ಮೇ 19, 2015

ಚೆನ್ನಾಗಿತ್ತು ಜೀವನ...No one is really ‘too busy’ in this world; it’s all about priorities.

ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ ಸಿನಿಮಾದಲ್ಲಿ ಒಂದು ಡೈಲಾಗ್ ಇದೆ. ಬರೀ ಒಂದೇನಾ ಅಂತ ಕೇಳಬೇಡಿ. ಇಸ್ಕೂಲಲ್ಲಿದ್ದಾಗ ಯಾರಾದ್ರೂ ಥರ ಒಂದೂರಲ್ಲಿ ಒಬ್ಬ ರಾಜ ಇದ್ದ, ಕಾಡಿನ ಮಧ್ಯ ಒಂದು ಅರಮನೆ ಇತ್ತು ಅಂತೆಲ್ಲಾ ಹೇಳ್ತಾ ಇದ್ದಾಗ ಅವರ ಮಾತನ್ನು ಮಧ್ಯದಲ್ಲೇ ತುಂಡರಿಸಿ ಒಬ್ನೇ ರಾಜನಾ? ಒಂದೇ ಅರಮನೆನಾ? ಅಂತ ಕೇಳಿ ಹೇಳುವವರನ್ನು ಪೇಚಿಗೆ ಸಿಲುಕಿಸಿ ಒಳ್ಳೆ ಪಂಚ್ ಕೊಟ್ಟೆ, 'ಅಷ್ಟ್ ಸಾಕ್' ಅಂತ ಬೀಗುತಿದ್ವಿ. ಈಗ ಅದೆಲ್ಲಾ ಹಳೇ ಮಾತು. ಕೆಲ್ಸ ಇರುತ್ತೆ, ಜವಾಬ್ದಾರಿ ಜಾಸ್ತಿ, ಹಾಳಾಗ್ ಹೋಗ್ಲಿ, back to ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ. ಫಿಲಂ ಅಲ್ಲಿ ಒಂದು ಡೈಲಾಗ್ ಇದೆ ಅಂತ ಆಗ್ಲೇ ಹೇಳಿದ್ನಲ್ಲಾ, ಅದೇನಪ್ಪಾ ಅಂದ್ರೆ,

“ನಾವ್ ಬೇರೆಯವರಿಗೆ ಮಾಡ್ತಾ wait ಇದ್ದೇವಿ ಅಂದ್ರೆ, ಅದರರ್ಥ ನಮಿಗ್ ಮಾಡಕ್ ಬೇರೆ ಕೆಲಸ ಇಲ್ಲ ಅಂತ ಅಲ್ಲ, ಅವು ಯಾವೂ ನಿಮ್ಮಷ್ಟು important ಅಲ್ಲ ಅಂತ ಅರ್ಥ ಅಷ್ಟೇ!”

ಸಾಂದರ್ಭಿಕ ಚಿತ್ರ: ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ

ಮೇಲೆ ಬರೆದಿರುವ ಇಂಗ್ಲೀಷ್ ಸಾಲಿಗೂ, ಮತ್ತು ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ ಚಿತ್ರದ ಡೈಲಾಗ್ ಸಾರುವ ವಿಷಯ ಒಂದೇ. ಯಾವುದೇ ಕೆಲಸವಾಗಲಿ, ಇಷ್ಟ ಇದ್ರೆ ಮಾಡ್ತೀವಿ, ಇಲ್ಲಾ ಅಂದ್ರೆ ಮಾಡದೇ ಇರಲು ನೆಪ ಹುಡುಕ್ತೀವಿ. ವಿಷಯ ಪ್ರಾಯಶಃ ಜಗತ್ತಿನ ಎಲ್ಲಾ ಬಾಸ್ ಗಳಿಗೆ ಗೊತ್ತಾಗಿದೆ ಅನಿಸುತ್ತೆ. ಮೊದಲ ಪ್ರಪೋಸಲ್ ನಲ್ಲೇ ಮದುವೆಯಾಗಲು ನೀವು ಪ್ರೀತಿಸಿದ ಹುಡುಗಿ ಒಪ್ಪಬಹುದು, ಆದರೆ ರಜಾ ಬೇಕು ಅನ್ನೋ ಕೋರಿಕೆಗೆ ಮೊದಲ ಸಲಕ್ಕೆ ಒಪ್ಪಿಗೆ ಸಿಗೋದು ತೀರಾ ವಿರಳ.
ಈಗ ವಿಷಯಕ್ಕೆ ಬರ್ತೀನಿ. ಬಹಳ ದಿನ ಆಯ್ತು, ಬ್ಲಾಗ್ ಗಾಗಿ ಎಂಥದೂ ಬರೆಯಲೇ ಇಲ್ಲವಲ್ಲಾ ಅಂತ ಅನಿಸಿತ್ತು. ಮೊದಲೇ ನಮ್ ಬ್ಲಾಗ್ ಗೆ ನನ್ನನ್ನು ಹೊರತುಪಡಿಸಿ ಬೇರೆ ಯಾರೂ ಓದುಗರಿಲ್ಲ. ಆದ್ದರಿಂದ ಒಂದು ಮಿತಿಯೊಳಗೆ ಮನಸ್ಸಿಗೆ ಬಂದದ್ದನ್ನ ಬರೆದುಕೊಳ್ಳಬಹುದು ಎಂಬ ಕೆಟ್ಟ ಧೈರ್ಯ ನನಗೆ. ಹೀಗೇ ಎನೇನೋ ಯೋಚಿಸುತ್ತಿದ್ದಾಗ ನಮ್ ಹುಡುಗ ಫೋನ್ ಮಾಡಿದ್ದ. ಮಾತಿನ ನಡುವೆ, "ಏನ್ ಸಮಾಚಾರ ಮಗಾ? ಯಾವ್ ಫಿಲಂ ನೋಡಿದೆ ಇತ್ಲಾಗೆ?" ಅಂದ. ಮರುಕ್ಷಣವೇ ನನ್ ಮನಸ್ಸು ಶಿವಮೊಗ್ಗವನ್ನು ಒಂದು ರೌಂಡ್ ಸುತ್ತಿಕೊಂಡು ಬಂತು. ಇಂಜಿನಿಯರಿಂಗ್ ಓದುವಾಗ ಶನಿವಾರ ಬಂದರೆ ಸಾಕು, ಎದ್ನೋ ಬಿದ್ನೋ ಅಂತ ನಾನು ಮತ್ತು ನಮ್ ಹುಡುಗ್ರೆಲ್ಲಾ ಥೇಟ್ರು ಕಡೆ ಓಡ್ತಾ ಇದ್ವಿ. ಒಳ್ಳೆ ಸಿನಿಮಾಗಳು ಯಾವೂ ಇಲ್ಲದಾದಾಗ ನೋಡಿರೋದನ್ನೇ ಮತ್ತೆ ಮತ್ತೆ ನೋಡ್ತಾ ಇದ್ವಿ. ಟಿವಿ ಇಲ್ಲ, ಇಂಟರ್ನೆಟ್ ಇಲ್ಲ, ದಿನಪತ್ರಿಕೆಗಳು ಲೈಬ್ರರಿಯಲ್ಲೇ ಸಿಗ್ತಾ ಇದ್ವು, ಆದ್ರೆ ಓದೋಕೆ ಶಕ್ತಿ ಸಾಕಾಗ್ತಾ ಇರಲಿಲ್ಲ. ಆದ್ದರಿಂದ ಸರಿಯಾಗಿ ಸಿಗ್ತಾ ಇದ್ದ ಜೊತೆಗಾರ್ತಿ ಅಂದರೆ ಸಿನಿಮಾ. ಹಂಗಿತ್ತು ಕಾಲ, ಕಟ್ ಮಾಡಿದ್ರೆ 2015. ನಾಲ್ಕು ತಿಂಗಳಲ್ಲಿ ನೋಡಿರೋದು ಎರಡೇ ಫಿಲಂಗಳು. ಇದು ನಾನೇನಾ ಅಂತ ಅನಿಸೋಕೆ ಶುರುವಾಯಿತು. ಕಾರಣ ಏನಿರಬಹುದು ಎಂದು ತಡಕಾಡಿದಾಗ ನನ್ನ ಕನ್ನಡಕ ಸಿಕ್ತು. ಅರೇ ಇಸ್ಕಿ, ಟೈಮಿಗೆ ಸರಿಯಾಗಿ ಟಾರ್ಚ್, ರಿಮೋಟ್, ಬೈಕ್ ಕೀ ಯಾವತ್ತೂ ಸಿಗಲ್ಲ, ಇದಾದ್ರೂ ಸಿಗ್ತಲ್ಲ ಅಂತ ಯೋಚನೆಯನ್ನು ಮುಂದುವರೆಸಿದೆ. ಕಳೆದ ನಾಲ್ಕು ತಿಂಗಳಿಂದ ಫಿಲಂ ನೋಡೋಕೆ ಆಗದಿರುವಂಥ ಮಹಾನ್ ಕೆಲಸ ಏನು ಮಾಡಿದೆ ಅಂತ.

ಮಹಾನ್ ಕೆಲಸ ಅಂತ ಪರಿಗಣಿಸಲ್ಪಟ್ಟಿರುವ ಯಾವುದೇ ಕೆಲಸವಾಗಲೀ, ನಾವು ಮಾಡಲು ಪ್ರಾರಂಭಿಸಿದಾಗ ಕೆಲಸ ಮರ್ಯಾದೆ ಕಳೆದುಕೊಳ್ಳೋದು ಗ್ಯಾರಂಟಿ. Out of the Box ಯೋಚನೆ ಮಾಡುವವರು ಬುದ್ಧಿವಂತರು. Out of the Blog ಬರೆಯೋರು ನಮ್ ಥರ ಕೆಲಸಕ್ಕೆ ಬಾರದೇ ಇರೋರು. ಆಗ್ಲಿಂದ ಸುಮ್ನೆ ಎಲ್ಲೆಲ್ಲೋ ರೌಂಡ್ ಹೊಡೀತಾ ಇದ್ದೀನಿ. ಎಲ್ಲಿದ್ದೆ ನಾನು? !! ನಾಲ್ಕು ತಿಂಗಳಿಂದ ಏನು ಮಾಡ್ತಿದ್ದೆ ಅನ್ನೋದು. ಸುಮ್ನೆ ನಾಲ್ಕು ತಿಂಗಳುಗಳ ವಿಷಯ ಹೇಳಿ ಜಾಸ್ತಿ ಬೋರ್ ಹೊಡೆಸಲ್ಲ. ಸದ್ಯಕ್ಕೆ, ಮೇ ತಿಂಗಳ ವಿಷಯ ಸಾಕು. ಒಂದು ನಾಲ್ಕು ದಿನ ನಮ್ ಹುಡುಗರ ಜೊತೆ ಕೇರಳ - ತಮಿಳುನಾಡು ಟ್ರಿಪ್ ಆಯ್ತು. ಅದು ಬಿಟ್ರೆ 4-5 ಇಂಗ್ಲೀಷ್ ಧಾರಾವಾಹಿಗಳನ್ನು ತಿರುಗಾ ಮುರುಗಾ ರಿವಿಷನ್ ಮಾಡಿದ್ದೀನಿ ಅಷ್ಟೇ. ಇದರ ನಡುವೆ ಬ್ಲಾಗ್ ಗಾಗಿ ಏನೂ ಬರೆಯಲು ಯಾಕೆ ಆಗಿಲ್ಲ ಎಂಬ ಯೋಚನೆಯ ಕೆಲಸಕ್ಕೆ ವಾಪಸ್ ಬಂದಾಗ ನೆನಪಾಗಿದ್ದೇ ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ ಚಿತ್ರದ ಡೈಲಾಗು. ಲೈಫು ಇಷ್ಟೇ ಕಣ್ರೀ, ಯಾರೂ ಬ್ಯುಸಿ ಇರಲ್ಲ, ಅವರವರು ಯಾವುದು / ಯಾರಿಗೆ ಪ್ರಾಮುಖ್ಯತೆ ಕೊಡುತ್ತಾರೋ, ಅದರ ಮೇಲೆ ಅವರ ಜೀವನ ಹಾಗೂ ಜೀವನಶೈಲಿ ನಿರ್ಣಯವಾಗುತ್ತೆ. ನಾನು ಬರೆಯದಿರೋಕೆ ಕಾರಣ ನಾನು ಬರೆಯಲು ಮನಸ್ಸು ಮಾಡಿಲ್ಲ ಅಂತ ಹೇಳಬಹುದೇ ಹೊರತು ಅದಕ್ಕೆ ಸಂದರ್ಭವನ್ನಾಗಲಿ, ಇಲ್ಲವೇ ವಿಧಿಯನ್ನಾಗಲಿ, ಇಲ್ಲವೇ ಮತ್ಯಾರನ್ನೋ ದೂಷಿಸುವುದು ತಪ್ಪಾಗುತ್ತೆ. ಪ್ರಸ್ತುತ ಸಮಯದಲ್ಲಿ Spider-Man 3 ಚಿತ್ರದ ಒಂದು ಸಂಭಾಷಣೆಯನ್ನು ಇಲ್ಲಿ ದಾಖಲಿಸುವುದು ಅತ್ಯಂತ ಸೂಕ್ತವೆನಿಸುತ್ತದೆ
ಸಾಂದರ್ಭಿಕ ಚಿತ್ರ: Spider-Man 3

“Whatever comes our way, whatever battle we have raging inside us, we always have a choice. My friend Harry taught me that. He chose to be the best of himself. It's the choices that make us who we are, and we can always choose to do what's right.”

ಪ್ರಾಯಶಃ ಜೀವನವೇ ಹಾಗೆ, ಎಲ್ಲರೂ ಎಲ್ಲವನ್ನೂ ಅವರವರ ಮೂಗಿನ ನೇರಕ್ಕೆ define ಮಾಡ್ತಾರೆ. ಅವರವರ ಕಲ್ಪನೆಯಲ್ಲಿ ಹಲವು ವಸ್ತುಗಳಿಗೆ ಹೋಲಿಸಿದ್ದಾರೆ. ಡಿ.ವಿ.ಗುಂಡಪ್ಪನವರು ಬದುಕನ್ನು ದೇವರು ಓಡಿಸುವ ಜಟಕಾ ಬಂಡಿಗೆ ಹೋಲಿಸಿದ್ದಾರೆ. ಇನ್ನೂ ಹಲವು ಕವಿಗಳು ಹೂವಿನ ಹಾಗೆ ಅರಳಿ ಬಾಡುವ ನಡುವೆ ನಮ್ಮ ಬದುಕಿನ ಆಯಸ್ಸು ಮುಗಿದಿರುತ್ತದೆ ಎಂದು ವರ್ಣಿಸುತ್ತಾರೆ. ಸಿನಿಮಾ ಮಂದಿ ಕೂಡ ಅವರದೇ ಆದ ಕ್ರೇಜ಼ಿ ಆಲೋಚನೆಗಳಲ್ಲಿ ಜೀವನವನ್ನು define ಮಾಡಿರುವುದನ್ನು ಕಾಣಬಹುದು. ಉಪೇಂದ್ರ 'ನಮ್ಮ ಜೀವನ ಮೇಲಿಂದ ಕೆಳಗೇ ಬೀಳುವ ಎಣ್ಣೆ ಬಾಟಲಿಯ ಹಾಗೆ' ಎಂದು ಉಪೇಂದ್ರ ಸಿನಿಮಾದಲ್ಲಿ ಹೇಳಿದ್ದಾರೆ (ಒಂದು ಕ್ಷಣ ಇದ್ದು, ಇನ್ನೊಂದು ಕ್ಷಣ ಇರದಷ್ಟು ಕಡಿಮೆ ಅವಧಿಯ ಬಾಳು ಎಂಬುದು ಇದರ ಅರ್ಥ, ಆದರೆ ಡೈಲಾಗ್ ಯಾಕೆ ಸಿನಿಮಾದಲ್ಲಿದೆ ಎಂಬ ವಿಷಯ ಇಲ್ಲಿ ಬೇಡ :p ). ಪವನ್ ಒಡೆಯರ್ ಕಡೆ ತಿರುಗಿ ಮತ್ತೆ ವಾಪಸ್ ನೋಡುವುದರೊಳಗೆ ಕರಗಿ ಹೋಗುವ ಐಸ್ ಕ್ರೀಮ್ ಹಾಗೆ ಎಂದು ತಮಾಷೆಯಾಗಿ ಹೇಳಿದರೆ, ಲೂಸಿಯಾ ಚಿತ್ರದಲ್ಲಿ ಪವನ್ ಕುಮಾರ್ ಜೀವನದ ಬಗೆಗೆ ನಿಮ್ಮ ಈ "ಸಣ್ಣ" ಬದುಕು, ಇನ್ನೊಬ್ಬರ "ದೊಡ್ಡ" ಕನಸು ಎಂಬ ಗಂಭೀರವಾದ ಅಭಿಪ್ರಾಯ ಮಂಡಿಸಿದ್ದಾರೆ. ಯೋಗರಾಜ್ ಭಟ್ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಜೀವನದ ಕುರಿತು
ಯಾವನೋ ಬಿಟ್ಟು ಹೋದ ಹಳೆ ಚಪ್ಪಲಿ ಈ ಬಾಳು, ಹಾಕೊಂಡು ಹೋಗು ಮಗನೆ ನಿಲ್ಲಬೇಡ ನೀನೆಲ್ಲೂ”
ಎಂದು ಹೇಳಿದ್ದಾರೆ.

ಫೋಟೋಗ್ರಫಿ: ಶಿವ ಕುಮಾರ್ ಎ

ಇಷ್ಟೆಲ್ಲಾ ಉದಾಹರಣೆ ಕೊಟ್ಟ ಮೇಲೆ ನನ್ ಅಭಿಪ್ರಾಯ ಹೇಳದೇ ಇರೋದು ಹೇಗೆ ನೀವೇ ಹೇಳಿ?? ನನ್ನ ಪ್ರಕಾರ ಜೀವನ ಒಂದು ಒಂದು ವಿಶಾಲ ಬೆಟ್ಟವನ್ನು ಹತ್ತಿ ಇಳಿಯುವ ಟ್ರೆಕ್ಕಿಂಗ್ ಹಾಗೆ crazy journey ಎಂದು ಹೇಳಬಹುದು. ಏರಿಳಿತ ಸರ್ವೇಸಾಮಾನ್ಯ. ಕೆಲವೊಮ್ಮೆ ಜಾರಿ ನೋವು ಪಡುತ್ತೇವೆ, ಇನ್ನೂ ಕೆಲವೊಮ್ಮೆ ನಿಂತು ವಿಶ್ರಾಂತಿ ಪಡೆಯುತ್ತೇವೆ. ಕೆಲವು ಬಾರಿ ಕೆಲವರು ಜೊತೆಯಾಗುತ್ತಾರೆ, ಮತ್ತೆ ಕೆಲವು ಬಾರಿ ನಮ್ಮ - ಅವರ ದಾರಿ ಬೇರೆಯಾಗುತ್ತದೆ. ಹಿಂದೆ ಹೋಗೋ ಮಾತೇ ಇಲ್ಲ, ನೆಡೆದು ಬಂದ ದಾರಿಯಲ್ಲಿ ಕ್ಲಿಕ್ಕಿಸಿಕೊಂಡ ಸೆಲ್ಫೀಗಳ ನೆನಪಿನೊಂದಿಗೆ ಹೊಸ ಜಾಗದ ಬಗ್ಗೆ  ಕನಸಿನ ಕಾಣುತಾ ಹೊಸ ಹುರುಪಿನೊಂದಿಗೆ ಮುಂದೆ ಹೆಜ್ಜೆ ಹಾಕುತ್ತಿರಬೇಕು, ಅಷ್ಟೇ!

ಬಾಟಮ್ ಟ್ವಿಸ್ಟ್ : ಪ್ರತಿ ಬಾರಿ ಬಾಟಮ್ ಲೈನ್ ಇಲ್ಲವೇ P.S. ಎಂದು ನಮೂದಿಸಿ ಕೊನೆಯಲ್ಲಿ ಏನಾದರೂ ಬರೀತಾ ಇದ್ದೆ. ಆದರೆ ಬಾರಿ ಬಾಟಮ್ ಟ್ವಿಸ್ಟ್ ಎಂದು ಬದಲಾಯಿಸಬೇಕಾಯಿತು. ಯಾಕಪ್ಪ ಅಂದ್ರೆ ನಾನು ಅಂಕಣವನ್ನು ನಮ್ಮ ಬಾಲ್ಯಕ್ಕೂ ಈಗಿನ ಕಾಲದ ಹುಡುಗರ childhood ಗೂ ಇರುವ technological generation gap ಕುರಿತು ಬರೆಯಬೇಕೆಂದಿದ್ದೆ. ಆರಂಭಿಸಲು ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿಯ ದೃಶ್ಯವೇ ಸೂಕ್ತ, ಅದರ ನಂತರ ಕಾಲಫಟ್ಟದಲ್ಲಿ ಪ್ರೀತಿ, ಗೆಳೆತನ ಎಲ್ಲವೂ ಹೇಗೆ ಮಾರ್ಪಾಡಾಗಿದೆ ಎಂದು ಹೇಳುವುದು ನನ್ನ ಉದ್ದೇಶವಾಗಿತ್ತು. ಆದರೆ ಬರೀತಾ ಬರೀತಾ ಜೀವನದ ಬಗ್ಗೆ ಬರೆದುಬಿಟ್ಟೆ. ನನಗೇ ಗೊತ್ತಿಲ್ಲದೇ ನಾನೇ ಟ್ವಿಸ್ಟ್ ಎದುರಿಸಬೇಕಾಯಿತು. ಪ್ರಾಯಶಃ ಜೀವನ ಅಂದ್ರೆ ಹೀಗೆ ಅಲ್ವಾ? ಅಂದ್ಕೊಳ್ಳೋದು ಒಂದು, ಅಗೋದು ಇನ್ನೊಂದು!

2 ಕಾಮೆಂಟ್‌ಗಳು: