ಅಕ್ಟೋಬರ್ 6, 2015

ಮನದ ಮುಖಕ್ಕೆ ಸೆಲ್ಫೀ ಕ್ಯಾಮೆರಾವನ್ನಿಡಿದು...ಅವನು: Who's this? Sorry, I lost my contacts.
ನಾನು: ನಾನು ಮಗಾ ಅರುಣ, ಅಣ್ಣಪ್ಪ, ಚಳ್ಳಕೆರೆ.

ಅವನು: Who's this? Sorry, I lost my contacts.
ನಾನು: ನಾನು ಮಗಾ ಅರುಣ್, GJC, ಕಡೂರು.

ಅವನು: Who's this? Sorry, I lost my contacts.
ನಾನು: ಲೇ ಶೆಕೆ, ಮೊನ್ನೆ ತಾನೇ ನಿಮ್ ಹೊಸ ಹುಡುಗಿ ಜೊತೆ ಫೋಟೋ ಹಾಕಿದ್ದಾಗ 'ವಿಶ್' ಮಾಡಿದ್ದೆ, ಇವತ್ತು ಆಗಲೇ ನಮ್ ನಂಬರ್ ಡಿಲಿಟ್ ಮಾಡ್ಬಿಟ್ಟಾ? ನಿಮ್ಮಂಥವರಿಗೆಲ್ಲಾ 'ವಿಷ' ಹಾಕಿ, ಸಾವಿನಿಂದ ಕಾಪಾಡಿ ಆಮೇಲೆ get well soon ಅಂತ 'ವಿಶ್' ಮಾಡ್ಬೇಕು, ಆಗ ಬುದ್ಧಿ ಬರುತ್ತೆ. ಹಾಳಾಗ್ ಹೋಗ್ಲಿ ನಾನು ಗುರೂ pt.


ಅವಳು (ಕಾಲ್ಪನಿಕ): Who's this? Sorry, I lost my contacts.
ನಾನು: Sorry, wrong number.
(WhatsApp uninstalled)

ಜೂನ್ ಬಂತೆಂದರೆ ಮಳೆಗಾಲ ಆರಂಭವಾಗುತ್ತದೆ. ನಿಧಾನಕ್ಕೆ ಮೂಲೆಗೆ ಎಸೆದಿದ್ದ ಛತ್ರಿಗಳಿಗೆ 'ರಿಪೇರಿ ಭಾಗ್ಯ' ಯೋಜನೆ ಜಾರಿಯಾಗುತ್ತದೆ. ರೈತ ಸಮೂಹದಲ್ಲಿ ಬಿತ್ತನೆ ಕಾರ್ಯ ವೇಗ ಪಡೆದುಕೊಳ್ಳುತ್ತದೆ. ನಾನು ಸದ್ಯಕ್ಕೆ ಬ್ಯಾಂಕ್ ಹಳ್ಳಿ ಶಾಖೆಯಲ್ಲಿ ಕೆಲಸ ಮಾಡುತ್ತಿರುವುದರಿಂದ ಕೆಲಸ ಜಾಸ್ತಿಯಾಗಿ ಮನೆಗೆ ಹೋಗೋದು ಲೇಟಾಗುತ್ತೆ. ಮೊದಲೇ ಇಡೀ ದಿನ ಕೆಲಸ ಮಾಡಿ ತಲೆ ಕೆಟ್ಟುಹೋಗಿರುತ್ತೆ, ಶಿವಾ ಅಂತ ಮನೆಗೆ ಬಂದಾಗ ಕರೆಂಟ್ ಬೇರೆ ಇರಲ್ಲ, ಹೊರಗೆ ಹೋಗಿ ಊಟ ಮಾಡಿ ಬರೋಣ ಅನ್ನೋ ಯೋಚನೆಗೆ ತಣ್ಣಗೆ ತಣ್ಣೀರೆರಚುವ ಮಳೆಯ ಸಮಸ್ಯೆ ಬೇರೆ. ಅರೇ, ಬಸ್ಸಲ್ಲಿ ಹೋಗಿ ಬಸ್ಸಲ್ಲಿ ಬರೋದ್ರಿಂದ ಸುಮ್ಮನೆ ಕಾಲಹರಣ ಆಗ್ತಿದೆ ಅಂತ ಒಮ್ಮೆ ಬೈಕ್ ತಗೊಂಡು ಹೋಗಿದ್ದೆ. ಬರುವಾಗ ಸುಮಾರಿಗೆ ಕತ್ತಲಾಗಿತ್ತು, ಯಾವುದಾದರೂ ಮೋಹಿನಿ ಅಡ್ಡ ಬಂದು, ಲಿಫ್ಟ್ ಕೇಳಿ, ನಾವು ಲಿಫ್ಟ್ ಕೊಟ್ಟು, ಸಾಗರ ತಲುಪುವುದರೊಳಗೆ ನಾನೂ 'ಮೋಹನ' ಆಗ್ಬಿಟ್ರೆ ಏನ್ ಕಥೆ ಶಿವಾ ಅಂತ ಅದೂ ಇದೂ ಯೋಚನೆ ಮಾಡ್ತಾ ನಿಧಾನವಾಗಿ ಬರ್ತಾ ಇದ್ದೆ. ಯಾವುದೋ ಒಂದು ಬೈಕ್ ಹೈ ಬೀಮ್ ಲೈಟ್ ಕಣ್ಣಿಗೆ ಬಿದ್ದು, ಕಣ್ಣ ಮುಂದಿರುವ ಗುಂಡಿ ಕಾಣದಾಗಿ ಗುಂಡಿಗೆ ಬೈಕ್ ಇಳಿಸಿ ಬಿದ್ದದ್ದೂ ಆಯಿತು. ಸರಿ ಬಿಡಪ್ಪ, ಹೆಂಗೋ ಬೈಕ್ ಇಂದ ಬಿದ್ದು ಸುಮಾರು ಕಾಲ ಆಗಿತ್ತು ಅಂತ ನಾನೂ ಸುಮ್ಮನಾದೆ. So, ಒಂದು ವಿಚಿತ್ರ ಲೆಕ್ಕಾಚಾರದಲ್ಲಿ ಎಲ್ಲಾ ತೊಂದರೆಗಳಿಗೆ ಕಾರಣ ಮಳೆ. ಹಾಗಂತ ಮಳೆಯನ್ನು ನಾನು hate ಮಾಡ್ತಿದ್ದೀನಿ ಅಂತ ಹೇಳುತ್ತಿಲ್ಲ. ಮಳೆಯ ಕಾರಣದಿಂದ ಒಂದಷ್ಟು uncomfortable scenes ಎದುರಾಗಿವೆ ಅನ್ನೋದಷ್ಟೇ ಮುಖ್ಯ ಸಂಗತಿ. ಮಳೆ ಕುರಿತಾಗಿ Bob Marley ಹೇಳಿಕೆ ಹೀಗಿದೆ: “Some people feel the rain. Others just get wet.” ಪ್ರೀತಿಯ ಆಳ ಅಗಲ ತಿಳಿಯದ ವಯಸಲ್ಲೇ
"ಯಾರು ಯಾರು ನನ್ನವಳು ಯಾರು?
ಏನು ಹೆಸರು ಯಾವುದವಳೂರು"
(ಒಂದಾಗೋಣ ಬಾ)
ಎನ್ನುತ್ತಾ ರವಿಮಾಮನ ಥರ ಹಾಡುತ್ತಾ ಮಳೆಗಾಗಿ ಕಾದಿದ್ದು ಇದೆ. ಏನೇ ಅಂದರೂ ಮೇಲೆ ಹೇಳಿದ “Some people feel the rain" ಎಂಬಲ್ಲಿದ್ದ ನಾನು, “Others just get wet" ಎಂಬಲ್ಲಿಗೆ ಸೇರಿದ್ದು ಮಾತ್ರ ದುರದೃಷ್ಟಕರ ಸಂಗತಿ.

ಶಾಲಾ ದಿನಗಳ flashback ನಲ್ಲಿ ಗಮನಾರ್ಹ ವಿಷಯವೊಂದಿದೆ. ಪ್ರತಿ ವರ್ಷ ಪಠ್ಯ ಪುಸ್ತಕಗಳು ಬದಲಾಗುತ್ತಿದ್ದವು. ಯೂನಿಫಾರಂಗಳು ಬದಲಾಗುತ್ತಿತ್ತು, ನೋಟ್ಸು-ಜಾಮಿಟ್ರಿ ಬಾಕ್ಸ್ಗಳ ಜೊತೆಗೆ ನಾನೂ ಕೂಡ ಬದಲಾಗುತ್ತಿದ್ದೆ. Literally ಅಲ್ಲ figuratively. ಅಂದರೆ ಪ್ರತಿ ವರ್ಷ ನನ್ನ ಐಡೆಂಟಿಟಿ ಬದಲಾಗುತ್ತಿತ್ತು. ಸ್ವಲ್ಪ ವಿವರವಾಗಿ ಹೇಳುತ್ತೇನೆ, ಓದಿ. ಪ್ರತಿ ವರ್ಷ ನೋಟ್ಸ್ ಗಳ ಮೇಲೆ ನನ್ನ ಹೆಸರು ಬರೆಯುವಾಗ 1ನೇ ತರಗತಿ, 6th standard, 10th standard ಎಂದೆಲ್ಲಾ ಬರೆಯುವಾಗ ಏನೋ ಒಂಥರಾ ಖುಷಿಯಾಗ್ತಾ ಇತ್ತು. ಪತ್ರಕರ್ತನಾಗಬೇಕೆಂಬ ನನ್ನ ಕನಸಿಗೆ ನಾನು ಹತ್ತಿರವಾಗುತ್ತಾ ಇದ್ದೀನಲ್ಲಾ ಅಂತ. ಆಮೇಲೆ ಇಂಜಿನಿಯರಿಂಗ್ ಮಾಡಿ ಸದ್ಯಕ್ಜೆ ಬ್ಯಾಂಕಲ್ಲಿ ಕೆಲಸ ಮಾಡ್ತಾ ಇದ್ದೀನಿ, ಅದೆಲ್ಲಾ ಬೇರೆ ಕಥೆ ಬಿಡಿ. ನನ್ನ ಹೆಸರು ಅರುಣ್, ಅದೇನೋ ಸರಿ. ಆದರೆ ನಿಜವಾಗಿಯೂ ನಾನ್ಯಾರು ಎಂಬ ಪ್ರಶ್ನೆ ದಿನವೂ ನನ್ನನ್ನು ಕಾಡುತ್ತದೆ. ನನ್ನ ತಂದೆ-ತಾಯಿಗೆ ಅರುಣ, ಗೆಳೆಯರ ಗುಂಪಲ್ಲಿ ಅಣ್ಣಪ್ಪ, ಸಹೋದ್ಯೋಗಿಗಳ ಪಾಲಿಗೆ ಕ್ಲರ್ಕ್ ಆಗಿ ನನ್ನನ್ನು ಗುರುತಿಸಲಾಗುತ್ತದೆ. ಆದರೆ ಇವೆಲ್ಲವೂ ಟೆಂಪರರಿ ಉತ್ತರಗಳು. ಹಲವು ವೇದಾಂತಿಕ ತತ್ವಗಳನ್ನು ಪರಿಗಣನೆಗೆ ತೆಗೆದುಕೊಂಡು ಉತ್ತರ ಹುಡುಕಿದಾಗ ನಾನು ಮೇಲಿನ ಯಾವೂ/ಯಾರೂ ಅಲ್ಲ ಎಂಬುದು ಸ್ಪಷ್ಟ. ಕಡೆಯದಾಗಿ ನಾನು ಯಾರು, ಪ್ರಶ್ನೆಗೆ ಉತ್ತರ ಇನ್ನೂ unknowನು.
ಸಾಂದರ್ಭಿಕ ಚಿತ್ರ: ಉಪ್ಪಿ2 

Yes, ನಿಮ್ಮ ಊಹೆ ನಿಜ. ಅಂಕಣ ಉಪೇಂದ್ರ ಹಾಗೂ ಅವರ ಸಿನಿಮಾಗಳ ಬಗ್ಗೆ. ಓಹ್, ಅಂಕಣ ಉಪ್ಪಿ ಕುರಿತಾದದ್ದು ಅಂತ ಗೊತ್ತಾಗಲಿಲ್ಲವಾ? ತುಂಬಾ ಒಳ್ಳೆಯದು, ಒಂದು ಲೆಕ್ಕದಲ್ಲಿ ನಿಮ್ಮನ್ನು ಕನ್ಫ್ಯೂಸ್ ಮಾಡೋದ್ರಲ್ಲಿ ನಾನು ಯಶಸ್ವಿಯಾದೆ ಅಂತ. Well done pt. ಈಗ ವಿಷಯಕ್ಕೆ ಬರ್ತೀನಿ, ಉಪೇಂದ್ರ ನಿರ್ದೇಶನದ / ಅಭಿನಯದ ಚಿತ್ರಗಳಲ್ಲಿ Hero Introduction Scene ತುಂಬಾ ವಿಚಿತ್ರವಾಗಿರುತ್ತದೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ ನಾಯಕನ ಆಗಮನವಾಗದೇ ಕಥೆ ತನ್ನ ಪಾಡಿಗೆ ತಾನು ಓಡುತ್ತಿರುತ್ತದೆ, ಹೀರೋ ಇಲ್ಲದೆ ಕಥೆ ಮುಂದೆ ಹೋಗಲ್ಲ ಎಂಬುವಲ್ಲಿಗೆ ಮಾತ್ರ ನಾಯಕನ ಆಗಮನವಾಗುತ್ತದೆ. ಅದು ಆಗಿನ ತರ್ಲೆ ನನ್ಮಗ ಇರಬಹುದು ಇಲ್ಲವೇ ಇತ್ತೀಚಿನ ಉಪ್ಪಿ 2 ಇರಬಹುದು, ನಾಯಕನ ಆಗಮನ ವಸಿ ಲೇಟಾಗಿ ಆಗುತ್ತೆ ಎಂಬ ವಿಷಯವನ್ನು ನಿಮ್ಮ ಗಮನಕ್ಕೆ ತರುತ್ತಿದ್ದೇನೆ. ಉಪ್ಪಿ 2 ಚಿತ್ರವನ್ನು ಉದಾಹರಣೆಯಾಗಿ ತೆಗೆದುಕೊಂಡು ಮೇಲಿನ ವಿಷಯವನ್ನು ವಿವರಿಸುತ್ತೇನೆ. ಉಪ್ಪಿ 2 ಚಿತ್ರ ಶುರುವಾದಾಗ ಅಪ್ಪು ಹಾಡಿರುವ 'ಉಪ್ಪಿಟ್ಟು ಉಪ್ಪಿಟ್ಟು' ಹಾಡಿನೊಂದಿಗೆ ರೋಲಿಂಗ್ ಟೈಟಲ್ ತೋರಿಸಲಾಗುತ್ತದೆ. ನಂತರ ಒಂದು ಮನೆಗೆ ಸಯ್ಯಾಜಿ ಶಿಂಧೆ ಹಾಗೂ ಬ್ಯಾಂಕ್ ಜನಾರ್ಧನ್ ದಾಳಿ ಮಾಡಿಯಾರು ನೀನು?” ಎಂಬ ಪ್ರಶ್ನೆಯನ್ನು ಮುಂದಿಡುತ್ತಾರೆ (ಅದು ಉಪೇಂದ್ರ ಅವರ ಮನೆಯೇ ಅಂತ ಆಮೇಲೆ WhatsApp ಚರ್ಚೆಯಲ್ಲಿ ಗೊತ್ತಾಯಿತು). ಪರದೆಯೆಲ್ಲಾ ಬಿಳಿಯಾಗಿ ಫ್ಲಾಷ್ ಬ್ಯಾಕ್ ಬರದೇ ಫಿಲಂ ನಿಂತು ಹೋಯಿತು ಎಂದು ಕನ್ಫ್ಯೂಸ್ ಮಾಡಲಾಗುತ್ತೆ, ಆಮೇಲೆ ಸೈಕಾಲಜಿ ಮೇಷ್ಟ್ರ ಪಾಠ, ಅಲ್ಲಿಂದ ನಾಯಕಿಯು ನೀನು unknowನು (ನೀನು ಅನ್ನೋನು) ಹುಡುಕಾಟ ಆರಂಭಿಸುತ್ತಾಳೆ. At the mean time, ಒಂದೆಡೆ ಇನ್ಸ್ಪೆಕ್ಟರ್ ಬ್ಯಾಂಕ್ ಜನಾರ್ಧನ್ ಹಾಗೂ ಕಾನ್ಸ್ಟೇಬಲ್ ಬಿರಾದಾರ್ ಮತ್ತು ಇನ್ನೊಂದೆಡೆ ಮೊಟ್ಟೆ ಬಾಸ್ (ಅಭಿನಯ: ಸತ್ಯಜಿತ್) ಕೂಡ ಅದೇ ನೀನು ಅನ್ನೋನು ಎಲ್ಲಿದ್ದಾನೆ ಅಂತ ಹುಡುಕುತ್ತಿರುತ್ತಾರೆ. ಆಮೇಲೆ ಯಾವುದೋ ಬೆತ್ತಲೆ ಸ್ವಾಮಿಯನ್ನು 'ನೀನು' ಅಂತ ತೋರಿಸಲಾಗುತ್ತೆ. ಇದೆಲ್ಲಾ ಆದ ಮೇಲೆ ಉಪೇಂದ್ರ ನಿರ್ದೇಶಕನ ಕ್ಯಾಪ್ ಹಾಕಿಕೊಂಡು ಎಂಟ್ರಿ ಕೊಡುತ್ತಾರೆ, ಇದು ಉಪ್ಪಿ ಸ್ಟೈಲು. ಇನ್ನೊಂದು ಮುಖ್ಯ ವಿಷಯ ಏನಪ್ಪ ಅಂದರೆ ಬೇರೆ ಫಿಲಂಗಳಲ್ಲಿ ನಾಯಕನ Introduction ಗಾಗಿಯೇ ದೃಶ್ಯಗಳನ್ನು ಸಂಯೋಜಿಸಲಾಗುತ್ತದೆ. ಆದರೆ ಉಪೇಂದ್ರ ನಿರ್ದೇಶನದ ಯಾವುದೇ ಚಿತ್ರಗಳನ್ನು ಪರಿಗಣನೆಗೆ ತೆಗೆದುಕೊಂಡಾಗ ಹೀರೋ ಆಗಮನದ ಮುಂಚಿನ ದೃಶ್ಯಗಳು Irrelevant ಅಂತ ನಿಮಗೆ ಅನಿಸೋದೇ ಇಲ್ಲ. ಉಪ್ಪಿ 2 ಚಿತ್ರದಲ್ಲಿ ಕೂಡ ಅಷ್ಟೇ, “ಯಾರು ನೀನು?” ಎಂಬ ಪ್ರಶ್ನೆಯಿಂದ ಶುರುವಾಗುವ ಸಿನಿಮಾ ಮತ್ತೆ ಅದೇ ಪ್ರಶ್ನೆಯೊಂದಿಗೆ ಕೊನೆಯಾಗುತ್ತದೆ. ಉಪೇಂದ್ರ ನನಗೆ ವೈಯಕ್ತಿಕವಾಗಿ ಇಷ್ಟವಾಗೋದೇ ಥರದ ಮೇಕಿಂಗ್ ಕಾರಣದಿಂದ. Christopher Nolan ನಿರ್ದೇಶನದ The Prestige ಹಾಗೂ Memento, Pete Travis ನಿರ್ದೇಶನದ Vantage Point ಚಿತ್ರಗಳಲ್ಲಿ ಇದೇ ಥರದ ಮೊದಲ ಹಾಗೂ ಕೊನೆಯ ದೃಶ್ಯಗಳು ಒಂದೇ ಆಗಿರುವ ಪ್ರಯೋಗ ಇದೆ, ಸದ್ಯಕ್ಕೆ ಅದು out of syllabus, ಆದ್ದರಿಂದ ಮತ್ಯಾವಾಗಾದ್ರೂ ಹಾಲಿವುಡ್ ಬಗ್ಗೆ ಬರೆದಾಗ ನೋಡ್ಕೊಳ್ಳೋಣ. ಒಂದು ವೇಳೆ ನೀವಿನ್ನೂ ಮೊದಲಲ್ಲಿ ಬಂದ ಸಂಭಾಷಣೆಗಳು ಏನು? ಅದಕ್ಕೂ ಉಪೇಂದ್ರ ನಿರ್ದೇಶನದ ಸಿನಿಮಾಗಳಿಗೂ ಏನು ಸಂಬಂಧ? ಒಂದು ವೇಳೆ ಅಂಕಣ ಉಪ್ಪಿ ಬಗ್ಗೆಯೇ ಆಗಿದ್ದರೆ ಇಷ್ಟೆಲ್ಲಾ ಟೈಮ್ ವೇಸ್ಟ್ ಯಾಕೆ ಮಾಡಿಸಿದ pt ಅಂತ ಬೈಕೊಬೇಡಿ, ಉತ್ತರ 'I'ntermission ಬಳಿಕ.

ಉಪೇಂದ್ರ ನಿರ್ದೇಶನದ ಮೊದಲ ಸಿನಿಮಾ: ತರ್ಲೆ ನನ್ಮಗ ಮತ್ತು ಚಿತ್ರ ಬಿಡುಗಡೆಯಾಗಿದ್ದು 1992ರಲ್ಲಿ. ಆಗ ನನಗೆ ಎರಡು ವರ್ಷ ವಯಸ್ಸು. ವಯಸ್ಸಲ್ಲಿ ಟೈಮಲ್ಲಿ ಫಿಲಂನ ಡಬಲ್ ಮೀನಿಂಗ್ ಡೈಲಾಗ್ ಗಳು ಅರ್ಥ ಆಗೋದು ಪಕ್ಕಕ್ಕಿರಲಿ, ನಾನಾಗಿ ನಾನೇ ಸ್ವಂತವಾಗಿ ಮಾತಾಡೋದು ಕಲಿತಿದ್ದೆನೋ ಇಲ್ವೋ ನನಗೇ ನೆನಪಿಲ್ಲ. ನಾನು ಉಪೇಂದ್ರ ನಿರ್ದೇಶನದ ಚಿತ್ರ ಥಿಯೇಟರಲ್ಲಿ ಮೊದಲು ನೋಡಿದ್ದು ಅಂದರೆ ಅದು 'ಉಪೇಂದ್ರ'. ಆಗಿನ ಕಾಲದಲ್ಲಿ ಅದೂ ವಯಸ್ಸಲ್ಲಿ ಥಿಯೇಟರ್ ಗೆ ಫಿಲಂ ನೋಡೋದು ಅಂದರೆ 2g ಇಂಟರ್ನೆಟ್ ನಲ್ಲಿ ವಾಟ್ಸ್ಯಾಪ್ ವೀಡಿಯೋ ಡೌನ್ಲೋಡ್ ಮಾಡಿದ ಹಾಗೆ, ಅಸಾಧ್ಯ ಏನಲ್ಲ, ಆದರೆ ವಸಿ ಕಷ್ಟ ಅಷ್ಟೆಯಾ! ಅಂತಿಪ್ಪ ಸಂದರ್ಭದಲ್ಲಿ ಕೂಡ ಹೆಂಗೋ ಸರ್ಕಸ್ ಮಾಡಿ ಮೂರು ಸಲ 'ಉಪೇಂದ್ರ' ಫಿಲಂ ನೋಡಿದ್ದೆ.  Of course, ಅದಿಕ್ಕೆಲ್ಲಾ ನಮ್ ಅಣ್ಣಂದಿರೇ ಪ್ರಾಯೋಜಕರು, ನಾನೇ ಅವರಿಗೆ ಕಾಟ ಕೊಟ್ಟು ಪ್ರಾಯೋಜಕರು ಆಗೋ ಹಾಗೆ ಮಾಡಿದ್ದು ಅನ್ನೋದು ಬೇರೆ ಮಾತು. ಫಿಲಂ ಮಾತ್ರ ಏನೂ ಅರ್ಥ ಆಗಿರಲಿಲ್ಲ, ಆದರೆ ವಿಕ್ರಮ-ಬೇತಾಳನ ಸೀನು, ತೆಂಗಿನ ಮರದ ಜುಟ್ಟು ಹಾಕಿಕೊಂಡು ಉಪೇಂದ್ರ ಚೂಡಿದಾರ್ ಧರಿಸಿ ಓಡಾಡೋಡು, 'ರತಿ' (ಆಭಿನಯ: ಧಾಮಿನಿ) ಪ್ರೇಮಿ ಕಾಲಿನ ಮೇಲೆ ಬೈಕ್ ಹತ್ತಿಸಿಕೊಂಡು ಹೋಗಿದ್ದಕ್ಕೆ ಅಷ್ಟು ದೂರ ಅಟ್ಟಿಸಿಕೊಂಡು ಓಡಿ ಹೋಗಿ ಹೊಡೆಯೋದು, ಇದೇ ಥರದ ಚಿತ್ರ ವಿಚಿತ್ರ ಸನ್ನಿವೇಶಗಳನ್ನು ತುಂಬಾ ಇಷ್ಟಪಟ್ಟಿದ್ದೆ. ಆದರೆ ಚಿತ್ರದ ಕಥೆ, ಆಶಯ ಎಲ್ಲವೂ ಅರ್ಥವಾಗಿದ್ದು ಸುಮಾರು ಕಾಲದ ಬಳಿಕ ಹಾಸ್ಟೆಲ್ ನಲ್ಲಿ ನೋಡಿದಾಗ. ಇನ್ನುಳಿದಂತೆ , ಶ್!, ತರ್ಲೆ ನನ್ಮಗ, ಸ್ವಸ್ತಿಕ್ ಚಿತ್ರಗಳನ್ನು ನೋಡಿದ್ದು ಒಂದೋ ಉದಯ ಟಿವಿಯಲ್ಲಿ ಇಲ್ಲಾ ಸಿಟಿ ಚಾನಲ್ ಗಳಲ್ಲಿ. ಮತ್ತೆ ಆಗೆಲ್ಲಾ ಚಾನಲ್ ರಿಮೈಂಡರ್ ಗಳೂ ಇರಲಿಲ್ಲ, ಮೂವಿ ಸಮಯಕ್ಕೆ ಅನುಗುಣವಾಗಿ ಮಾರಿಯೋ ಬ್ರದರ್ಸ್ ಗೆ appointment ಕೊಡುತ್ತಿದ್ದೆ. ಸೂಪರ್ ಚಿತ್ರ ನೋಡಿದ್ದು ಶಿವಮೊಗ್ಗದ ವೀರಭದ್ರೇಶ್ವರ ಥಿಯೇಟರಲ್ಲಿ, ಅಯ್ಯೋ ಆಮೇಲಂತೂ ಬೇಡ, “ ಲವ್ ಇಂಡಿಯಾ, ಲವ್ ಇಂದಿರಾಅಂತ ಸುಮ್ ಸುಮ್ನೆ ಹೇಳ್ಕೊಂಡು ಓಡಾಡಿದ madness, ರಾಜಧಾನಿಯಲ್ಲಿ ಓಂ ನೋಡಿದ ಕ್ರೇಜ಼ು, OMG, ಅವೆಲ್ಲವೂ ಬೇಗ ಹೇಳಿ ಮುಗಿಸೋ ಟಾಪಿಕ್ಕೇ ಅಲ್ಲ ಬಿಡಿ. ಕಾಮಿಡಿ ಏನಪ್ಪಾ ಅಂದ್ರೆ ತರ್ಲೆ ನನ್ಮಗ ಚಿತ್ರದ ಕಾಮಿಡಿ, ಪಂಚ್ ಲೈನ್ ಗಳು ಅರ್ಥ ಆಗಿದ್ದು ಹಾಸ್ಟಲ್ ನಲ್ಲಿ ನಮ್ ಹುಡುಗರ ಜೊತೆ ನೋಡಿದಾಗ. ಅಯ್ಯೋ, ಫಿಲಂ ನೋಡಿ, ಎಲ್ಲರೂ 'ಆವ್, ವಾಟ್ ಬ್ಯೂಟಿಪುಲ್ ಫಿಗರ್ ಯಾ ಅನ್ನೋದೇನು (ಫುಲ್ ಅಲ್ಲ ಪುಲ್, ಬೇಕು ಅಂತ ಹಂಗೆ ಇಂಗ್ಲೀಷ್ ಭಾಷೆಗೆ ಆಗಾಗ ಚಾಕು ಹಾಕ್ತಿದ್ವಿ), ದುಡ್ಡು ಉಳಿಸುವ ಗೆಳೆಯರಿಗೆಲ್ಲಾ ಭೂತಯ್ಯ ಊರುಬಾಗ್ಲು ಅಂದಿದ್ದೇನು, ಯಾರಾದಾದ್ರೂ birthday ಬಂದಾಗಲೆಲ್ಲಾ 'ಡಂ ಡಂ ಡಗಾರ್ ಡಗಾರ್' ಹಾಡಿಗೆ ಕುಣಿದಿದ್ದೇನು, ಹೀಗೆ ಹಲವು ನೆನಪುಗಳು Those were the good times man ಎಂದೆನಿಸುವ nostalgic ಭಾವವನ್ನುಂಟು ಮಾಡುತ್ತದೆ.

ಸಾಂದರ್ಭಿಕ ಚಿತ್ರ: ಉಪ್ಪಿ2  

Nostalgic ಅಂದ ಕೂಡಲೇ ನೆನಪಾಯಿತು, ವಾಟ್ಸ್ಯಾಪ್ ಅಲ್ಲಿ ಹಾಡುಗಳನ್ನು ಶೇರ್ ಮಾಡಿ, earphones ನಲ್ಲಿ ಏಕಾಂತವಾಗಿ ಹಾಡು ಕೇಳುವ ಜಮಾನದಲ್ಲಿ ಒಮ್ಮೊಮ್ಮೆ ನಾನು ಚಿಕ್ಕವನಿದ್ದಾಗ ನೋಡಿದ್ದ, ಜೀವಿಸಿದ್ದಂತ ಟೇಪ್ ರೆಕಾರ್ಡರ್ ಕಾಲ ನೆನಪಿಗೆ ಬರುತ್ತದೆ. ಅದರಲ್ಲೂ ಸ್ಟೋರಿ ಕ್ಯಾಸೆಟ್ಟುಗಳನ್ನು ಬಗ್ಗೆ ಒಂದಿಷ್ಟು ಹೇಳಲೇಬೇಕು. ಸ್ಟೋರಿ ಕ್ಯಾಸೆಟ್ಟುಗಳು ಅಂದರೆ ಏನೆಂದು ಗೊತ್ತಿಲ್ಲ / ನೆನಪಿಲ್ಲವೆಂಬುವವರಿಗಾಗಿ ಹೇಳ್ತಾ ಇದ್ದೀನಿ, ಸ್ಟೋರಿ ಕ್ಯಾಸೆಟ್ಟುಗಳಲ್ಲಿ ಚಿತ್ರದ ಮೊದಲಿನಿಂದ ಕೊನೆಯವರೆಗಿನ ಸಂಭಾಷಣೆಗಳು ಅಡಕವಾಗಿರುತ್ತವೆ. ಹಾಡುಗಳು ಮಾತ್ರ ಒಂದ್ ಹತ್ತು ಸೆಕೆಂಡ್ ಇರುತ್ತೆ. ಸಾಮಾನ್ಯವಾಗಿ ಸ್ಟೋರಿ ಕ್ಯಾಸೆಟ್ಟುಗಳು ಸಿನಿಮಾ ಬಿಡುಗಡೆಯಾದ 75-100 ದಿನಗಳ ನಂತರ ಮಾರುಕಟ್ಟೆಗೆ ಬರುತ್ತಿದ್ದವು. ರೀತಿಯಾಗಿ ಸ್ಟೋರಿ ಕ್ಯಾಸೆಟ್ಟುಗಳನ್ನು ಕೇಳಿ ಕೇಳಿ ಉಪ್ಪಿ ಚಿತ್ರಗಳು ನನಗೆ ನಿಧಾನಕ್ಕೆ ಚೂರು ಚೂರೇ ಅರ್ಥ ಆಗ್ತಿತ್ತು. ಉಪ್ಪಿ ಚಿತ್ರಗಳನ್ನು ಸ್ಟೋರಿ ಕ್ಯಾಸೆಟ್ ಕೇಳಿ ನಂತರ ಯಾರದ್ರೂ ಫಿಲಂ ನೋಡಿರೋರು ಇದ್ದರೆ ಪ್ರಾಯಶಃ ಅವರು ನಿಮ್ಹಾನ್ಸ್ ಆಸ್ಪತ್ರೆಯಲ್ಲೋ ಇಲ್ಲಾ ನಮ್ ಕಾಲೇಜಿನಲ್ಲಿ ಅಡ್ಮಿಟ್ ಆಗಿರ್ತಾರೆ (just joking ಕಣ್ರಪ್ಪ, SRK ಗೆ ಕಂಪ್ಲೇಂಟ್ ಕೋಟ್ಟೀರಾ!). ಹಾ, ಇನ್ನೊಂದು ವಿಷಯ, ಉಪೇಂದ್ರ ಫಿಲಂ ಆಡಿಯೋ ಕ್ಯಾಸೆಟ್ಟಿನೊಂದಿಗೆ ಒಂದು ಸ್ಪರ್ಧೆ ಕೂಪನ್ ಇತ್ತು, ಚಿತ್ರದ ಹಾಡುಗಳನ್ನು ಕೇಳಿ ಕಥೆಯನ್ನು ಊಹಿಸಿ ಬರೆದು ಕಳುಹಿಸಬೇಕಿತ್ತು. ನಾನೇನೋ 'ಬುದ್ಧಿವಂತ' ಥರ ಉಪೇಂದ್ರ, ಮೂವರು ಹೀರೋಯಿನ್ ಗಳು, ಮೊದಲಿಗೆ ಸಾಂಗು, ಅದೂ ಇದೂ ಅಂತ ಏನೇನೋ ಬರೆದು ಪೋಸ್ಟ್ ಮಾಡಿದ್ದೆ. At the mean time, ಭದ್ರಾವತಿಯಲ್ಲಿದ್ದ ನಮ್ ಹುಡುಗ 'ಲಕ್ಕಿ' ಕೂಡ ಹೀಗೆ ಕಥೆ ಬರೆದು ಕಳುಹಿಸಿದ್ದಾಗಿ ಮೊನ್ನೆ ಉಪ್ಪಿ 2 ಬಗ್ಗೆ discussion ಮಾಡುವಾಗ ಹೇಳಿದ (ಮೂವಿ ಬಗ್ಗೆ discussion ಅಂತ ಹುಬ್ಬೇರಿಸಬೇಡಿ, ನೋಡಿ ಸ್ವಾಮಿ ನಾವಿರೋದೇ ಹೀಗೆ).
ಒಬ್ಬ ಸಿನಿಮಾಭಿಮಾನಿಯಾಗಿ ನಾನು ಎಲ್ಲಾ genre ಚಿತ್ರಗಳನ್ನು ನೋಡಿದ್ದೇನೆ. ಲವ್ ಸ್ಟೋರಿಯಿಂದ ಹಿಡಿದು  ' ಸ್ಟೋರಿ'ಗಳವರೆಗೆ, ಕ್ರೈಮ್, ಡ್ರಾಮಾ, ಸೆಂಟಿಮೆಂಟ್, ರೌಡಿಸಂ, ಕಾಮಿಡಿ, ಕೌಟುಂಬಿಕ ಹೀಗೆ ಎಲ್ಲಾ ವಿಭಾಗಗಳಲ್ಲಿ ಹಲವಾರು ಚಿತ್ರಗಳು ನನಗಿಷ್ಟ. ಆದರೆ psychological thriller, philosophical thriller, ಸಸ್ಪೆನ್ಸ್ (ಹಾರರ್ ಅಲ್ಲ, ಬರೀ ಸಸ್ಪೆನ್ಸ್ ಅಷ್ಟೇ) ಚಿತ್ರಗಳೆಂದರೆ ಏನೋ ಒಂಥರಾ ಸೆಳೆತ ಜಾಸ್ತಿ. ಸಿನಿಮಾ ಮೊದಲಿಂದ ಒಂದು ಕಥೆ ಇದ್ದು, ಕೊನೆಯಲ್ಲಿ ಬೇರೆಯದೇ ಒಂದು ಟ್ವಿಸ್ಟ್ ಎದುರಾಗುವ ಚಿತ್ರಗಳು ಕೊಡೋ ಕಿಕ್ಕೇ ಬೇರೆ. ಲೆಕ್ಕದಲ್ಲಿ ವರ್ಷ ಒಂಥರಾ ಸುಗ್ಗಿ ಕಾಲ ನನಗೆ. ರಂಗಿತರಂಗ, 1: Nenokkadine, Interstellar, ಉಪ್ಪಿ 2 ಹಾಗೂ ಆಟಗಾರ ಚಿತ್ರಗಳನ್ನು ವರ್ಷ ನೋಡಿದೆ, ಎಲ್ಲವೂ ಒಂದಕ್ಕಿಂತ ಒಂದು ಹಿಡಿಸಿದವು. Person of Interest, Prison Break, Escape Plan, Memento, The Prestige, Sherlock, Sherlock Holmes, Shutter Island, Vantage Point, Gone Girl, Fight Club ಮುಂತಾದ ಇಂಗ್ಲೀಷ್ ಚಿತ್ರಗಳು ಹಾಗೂ ಧಾರವಾಹಿಗಳು ಕುತೂಹಲಕಾರಿ ಕಥೆಯ ನಿರೂಪಣೆಯಿಂದಾಗಿ ಭಯಾನಕ ಇಷ್ಟವಾಗಿವೆ. ಕನ್ನಡದಲ್ಲಿ ಉಪೇಂದ್ರ ನಿರ್ದೇಶನದ ಚಿತ್ರಗಳು ನನಗೆ ಇಷ್ಟವಾಗೋದು ಇದೇ ಬಗೆಯ ಮೇಕಿಂಗ್ ಕಾರಣಕ್ಕಾಗಿ. ಉಪ್ಪಿ ನಿರ್ದೇಶನದ ಚಿತ್ರಗಳು ನನ್ನ ಪಾಲಿಗೆ case study notes ಗಳ ಹಾಗೆ. ಅದ್ಯಾಕೋ ಗೊತ್ತಿಲ್ಲ, ಉಪ್ಪಿ ಚಿತ್ರಗಳು ನೋಡಿದಷ್ಟೂ ಅರ್ಥವಾಗಿ ಮತ್ತಷ್ಟು ಹತ್ತಿರವಾಗುತ್ತವೆ. ಉಪ್ಪಿ ನಿರ್ದೇಶನದ ಚಿತ್ರಗಳು ಬಹಳ ಜನಕ್ಕೆ ರುಚಿಸೋದಿಲ್ಲ. ಯಾರ್ ಯಾರದೋ ಬಗ್ಗೆ ಯಾಕೆ ಹೇಳಲಿ? ನಮ್ ಅಮ್ಮ ಇದ್ದಾರಲ್ಲ, ಅವರಿಗೂ ಉಪ್ಪಿ ಸಿನಿಮಾಗಳಿಗೂ ಅಷ್ಟಕ್ಕಷ್ಟೇ! ಆದರೆ ನಾನು ಮಾತ್ರ ಉಪ್ಪಿ ಫಿಲಂಗಳು ಬಂತೆಂದರೆ 'ಸಿಕ್ಕಾಪಟ್ಟೆ ಇಷ್ಟ ಪಟ್ಟೆ I like it' ಅಂತ ಕೆಟ್ಟದಾಗಿ ಹಾಡುತ್ತೇನೆ ಅಂತ ಅವರಿಗೆ ಗೊತ್ತು. ನಮ್ ದೊಡ್ಡಪ್ಪನವರ ಮನೆ ಗೃಹಪ್ರವೇಶದ ವೀಡಿಯೋದಲ್ಲಿ almost ಎಲ್ಲಾ ದೃಶ್ಯಗಳಲ್ಲಿ ಕಾಣಸಿಗುವ 'ನಾನು', 'ನಾನು' ಥರನೇ ಕಣ್ಣುಗಳನ್ನು ಎಡದಿಂದ ಬಲಕ್ಕೆ, ಬಲದಿಂದ ಎಡಕ್ಕೆ ತಿರುಗಿಸಿದ್ದೆ. ಉಪೇಂದ್ರ ಚಿತ್ರದ 'ನಾನು' ಪಾತ್ರ ಮಟ್ಟಕ್ಕೆ ನನ್ನ ಮೇಲೆ ಪ್ರಭಾವ ಬೀರಿತ್ತು ಅನ್ನೋದಕ್ಕೆ ಗೃಹಪ್ರವೇಶ ವಿಡಿಯೋನೇ ಸಾಕ್ಷಿ

ಸಾಮಾನ್ಯವಾಗಿ ನನ್ನ ವಯಸ್ಸಿನ ಎಲ್ಲಾ ಹುಡುಗರಿಗೂ
“ನೀನೇ ಬರೀ ನೀನೇ, ಹಾಡಲ್ಲಿ ಪದವೆಲ್ಲಾ ನೀನೇ ಎಂಬುವ ಪ್ರೇಯಸಿ
“ನಾನು ಬಡವಿ, ನೀನು ಬಡವ, ನಮ್ಮ ಪ್ರೀತಿಗೆ ಬಡತನವಿಲ್ಲ ಎಂಬುವ ಹೆಂಡತಿ,
“ಈ ಸಂಜೆ ಯಾಕಾಗಿದೆ ನೀನಿಲ್ಲದೆ, ಸಂಜೆ ಯಾಕಾಗಿದೆ ಎನ್ನುವ ಒಳ್ಳೆ ವರಮಾನದ ಉದ್ಯೋಗ ಸಿಗಲಿ ಎಂಬ ಆಸೆ / ಕನಸು ಇದ್ದೇ ಇರುತ್ತದೆ. ಆದರೆ ಅದು ಎಷ್ಟು ಜನರ ಬಾಳಲ್ಲಿ ಈಡೇರುತ್ತದೆ ಅನ್ನೋದು ಸುಮಾರು ವಿಷಯಗಳ ಮೇಲೆ ಅವಲಂಬಿತವಾಗಿರುತ್ತದೆ. ಪಾಪ, ಎಷ್ಟೋ ಹುಡುಗರ ಬಾಳಲ್ಲಿ ಪ್ರೇಯಸಿ ಮತ್ತು ಹೆಂಡತಿ ಒಬ್ಬರೇ ಆಗಿರುವುದಿಲ್ಲ, ಅದೆಲ್ಲಾ ನಮಿಗ್ಯಾಕೆ. Coming back to topic, ಎಲ್ಲರ ಬಾಳಲ್ಲೂ ಮೂಡುವ ಮೂರು ಆಸೆ / ಕನಸುಗಳೇ ಪಾತ್ರವಾಗಿರುವ ಉಪೇಂದ್ರ ಚಿತ್ರ ಬೇರೆ ಚಿತ್ರಗಳ ನಡುವೆ ವಿಭಿನ್ನವಾಗಿ ನಿಲ್ಲುತ್ತದೆ. ಮೇಲ್ನೋಟಕ್ಕೆ ಉಪೇಂದ್ರ ಚಿತ್ರದ 'ನಾನು' ಪಾತ್ರ ಧನದಾಹಿ ಹಾಗೂ ಸ್ತ್ರೀಮೋಹಿ. ಎರಡರ ಆಸೆ ದುರಾಸೆಯಾಗುವಷ್ಟು ಮೋಹ ಅವನ ತಲೆಯಲ್ಲಿರುತ್ತದೆ. ಕುಡಿದು ಯಾರದೋ ಮನೆಯಲ್ಲಿ ಮಲಗೋದೇನು, ಇನ್ಸ್ಪೆಕ್ಟರ್ ಹೆಂಡತಿ ಮತ್ತು ಮಗಳಿಗೆ 'ಕೆಟ್ಟ ಪ್ರಪಂಚದಲ್ಲಿ ಒಂದು ಚಿಕ್ಕ ಸ್ವರ್ಗ ತೋರಿಸೋದೇನು', ರತಿ ಎಂಬ ಪ್ರೇಯಸಿ ಇದ್ದರೂ ಕೀರ್ತಿಯನ್ನು ಮದುವೆಯಾಗಲು ಹೋಗೋದೇನು, 'ನಾನು' ಮಾಡಿದ 'ಹಗರಣ' ಅಷ್ಟಿಷ್ಟಲ್ಲ. ಹೀಗೆ ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರಗಳೆಂಬ ಆರು ಗುಣಗಳು ಒಬ್ಬ ವ್ಯಕ್ತಿಯಲ್ಲಿ extreme ಹಂತಕ್ಕೆ ತಲುಪಿದಾಗ ಅವನು ಏನಾಗುತ್ತಾನೆ? ಅವನ ಬದುಕಿನ ಕೊನೆ ಹೇಗಿರುತ್ತದೆ? ಎಲ್ಲಾ ಪ್ರಶ್ನೆಗಳಿಗೆ ಇರೋ ಉತ್ತರವೇ ಉಪೇಂದ್ರ ಚಿತ್ರ. 'ನಾನು', 'ನನ್ನದು', 'ನನ್ನವರು' ಅಂತ ಯಾವಾಗಲೂ ಓಡಾಡೋ ನಮ್ಮೆಲ್ಲರ ಜಂಘಾಬಲವೇ ಉಡುಗಿಹೋಗೋದು ಉಪೇಂದ್ರ ಚಿತ್ರ ನೋಡಿದಾಗ. ಪ್ರಾಕ್ಟಿಕಲ್ ಆಗಿ ಯೋಚನೆ ಮಾಡಿದರೆ, 'ನಾನು' ಥರ ಎಲ್ಲರೂ ಎಲ್ಲವನ್ನೂ ಬಿಟ್ಟು ಹೋಗಲು ಆಗೋದಿಲ್ಲ, ನಮಗೆ ಅಂತ ಒಂದು ಕೆಲಸ ಇದೆ, ಮನೆ, ಮನೆಯವರು, ಅಂತ ಇದ್ದಾರೆ. ಅವೆಲ್ಲವನ್ನೂ ನೀಟಾಗಿ ಸಂಭಾಳಿಸಿಕೊಂಡು ಸರಳವಾಗಿ ಯಾರು ಬೇಕಾದರೂ ಇದ್ದುಬಿಡಬಹುದು. ರೀತಿ ಬದುಕುತ್ತಿರುವವನೇ ನೀನು ಅನ್ನೋನು (unknowನು). ರೀತಿಯ ಹಲವು ಜೀವನಪಾಠಗಳು ಉಪೇಂದ್ರ ನಿರ್ದೇಶನದ ಚಿತ್ರಗಳಲ್ಲಿವೆ. ಅಂದರೆ ಭಕ್ತಿ ಪ್ರಧಾನ ಚಿತ್ರಗಳಲ್ಲಿ ತೋರಿಸುವ ಹಾಗೆ ದೇವರಿಗೆ ಮೊದಲು ಅವಮಾನ ಮಾಡುವ ನಾಯಕ / ವಿಲನ್ ಕೊನೆಗೆ ದೈವಭಕ್ತನಾಗುವುದರ ಮೂಲಕ ಭಕ್ತಿಯ ಸಂದೇಶವನ್ನು ನೇರವಾಗಿ ಸಾರಲಾಗುತ್ತದೆ. ಆದರೆ ಉಪ್ಪಿ ಚಿತ್ರಗಳಲ್ಲಿ ಬಗೆಯ ಸಂದೇಶಗಳು ಅಷ್ಟು ಸುಲಭವಾಗಿ ದಕ್ಕೋದಿಲ್ಲ. ಒಂದು ಸಲ ನೋಡಿ, ಮತ್ತೆ ನೋಡಿ, ಸ್ವಲ್ಪ ಗ್ಯಾಪ್ ಕೊಟ್ಟು ಮತ್ತೆ ನೋಡಿ, ಹೀಗೆ ಹಲವು ಸುತ್ತುಗಳ ವೀಕ್ಷಣೆಯ ನಂತರ ಅನುಭವಕ್ಕೆ ದಕ್ಕುವುದು ಉಪ್ಪಿ ಚಿತ್ರಗಳು. ಉಪ್ಪಿನಕಾಯಿ ಹೇಗಿದೆ ಅಂದರೆ ಚೆನ್ನಾಗಿದೆ, ಹುಳಿಯಾಗಿದೆ, ಮಜವಾಗಿದೆ ಅಂತ ಆರಾಮಾಗಿ ಹೇಳಬಹುದು. ಆದರೆ ಅದರ ರುಚಿ, ತಿಂದಾಗ ಆಗುವ ಅನುಭವ ಹೇಗಿರುತ್ತೆ ಅಂತ ಕೇಳಿದರೆ 'Experience cannot be explained, ಅನುಭವವನ್ನು ಅನುಭವಿಸಬೇಕು ಅಷ್ಟೇ' ಅಂತ ವಿಷ್ಣು ದಾದಾ ಸ್ಟೈಲಲ್ಲಿ ಡೈಲಾಗ್ ಹೊಡೆದು, ಯಾರಾದ್ರೂ ನನಗೆ ಹೊಡೆಯೋದ್ರೊಳಗೆ ಓಡಿ ಹೋಗ್ಬಿಡ್ತೀನಿ. ಇಲ್ಲಿ ಉಪ್ಪಿನಕಾಯಿ ಅಂದರೆ ಉಪ್ಪಿ ಚಿತ್ರಗಳು ಅಂತ ಬೇರೆ ಹೇಳಬೇಕಾ?

“ಏನಪ್ಪಾ ಇವನು ಆಗಿಂದ ಉಪೇಂದ್ರ, ಉಪೇಂದ್ರ, ಉಪೇಂದ್ರ ಅಂದ್ಕೊಂಡು ಬರೀ ಉಪ್ಪಿನಕಾಯಿ ಹಾಕ್ತಾ ಇದ್ದಾನಲ್ಲಾಅಂತ ಬೈಕೋಬೇಡಿ, ಮೊದಲೆರಡು ಪ್ಯಾರಾಗಳಲ್ಲಿ ಹೇಳಿದ ವಿಷಯ ಏನು ಅಂತ ಈಗ ವಿವರಿಸುತ್ತೇನೆ, ಹೆಂಗೋ ಇಲ್ಲಿಯವರೆಗೆ ಓದಿದ್ದೀರಾ, ಇನ್ನೊಂಚೂರು ಓದಿ ಬಿಡಿ.

‘ಬದುಕು ಈಗ ಸುಲಭ” ಎಂಬುವ ಮುತ್ತೂಟ್ ಫೈನಾನ್ಸ್ ಸಂಸ್ಥೆಯ ಅಡಿಬರಹ ಸರಿಯಾಗಿ suit ಆಗೋದು technology ಗೆ. ತಂತ್ರಜ್ಞಾನ ಲೋಕದಲ್ಲಿ ಆಗುತ್ತಿರೋ ಹೊಸ ಹೊಸ ಅವಿಷ್ಕಾರಗಳಿಂದ ನಮ್ಮ ಜೀವನ ತುಂಬಾನೇ ಸರಳವಾಗಿದೆ ಅಂದರೆ ಉತ್ಪ್ರೇಕ್ಷೆಯಾಗಲಾರದು. ಕ್ಷಿಪಣಿ ಉಡಾವಣೆ, ಚಂದ್ರಯಾನ, ಮಂಗಳಯಾನ ಮುಂತಾದ ದೊಡ್ಡ ದೊಡ್ಡ ಆವಿಷ್ಕಾರಗಳು ನಮಗಿಲ್ಲಿ ಬೇಡ, ಚಿಕ್ಕ ಚಿಕ್ಕ ಆವಿಷ್ಕಾರಗಳು ನಮಗೇ ಗೊತ್ತಿಲ್ಲದೆ ನಮಗೆ ಮಾಡಿರುವ ಅನುಕೂಲಗಳು ಅನೇಕ, ನಾವೆಲ್ಲರೂ ಅನುಕೂಲಗಳನ್ನು  ಪಡೆದಿದ್ದೇವೆ, ಆದರೆ ಯಾರಿಗೂ ನೆನೆಪಾಗೋದಿಲ್ಲ. ಉದಾಹರೆಣೆಗೆ: ಒಂದು ಕಾಲದಲ್ಲಿ, ಕಾರಿನಲ್ಲಿ ಅವರವರ ಕಿಟಕಿ ಅವರೇ ತೆಗೆದು / ಮುಚ್ಚಬೇಕಿತ್ತು. ಯಾರಾದರೂ ಕಿಟಕಿಯನ್ನು ತೆಗೆದು ಹಾಗೇ ಬಿಟ್ಟು ಹೋದರೆ ಓನರ್ ಕಮ್ ಡ್ರೈವರ್ ಗೆ ಕಾರನ್ನು ಮಕ್ಕಳಿಲ್ಲದ ಜಾಗದಲ್ಲಿ ಪಾರ್ಕ್ ಮಾಡಿದ್ದಲ್ಲದೇ ಎಲ್ಲಾ ಕಿಟಕಿಗಳನ್ನು ಅವನೇ ಮುಚ್ಚುವ ಹೆಚ್ಚುವರಿ ಕೆಲಸ ಬೇರೆ ಪುಕ್ಕಟೆಯಾಗಿ ಸಿಗುತ್ತಿತ್ತು. ವಿಷಯವಾಗಿ ಪವರ್ ವಿಂಡೋಸ್ ಬಂದು ಕೆಲಸ ಎಷ್ಟು ಸುಲಭವಾಗಿದೆ ಅಂತ ಪ್ರತ್ಯೇಕವಾಗಿ ಹೇಳಬೇಕಿಲ್ಲ ಅಂದ್ಕೊಳ್ತೀನಿ. Power Steering, ABS Breaks, Radial Tyres, Anti-theft Alarms, Reverse Parking Assistance ಇನ್ನೂ ಹೆಚ್ಚಿನ ಟೆಕ್ನಾಲಜಿಗಳನ್ನು ಈಗ ಮಾರುಕಟ್ಟೆಯಲ್ಲಿರುವ ಎಲ್ಲಾ ಕಾರುಗಳು ಕಡ್ಡಾಯವಾಗಿ ಹೊಂದಿರುವುದನ್ನು ಕಾಣಬಹುದು. ಬ್ಯಾಂಕ್ ವ್ಯವಹಾರಗಳು, ವಿಮಾನ ಪ್ರಯಾಣ, ಬಸ್ / ರೈಲ್ವೇ ಟಿಕೆಟ್ ಬುಕಿಂಗ್, ಆನ್ ಲೈನ್ ಶಾಪಿಂಗ್ ಸೌಲಭ್ಯಗಳು ಲಭ್ಯವಾಗಿದ್ದೇ ತಂತ್ರಜ್ಞಾನ ಲೋಕದಲ್ಲಾಗುತ್ತಿರುವ ಹೊಸ ಹೊಸ ಅವಿಷ್ಕಾರಗಳಿಂದ. ಫಿಲಂ ಟಿಕೆಟ್ ಗಾಗಿ ಒಂದು ಕಾಲದಲ್ಲಿ ರಾತ್ರಿ ಎಲ್ಲಾ ಕ್ಯೂ ನಿಲ್ಲುತ್ತಿದ್ದರು ಅಂತ ಕೇಳಿದ್ದೇನೆ, ಅಷ್ಟು ಯಾಕೆ ಶಿವಮೊಗ್ಗದಲ್ಲಿ ಒಂದು ಸಲ ನಾನೇ ಪೊಲೀಸರ ಲಾಠಿ ಏಟಿಂದ ಅಷ್ಟ್ರಲ್ಲೇ ಜಸ್ಟ್ ಮಿಸ್ಸು. ಆದರೆ bookmyshow ಆಗಮನದಿಂದಾಗಿ ಟಿಕೆಟ್ ಗಳನ್ನು ಮುಂಗಡವಾಗಿ ಕಾಯ್ದಿರಿಸಬಹುದು, ಮೊದಲ ದಿನವೇ ನೋಡ್ಬೇಕು ಅಂದರೆ ವಸಿ ಜಾಸ್ತಿ ಖರ್ಚಾಗುತ್ತೆ ಅಷ್ಟೇ. Techies ಗಳಾಗಿ ಬೆಂಗಳೂರು, ಮಂಗಳೂರು, ಪುಣೆ, ಹೈದರಾಬಾದ್, ಚೆನ್ನೈ, ಮುಂಬೈ ಇತ್ಯಾದಿ ನಗರಗಳ .ಸಿ. ರೂಮಲ್ಲಿ ಬೆವರು ಸುರಿಸುತ್ತಾ ಹೀಗೆ ನಮ್ಮಂಥ ಸಾಮಾನ್ಯರ ಜೀವನವನ್ನು ಸರಳವಾಗಿಸುತ್ತಿರುವ ನನ್ನೆಲ್ಲಾ techies ಮಿತ್ರರಿಗೊಂದು hats-off. ಇದೇ ಟೆಕ್ನಾಲಜಿಯ ಆಗಮನವನ್ನು ಇನ್ನೊಂದು ದೃಷ್ಟಿಕೋನದಿಂದ ನೋಡಿದಾಗ ನಮ್ ಲೈಫು ಅಷ್ಟೇ ಗೊಬ್ಬೆದ್ದೋಗಿದೆ ಅನ್ನೋದು ವಿಪರ್ಯಾಸವಾದರೂ ಸತ್ಯ.

ಸಾಂದರ್ಭಿಕ ಚಿತ್ರ:ಪ್ರದೀಪ್ ಎಂ

“ಏನ್ ಮಗಾ? ಊರಿಗೆ ಯಾವಾಗ ಬಂದೆ? ಹಬ್ಬ ಜೋರಾ? ನಿಂದು ನಿಮ್ ಹುಡುಗಿದು ಪ್ರೀತಿ ವಿಷಯ ಎಲ್ಲಿಯವರೆಗೆ ಬಂತಪ್ಪ? ಏನಾದ್ರೂ ಹೆಲ್ಪ್ ಬೇಕಿದ್ರೆ ಒಂದು ಮಾತು ಹೇಳು ಸಾಕು, ಉಳಿದದ್ದು ನಾವು ನೋಡ್ಕೊಳ್ತೀವಿಎಂದು ಶುರುವಾಗುತ್ತಿದ್ದ ಮಾತು / ಹರಟೆಗಳು "ಏನ್ ಮಗಾ? ನಮ್ಮನ್ನೆಲ್ಲಾ ಮರೆತು ಬಿಟ್ಟಾ ಹೆಂಗೆ? ಒಂದು ಮೆಸೇಜ್ ಇಲ್ಲ, ಫೋನ್ ಇಲ್ಲ, ಆದರೆ ಯಾವಾಗ್ಲೂ ಆನ್ ಲೈನ್ ಇರ್ತೀಯಾ! ಸ್ವಲ್ಪ ನಿಮ್ ಹುಡುಗಿ ಜೊತೆ ಮಸೇಜ್ ಮಾಡೋದು ಕಮ್ಮಿ ಮಾಡಿ, ನಮ್ಗೂ ಒಂದೆರಡು ಗುಡ್ ಮಾರ್ನಿಂಗ್, ಗುಡ್ ನೈಟ್ ಮೆಸೇಜ್ ಹಾಕಪ್ಪ, ಪುಣ್ಯ ಬರುತ್ತೆ. ಗ್ಯಾಪಲ್ಲೇ ಯಾವಾಗ್ಲೋ ನಿಮ್ ಹುಡುಗಿ ಜೊತೆ ಕೇರಳ ಹೋಗಿದ್ದೀಯಾ!! ಹೇಳಿದ್ರೆ ನಾನೂ ನಮ್ ಹುಡುಗಿ ಜೊತೆ ಬರ್ತಾ ಇದ್ನಲ್ಲೋ" ಎಂಬಲ್ಲಿಗೆ ಬಂದು ನಿಂತಿದೆ. Duck face selfie ಗಳು, hashtag ಗಳು, ಉದ್ದುದ್ದ relationship quotation ಗಳು, bitch please ಹಾಗೂ Heath Ledger as Joker ಚಿತ್ರಗಳನ್ನು ಬಳಸಿ ಮಾಡಲಾಗುವ ಜೋಕ್ಸ್ / meme ಗಳು, ಲೈಕ್ ಡಿಸ್ಲೈಕ್ ಕಾಮೆಂಟ್ ಗಳು, ಟ್ಯಾಗ್ ಮಾಡಲಾಗುವ ಪೋಟೋಗಳು, ಇವೆಲ್ಲವೂ ಒಂದೊಂದು ಸಲ ತೀರಾ ಕೃತಕ ಅನಿಸುತ್ತೆ. ಮೊನ್ನೆ ಒಂದು ಸಲ ಶಿವಮೊಗ್ಗ ಬಸ್ ನಿಲ್ದಾಣಕ್ಕೆ ಬಂದಿಳಿದಾಗ ರಾತ್ರಿ 9.30 ಆಗಿತ್ತು. ಯಾವುದೋ ಬೀದಿಯಲ್ಲಿ ಪ್ರತಿಷ್ಠಾಪಿಸಿದ್ದ ಗಣೇಶನ ಮೂರ್ತಿಯನ್ನು ವಿಸರ್ಜನೆಗಾಗಿ ಟ್ರಾಕ್ಟರ್ ನಲ್ಲಿ ಕೊಂಡೊಯ್ಯುತ್ತಿದ್ದರು. ಟ್ರಾಕ್ಟರ್ ಮುಂದೆ ತಮಟೆ ಬಡಿಯೋರು, ಅವರ ಮುಂದೆ ಒಂದಷ್ಟು ಜನ ಭಕ್ತಾದಿಗಳು ಭಕ್ತಿಯ ಉತ್ತುಂಗದಲ್ಲಿ ನರ್ತಿಸುತ್ತಾ ಬೀಳ್ಕೊಡುತ್ತಿದ್ದರು. ವ್ಹಾ ಎಂದೆನಿಸಿ ಒಂದು ಫೋಟೋ ತೆಗೆದುಕೊಳ್ಳೋಣ ಅಂತ ಮೊಬೈಲನ್ನು ಕೈಗೆ ತೆಗೆದುಕೊಂಡೆ. ನೋಡಿದ್ರೆ ಆಗ್ಲೇ ನನ್ ಮುಂದೆ ಒಂದು ನಾಲ್ಕೈದು ಜನ ವೀಡಿಯೋ ರೆಕಾರ್ಡ್ ಮಾಡುತ್ತಿದ್ದರು. ಕ್ಷಣಕ್ಕೆ ಕಣ್ಣ ಮುಂದೆ ನೆಡೆಯುತ್ತಿರುವ ಅಮೋಘ ದೃಶ್ಯವನ್ನು ಕಣ್ಣು ತುಂಬಿಕೊಳ್ಳೋದರ ಬದಲು ಏನಯ್ಯಾ ಇದು ಸ್ಮಾರ್ಟ್ ಫೋನ್ ಗಳು ತಂದಿಟ್ಟ ಅವಸ್ಥೆ ಅಂತ ಅಂದ್ಕೊಂಡು ಫೋನ್ ಕೆಳಗಿಳಿಸಿದೆ. ಹೌದು, ಜೀವನದಲ್ಲಿ ನೆಡೆಯುವ ಕೆಲವು ಅಪೂರ್ವ ಕ್ಷಣಗಳನ್ನು ನೆನಪಿಟ್ಟುಕೊಳ್ಳೋಕೆ ಫೋಟೋಗಳು ಬೇಕು, ಪ್ರವಾಸ ಹೋದಾಗ ಗೆಳೆಯರೊಂದಿಗೆ ಮಾಡಿದ ಮಜಾವನ್ನು ಮುಂದೊಂದಿನ ನೆನಪಿಸಿಕೊಳ್ಳೋಕೆ ಗ್ರೂಪ್ ಫೋಟೋಗಳು ಬೇಕು, ಏನೇನೆಲ್ಲಾ ವಿಚಿತ್ರ expression ಗಳನ್ನು ಟ್ರೈ ಮಾಡಿದ್ನಲ್ಲಾ ಅಂತ ಮರೆಯದೆ ಇರೋಕೆ ಸೆಲ್ಫೀಗಳು ಬೇಕು, ಆದರೆ ಅದಕ್ಕೆ ಒಂದು ಲಿಮಿಟ್ ಅಂತ ಇರಬೇಕಲ್ಲಾ

ಸಾಂದರ್ಭಿಕ ಚಿತ್ರ:ಪ್ರದೀಪ್ ಎಂ


Fight Club ಚಿತ್ರದಲ್ಲಿ Things you own end up owning you ಅಂತ ಒಂದು ಲೈನ್ ಇದೆ. ಅದರಂತೆ ಕೊಳ್ಳುಬಾಕ ಸಂಸ್ಕೃತಿಗೆ ನಮ್ಮನ್ನು ನಾವು ಮಾರಿಕೊಳ್ಳುತ್ತಿದ್ದೀವೇನೋ ಅನಿಸುತ್ತೆ. ಒಂದು ದಿನ ಇಂಟರ್ನೆಟ್ ಇಲ್ಲ ಅಂದರೆ ನನಗೆ ಇರೋಕಾಗಲ್ಲ, ಏನೋ ಮಿಸ್ ಆಗ್ತಾ ಇದೆಯಲ್ಲಾ ಅಂತ ಅನಿಸುತ್ತಿರುತ್ತದೆ. ಆದರೆ ನಾವು ಯಾರು / ನಮ್ಮ ಜೀವನ / ವ್ಯಕ್ತಿತ್ವ ಏನು ಅನ್ನೋದನ್ನು ಅವುಗಳು define ಮಾಡಬಾರದು. ಹೌದು, Change is inevitable, ಬದಲಾವಣೆ ಜಗದ ನಿಯಮ, ಅದಕ್ಕೆ ನಮ್ಮನ್ನು ನಾವು ಒಗ್ಗಿಸಿಕೊಳ್ಳಲೇಬೇಕು. ಕಾಲದ ಜೊತೆ ಕಾಲು ಹಾಕುತ್ತಾ ಸಾಗುವುದೇ ಜೀವನ. ಅದೇ ಕಾರಣಕ್ಕೆ ನಾನು, ನಮ್ ಹುಡುಗರೆಲ್ಲಾ WhatsApp, Facebook, Twitter, Instagram, hike, Quora ಎಲ್ಲಾ ಕಡೆ ಓಡಾಡುತ್ತೇವೆ, ಆದರೆ ಎಲ್ಲದರ ಬಳಕೆ ಅಷ್ಟಕ್ಕಷ್ಟೇ. ಕಡೆ, 40-50 ಸಾವಿರ ಫೋನ್ ತಗೊಂಡು ಷೋ-ಆಫ್ ಮಾಡೇಕೆ ಯುವಕರೂ ಅಲ್ಲ, ಇತ್ತ ಎರಡು ದಿನ ಬ್ಯಾಟರಿ ಬಾಳಿಕೆ ಬರುವ ನೋಕಿಯಾ ಫೋನ್ ಬಳಸಲು ಹಿರಿಯರೂ ಅಲ್ಲ, ಎಂಬಂತಾಗಿದೆ ಲೈಫು. ಹೇಗಿದ್ದೆ? ಹೇಗಾಗೋದೆ! ಏನಾಗ್ತಿದೆ ನನ್ ಲೈಫಲ್ಲಿ? ಅದೆಲ್ಲಕ್ಕಿಂತ ಮೊದಲು, ನಾನ್ಯಾರು? ಅನ್ನೋ ಹಲವು ಪ್ರಶ್ನೆಗಳು ತಲೆಯನ್ನು ಹೊಕ್ಕು Insomnia ಆದಂತಿದೆ. ಲೂಸಿಯಾ ಮಾತ್ರೆಗಳೇನಾದರೂ ಸಿಗುವಂತಿದ್ದರೆ ಅದನ್ನು ಸೇವಿಸಿ ದಿನವೂ ಒಂದು ಕನಸು ಕಾಣುತ್ತಾ ಇರಬಹುದಿತ್ತು. ಸದ್ಯಕ್ಕೆ ಲೂಸಿಡ್ ಡ್ರೀಮಿಂಗ್ ಮಾತ್ರೆಗಳಿಲ್ಲ, ಹಾಗಾಗಿ ಪ್ರಶ್ನೆಗಳಿಗೆ ಉತ್ತರ ಇನ್ನೂ ಸಿಕ್ಕಿಲ್ಲ. ಕ್ಷಣದಲ್ಲಿ ನಾನು ಹೇಗೆ ಕಾಣುತ್ತಿದ್ದೇನೆ ಅಂತ ನೋಡಿಕೊಳ್ಳೊಕೆ ಸೆಲ್ಫೀ ಕ್ಯಾಮೆರಾ ಬಳಸುವುದುಂಟು. “The mind is everything. What you think you become.!” ಎಂಬ ಬುದ್ಧನ ಮಾತಿನ ಹಾಗೆ, ನಾನು ಏನು ಯೋಚನೆ ಮಾಡ್ತೀನಿ ಅನ್ನೋದರ ಮೇಲೆ ನಾನ್ಯಾರು ಅನ್ನೋದು ವ್ಯಕ್ತವಾಗುತ್ತೆ ಅನ್ನೋದಾದರೆ, ನಾನ್ಯಾರು ಎಂಬ ನನ್ನ ಪ್ರಶ್ನೆಗೆ ಉತ್ತರ ನನ್ನ ಮನಸ್ಸಿಗೆ ಮಾತ್ರ ಕೊಡೋಕಾಗುತ್ತೆ ಅಂತ ನಿರ್ಧರಿಸಿ 'ಮನದ ಮುಖಕ್ಕೆ ಸೆಲ್ಫೀ ಕ್ಯಾಮೆರಾವನ್ನಿಡಿದು' ನೋಡಿದಾಗ ಸಿಕ್ಕ ಉತ್ತರಗಳು: ನಾನು ಕೆಲವರಿಗೆ ಗೆಳೆಯ, ಕೆಲವರಿಗೆ ಸಹೋದ್ಯೋಗಿ, ಕೆಲವರಿಗೆ ಮನೆ ಹುಡುಗ ಇತ್ಯಾದಿ (ಬರೀ ಮನೆ ಹುಡುಗ, ದೊಡ್ಮನೆ ಹುಡುಗ ಅಲ್ಲ, ಅದು ಅಪ್ಪು). ಪ್ರಶ್ನೆಗಳು ಕಾಡಿದ್ದು ಕಮ್ಮಿಯೇನಲ್ಲ. ನಾನು ಯಾರೇ ಆದರೂ, ಎಲ್ಲೇ ಇದ್ದರೂ ಡಿ.ವಿ.ಗುಂಡಪ್ಪನವರ ಎಲ್ಲರೊಳು ಒಂದಾಗು ಮಂಕುತಿಮ್ಮಎಂಬ ಸಾಲಿನಂತೆ ಸುಮ್ಮನಿರಬೇಕಷ್ಟೇ. ಎಲ್ಲದಕ್ಕೂ 'ತಲೆ ಕೆಡಿಸಿಕೊಂಡು' ಹೋದರೆ 'ತಲೆ ಇಲ್ಲದಿದ್ದರೂ' 'ತಲೆ ನೋವು' ಬರುವುದು ಗ್ಯಾರಂಟಿ. ಆದ್ದರಿಂದ ಉಳಿದ ಉತ್ತಮ ಆಯ್ಕೆ ಏನು? ಯೋಚನೆ ಮಾಡದೇ ಇರೋದು.


ಯೋಚನೆ ಮಾಡದೇ ಇರೋದು ಅಂದ ಕೂಡಲೇ 'ನೀನು' ಅನ್ನೋನ ನೆನಪಾಯಿತು. Coming back to topic, ಉಪ್ಪಿ 2 ಚಿತ್ರ ನನಗೆ ಹಲವು ಕಾರಣಗಳಿಂದ ಇಷ್ಟವಾಯಿತು, ಅವು ಯಾವುವು ಎಂದು ಹೇಳಿ ನನ್ನ ಎರಡು ಮಾತುಗಳನ್ನು ಮುಗಿಸುತ್ತೇನೆ. ಪದಗಳ ಜೊತೆ ಆಟವಾಡುವ ಪದಬಂಧ ಕಲಾವಿದರಿಗೆ ಉಪ್ಪಿ 2 ಚಿತ್ರವನ್ನು ಒಂದು ಕೇಸ್ ಸ್ಟಡಿಯಾಗಿ ನೀಡಬಹುದುಅಷ್ಟು wordplay ಗಳ ಭಂಡಾರವೇ ಚಿತ್ರದಲ್ಲಿದೆ. ಚಿತ್ರದ ಹೆಸರಿನಲ್ಲಿಯೇ ಎರಡೆರಡು ಪದಗಳನ್ನು ಎರಡೆರಡು ವಿಧವಾಗಿ ಓದಬಹುದೆಂಬ ವಿಷಯವೇ ಇದಕ್ಕೆ ಸಾಕ್ಷಿ. ಉಪ್ಪಿ 2 ವನ್ನು ಉಪ್ಪಿಟ್ಟು ಆಗಿ ಹಾಗೂ ನೀನು ಅನ್ನೋನು ಸಾಲನ್ನು ನೀನು 'unknowನು' ಆಗಿಯೂ ಓದಬಹುದು. ಇಡೀ ಚಿತ್ರದಲ್ಲಿ 'ನೀನು' ಎಂಬ ಪದಬಳಕೆ ಕೇಳಿದಾಗ ನಾಯಕ 'ನೀನು' ಬಗ್ಗೆ ಮಾತಾಡ್ತಾ ಇದ್ದಾರೋ, ಇಲ್ಲ ಸಾಮಾನ್ಯ ಪದಬಳಕೆಯ ಹಾಗೆ 'ನೀನು' ಪದವನ್ನು ಸರ್ವನಾಮವಾಗಿ ಬಳಸಿತ್ತಿದ್ದಾರೋ ಗೊತ್ತಾಗಲ್ಲ. ಫಿಲಂ ನೋಡಿರೋರಿಗೆ ವಿಷಯ ಏನು ಅಂತ ಬೇಗ ಗೊತ್ತಾಗುತ್ತೆ.
ಆಶ್ರಮದಲ್ಲಿ ದುಡ್ಡು ಇದೀಯಾ?
ಹೌದು, ಶ್ರಮದಲ್ಲೇ ದುಡ್ದು ಇರೋದು

ಲವ್ ಅನ್ನೋ ಬದಲು ನೋವ್ ಯು ಅನ್ನಬಹುದಲ್ಲಮ್ಮಿ.

ಯೋಚನೆ ಮಾಡಬೇಡಿ, ಕೆಲಸ ಮಾಡಿ, ಮಾಡೋದ್ರಲ್ಲಿ ಮಜಾ ಇರೋದು, ಓನ್ಲಿ ಸಿಂಗಲ್ ಮೀನಿಂಗ್

ಸೋರುತಿಹುದು ಮನೆಯ ಮಾಳಿಗೆ, ಯಾವ ಮಾಳಿಗೆ? ಮಾಳಿಗೆನಾ (ಸೂರು)? ಇಲ್ಲಾ ಮಾಳಿಗೆನಾ (ಬುದ್ಧಿ)?
ಎಂಬಂತಹ ಹಲವು ಸಾಲುಗಳು ಸಖತ್ ಇಷ್ಟವಾಗೋದ್ವು. ಇದೆಲ್ಲಾ ಉಪ್ಪಿ 2 ಚಿತ್ರದಲ್ಲಿನ wordplay ಗಳ ಬಗ್ಗೆ ಯೋಚಿಸಿದಾಗ ನೆನಪಾದದ್ದು.


ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರ ಎಂಬ ಅರಿಷಡ್ವರ್ಗಗಳನ್ನು ತನ್ನ ತಲೆಗೇರಿಸಿಕೊಂಡಿದ್ದ 'ನಾನು' ಸಾಯಬೇಕು, ಸತ್ತು ಬದುಕಬೇಕು, ಅದೇ ಕಥೆಗೆ ಸರಿಯಾದ ಅಂತ್ಯ ಅಂತ ಉಪೇಂದ್ರ ಚಿತ್ರದ ಕೊನೆಯಲ್ಲಿ ರಾಜ ವಿಕ್ರಮಾದಿತ್ಯ ಬೇತಳನಿಗೆ ಹೇಳುವುದು ನೆನಪಿದೆಯಲ್ಲಾ, ಆದರೆ ಏನು ಹೇಳೋದು ಹೇಳಿ, ಕೆಲವು ಕಥೆಗಳ ಅಂತ್ಯದಲ್ಲಿ ಇನ್ನೊಂದು ಕಥೆಯು ಹುಟ್ಟುತ್ತದೆ. ಹಾಗೆ ನೋಡಿದರೆ, ಉಪೇಂದ್ರ ಚಿತ್ರದ ಕೊನೆಯಲ್ಲಿ ಉಪ್ಪಿ 2 ಎಂಬ ನದಿಯ ಹುಟ್ಟು ಆಗಿತ್ತು, ಆದರೆ ಅದರ ಹರಿವಿಗೆ ಹಲವು ವರ್ಷಗಳು ಬೇಕಾಯ್ತು. ಒಂದು ಲೆಕ್ಕದಲ್ಲಿ, ಅದು ಕೂಡ ಒಳ್ಳೆಯದೇ ಅನಿಸುತ್ತೆ, 'ನಾನು' ಎಲ್ಲೋ ಹೋಗೇ ಬಿಟ್ಟ ಎಲ್ಲರು ಅವನನ್ನು ಮರೆತುಬಿಡುವ ಹೊತ್ತಿಗೆ ಒಬ್ಬ ಬರುತ್ತಾನೆ, ಅವನೇ ನೀನು ಅನ್ನೋನು (unknowನು). ನೀನು ಅನ್ನೋನು ಎಲ್ಲವನ್ನೂ ಬಿಟ್ಟು ಹೋದ 'ನಾನು'ನಾ? ಇಲ್ಲಾ ಇಷ್ಟು ದಿನ ಪೊಲೀಸ್ ಇಲಾಖೆಯಲ್ಲಿ ಸ್ಪೆಷಲ್ ಆಫೀಸರ್ ಆಗಿ ಗುಪ್ತವಾಗಿ ಕೆಲಸ ಮಾಡಿ ಮುಂದೊಂದಿನ ತನ್ನ ಐಡೆಂಟಿಟಿ ಬಯಲು ಮಾಡುವ 'ಅವನು' ನಾ? ಅಂತ ಗೊತ್ತಾಗಲ್ಲ. ಹೆಸರಲ್ಲೇ ಹೇಳಿರುವಂತೆ ನೀನು unknowನು. ತೀರಾ ಸೂಕ್ಷ್ಮವಾಗಿ ಗಮನಿಸಿ ನೋಡಿದಾಗ 'ನಾನು' ಮತ್ತು 'ಅವನು' ಇವರನ್ನು ಒಳಗೊಂಡ ಕಥೆ ಒಂದೋ ಕನಸು ಇಲ್ಲವೇ ಸುಳ್ಳು ಕಥೆ ಎಂಬುದು ಲೇಟಾಗಿ ತಿಳಿಯತ್ತದೆ. ನಿನ್ನೆ-ನಾಳೆಯ ನೆನಪು ಕನಸುಗಳನ್ನು ಬದಿಗಿರಿಸಿ ಪ್ರಸ್ತುತದಲ್ಲಿ ಯೋಚನೆ ಮಾಡದೇ ಬದುಕುವ 'ನೀನು' ಎಂಬುವವನ ಕಥೆಯೇ ಉಪ್ಪಿ 2 ಚಿತ್ರದ ತಿರುಳು. ಆದರೆ ಅಷ್ಟು ಸಣ್ಣ ವಿಷಯವನ್ನು ಕಥೆಯಾಗಿ ಹೇಳಲು ಉಪ್ಪಿ ಮಾಡಿರುವ ಪ್ರಯೋಗ ಮಾತ್ರ ಅತ್ಯದ್ಭುತ. ಫಿಲಂ ನೋಡಿ ಹೊರಗೆ ಬಂದಾಗ ಸುಮಾರು ವಿಷಯ ತಲೆಗೆ ನಾಟಿದ್ದರೂ ಯಾರಾದ್ರೂ ಸ್ಟೋರಿ ಏನು ಅಂತ ಕೇಳಿದಾಗ 'ಯೋಚನೆ ಮಾಡಬೇಡಿ' ಅನ್ನೋದನ್ನು ಬಿಟ್ಟು ಬೇರೇನು ಹೇಳೋಕಾಗಲ್ಲ. ಉಪ್ಪಿ ಬರವಣಿಗೆಯಲ್ಲಿರುವ ತಾಕತ್ತು ಅಂತಹದ್ದು. ಕಥೆ ಆಯಿತು, ಈಗ ಉಳಿದ ವಿಷಯಗಳ ಬಗ್ಗೆ ಹೇಳುವೆ.

ಸಾಂದರ್ಭಿಕ ಚಿತ್ರ: ಉಪ್ಪಿ2   
 
ಚಿತ್ರಕಥೆ, ಸಾಹಿತ್ಯ ಹಾಗೂ ಸಂಭಾಷಣೆಯ ಹೊಣೆಯನ್ನು ತಾವೇ ಹೊತ್ತಿರುವ ಉಪ್ಪಿ ಎಲ್ಲಾ ವಿಭಾಗಗಳಿಗೂ ನ್ಯಾಯ ಸಲ್ಲಿಸಿದ್ದಾರೆ.
ಏನಿಲ್ಲ, ಏನಿಲ್ಲ, ನಿನ್ ಹತ್ರ ಏನೇನಿಲ್ಲ!
ನಾನಿಲ್ಲ, ನಾನಿಲ್ಲ, ನೀನೇನೇ ಇಲ್ಲೆಲ್ಲಾ!

ಇಲ್ಲಿ ನೋಡೋಕೆ ಕಣ್ಣಿಟ್ಟು, ಹೆಣ್ಣನ್ನು ಮುಂದಿಟ್ಟು, ಆಸೆಗೆ ಬೆಂಕಿ ಇಟ್ಟೆ,
ಕಾಮನ್ನ ನೀ ಸುಟ್ಟು ಭಸ್ಮ ಆಗೋಗ್ಬಿಟ್ಟು, ನನ್ನನ್ನು ನಾನು ಬಿಟ್ಟೆ

ಮಾನವ ದೇಹವೇ ಒಂದು ಮೊಬೈಲು, ಮೆಮೋರಿ ಕಾರ್ಡು ಫುಲ್ಲು,
ಒಳಗಿರೋ ಸಿಮ್ಮು, ಜೀವದ ಘಮ್ಮು, ಸಿಗ್ನಲ್ ಸಿಗದಿದ್ರೆ ಎಲ್ಲಾ ಢಮ್ಮು

ನಮ್ ಹುಟ್ಟಿಗೆ, ತುಂಬಿಸೋ ಪೆಟ್ಟಿಗೆ, ಹೊಟ್ಟೆಗ್ ಹಾಕೋ ಒಂದ್ ಹೊತ್ತು ಹಿಟ್ಟಿಗೆ, ಹಿಟ್ಟು-ಸೂಪರ್ ಹಿಟ್ಟು ಅಂತ ಜುಟ್ಟಿಗ್ ಹೂವ ಕಟ್ಟೋರ್ ಗುಟ್ಟು, ಸುಟ್ಟು ಬಟ್ಟಲ್ ಬಯಲಾಗೋದೇ ನಮ್ ಲೈಫು ಉಪ್ಪಿಟಾದಾಗ ಗುರೂ,

ಮೇಲಿನ ಸಾಲುಗಳಲ್ಲಿ ಉಪ್ಪಿ ವೇದಾಂತದ ಡೋಸ್ ಕೊಟ್ಟಿರುವುದನ್ನು ಕಾಣಬಹುದು. ಸಾಹಿತ್ಯ ಆಯಿತು, ಸಂಭಾಷಣೆಯ ವಿಷಯಕ್ಕೆ ಬಂದರೆ ಇಂಟರ್ವಲ್ ನಂತರದ "ಉಲ್ಟಾ, ಎಲ್ಲಾ ಉಲ್ಟಾ" ಡೈಲಾಗು, ತನ್ನ ಮನೆಯವರೆಲ್ಲಾ ಸತ್ತಾಗ "ಎಲ್ಲರೂ ಒಂದಲ್ಲ ಒಂದು ದಿನ ಸಾಯಲೇಬೇಕು, ಕೆಲವರು ಸತ್ಯವನ್ನು ತುಂಬಾ ಲೇಟಾಗಿ ಒಪ್ಪಿಕೊಳ್ಳುತ್ತಾರೆ, ನಾನು ಈಗ್ಲೇ ಕ್ಷಣವೇ ಒಪ್ಪಿಕೊಳ್ತಾ ಇದ್ದೀನಿ" ಎಂಬ ಡೈಲಾಗು, ಬೋಟ್ ಬ್ಲಾಸ್ಟ್ ಮಾಡಿದ ನಂತರ 'ನಾನು' ಹೇಳುವ "ನನಗೆ ಆರಡಿ ಮೂರಡಿ ಜಾಗ ಸಾಕು, ಆದರೆ ನನಗೆ ಎಕರೆ ಎಕರೆಗಟ್ಟಲೆ ಜಾಗ ಬೇಕು" ಎಂಬ ಡೈಲಾಗ್ ಗಳು ಮಾಡಿರುವ ಪ್ರಭಾವ ಅಷ್ಟಿಷ್ಟಲ್ಲ.


To conclude, ಉಪ್ಪಿ 2 ಅಂತ ಒಂದು ಚಿತ್ರ ವೈಯಕ್ತಿಕವಾಗಿ ನನಗೆ ತುಂಬಾ ಬೇಕಾಗಿತ್ತು. ಉಪ್ಪಿ 2 ಚಿತ್ರ ನೋಡಿದ ಕ್ಷಣವೇ ಅಂದುಕೊಂಡೆ ಇದರ ಬಗ್ಗೆ ಏನಾದ್ರೂ ಅಂಕಣ ಬರೀಲೇಬೇಕು, ಇಲ್ಲಾಂದ್ರೆ ಇರೋಕಾಗಲ್ಲ ಅಂತ ನಿರ್ಧರಿಸಿ ಬರೆಯಲು ಶುರುಮಾಡಿದೆ. ಉಪ್ಪಿ 2 ಬಗ್ಗೆ ಮಾತ್ರ ಬರೆಯಬೇಕು ಅಂಥ ಶುರುವಾದ ಅಂಕಣ ಎಲ್ಲೆಲ್ಲೋ ಹೋಗಿ, ಏನೇನೋ ಆಗಿ, ಒಂದಿಷ್ಟು ವೇದಾಂತದ ಸ್ಪರ್ಶ ಸಿಕ್ಕಿ, ಟೆಕ್ನಾಲಜಿಯ ಎಫೆಕ್ಟು-ಸೈಡ್ ಎಫೆಕ್ಟುಗಳ ಪ್ರಸ್ತಾಪವಾಗಿ ಇಷ್ಟು ದೊಡ್ಡದಾಗೋಯ್ತು. ನಾನು ತುಂಬಾ ಟೈಮ್ ತಗೊಂಡು ಬರೆದ ಅಂಕಣ ಕೂಡ ಇದೇ. ಉಪ್ಪಿ ಒಂದು ಇಂಟರ್ವ್ಯೂನಲ್ಲಿ ಒಮ್ಮೆ ಹೇಳಿದ್ದರು "ನಿರ್ದೇಶನ ಮಾಡೋದಲ್ಲ, ಅದು ತಾನೇ ಆಗೋದು, ನಿರ್ದೇಶನ ಅನ್ನೋದು ಒಳಗಿನಿಂದ ನನ್ನನ್ನು ದೂಡಬೇಕು, ಆಗ ಮಾತ್ರ ನಾನು ನಿರ್ದೇಶನ ಮಾಡ್ತೀನಿ" ಅಂತ. ಅರೇ, ಏನಪ್ಪಾ ಇದು, ಪ್ರೀತಿ ಮಾಡೋದಲ್ಲ, ಆಗೋದು ಅಂತ ಹಲವಾರು ಸಿನಿಮಾಗಳಲ್ಲಿ ನೋಡಿದ್ದೆ, ಉಪ್ಪಿ ಏನು ಹಿಂಗೆ ಉಲ್ಟಾ ಟ್ವಿಸ್ಟ್ ಕೊಟ್ರಲ್ಲಾ ಅಂತ ಯೋಚನೆ ಮಾಡಿದಾಗ ಒಂದು ವಿಷಯ ಹೊಳೆಯಿತು. ಪ್ರೀತಿ ಅನ್ನೋದು ಬರೀ ಒಂದು ಹುಡುಗ / ಹುಡುಗಿ ನಡುವೆ ಶಾಲಾ ಕಾಲೇಜು ದಿನಗಳಲ್ಲಿ ಆಗೋದಲ್ಲ, ಅದು ಜೀವನಕ್ಕೆ ರಂಗು ತುಂಬುವ ಮನಸ್ಸಿನ ಭಾವನೆ. ಅದನ್ನು ಯಾರು ಯಾವ್ಯಾವುದರಲ್ಲಿ ಕಂಡುಕೊಳ್ಳತ್ತಾರೋ ಅದು ಅವರವರಿಗೆ ಬಿಟ್ಟಿದ್ದು. ಕೆಲವರಿಗೆ ಬೈಕ್ ನಲ್ಲಿ ಹೊಸ ಜಾಗಗಳನ್ನು ಆವಿಷ್ಕಾರ ಮಾಡೋದಂದ್ರೆ ಪ್ರೀತಿ, ಕೆಲವರಿಗೆ ರುಚಿಯಾದ ತಿಂಡಿ ತಿನಿಸು ಮಾಡಿ ಸ್ನೇಹಿತರಿಗೆ ಉಣಬಡಿಸೋದಂದ್ರೆ ಪ್ರೀತಿ, ಇನ್ನೂ ಕೆಲವರಿಗೆ ಪ್ರೀತಿ ಮಾಡೋದಂದ್ರೆ ಪ್ರೀತಿ. ಇವರಂತೆಯೇ ಉಪ್ಪಿ ನಿರ್ದೇಶನದಲ್ಲಿ ಪ್ರೀತಿ ಕಂಡುಕೊಂಡಿರಬೇಕು, ಯಾಕಂದ್ರೆ ನಾವು ಪ್ರೀತಿಯಿಂದ ಕೆಲಸ ಮಾಡಿದ್ರೆ ಕೆಲಸ ಯಾವತ್ತೂ ಪರ್ಫಕ್ಟ್ ಆಗೇ ಇರುತ್ತೆ ಅಂತ ನಮ್ 'ರಾಮು' ಹೇಳಿದ್ದ. ಎಲ್ಲರಿಗೂ ಅವರ ಪ್ರವೃತ್ತಿಯೇ ವೃತ್ತಿ ಆಗೋದು ಕಷ್ಟ. ಬಿಡುವಿನ ಸಮಯದಲ್ಲಿ ಅದಕ್ಕೊಂದಿಷ್ಟು ಸಮಯ ವಿನಿಯೋಗಿಸಿದರೆ ಕಡೆ ವೃತ್ತಿ ಜೀವನ ಕಡೆ ವೈಯಕ್ತಿಕ ಜೀವನ ಎರಡರಲ್ಲೂ ಶೆಕೆ ಇರೋದಿಲ್ಲ. ನಿಟ್ಟಿನಲ್ಲಿ ಸದ್ಯಕ್ಕೆ ನನಗೆ ಬರವಣಿಗೆ ಮೇಲೆ ಲವ್ ಆಗಿದೆ. ಡಿ.ಎಸ್.ಎಲ್.ಆರ್ ಫೋಟೋಗ್ರಫಿ, ಶಾರ್ಟ್ ಮೂವಿ ಮಾಡೋದು, Wagon R ಕಾರಲ್ಲಿ ಒಬ್ಬನೇ ಸುತ್ತಾಡಬೇಕೆಂಬ ನನ್ನ ಇತರ ಆಸೆಗಳಿಗೆ ಹೋಲಿಸಿದರೆ ಬರೆಯೋದು ಸ್ವಲ್ಪ ಕಷ್ಟ, ಆದರೆ ಖರ್ಚು ಕಮ್ಮಿ. ಹಾಗಾಗಿ ಆಗೊಂದು ಈಗೊಂದು ಅಂಕಣ ಬರೆದು ನಮ್ 'ರನ್ನ'ನಿಗೆ ಫೋಟೋ ಹಿಂಗಿಂಗೆ ಇರ್ಲಿ, ಹಿಂಗಿಂಗೆ ಕ್ಲಿಕ್ ಮಾಡಿ ಫೋಟೋ ಕಳುಹಿಸು ಅಂತಲೂ ಉಳಿದವರಿಗೆ ಓದಿ ಅಭಿಪ್ರಾಯ ಹೇಳ್ರೋ ಅಂತಲೂ ಕಾಟ ಕೊಡ್ತಾ ಇರ್ತೀನಿ. ನನ್ನದಲ್ಲದ ಊರಲ್ಲಿ ನನ್ನವರಲ್ಲದವರ ಮಧ್ಯ, ನನ್ನದಲ್ಲದ ಸಂಸ್ಥೆಗಾಗಿ ದುಡಿಯುತ್ತಿರೋದ್ರಿಂದ ಎಷ್ಟೋ ಸಲ ಮಾತಾಡೋಕೆ ಯಾರೂ ಇಲ್ಲದಂತಾಗಿ ಮಾತುಗಳು ಹಾಗೇ ಮನದಲ್ಲಿ ಉಳಿದುಬಿಡುತ್ತವೆ. ಹಾಗೊಮ್ಮೆ ಹೀಗೊಮ್ಮೆ ಅಂತ ಯೋಚನೆಗಳಿಗೆ ಅಕ್ಷರ ರೂಪ ಕೊಡುತ್ತೇನೆ. ಬರವಣಿಗೆಯಲ್ಲಿಯೇ ನನ್ನ ಪ್ರೀತಿ ಅಡಗಿದೆಯಾ? ಉತ್ತರ unknowನು.

ಚಿತ್ರ: ಉಪ್ಪಿ 2

ರೋಲಿಂಗ್ ಕ್ರೆಡಿಟ್ಸ್: ಫಿಲಂಗಳಲ್ಲಿ ಚಿಕ್ಕ ಚಿಕ್ಕ ಡೀಟೇಲ್ ಗಳು ತೀರಾ ಗಮನವಿಟ್ಟು ನೋಡಿದವರಿಗೆ ಕಾಣುತ್ತೆ. ಉಪ್ಪಿ 2 ಚಿತ್ರದ ಶೀರ್ಷಿಕೆಯಲ್ಲಿ ಅಕ್ಷರದ ಎಡಭಾಗದಲ್ಲಿ ಉಪೇಂದ್ರ ಮುಖ ಕಾಣುತ್ತದೆ ಅಂತ ಫೇಸ್ ಬುಕ್ ಪುಟದಲ್ಲಿ ಒಮ್ಮೆ ನೋಡಿದ್ದೆ, ವ್ಹಾರೆವ್ಹಾ, ಏನೆಲ್ಲಾ ಪಂಟ್ರು ಇದ್ದಾರಲ್ಲಪ್ಪಾ ಅಂತ ಅಂದ್ಕೊಂಡೆ. ಹೀಗೆ ಒಮ್ಮೆ ಉಪ್ಪಿ 2 ಟ್ರೈಲರ್ ರಿಪೀಟ್ ಮೋಡ್ ನಲ್ಲಿಟ್ಟು ನೋಡುತ್ತಿದ್ದಾಗ ಉಪೇಂದ್ರ ಪ್ರೊಡಕ್ಷನ್ಸ್ ಲಾಂಛನದಲ್ಲಿ U for Upendra, P for Priyanka ಮತ್ತು P ಅಕ್ಷರದ ಒಳಗೆ ಚಿಕ್ಕ ಗಣೇಶ ಕಾಣಿಸಿತು. ನೀವೂ ನೋಡಿದ್ರಾ? ಇಲ್ಲಾ ನಾನು ಹೇಳಿದ ಮೇಲೆಯೇ ನೋಡಿದ್ದಾ?

3 ಕಾಮೆಂಟ್‌ಗಳು: