಬ ಹತ್ತು ಚಿತ್ರಗಳಿಗೆ ಸೀಮಿತಗೊಳಿಸುತ್ತಿದ್ದೇನೆ. ಚಿತ್ರಗಳನ್ನು ನೀವು ನೋಡಿರದಿದ್ದರೆ, ಯಾಕೆ ತುರ್ತಾಗಿ ನೋಡಬೇಕೆಂದು, ಈಗಾಗಲೇ ನೋಡಿದ್ದರೆ, ಯಾಕೆ ಮತ್ತೊಮ್ಮೆ revision ಮಾಡಬೇಕೆಂದು ಅಂಕಣ ಹೇಳುತ್ತದೆ. Over to Shankar Nag.

#1 ಮಿಂಚಿನ ಓಟ
ಪರಿಸ್ಥಿತಿಯ ಕೆಟ್ಟ ಪರಿಣಾಮಕ್ಕೆ ಸಿಕ್ಕಿ ಮೂವರು ಅಸಹಾಯಕರು ಜೈಲು ಸೇರುವ ಮತ್ತು ಅವರ ಅಮೋಘ prison break ಪಯಣವೇ ಮಿಂಚಿನ ಓಟ. ನಟನಾಗಿ ಶಂಕರ್ ನಾಗ್ ಕರಾಟೆ ಕಿಂಗ್ ಹೇಗೆ ನಿಜವೋ, ನಿರ್ದೇಶಕರಾಗಿ ಅವರು ಅಷ್ಟೇ ಪರಿಣಿತರು ಎಂದು ಚಿತ್ರ ನೋಡಿದಾಗ ಅರ್ಥವಾಗುತ್ತದೆ. ಶಂಕರ್ ನಾಗ್, ಅನಂತ್ ನಾಗ್ ಮತ್ತು ಅಂಕಲ್ ಲೋಕನಾಥ್ ಜೋಡಿ ಮಿಂಚಿನ ವೇಗದಲ್ಲಿ ನಿಮ್ಮ ಮನಮೋಹಕ ಫೀಲ್ ನೀಡುವುದರ ಬಗ್ಗೆ ಸಂಶಯವೇ ಬೇಡ.

#2 ಆಟೋ ರಾಜ
ಒಬ್ಬ ಸಾಮಾನ್ಯ ಆಟೋ ಚಾಲಕ ಮತ್ತು ಒಬ್ಬ ಶ್ರೀಮಂತ ಹುಡುಗಿ ನಡುವೆ ನಿಜವಾದ ಪ್ರೀತಿ ಮೂಡಬಹುದಾ? ಹಾಗಿದ್ದಲ್ಲಿ ಅದರ ಪರಿಣಾಮಗಳೇನು ಎಂಬುದು ಚಿತ್ರದ ಕಥಾ ಹಂದರ. ಶಂಕರ್ ನಾಗ್ ಮತ್ತು ಗಾಯತ್ರಿ ಜೋಡಿ ಚಂದಕಿಂತ ಚಂದ. 'ನಗುವ ಗುಲಾಬಿ ಹೂವೇ' ಹಾಡು ಮರೆತವರುಂಟೇ, ಚಾನ್ಸೇ ಇಲ್ಲ.

#3 ಮೂಗನ ಸೇಡು
"ಹ್ಹ ಹ್ಹ ಅಲ್ನೋಡು ಅವನು ಹೇಗೆ ವಕ್ರವಾಗಿ ನೆಡೆಯುತ್ತಾನೆ", "ಹೋ ಇವನಾ, ಇವನಿಗೆ ಕಣ್ಣೇ ಕಾಣಲ್ಲ, ದೊಡ್ಡದಾಗಿ ಬಂದು ಬಿಟ್ಟ ವೋಟ್ ಹಾಕೋಕೆ", ಇತ್ಯಾದಿಯಾಗಿ ಅಂಗವಿಕಲರನ್ನು ಹೀಯಾಳಿಸಿ ಮಜಾ ತಗೊಳ್ಳುವ ಜನರೇ ನಿಜವಾದ ಅಂಗವೈಕಲ್ಯರು ಎಂದರೇ ತಪ್ಪಾಗಲಾರದು. ರೀತಿ ಒಬ್ಬ ಮುಗ್ಧ ಮೂಕನ ಬದುಕಲ್ಲಿ ಕೆಡುಕ ಸಾಹುಕಾರರು ಹೇಗೆ ನೆಡೆಸಿಕೊಳ್ಳುತ್ತಾರೆ, ನಂತರದ ಅವನ ಪಾಠ ಕಲಿಸುವ ಚಿತ್ರಣ ಇರುವ ಚಿತ್ರ ಮೂಗನ ಸೇಡು. 'ಜಾಡಿಸಿ ಒದಿ, ಅವರನು ಥೂ ಎಂದು ಉಗಿ' ಹಾಡು ಬೇಸತ್ತ ಬ್ಲ್ಯಾಕ್ ಅಂಡ್ ವ್ಹೈಟ್ ಬದುಕಲ್ಲಿ ಜೀವಿಸಲು ಸ್ಪೂರ್ತಿ ನೀಡುವುದರಲ್ಲಿ ಸಂಶಯವಿಲ್ಲ.

#4 ಜನ್ಮ ಜನ್ನದ ಅನುಬಂಧ
ಹುಟ್ಟು, ಬದುಕು, ಸಾವು: ಇಷ್ಟೇ ನಮಗೆ ತಿಳಿದಿರುವುದು. ಇದರಾಚೆಗೆ ಏನಾಗುತ್ತದೆ ಎಂಬುದು ಇಂದಿಗೂ ಕುತೂಹಲಕಾರಿ ಚರ್ಚಾ ವಿಷಯ. ಒಂದು ವೇಳೆ ನಾವು ಸತ್ತ ನಂತರ ನಮಗೆ ಹಿಂದಿನ ಜನ್ಮದ ನೆನಪು ಅಸ್ಪಷ್ಟವಾಗಿ ನೆನಪಿರುವಂತಿದ್ದರೆ, ನೆನಪು, ಊರನ್ನು ಹಿಂಬಾಲಿಸಿ ನೀವು ಹೋಗುವಿರಾ? ಇಂಥದೇ ಒಂದು ಕಥೆಯನ್ನು ಅನಂತ್ ನಾಗ್ ಮತ್ತು ಜಯಂತಿ ಅಭಿನಯದಲ್ಲಿ ತೆರೆದಿಡುತ್ತಾರೆ ಶಂಕರ್ ನಾಗ್. ಬಾಕ್ಸ್ ಆಫೀಸಿನಲ್ಲಿ ಮುಗ್ಗರಿಸಿದ ಚಿತ್ರ ಈಗ ಮತ್ತೆ ಬಿಡುಗಡೆಯಾದರೆ ಅದರ ರಂಗೇ ಬೇರೆ ಬಿಡಿ.

#5 ನೋಡಿ ಸ್ವಾಮಿ ನಾವಿರೋದು ಹೀಗೆ
ಯಾಕೋ ಗೊತ್ತಿಲ್ಲ, ನಮ್ ಕಾಲದ almost ಎಲ್ಲಾ ಹುಡುಗರಿಗೆ ಲವ್ ಮ್ಯಾರೇಜ್ ಆಗಬೇಕು ಅಥವಾ ಮಾಡಿಸಬೇಕು ಅಂದರೆ ಎಲ್ಲಿಲ್ಲದ ಉತ್ಸಾಹ. ನೋಡಿ ಸ್ವಾಮಿ ನಾವಿರೋದು ಹೀಗೆ ಚಿತ್ರದ 'ಮೈಸೂರು ಮಠ' ಪಾತ್ರಧಾರಿ ಶಂಕರ್ ನಾಗ್ ಕೂಡ ನಮ್ ಕೆಟಗರೀನೇ. ರಮೇಶ್ ಭಟ್ ಮತ್ತು ಅರುಂಧತಿ ಹೇಗೋ ಪೋಷಕರ ವಿರೋಧದ ನಡುವೆಯೂ ಪ್ರೀತಿಸಿ ಮದುವೆಯಾಗುತ್ತಾರೆ. ಆದರೆ ಆನಂತರ ಅಭಿಪ್ರಾಯ ವ್ಯತ್ಯಾಸದಿಂದ ಕಥೆ ವಿಚ್ಛೇದನದವರೆಗೆ ಹೋಗುತ್ತದೆ. ಅದನ್ನು ತಡೆಯಲು 'ಮೈಸೂರು' ಇನ್ನಿಲ್ಲದಂತೆ ಕಷ್ಟ ಪಡುತ್ತಾನೆ. ಕಾರಣ ಏನು ಮತ್ತು ಪ್ರೇಮಿಗಳು ಕೊನೆಯಲ್ಲಿ ಏನಾಗುತ್ತಾರೆ ಎಂಬುದನ್ನು ತೆರೆಯ ಮೇಲೆಯೇ ನೋಡಬೇಕು

#6 ಆ್ಯಕ್ಸಿಡೆಂಟ್
ನ್ಯಾಯ ಎಲ್ಲಿದೆ ಅಂದರೆ ಶ್ರೀಮಂತನ ಮನೆಯ ಹಿತ್ತಲಲ್ಲಿ ಎನ್ನಬಹುದು. ದೇಶದ ಕಾನೂನು ವ್ಯವಸ್ಥೆಯಲ್ಲಿ ತಪ್ಪು ಮಾಡಿದವರಿಗೆ ಶಿಕ್ಷೆ ನೀಡಲು ನಿಯಮಗಳಿಗಿಂತ ತಪ್ಪಿಸಿಕೊಳ್ಳಲು ಪರ್ಯಾಯ ದಾರಿಗಳೇ ಹೆಚ್ಚಿವೆ ಎಂದರೆ ತಪ್ಪಾಗಲಾರದು. ದುಡ್ಡಿದ್ದರೆ ಎಂತಹ ಆರೋಪದಿಂದಲೂ ಸುಲಭವಾಗಿ ಎಸ್ಕೇಪ್ ಆಗಬಹುದೆಂದು ಇತ್ತೀಚಿನ ಕೋರ್ಟ್ ತೀರ್ಪುಗಳಿಂದ ಪ್ರೂವ್ ಆದ ವಿಷಯವನ್ನು ಶಂಕರ್ ನಾಗ್ ಆಗಲೇ ಕಟ್ಟಿಕೊಟ್ಟಿದ್ದಾರೆ. ಪಾದಚಾರಿ ರಸ್ತೆಯ ಮೇಲೆ ಮಲಗಿದ ಬಡವರ ಮೇಲೆ ಕಾರೊಂದು ಎರಗುತ್ತದೆ. ಅಪರಾಧಿ ಕಾನೂನಿನ ಕೈಗಳಿಂದ ತಪ್ಪಿಸಿಕೊಳ್ಳುವನೇ ಇಲ್ಲವೇ? ಪ್ರಶ್ನೆಗೆ ಉತ್ರರ ಚಿತ್ರ ನೋಡಿದಾಗ ಸಿಗುತ್ತದೆ.

#7 ಒಂದು ಮುತ್ತಿನ ಕಥೆ
ಒಂದು ಎರಡು ಮೂರು ನಾಲ್ಕು ಆಮೇಲ್-ಇನ್ನೇನು ಅಂತ ನಾಲ್ಕರ ನಂತರ ಲೆಕ್ಕವೇ ಬರದ ಮೀನುಗಾರ / ಮುತ್ತು ಶೋಧಕನೊಬ್ಬನಿಗೆ ಒಂದು ದಿನ ಅತಿ ಹೆಚ್ಚು ಬೆಲೆ ಬಾಳುವ 'ದೊಡ್ಡ ಮುತ್ತು' ಸಿಗುತ್ತದೆ. ಅದನ್ನು ಕಾಪಾಡಿಕೊಳ್ಳಲು ಆತ ಏನೇನು ಮಾಡುತ್ತಾನೆ, ಧಿಡೀರ್ ಐಶ್ವರ್ಯ ಎಂಥವರನ್ನೂ ಹೇಗೆ ತಿರುಗಿಸಿಬಿಡುತ್ತದೆ ಎಂಬ ಹಲವು ಗಂಭೀರ ವಿಷಯಗಳನ್ನು ಇಟ್ಟುಕೊಂಡು ಕೊನೆಗೆ ಫಿಲಾಸಫಿಕಲ್ ಕ್ಲೈಮ್ಯಾಕ್ಸ್ ನೀಡುತ್ತಾರೆ ನಿರ್ದೇಶಕ ಶಂಕರ್ ನಾಗ್. ಅಣ್ಣಾವ್ರು ಅಭಿನಯ - ಶಂಕರ್ ನಾಗ್ ನಿರ್ದೇಶನ, ನಿಜಕ್ಕೂ 'ಅಪೂರ್ವ ಸಂಗಮ'ವೇ ಬಿಡಿ.  

#8 ಎಸ್ ಪಿ ಸಾಂಗ್ಲಿಯಾನ
ಹಾಸ್ಯ, ಕೌಟುಂಬಿಕ, ಸಂಗೀತಮಯ, ಮಾಸ್, ಕ್ಲಾಸ್, ರೌಡಿಸಂ, ಹಾರರ್, ಹೀಗೆ ಪೊಲೀಸ್ ಚಿತ್ರಗಳು ಅಂತ ಹೊಸದೊಂದು genre ಮಾಡುವುದು ಒಳ್ಳೆಯದೇನೋ ಅನಿಸುತ್ತೆ. ಆಗಿನ ಡಾ ರಾಜ್ ಇಂದ ಹಿಡಿದು ಇತ್ತೀಚಿನ ಗಣೇಶ್ ಕೂಡ ಪೊಲೀಸ್ ಪಾತ್ರ ಮಾಡಾಯ್ತು. ಆದರೆ ವೈಯಕ್ತಿಕವಾಗಿ ಪೊಲೀಸ್ ಅಂದರೆ ನನಗೆ ನೆನಪಿಗೆ ಬರೋದು ಸಾಯಿ ಕುಮಾರ್ ಮತ್ತು ಶಂಕರ್ ನಾಗ್ ಅವರ ಎಸ್ ಪಿ ಸಾಂಗ್ಲಿಯಾನ ಪಾತ್ರ. 'ಟ್ರಿಣ್ ಟ್ರಿಣ್, ಹಲೋ ಸಾಂಗ್ಲಿಯಾನ here" ರಿಂಗ್ಟೋನ್ ಯಾರಿಗೆ ಪರಿಚಿತ ಇಲ್ಲ ಹೇಳಿ. ನ್ಯಾಯ ಅಂದರೆ ಸಾಂಗ್ಲಿಯಾನ, ಸಾಂಗ್ಲಿಯಾನ ಅಂದರೆ ಶಂಕರ್ ನಾಗ್ ಎನ್ನುವ ಮಟ್ಟಿಗೆ ಪಾತ್ರವೊಂದು ನಮ್ಮನ್ನು ಇಷ್ಟು ಆವರಿಸಿದೆ ಅಂದರೆ ಚಿತ್ರದ ಬಗ್ಗೆ ಹೇಳಲು ಇಷ್ಟು ಸಾಕೆನಿಸುತ್ತದೆ.  

#9 ತರ್ಕ
ಸುನೀಲ್ ಕುಮಾರ್ ದೇಸಾಯಿ ಥ್ರಿಲ್ಲರ್ ಚಿತ್ರಗಳ ವಿಷಯದಲ್ಲಿ ಎಷ್ಟು ನೈಪುಣ್ಯರು ಅಂತ ನಮ್ಮಂಥ ಸಿನಿಮಾಭಿಮಾನಿಗಳಿಗೆ ಗೊತ್ತೇ ಇದೆ. ಅದಕ್ಕೊಂದು ಉತ್ತಮ ಉದಾಹರಣೆ ಚಿತ್ರ. ವಿಷಯ ಇಷ್ಟೇ, ಶಂಕರ್ ನಾಗ್ ದೇವರಾಜ್ ಅನ್ನು ಕೊಲೆ ಮಾಡಲು ಜೈಲಿಂದ ತಪ್ಪಿಸಿಕೊಂಡು ಬರುತ್ತಾರೆ, ಅಷ್ಟರಲ್ಲಿ ಅಲ್ಲಿ ದೇವರಾಜ್ ಕೊಲೆ ನೆಡೆದು ಹೋಗಿರುತ್ತದೆ. ಶವವನ್ನು ಅಡಗಿಸುವ ಸಲುವಾಗಿ ಏನೇನು ಮಾಡುತ್ತಾರೆ, ನಿಜವಾಗಿ ಕೊಲೆ ಯಾರು ಮಾಡಿದ್ದು ಮತ್ತು ಅವರ ಉದ್ದೇಶ ಏನು ಎಂದು ತಿಳಿಯಲು ನೀವು ಚಿತ್ರನೋಡಲೇಬೇಕು. ಒಂದು ವೇಳೆ ನೀವು ಚಿತ್ರದ ಅಂತ್ಯವನ್ನು ನೋಡದೆಯೇ ಸರಿಯಾಗಿ ಊಹಿಸಿದರೆ ನಮ್ ಕಡೆ ಇಂದ ಒಂದು ಡೈರಿ ಮಿಲ್ಕ್ ಚಾಕೊಲೇಟ್ ಟ್ರೀಟ್, ಪಕ್ಕಾ

#10 ಹೊಸ ಜೀವನ
ಹೊಸ ಜೀವನ ಚಿತ್ರದ ಕಥೆ ಹೇಳಿದರೆ ಸರಿ ಹೋಗುವುದಿಲ್ಲ, ಅದನ್ನು ನೀವು ನೋಡಿಯೇ ತಿಳಿಯಬೇಕು. ಒಬ್ಬ ಚಿಲ್ಲರೆ ಬೀದಿ ರೌಡಿಯಿಂದ ಮಾರ್ಯದೆಗೆ ಅಂಜುವ ಸಾಮಾನ್ಯ ಗೃಹಸ್ಥನವರೆಗೆ ಶಂಕರ್ ನಾಗ್ ಪಯಣದ ಚಿತ್ರಣವೇ ಹೊಸ ಜೀವನ. ಪ್ರತಿ ಕೆಡುಕನಲ್ಲೂ ಒಳ್ಳೆಯ ಮನಸ್ಸಿರುತ್ತೆ, ಒಳ್ಳೆಯವರು ಅನಿಸಿಕೊಂಡವರು ಎಲ್ಲರೂ ಒಳ್ಳೆಯವರಲ್ಲ ಎಂಬ ಹಲವು ವಿಷಯಗಳ ಜೊತೆಗೆ ಒಂದು ವೇದಾಂತಿಕ ಪಾಠ ಹೇಳುವುದರ ಮೂಲಕ ಹೊಸ ಜೀವನ ನಮ್ಮ ಬದುಕಿಗೆ ಒಂದು fresh start ನೀಡಲು ಪ್ರೇರೇಪಿಸುತ್ತದೆ.

ಶಂಕರ್ ನಾಗ್ ಅಭಿನಯದ ಹಾಗೂ ನಿರ್ದೇಶನದ ಅಷ್ಟೂ ಚಿತ್ರಗಳ ಬಗ್ಗೆ ಇಷ್ಟಿಷ್ಟೇ ಹೇಳುವ ಪ್ರಯತ್ನ ಇಲ್ಲಿ ಮಾಡಿದ್ದೇವೆ. ಪಟ್ಟಿಯಲ್ಲಿ ಇರಲೇಬೇಕಾಗಿತ್ತು, ಆದರೆ ಮಿಸ್ ಆಗಿದೆ ಅನಿಸುವ ಚಿತ್ರಗಳು ನಿಮಗೆ ಗೊತ್ತಿದ್ದರೆ ಕಾಮೆಂಟ್ ಮಾಡಿ, over a coffee, ಕುಳಿತು ಮಾತಾಡೋಣ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ