ಜನವರಿ 15, 2015

Song of the Day

ಹಿಂಗೆ ಮಾಮೂಲಿ ದಿನದ ಹಾಗೆ ಎಲ್ಲೋ ಹೋಗ್ತಾ ಇರ್ತೀವಿ, ಹೋಟೆಲ್ ನ ಟೇಪ್ ರೆಕಾರ್ಡರ್ ನಲ್ಲಿ, ಇಲ್ಲಾಂದ್ರೆ ಆಟೋ ಪಕ್ಕದಲ್ಲಿ ಹೋಗ್ತಾ ಇರುವಾಗ ಒಂದು ಹಾಡು ಕೇಳುತ್ತೆ. ಆ ಹಾಡು ನಮ್ಮ ನಿಮ್ಮ ಫೋನಲ್ಲೂ ಇರುತ್ತೆ. ಆದರೆ ಕೇಳಿರಲ್ಲ ಅಷ್ಟೇ. ಅರೇ ಇಸ್ಕಿ, ಈ ಹಾಡು ತುಂಬಾ ಚೆನ್ನಾಗಿದೆಯಲ್ಲಾ ಅಂತ ಮನಸ್ಸಿಗೆ ಅನಿಸುತ್ತೆ. ಅಲ್ಲಿಗೆ, ಮುಗೀತು ಕಥೆ. ಟ್ರಾಫಿಕ್ ಸಿಗ್ನಲ್ ಬಂದ್ರೂ ಅದೇ ಹಾಡು ಕೇಳುತ್ತೆ, ಆಫೀಸಲ್ಲಿ ಬಾಸ್ ಬೈದ್ರೂ ಅದೇ ಹಾಡು ತಲೆಯಲ್ಲಿ ಗುನುಗುತ್ತೆ, ಎಗ್ಸಾಮ್ ಗೆ ಓದುತ್ತಿದ್ದರೂ ಅದೇ ಹಾಡು ಇಣುಕುತ್ತೆ. ನಮ್ ಹುಡುಗರ ಗುಂಪಲ್ಲಿ ಈ ಥರ ಆಗೋದನ್ನ 'Song of the Day' ಅಂತ ಕರೀತೀವಿ. ಈ ರೀತಿಯಾಗಿ ಇವತ್ತು ನನಗೆ ಕೇಳಿದ ಹಾಡು 'ಬೆಳ್ಳಿಕಾಲುಂಗುರ ಚಿತ್ರದ ಹಾಡು: ಒಂದೇ ಒಂದು ಕಣ್ಣ ಬಿಂದು'

ಸಾಂದರ್ಭಿಕ ಚಿತ್ರ (ಚಿತ್ರ ಕೃಪೆ: ಸಂತಬಂತ.ಕಾಮ್)

ಬರೀ ಮೆಲೋಡಿಯಸ್ ಹಾಡುಗಳು ಮಾತ್ರವಲ್ಲ, ಒಂದೊಂದು ಬಾರಿ ಮೈಕಲ್ ಜಾಕ್ಸನ್ ಹಾಡಿರುವ 'beat it' ಕಾಡುತ್ತೆ. ಇನ್ನೊಮ್ಮೆ ರಘು ದೀಕ್ಷಿತ್ ಗಾಯನದ 'ಗುಡುಗುಡಿಯ ಸೇದಿ ನೋಡೋ', ಇಲ್ಲವಾದರೆ ಜಂಗ್ಲಿ ಚಿತ್ರದ 'ನೀನೆಂದರೆ ನನ್ನೊಳಗೆ ಏನೋ ಒಂದು ಸಂಚಲನ', ಇನ್ಯಾವುದೋ ಸಲ ಇನ್ಯಾವುದೋ ಹಾಡು. ಒಟ್ನಲ್ಲಿ ಯಾವುದೂ ರೂಲ್ಸ್ ಇಲ್ಲ, ಇಂಥದೇ ಹಾಡು ಅಂತ, ಯಾವುದೋ ಒಂದು ಹಾಡು ನೆನಪಾಗುವುದು ಮಾತ್ರ ತಪ್ಪಲ್ಲ. ಬರೀ ಇಷ್ಟೇ ಆದ್ರೆ ಸರಿ ಬಿಡು ಅಂತ ಇಡೀ ದಿನ ಹಾಡು ಹೇಳ್ಕೊಂಡು ಆರಾಮಾಗಿರಬಹುದು. ಒಂದೊಂದು ಸಲ ಯಾವುದೋ ಹಾಡು ನೆನಪಾಗಿ ಯಾವ ಹಾಡು ಅನ್ನೋದೆ ಮರೆತು ಹೋಗುತ್ತೆ. ಅದನ್ನ ನೆನಪಿಸಿಕೊಳ್ಳುವ ಹೊತ್ತಿಗೆ ಅರ್ಧ ದಿನ ಆಗಿ ಹೋಗಿರುತ್ತೆ. ಇನ್ನೂ ಕೆಲವು ಸಲ ಇನ್ನೂ ಹಾಸ್ಯಾಸ್ಪದ ಅನ್ನಿಸೋ ಕೆಲಸ ಆಗಿ ಹೋಗುತ್ತೆ. ಹಾಡು ನೆನಪಾಗುತ್ತೆ, ಆದ್ರೆ ಯಾವ ಸಿನಿಮಾ/ಆಲ್ಬಂ ಅಂತ ನೆನಪಾಗೋದೇ ಇಲ್ಲ. ನಮ್ ಹುಡುಗ್ರಿಗಾದ್ರೂ ಕೇಳೋಣ ಅಂದ್ರೆ, ಹಾಡು ಹೇಳೋಣ ಅಂತ ಬಾಯಿ ತೆಗೆಯೋದೇ ತಡ ನಮ್ಮ ಕೋಗಿಲೆ ಕಂಠ ಕೇಳಲಾರದೇ "ಅಣ್ಣತಮ್ಮ, ಫೋನ್ ಬಂತು" ಅಂತ ಓಡಿ ಹೋಗ್ತಾರೆ. ಪುಣ್ಯ ಮಾಡಿದ್ರೆ ಆ ಪ್ರಶ್ನೆಗೆ ಒಂದು ದಿನ ಉತ್ತರ ಸಿಗುತ್ತೆ. ಇಲ್ಲಾಂದ್ರೆ ಏನೂ ಯೋಚಿಸಬೇಕಾಗಿಲ್ಲ, ಅಷ್ಟೊತ್ತಿಗೆ ಇನ್ನೊಂದು Song of the Day ತಲೆಯನ್ನೂ ಹೊಕ್ಕಿರುತ್ತದೆ. 

ಚಿಂತೆಯಲ್ಲೇ ಕಾಲ ಕಳೆಯಲು ತೀರಾ ಚಿಕ್ಕ ಬದುಕು ನಮ್ಮದು ಅಲ್ಲವೇ??!! So, Chill ಮಾಡಿ, ಇನ್ನೊಂದು ಹಾಡು ಕೇಳಿ.
ಅಂದ ಹಾಗೆ, ನಿಮ್ಮ Song of the Day ಯಾವುದು???

1 ಕಾಮೆಂಟ್‌: