ಅಕ್ಟೋಬರ್ 11, 2023

ವನಂ ಮೂಲಂ‌ ಇದಂ ಜಗತ್

ಕೆಲವು ದಿನಗಳ ಹಿಂದಿನ ಮಾತು. ನಾನು ಮತ್ತು ಆಫೀಸರ್ ಒಂದು ಹೌಸಿಂಗ್ ಲೋನ್  inspection ಮುಗಿಸಿಕೊಂಡು ವಾಪಸ್ ಬರುತ್ತಿದ್ದೆವು. ಸಮಯ ಆಗಲೇ 3.30 ಆಗಿತ್ತು. ಆಗ ಆಫೀಸರ್ “ಇಲ್ಲೇ ಸಮೀಪದ ಸರ್ಕಾರಿ ಶಾಲೆಯ ಬಳಿ ನಿಲ್ಲಿಸಿ. ಸರ್ಕಾರಿ ಶಾಲೆ ಅಕೌಂಟ್ ಮತ್ತು High School ಶಾಲಾ‌ ಮಕ್ಕಳಿಗೆ ಅಕೌಂಟ್ Canvas ಮಾಡಬೇಕು” ಅಂತ ಸರ್ ಹೇಳಿದರು. ಅದಕ್ಕೆ ನಾನು, “ಸರ್, ಆ‌ ಶಾಲೆ ಹೆಡ್ ಮಾಸ್ಟರ್‌ ಪರಿಚಯ ಇಲ್ಲ, ಮತ್ತು‌ ಆಗಲೇ ಶಾಲೆ‌ ಮುಗಿಯೋ‌ ಸಮಯ‌ ಆಗ್ತಾ ಬಂತು. ಏನು ಮಾಡೋಣ ಸರ್ ಅಂದೆ.?” “ಬನ್ನಿ ಮೊದಲು ಹೋಗೋಣ, ಪ್ರಯತ್ನ ನಮ್ಮದು, ಫಲ ಆಮೇಲೆ” ಅಂದರು. ಸರಿ‌ ಅಂತ ಹೆಂಗೋ ಧೈರ್ಯ ಮಾಡಿ ಶಾಲೆಗೆ ಹೋಗಿ, ಹೆಡ್ ಮಾಸ್ಟರ್ ಹತ್ತಿರ ಮಾತನಾಡಿ ಕೆಲಸ ಮುಗಿಸಿದ್ದಾಯಿತು. ಹೊರಗೆ ಬರುವಾಗ ಅಲ್ಲೇ ವಾಲಿ ಬಾಲ್ ಕೋರ್ಟ್ ಇಂದ ಬಾಲ್ ಜ಼ರ್ ಅಂತ ಬಂದು ನನ್ನ ಕಾಲ್ ಹತ್ತಿರ ಬಂದು ಬಿತ್ತು. “ಅಂಕಲ್, ಬಾಲ್ ಸರ್ವ್ ಮಾಡಿ, ಪ್ಲೀಸ್” ಒಬ್ಬ ವಿದ್ಯಾರ್ಥಿ ಕೇಳಿದ. ಬಾಲ್ ಸರ್ವ್ ಮಾಡಿ ಕೇಳಿದೆ, “ಒಂದು ರೌಂಡ್ ನಾವೂ ಆಡಬಹುದಾ?!” ಅವರೆಲ್ಲಾ ಓಕೆ ಅಂದರು. ಸರಿ ಅಂತ ನಾವು, ಟೀಚರ್ಸ್ ಒಂದು ಟೀಮ್ ಮಕ್ಕಳೆಲ್ಲಾ ಒಂದು ಟೀಮ್ ಆಡಿದ್ವಿ. ಆಟ ಮಾತ್ರ ಭರ್ಜರಿ ಖುಷಿ ಕೊಟ್ಟಿತು, 6-1 ಅಂತರದಲ್ಲಿ‌ ಹೀನಾಯವಾಗಿ ಸೋತೆವು, ಆ ಮಾತು ಬೇರೆ. As our officer said, particiption is important, results are secondary ಅಂತ ನನಗೆ ನಾನೇ ಧೈರ್ಯ ಹೇಳಿಕೊಂಡು ಬಂದೆ. ಇನ್ನೇನು ಹೊರಡಬೇಕು ಅನ್ನುವಾಗ, ಒಂದು 15 ನಿಮಿಷ ಬ್ಯಾಂಕಿಂಗ್ ಮತ್ತು ಉಳಿತಾಯ ಬಗ್ಗೆ ಹಾಗೆ ಒಂದು ಚಿಕ್ಕ ಡೆಮೊ ಕೊಡಿ ಸರ್ ಮಕ್ಕಳು ಖುಷಿಯಾಗ್ತಾರೆ ಅಂತ ಹೆಡ್ ಮಾಸ್ಟರ್ ಹೇಳಿದರು. ನಾನು ಮಕ್ಕಳ ಮುಖ ನೋಡ್ತಾ ಇದ್ದೆ, ಮಕ್ಕಳ ಮುಖ ಹಂಗೇ ಡಲ್ ಆಗಿ ಹೋಯ್ತು. “ಹಾಗಾದ್ರೆ ಒಂದು ಕಥೆ ಹೇಳೋಣ?” ಅಂದೆ. ಎಲ್ಲಾ ರೆಡಿಯಾಗಿ ಕ್ಲಾಸ್ ರೂಮ್ ಹೋಗೋಕೆ ರೆಡಿಯಾಗುತ್ತಿದ್ದರು. “ಕ್ಲಾಸ್ ರೂಮ್ ಏನೂ ಬೇಡ, ಇಲ್ಲೇ ಮರದ ಕೆಳಗೆ ಬನ್ನಿ” ಅಂತ ನಾನು ಕಥೆ ಶುರು ಮಾಡಿದೆ. 

 

ಒಂದು ಊರಲ್ಲಿ ಇಬ್ಬರು ಸ್ನೇಹಿತರಿದ್ದರು, ಇಬ್ಬರದ್ದೂ ಒಂದೇ ಹೆಸರು, ಒಂದೇ ದಿನ ಹುಟ್ಟಿದ್ದು, ಒಂದೇ ಕಡೆ‌ ಕೆಲಸ ಇತ್ಯಾದಿ. ಆದರೆ ವ್ಯತ್ಯಾಸ ಅಂದರೆ‌ ಒಬ್ಬರಿಗೆ ಸಿಗರೇಟ್ ಸೇದುವ ಅಭ್ಯಾಸ ರೂಢಿಯಾಗಿ ಹೋಯಿತು. ಆದರೆ ಇನ್ನೊಬ್ಬರು‌ ಅದರ ಸಹವಾಸಕ್ಕೆ ಹೋಗಲಿಲ್ಲ. ಹೆಚ್ಚು ಕಮ್ಮಿ ಆ ವ್ಯಕ್ತಿ‌ ದಿನದಲ್ಲಿ‌ ಸಿಗರೇಟ್ ಎಷ್ಟು ಬಾರಿ ಸೇದಿದರೂ ಅವನ‌ ಗೆಳೆಯ ಪಕ್ಕದಲ್ಲಿ ಒಂದು ಲೋಟ ಟೀ ಕುಡಿಯುತ್ತಾ ಅವನ ಜೊತೆ ಮಾತನಾಡುತ್ತಾ ಇರುತ್ತಿದ್ದ. ಹೀಗೇ 15 ವರ್ಷ ಆಯಿತು. ಒಂದು ದಿನ ಆ ಮೊದಲನೇ ಸಿಗರೇಟ್‌ ಸೇದುವ ವ್ಯಕ್ತಿ ಕ್ಯಾನ್ಸರ್ ಇಂದ ಸತ್ತು ಹೋದ. ಇದರಿಂದ ಸಿಗರೇಟ್ ಸೇದದ ಇನ್ನೊಬ್ಬ ವ್ಯಕ್ತಿ‌ ತುಂಬಾ ವರ್ಷಗಳ‌ ಕಾಲ ದುಃಖ‌ ಪಟ್ಟನು. ನಂತರ ಕೆಲವು‌ ವರ್ಷಗಳ ನಂತರ ಎರಡನೇ ಸಿಗರೇಟ್ ಸೇದದ ವ್ಯಕ್ತಿ ಕೂಡ ಕ್ಯಾನ್ಸರ್ ಇಂದ‌ ಸತ್ತು ಹೋದನು. ಈಗ ಈ‌ ಕಥೆಯ ಸಾರಾಂಶ ಅಥವಾ ಇದರ ನೀತಿ ಏನಿರಬಹುದು? ಯಾರಾದರೂ ಹೇಳೋಕೆ ಪ್ರಯತ್ನ‌ ಮಾಡ್ತೀರಾ?

“ಸರ್ ಅದು ಒಬ್ಬರು ತಪ್ಪು ಮಾಡಿ ಜಾರಿ‌ ಬಿದ್ದರು. ಇನ್ನೊಬ್ಬರು ತಪ್ಪು‌ಮಾಡದೇ‌ ಜಾರಿ ಬಿದ್ದರು. ಒಟ್ಟಿನಲ್ಲಿ‌ ಇಬ್ಬರೂ ನೆಗೆದು ಬಿದ್ದರು” ಅಂತ ಒಬ್ಬ ಹುಡುಗ ಹೇಳಿದ. ಅವನ‌ ಪಂಚ್ ಗೆ ಮಕ್ಕಳೆಲ್ಲಾ ಗೊಳ್ ಅಂತ ನಕ್ಕರು. Good observation, ಹ್ಹ‌ಹ್ಹ, ಆದರೆ ವಿಷಯ ಅದಕ್ಕಿಂತ‌ ಭಿನ್ನವಾಗಿದೆ, ಕೇಳಿ. ಈ ಕಥೆಯಲ್ಲಿ ಬರುವ Smoker ಯಾರಿಗೂ ಮೋಸ‌ ಮಾಡಿಲ್ಲ, ಹಣ‌ ಕದ್ದಿಲ್ಲ, ಅವನದು ಏನಿದ್ದರೂ self destruction, ಅವನ ದುಡ್ಡಲ್ಲಿ ಅವನು ಸಿಗರೇಟ್ ಖಾಲಿ ಮಾಡಿದ. ಕೊನೆಗೆ ಸಿಗರೇಟ್ ಅವನನ್ನು ಖಾಲಿ ಮಾಡಿತು. Simple story, ಧೂಮಪಾನ ಆರೋಗ್ಯಕ್ಕೆ‌ ಹಾನಿಕರ. ಆದರೆ ಎರಡನೇ ವ್ಯಕ್ತಿ‌ ಸಿಗರೇಟ್ ಸೇದಲಿಲ್ಲ, ಅವನು ತುಸು ತಡವಾಗಿ ಸತ್ತರೂ, ಕ್ಯಾನ್ಸರ್ ನ‌ ಕಾರಣದಿಂದ ಸತ್ತು ಹೋದನು. ಅದನ್ನು Passive Smoking ಎಂದು ಹೇಳುತ್ತಾರೆ. ಅದು smoking ನಷ್ಟು speed ಆಗಿ ಆರೋಗ್ಯದ ಮೇಲೆ ಹಾನಿ ಮಾಡದೇ ಇದ್ದರೂ ಅದು‌ ವ್ಯಕ್ತಿಯ ಆರೋಗ್ಯದ ಮೇಲೆ ಪ್ರಭಾವ ಬೀರೇ ಬೀರುತ್ತದೆ. ಇದು ಈ‌ ಭೂಮಿ ಮೇಲೆ ಇರುವ ಮಾನವ ಮತ್ತು ಪ್ರಾಣಿಗಳ‌ ಕಥೆಯಾಗಿದೆ. ನೀವು ನೋಡಿ, ಪ್ರಾಣಿಗಳು ಓಡುತ್ತವೆ, ಪಕ್ಷಿಗಳು ಹಾರುತ್ತವೆ, ಕೆಲವು‌ ನೆಲದ ಮೇಲೆ‌, ಕೆಲವು ನೀರ ಒಳಗೆ, ಕೆಲವು ಸಸ್ಯಹಾರಿ ಮತ್ತು ಕೆಲವು ಮಾಂಸಹಾರಿ, ಹೀಗೆ ಅನೇಕ ವಿಧಗಳು‌ ಇವೆ. ಇದರಲ್ಲಿ ಮನುಷ್ಯ ಕೂಡ ಒಂದು ಪ್ರಾಣಿ. ಆದರೂ ಭೂಮಿ‌ ಮೇಲೆ ಯಾರಿದ್ದಾರೆ ಅಂತ ಕೇಳಿದರೆ ಪ್ರಾಣಿಗಳು ಮತ್ತು ಮನುಷ್ಯ ಎಂದು ಹೇಳಬಹುದು. ಭೂಮಿಯ‌ ಮೇಲೆ‌ ಮನುಷ್ಯನ ಛಾಯೆ ಅಷ್ಟು ಗಾಢವಾಗಿದೆ. ಬೆಟ್ಟ ಕಡಿದು ಜಮೀನು‌ ಮಾಡಿ ವ್ಯವಸಾಯ ಮಾಡಿದ, ಮನೆ ಕಟ್ಟಿದ, ಮನೆ‌ ಮೇಲೆ‌ ಮನೆ ಮಾಡಿ, ಕಾರ್ಖಾನೆ ಮಾಡಿ, ಮಂಗಳ ಗ್ರಹದ‌ ಮೇಲೆ ರೋವರ್ ಕಳುಹಿಸಿದ. ಇಷ್ಟೆಲ್ಲಾ‌ Technological Advancement ಮನುಕುಲಕ್ಕೆ ಉತ್ತಮವಾದರೂ ಸಸ್ಯ ಸಂಪತ್ತು, ಪ್ರಾಣಿ ಸಂಕುಲಕ್ಕೆ ಹಾನಿಯಾಗದ ಹಾಗೆ ಮನುಷ್ಯನ ಅಭಿವೃದ್ಧಿ ಸಾಗಬೇಕಿದೆ. ಈ ಕಥೆಯಲ್ಲಿ ಬಂದ ಸಿಗರೇಟ್ ಸೇದುವ ವ್ಯಕ್ತಿ ಏ ಬಿಡು‌ ಅವನ ಆರೋಗ್ಯ ಅವನು ಹಾಳು ಮಾಡಿಕೊಂಡ‌ ಅಂತ‌ ನಾವು ignore ಮಾಡುವಂತಿಲ್ಲ. ಜೊತೆಯಲ್ಲಿ passive smoker ವ್ಯಕ್ತಿಯ ರೀತಿ‌ ನಾವು‌ ಮನುಷ್ಯರು ಮಾಡುತ್ತಿರುವ ಪ್ರಕೃತಿ ನಾಶಕ್ಕೆ ಪ್ರಾಣಿ ಪಕ್ಷಿ ಜೀವ‌ ಸಂಕುಲದ ಉಗಮಕ್ಕೆ ನಮ್ಮ‌ ಅಭಿವೃದ್ಧಿ ಯೋಜನೆ‌ ಅಡ್ಡಿಯಾಗಬಾರದು. ಇಲ್ಲಾಂದರೆ ಯಾರೋ‌ ಮಾಡಿದ‌ ತಪ್ಪಿಗೆ ಇನ್ನೊಬ್ಬ ವ್ಯಕ್ತಿ‌ ಕ್ಯಾನ್ಸರ್ ಗೆ ಬಲಿಯಾದಂತೆ‌ ನಮ್ಮಿಂದ‌ ಹಾಳಾಗುತ್ತಿರುವ ಈ ಪ್ರಕೃತಿ‌ ಪ್ರಾಣಿ ಸಂಕುಲವನ್ನೂ ಕೂಡ ಬಲಿ ತೆಗೆದುಕೊಳ್ಳುತ್ತದೆ. ಹಾಗಂತಾ ನಾಳೆಯಿಂದನೇ ನಾವೆಲ್ಲಾ‌ ಬೈಕ್‌ ಕಾರ್‌ ಮೂಲೆಗೆ ಹಾಕಿ, ಕೇವಲ ಪ್ರಾಣಿಗಳ‌ ತರಹ Roti, Kapdaa aur Makaan ಅಂತ ಸುಮ್ಮನಿರಬೇಕು ನಾನು ಹೇಳುತ್ತಿಲ್ಲ. ನಮ್‌ ಆಫೀಸರ್ ಆಗಲೇ ಹೇಳುತ್ತಿದ್ದರು,ಪ್ರಯತ್ನ ನಮ್ಮದು, ಫಲದ‌ ಚಿಂತೆ‌ ಈಗ ಬೇಡ ಅಂತ, ಹಾಗೆಯೇ‌ ಪ್ರಕೃತಿಯ ಸಂರಕ್ಷಣೆಯಲ್ಲಿ ನಾವೆಲ್ಲರೂ ಅಲ್ಪ ಸ್ವಲ್ಪ‌ ಪ್ರಯತ್ನ ಮಾಡಿ ಈ ಭೂಮಿಯನ್ನು ವಾಸ ಯೋಗ್ಯ‌ ಗ್ರಹವಾಗಿ‌ ಇನ್ನಷ್ಟು ದಿನ‌ ಕಾಪಾಡೋಣ. ಸರಿ, ಸಮಯ ಆಯ್ತು, ಎಲ್ಲಾ ಮನೆಗೆ‌ ಹೊರಡೋಣ? 


ಹೇಳಿದ‌ ತಕ್ಷಣ ಮಕ್ಕಳೆಲ್ಲಾ ಟೀಚರ್ಸ್ ಗೆ ನಮಸ್ಕಾರ ಹೇಳಿ, ಬ್ಯಾಗ್ ತಗೊಂಡು ರೈಟ್. ನಾವು ಬಾಲ್ ತಗೊಂಡು ಹೋಗಿ ಆಫಿಸ್ ರೂಮಲ್ಲಿ‌ ಇಟ್ಟು, necessary documents ಮತ್ತು Tab ತೆಗೆದುಕೊಂಡು ಅಕೌಂಟ್ ಮಾಡಲು ನಾಳೆ ಬರುತ್ತೇವೆ ಅಂತ ಹೇಳಿ ಬಂದೆವು. 


Climate change is not going away. It will only get more extreme and more dangerous with time. There is no hiding from it. Yes, those living in poverty today will be hit first and the hardest, but we are all going to feel it and see it. We already are. - Mark Ruffalo