ಫೆಬ್ರವರಿ 11, 2016

ಬೆಕ್ಕು ಇಲ್ಲದ ಊರಲ್ಲಿ...ಸುಮಾರು 100-200 ವರ್ಷಗಳ ಹಿಂದಿನ ಮಾತು. ಆಗೆಲ್ಲಾ ಅಪ್ಪ-ಅಮ್ಮ ಅಲ್ಲಿ, ಮಗ ಇಲ್ಲಿ, ಸೊಸೆ ಇನ್ನೆಲ್ಲೋ ಕೆಲಸ ಮಾಡುವ ಪರಿಸ್ಥಿತಿ ಇರಲಿಲ್ಲ. ಎಲ್ಲರೂ ಒಂದೇ ಮನೆಯಲ್ಲಿ ಇರುತಿದ್ದರು. ಆದ್ದರಿಂದ ಸ್ವಾಭಾವಿಕವಾಗಿ ಹಳ್ಳಿ / ಊರುಗಳಲ್ಲಿ ನಡೆಯುವ ಹಬ್ಬ ಜಾತ್ರೆಗಳು ತುಂಬಾ ಅದ್ಧೂರಿಯಾಗಿ ನೆಡೆಯುತಿದ್ದವು. ಇನ್ನು ಮದುವೆ ಸಮಾರಂಭಗಳ ಬಗ್ಗೆ ಹೇಳೋದೇ ಬೇಡ. ಆಗೆಲ್ಲಾ ಮದುವೆಗಳು ಒಂದೊಂದು ವಾರ ಮಾಡ್ತಾ ಇದ್ದರಂತೆ. ಒಂದು ವಾರ ಸಮಯ ಕೊಟ್ರೆ ಈಗಿನ ಕಾಲೇಜ್ ಹುಡುಗರು ನೋಡಿ, ಲವ್ ಮಾಡಿ, ಪ್ರಪೋಸ್ ಮಾಡಿ, ಕಮಿಟ್ ಆಗಿ, ಜಗಳ ಆಡಿ ಮತ್ತೆ ಪ್ಯಾಚ್-ಅಪ್ ಮಾಡಿಕೊಂಡುಬಿಡುವಷ್ಟು ಫಾಸ್ಟ್-ಫಾರ್ವರ್ಡ್. ಅದೆಲ್ಲ ನಮಿಗ್ಯಾಕೆ. ವಾಪಸ್ ಮದುವೆ ವಿಷಯಕ್ಕೆ ಬರ್ತೀನಿ (Clk Boyz, ದಯವಿಟ್ಟು ಈಗಲೇ ಏನೇನೋ ಕಲ್ಪನೆ ಮಾಡ್ಕೋಬೇಡಿ, ಮುಂದಕ್ಕೆ ಓದಿ).ಒಂದು ಊರು, ಊರಲ್ಲೊಬ್ಬ ದೊಡ್ಡ ಶ್ರೀಮಂತರಿದ್ದರು, ಅವರ ಹೆಸರು ಯಜಮಾನ್ರು ಅಂತ. ಅವರ ಮಗಳ ಮದುವೆ ಅದ್ಧೂರಿಯಾಗಿ ಮಾಡಬೇಕು ಅಂತ ನಿರ್ಧರಿಸಿ ಸಂಬಂಧಪಟ್ಟ ಕೆಲಸಗಳನ್ನು ಅವರವರಿಗೆ ವಹಿಸಿ ಮೇಲುಸ್ತುವಾರಿ ನೋಡಿಕೊಳ್ಳುತ್ತಿದ್ದರು. ಹಿಂಗೆ ಒಂದು ದಿನ ಕೆಲಸದ ಗಡಿಬಿಡಿಯಲ್ಲಿದ್ದ ಯಜಮಾನ್ರು ಕೆಲಸಗಳೆಲ್ಲ ಅಂದುಕೊಂಡ ಸಮಯಕ್ಕೆ ಆಗ್ತಾ ಇಲ್ಲ ಅಂತ ಎಲ್ಲರಿಗೂ ಬೈಕೊಂಡು ಓಡಾಡ್ತಾ ಇದ್ದರು. ಮಂಟಪಕ್ಕೆ ಬಂದರು, ಅಲ್ಲಿನ್ನೂ ಕಂಬ ನೆಡುವ ಕೆಲಸ ನಡೆಯುತ್ತಿತ್ತು. ಮನೆಯ ಹತ್ತಿರ ಬಂದರು, ಅಲ್ಲಿನ್ನು ಗೋಡೆಗೆ ಬಳಿಯಲು ಸುಣ್ಣ ಕಲಿಸುವ ಕೆಲಸ ನಡೆಯುತ್ತಿತ್ತು. ಭೋಜನಾ ಶಾಲೆಗೆ ಬಂದರು, ಅಲ್ಲಿನ್ನೂ ತರಕಾರಿ ವಿಂಗಡಿಸಿಕೊಳ್ಳುವ ಕೆಲಸ ನಡೆಯುತ್ತಿತ್ತು. ಯಜಮಾನ್ರಿಗೆ ಸಿಟ್ಟಿನಿಂದ ತಲೆ ಸಿಡಿಯೋದೊಂದೇ ಬಾಕಿ. ಹೀಗಿದ್ದಾಗ ಭೋಜನಾ ಶಾಲೆಯ ಮೂಲೆಯಲ್ಲಿ ತಿಂದು ಬಿಟ್ಟ ಎಲೆಗಳು ಹಾಗೇ ಉಳಿದಿದ್ದವು.


"ಎಲ್ಲಿದ್ದೀಯೋ ಗುಂಡ", ಯಜಮಾನ್ರು ಕೂಗಿದರು.


"ಬಂದೆ ಯಜಮಾನ್ರೆ", ಓಡೋಡಿ ಬಂದ ಗುಂಡ ಹೇಳಿದ.


"ಏನೋ ಇದು ಪೆಂಗೆ, ಬೇಗ ಎಲೆ ಎತ್ತೋ ಗುಂಡ", ಯಜಮಾನ್ರು ಬೈದರು.

(ಗುಂಡನ ತಲೆಯಲ್ಲಿ ಸುಮಾರು ಆಲೋಚನೆಗಳು ಸುತ್ತು ಹಾಕುತಿದ್ದವು. ಈಗ ಕ್ಯಾಮೆ ಮಾಡ್ಬೇಕು, ಆಮ್ಯಾಕೆ ಕ್ಯಾಮೆ ಮಾಡ್ಬೇಕು, ಸಂಜೆ ಒಂದ್ ಸ್ವಲ್ಪ ಹೊತ್ತು ನಮ್ ನಿಂಗಿ ಜೊತೆ ಕಡೆ ಬಂದು ಮದುವೆ ಮಂಟಪ ತೋರಿಸಬೇಕು, ಅದು ಇದು ಅಂತ ಬಹಳ ವಿಷಯಗಳ ಬಗ್ಗೆ ಯೋಚಿಸುತಿದ್ದ.)


ಮರು ಯೋಚನೆ ಮಾಡದೆ "ಉಂಡೋರು ಎಷ್ಟು ಜನ?" ಅಂತ ಕೇಳೆ ಬಿಟ್ಟ.


ಯಜಮಾನ್ರ ಪಿತ್ತ ನೆತ್ತಿಗೇರಿ ಬಿಟ್ಟಿತು. ಹೇಳಿದ್ದಷ್ಟು ಕ್ಯಾಮೆ ಮಾತ್ರ ಮಾಡ್ಲ ಬದ್ದೆತದೆ, ನಂಗೆ ಎದುರು ಮಾತಾಡ್ತೀಯಾ ಅಂತ ಬೈದು ಕಳಿಸಿಬಿಟ್ಟರು.


ಇದನ್ನು ದೂರದಿಂದ ನೋಡುತಿದ್ದ ಯಾರೋ ಒಬ್ಬರು "ಹೇಳಿದಷ್ಟು ಮಾತ್ರ ಮಾಡು, ಪ್ರಶ್ನೆ ಕೇಳಬೇಡ" ಅಂತ ಹೇಳುವ ಬದಲು "ಎಲೆ ಎತ್ತೋ ಗುಂಡ ಅಂದರೆ ಉಂಡೋರು ಎಷ್ಟು ಜನ ಅಂದನಂತೆ" ಎಂಬ ಸಾಲನ್ನು ಹೇಳಿದರೆ ಚೆನ್ನಾಗಿರುತ್ತೆ ಅಂತ ತಾಳೆಗರಿಯ ಮೇಲೆ ಬರೆದಿಟ್ಟುಕೊಂಡರಂತೆ. ಅದು ಒಬ್ಬರಿಂದ ಇನ್ನೊಬ್ಬರಿಗೆ ಗೊತ್ತಾಗಿ, ಮೇಲಿನ  ಸಾಲು ಬಳಕೆಗೆ ಬಂದಿರಬಹುದು ಅಂತ ಒಂದು ಐಡಿಯಾ ಬಂತು, ಅದನ್ನೇ ಚೂರು ಹಿಂಗೆ ಬಿಟ್ಟೆ. ಹೆಂಗೆ? ಹೆಂಗಿದೆ ಓಪನಿಂಗ್ ಥ್ರಿಲ್ಲು? (ಉಪೇಂದ್ರ ಚಿತ್ರ ನೋಡಿರೋರಿಗೆ ಸಾಲನ್ನು explain ಮಾಡೋದು ಬೇಕಾಗಿಲ್ಲ ಬಿಡಿ). 


ಸಾಂದರ್ಭಿಕ ಚಿತ್ರ: ಉಪೇಂದ್ರ ಕಟ್ ಮಾಡಿದ್ರೆ 2016, ಈಗಂತೂ ಮದುವೆಗಳು ತೀರ ಸಿಂಪಲ್. "ಬೆಳಿಗ್ಗೆ ಲವ್ವು, ಮಧ್ಯಾಹ್ನ ನೋವು, ಸಾಯಂಕಾಲ ದಾಸವಾಳದ ಹೂವು" ಎಂಬ ಪರಮಾತ್ಮ ಚಿತ್ರದ ಸಾಲಿನಂತೆ ಆಗಿದೆ. ಅದೇನೇ ಇರಲಿ, ಮದುವೆ ಮಾಡೋದು ಒಂದೇ ಸಲ ಅಂತಾನೋ, ಶೋಕಿಗೊಸ್ಕರನೋ, ಇಲ್ಲ ಅವರ ಮನೆ ಮದುವೆಗಿಂತ ನಮ್ಮ ಮನೆ ಮದುವೆ ಗ್ರಾಂಡ್ ಆಗಿರಬೇಕು ಅಂತಾನೋ ಅಥವಾ ಇನ್ನಷ್ಟು ಬೇರೆ ಬೇರೆ ಸಿಲ್ಲಿ ಕಾರಣಗಳಿಂದಲೋ ಅದ್ಧೂರಿ ಮದುವೆಗಳ ಟ್ರೆಂಡು ಇನ್ನೂ ನಿಂತಿಲ್ಲ. ಅಂಥದೇ ಒಂದು ಮದುವೆಯಲ್ಲಿ ಯಜಮಾನ್ರು ಮದುವೆ ಕೆಲಸಗಳೆಲ್ಲಾ ಯಾವ ಹಂತದಲ್ಲಿದೆ ಅಂತ ನೋಡಿಕೊಂಡು ಓಡಾಡುತ್ತಿದ್ದರು. ಮದುವೆ ಕೆಲಸಗಳನ್ನೆಲ್ಲ ನಗರದ ಪ್ರತಿಷ್ಟಿತ ಇವೆಂಟ್ ಮ್ಯಾನೇಜ್ಮೆಂಟ್ ಕಂಪನಿಗೆ ವಹಿಸಿದ್ದರಾದರೂ ಯಜಮಾನ್ರು ಅಂದ ಮೇಲೆ ಮುಂದೆ ನಿಂತು ಕೆಲಸ ಮಾಡಿಸಬೇಕಲ್ವಾ? Déjà vu! ಯಜಮಾನ್ರು ಭೋಜನಾ ಶಾಲೆಗೆ ಬಂದಾಗ ಅದೇ ಥರ ಮೂಲೆಯಲ್ಲಿ ಬಾಳೆ ಎಲೆ ಥರ ಇರೋ, ಆದರೆ ಬಾಳೆ ಎಲೆ ಅಲ್ಲದ ಪ್ಲಾಸ್ಟಿಕ್ ಹಾಳೆಗಳು ಬಿದ್ದಿದ್ದವು.


ಯಜಮಾನರು: ಎಲೆ ಎತ್ತೋ ಗುಂಡ


ಗುಂಡನ ಕೆಲಸವೇ ಅದಾಗಿತ್ತು, ಆದ್ದರಿಂದ ಯಜಮಾನ್ರ ಬಳಿ ಕ್ಷಮೆ ಕೋರಿ ಮರು ಮಾತನಾಡದೆ ಕೆಲಸವನ್ನು ಮಾಡಿದ. ಮದುವೆ ಎಲ್ಲಾ ಸುಗಮವಾಗಿ ಮುಗಿಯಿತು, ನಂತರ ಈವೆಂಟ್ ಮ್ಯಾನೇಜರ್ ಬಂದು ತನ್ನೆಲ್ಲಾ vendor ಗಳ ಬಿಲ್ ಗಳುಳ್ಳ ಸುಮಾರು envelope ಕವರ್ ಗಳನ್ನು ಕೊಟ್ಟು ಹೋದ. ಜನರೇಟರ್ ಗೆ ಇಷ್ಟು, ಕೇಟರಿಂಗ್ ಗೆ ಇಷ್ಟು ಅಂತ ಚೆಕ್ ಬರೆಯುತ್ತಾ ಕುಳಿತಿದ್ದ ಯಜಮಾನ್ರ ಕೈಗೆ ಒಂದು ವಿಚಿತ್ರ ಕವರ್ ಸಿಕ್ಕಿತು. ಅದರ ಮೇಲೆ ಗುಂಡ ಎಲೆ ಎತ್ತೋ ಸೇವೆಗಳು ಪ್ರೈವೇಟ್ ಲಿಮಿಟೆಡ್ ಅಂತ ಬರೆದಿತ್ತು. ಇದೇನಪ್ಪ ವಿಚಿತ್ರ ಅಂತ ಆಶ್ಚರ್ಯಗೊಂಡ ಯಜಮಾನ್ರು ಕವರ್ ತೆರೆದು ನೋಡಿದಾಗ ಪತ್ರದಲ್ಲಿ ಹೀಗೆ ಬರೆದಿತ್ತು.

ಯಜಮಾನ್ರಿಗೆ ನಿಂತಲ್ಲೇ ನೆಲ ಕುಸಿದ ಹಾಗಾಯಿತು.


“ಎಲಾ ಇವನಾ? ಬರೀ ತಿಂದ ಎಲೆ ಎತ್ತಿದ್ದಕ್ಕೆ 6120!”.


“ಅಂದರೆ ಒಂದು ದಿನಕ್ಕೆ 2040 ರೂಪಾಯಿಗಳು.”


“ತಿಂಗಳಿಗೆ ಬರಿ 25 ದಿನ ಕೆಲಸ ಮಾಡಿದರೂ ಒಂದು ತಿಂಗಳ ದುಡಿಮೆ 51000!”


ಯಜಮಾನ್ರ ಮನಸ್ಸು ತಡೆಯಲಿಲ್ಲ. ಗುಂಡನನ್ನು ಕರೆದು ಮಾತನಾಡಿಸಲೇಬೇಕು ಅಂತ ಫೋನ್ ಮಾಡಿ ಬರಹೇಳಿದರು.


ಯಜಮಾನ್ರು:ಅಲ್ಲಪ್ಪ, ತಿಂಗಳಿಗೆ ೫೦೦೦೦ ದುಡಿಯಬಹುದಾ ಕೆಲಸದಿಂದ? ಕೆಲಸದಲ್ಲಿ ಅಷ್ಟೊಂದು ಕಮಾಯಿ ಇದೆ ಅಂತ ನಿನಗೆ ಯಾರು ಹೇಳಿದರು. ಏನು ನಿನ್ನ ಕಥೆ?”


ಗುಂಡ: “ಅವರು ಯಾರೋ ಹೇಳಿದರು ಅಂತ SSLC First Rank ಅಲ್ಲಿ ಪಾಸಾದೆ. ಇನ್ನೊಬ್ಬರು ಹೇಳಿದರು ಅಂತ ಇಂಜಿನಿಯರಿಂಗ್ ನಲ್ಲಿ ಗೋಲ್ಡ್ ಮೆಡಲ್ ಕೂಡ ಪಡೆದುಕೊಂಡೆ. ಒಂದು ದೊಡ್ಡ ಕಂಪನಿಯಲ್ಲಿ ಕೆಲಸ ಕೂಡ ಸಿಕ್ಕಿತು. ನಾನಾಯ್ತು ನನ್ನ ಕೆಲಸ ಆಯಿತು ಅಂತ ಆರಾಮಾಗಿದ್ದ ನನಗೆ ನನ್ನ ಕೆಲಸದ ಆಚೆಗೂ ಒಂದು ಪ್ರಪಂಚ ಇದೆ ಅಂತ ಗೊತ್ತೇ ಇರಲಿಲ್ಲ. ಏನಾದರೂ ತಿಳಿದುಕೊಳ್ಳಬೇಕು ಅಂದರೆ "ನಿನ್ನ ಕೆಲಸ ಎಷ್ಟು ಇದೆಯೋ ಅಷ್ಟು ಮಾತ್ರ ಮಾಡು ಎಂಬ ಅರ್ಥ ಬರುವಂತೆ "ಎಲೆ ಎತ್ತೋ ಗುಂಡ ಅಂದರೆ..." ಎಂದು ಅರ್ಧ ಹೇಳಿ ಸುಮ್ಮನಾಗುತಿದ್ದರು. ಇನ್ನೊಬ್ಬರ ಅಣತಿಯಂತೆ ಕೆಲಸ ಮಾಡಿ ಮಾಡಿ ನನಗೂ ಬೋರ್ ಆಗೋಗಿತ್ತು. ನನ್ನದೇ ಒಂದು ಕಂಪನಿ ಶುರು ಮಾಡೋಣ ಅಂತ ಕೆಲಸ ಬಿಟ್ಟೆ. ಎರಡೇ ತಿಂಗಳಲ್ಲಿ ಇದ್ದ ದುಡ್ಡೆಲ್ಲ ಖಾಲಿ ಆಗಿ ಬೀದಿಗೆ ಬಂದೆ. ಹಿಂಗೇ ಒಂದು ಮದುವೆಯಲ್ಲಿ ಬಿಟ್ಟಿ ಊಟ ಮಾಡೋಕೆ ಹೋಗಿ ಸಿಕ್ಕಿ ಬಿದ್ದಾಗ ಎಲೆ ಎತ್ತುವ ಕೆಲಸಕ್ಕೆ ಹಚ್ಚಿದರು. ಇನ್ನೊಬ್ಬರಿಗೆ ಬಕೆಟ್ ಹಿಡಿದು ಕೆಲಸ ಮಾಡೋ ಲೈಫಿಗಿಂತ ಬಕೆಟ್ ನಲ್ಲಿ ಎಲೆಗಳನ್ನು ಎತ್ತಿ ಹಾಕೋ ಕೆಲಸವೇ ಗ್ರೇಟ್ ಅನಿಸಿಬಿಡ್ತು. ಆಗಿಂದ ನನ್ನದೊಂದು ಕಂಪನಿ ಶುರು ಮಾಡಿದೆ. ನನಗೆ ನಾನೇ ಬಾಸು. ನನ್ನ client ಗಳು ಹೇಳಿದ ಕೆಲಸವನ್ನೇ ನಾನು ಮಾಡ್ತೀನಿ ನಿಜ, ಆದರೆ ನಾನು ಮನಸ್ಸು ಮಾಡಿದರೆ ಮಾತ್ರ ಅವರು ನನಗೆ client ಆಗುತ್ತಾರೆ ವಿನಃ ಅವರಿಗೆ ಬೇಕಾದಾಗ ನಾನು ಉದ್ಯೋಗಿಯಾಗಲ್ಲ. ಇಷ್ಟೇ ನೋಡಿ ಸಾರ್ ವಿಷಯ.


ಇಂತಿ ನಿಮ್ಮ ಪ್ರೀತಿಯ

ಗುಂಡ


ಸಾಂದರ್ಭಿಕ ಚಿತ್ರ: ಹಾಸ್ಯ ಲಾಸ್ಯ
 
<Story Ends Here>

     

ಪಕ್ಕಾ ಪ್ರಾಕ್ಟಿಕಲ್ ಆಗಿ ಯೋಚನೆ ಮಾಡಿದರೆ, ಜಗತ್ತು ನಿಂತಿರೋದೆ ದುಡ್ಡಿನ ಮೇಲೆ, ಅದು ಸುತ್ತೋದೇ ದುಡ್ಡಿನ ಸುತ್ತ ಅಂದರೆ ತಪ್ಪಾಗಲ್ಲ. ಜಗತ್ತಿನಲ್ಲಿ ಎರಡು ಥರ ಜನ ಇದ್ದಾರೆ: ಬಡವರು ಮತ್ತು ಶ್ರೀಮಂತರು. ಇಬ್ಬರ ಜೀವನ ತುಂಬಾ ಸರಳ. ಬಡವರು ಹೆಂಗೋ ಚಿಕ್ಕ ಪುಟ್ಟ ಕೂಲಿ /ಗಾರೆ ಕೆಲಸ ಮಾಡಿಕೊಂಡು ಸರ್ಕಾರಿ ಅನುದಾನ / ಬ್ಯಾಂಕ್ ಸಬ್ಸಿಡಿಗಳನ್ನು ಪಡೆದುಕೊಂಡು ಯಾವುದೇ ಹೆಚ್ಚಿನ ಆಸೆ ಇಲ್ಲದೆ ಆರಾಮಾಗಿ ಇದ್ದು ಬಿಡ್ತಾರೆ. ಇನ್ನು, ಶ್ರೀಮಂತರ ಬಗ್ಗೆ ಕೆಮ್ಮೋ ಹಂಗೇ ಇಲ್ಲ. ದಾರಿಯಲ್ಲಿ ಹೋಗುವಾಗ 1000 ನೋಟು ಬಿದ್ದರೂ ಧೂಳಾಗಿದೆ ಅಂತ ಸುಮ್ಮನಾಗುತ್ತಾರೆ ಇವರು. ಇಬ್ಬರ ನಡುವೆ ಒಂದು ದೊಡ್ಡ ಗೋಡೆ ಇದೆ. ಗೋಡೆ ಮೇಲೆ ನಿಂತು ಜೀವನವೆಲ್ಲಾ ಸರ್ಕಸ್ ಮಾಡೋರಿಗೆ ಮಧ್ಯಮ ವರ್ಗದ ಜನ / ಮಿಡಲ್ ಕ್ಲಾಸ್ ಪೀಪಲ್ ಎನ್ನಬಹುದು. Compromise ನಮ್ಮ ತಾಯಿ ತಂದೆ, Adjustment ನಮ್ಮ ಬಂಧು ಬಳಗ” ಎಂದು ಹಾಡುತ್ತ, ದಿನವೆಲ್ಲ ದುಡಿದು, ರಾತ್ರಿ ಲೆಕ್ಕ  ಬರೆಯುತ್ತಾ ಕೊನೆವರೆಗೂ DC ಕರೆಂಟ್ ತರಂಗದ ಹಾಗೆ ಬದುಕಿಬಿಡುತ್ತಾರೆ. ಇಷ್ಟೆಲ್ಲಾ ಯಾಕೆ ವಿವರಣೆ ಕೊಟ್ಟೆ ಅಂದರೆ ಅಂಕಣ ಆಫೀಸ್ ದಿನಚರಿ, ಸ್ಟಾರ್ಟ್ ಅಪ್ ಕಂಪನಿಗಳು, ಮತ್ತಿನ್ನಿತರ ಕಾರ್ಪೊರೇಟ್ ವಿಷಯಗಳ ಬಗ್ಗೆ. ಅದೆಲ್ಲದರ ಬಗ್ಗೆ ಹೇಳುವ ಮೊದಲು ಹಿಂಗೆ ಬಡವ ಶ್ರೀಮಂತ ಮತ್ತು ಮಿಡಲ್ ಮಾನವರ ಬಗ್ಗೆ ಕೊಂಚ ವಿವರಿಸಬೇಕಾಯ್ತು.ಸಾಂದರ್ಭಿಕ ಚಿತ್ರ: ಭವತಾರಿಣಿ 

ನನಗೆ ನಾನೇ ಬಾಸ್ ಆಗಬೇಕು, ಯಾರ ಹಂಗಿಲ್ಲದೆ ನಾನು ಬದುಕಬೇಕು, ಆಗಿದ್ದು ಆಗೇ ಬಿಡಲಿ, ಮುಂದಿನದ್ದು ಆಮೇಲೆ ನೋಡಿಕೊಳ್ಳೋಣ ಅಂತ ಮುನ್ನುಗ್ಗುವವರು ಎಲ್ಲಾದರೂ ಒಂದು ಕಡೆ ಸಿಕ್ಕಿಕೊಂಡು ವಿಫಲ ಆಗ್ತಾರೆ. Successful Entrepreneur ಆಗುವುದು ಸುಲಭದ ಮಾತೇನಲ್ಲ. ಪರಿಶ್ರಮ, ಪ್ರೋತ್ಸಾಹ, ಪ್ಲಾನಿಂಗ್, ಒಂದಿಷ್ಟು ಅದೃಷ್ಟ ಇವೆಲ್ಲವೂ ಇದ್ದಲ್ಲಿ ಯಾರೇ ಆದರೂ ಫೋರ್ಬ್ಸ್ ಪಟ್ಟಿಯಲ್ಲಿ ಸ್ಥಾನ ಪಡೆಯಬಹುದು. ಸ್ವಲ್ಪ ಗಮನವಿಟ್ಟು ನೋಡಿದಾಗ ಪ್ರಪಂಚದ ಅತ್ಯಂತ ಯಶಸ್ವಿ Entrepreneurs ಗಳು ಒಂದೋ ಕಡುಬಡತನದಿಂದ ಮೇಲೆ ಬಂದವರು, ಇಲ್ಲಾ ಇರುವ ಶ್ರೀಮಂತಿಕೆಯನ್ನು ವಿಸ್ತರಿಸಿಕೊಂವರು. ಆದರೆ ಇಲ್ಲಿ ಮೇಲೆ ಹೇಳಿದ ಮಿಡಲ್ ಕ್ಲಾಸ್ ಮಂದಿ ಕಾಣಸಿಗೋದೇ ಇಲ್ಲ. ಯಾಕೆಂದರೆ ಮಿಡಲ್ ಕ್ಲಾಸ್ ಯಾರಿಗೇ ಆದರೂ DC ಕರೆಂಟ್ ಹಾಗೆ ಸಲೀಸಾಗಿ ಸಾಗುತ್ತಿರುವ ಜೀವನವನ್ನು ಬಿಟ್ಟು ಹೊರಬಂದು, ಭವಿಷ್ಯದ ಎದುರು ಚಾಲೆಂಜ್ ಮಾಡಿ ನಿಲ್ಲಲು ಧೈರ್ಯ ಸಾಕಾಗೋದೇ ಇಲ್ಲ. ಅಲ್ಲಿಗೆ ಒಂದು ವಿಷಯ ಕ್ಲಿಯರ್, ಸ್ಟಾರ್ಟ್ ಅಪ್ ಕಂಪನಿಗಳ ಹಿಂದೆ ಇರೋದು ಎರಡು ಬಗೆಯ ಕೈಗಳು: ಒಂದು ಇಟ್ಟಿಗೆ ಹೊತ್ತು ಕೈ ತರಚಿಕೊಂಡಂತಹವು, ಇಲ್ಲಾ ಸ್ಪೂನ್ ನಲ್ಲಿ ತಿಂಡಿ ತಿಂದು ಫಿಂಗರ್ ಬೌಲ್ ನಲ್ಲಿ ಕೈ ತೊಳೆದುಕೊಂಡಂತಹವು. ತುಂಬಾ ಫಿಲಾಸಾಫಿಕಲ್ ಆಗಿ ಮಾತಾಡ್ತಾ ಇದ್ದೀನಿ, ಹೋಗ್ಲಿ ಬಿಡಿ. ವಿಷಯ ಏನಿಲ್ಲ, ಇತ್ತೀಚೆಗೆ ಮಾನ್ಯ ಭಾರತ ಸರ್ಕಾರದಿಂದ StartUp India ಎಂಬ ಹೊಸ ಯೋಜನೆಯೊಂದನ್ನು ಜಾರಿಗೆ ತಂದಿದೆ. ಹೆಸರೇ ಹೇಳುವಂತೆ StartUp ಕಂಪನಿ ತೆರೆಯುವ ಉತ್ಸಾಹಿಗಳಿಗೆ ಸಹಾಯಹಸ್ತ ನೀಡುವ ಯೋಜನೆ ಇದು. "ಹೇಳಿದಷ್ಟು ಮಾತ್ರ ಮಾಡು" ಮತ್ತು "ಹೇಳಿದ್ದನ್ನೆಲ್ಲ ಮಾಡಲೇಬೇಕು" ಎಂಬ bossy attitude Supervisor / Team-Lead / Manager ಗಳನ್ನು ನಾವೆಲ್ಲರೂ ಕಂಡಿರುತ್ತೇವೆ. ಆದರೆ ಬಗೆಯ ವ್ಯವಸ್ಥೆಯ ವಿರುದ್ಧ ತಿರುಗಿಬಿದ್ದ ಯುವಕನೊಬ್ಬನ ಕಥೆ ಏನಾಗಬಹುದು ಎಂಬ ಯೋಚನೆ ಬಂತು, ಅದನ್ನು ಕಥೆಯಾಗಿ ಬರೆದರೆ ಹೇಗೆ ಎಂಬ ಆಲೋಚನೆಯೇ ಅಂಕಣದ ಮೊದಲಲ್ಲಿ ಬಂದ ಗುಂಡ ಮತ್ತು ಯಜಮಾನ್ರ ಕಥೆ. ಕಥೆ ಮತ್ತು ನಿರೂಪನೆ ಇಷ್ಟವಾದರೆ ಹೇಳಿ, ಇಷ್ಟವಾಗದಿದ್ದರೂ ಹೇಳಿ.
ನನ್ನ ಗೆಳೆಯರ ಬಳಗದಲ್ಲಿ ಈಗಾಗಲೇ ಕೆಲವರು StartUp ಕಂಪನಿಗಳಲ್ಲಿ ಕೆಲಸ ಮಾಡುತಿದ್ದಾರೆ. ನಮ್ ಜೋಗಿ, Lieutenant, .ಮೈ ಅವರಂತೂ ಈಗಾಗಲೇ ಇನ್ನಿತರ ಗೆಳೆಯರ  ಸಹಯೋಗದೊಂದಿಗೆ ಕಂಪನಿ ಆರಂಭಿಸಿದ್ದಾರೆ, ಅವರಿಗೊಂದು ಲೈಕು. ಇನ್ನುಳಿದಂತೆ ನಮ್ಮಂತವರು ನಾಳೆ ನೋಡೋಣ, ಶ್ರಾವಣ ಬರಲಿ, ಡಿಸೆಂಬರ್ ಮುಗೀಲಿ ಎಂದುಕೊಂಡು ಇಂಥ ಯೋಜನೆಗಳನ್ನು ಮಾಡುವ ಯೋಚನೆಗಳನ್ನೇ ಮುಂದೂಡುತಿದ್ದೇವೆ. ಯಾರಿಗಾದ್ರೂ StartUp ಅಂಕಣದ ಹೆಸರಲ್ಲಿ ಎಲೆ ಎತ್ತೋದು ಕೂಡ ಒಂದು ಬ್ಯುಸಿನೆಸ್ಸು ಅಂತ ಬರೆದಿದ್ದು ಬೇಜಾರಾಗಿದ್ದರೆ ಕ್ಷಮೆಯಿರಲಿ. ನನ್ನ ಪ್ರಕಾರ ಒಂದು ಹಳ್ಳಿ ಅಂದ ಮೇಲೆ ಅಲ್ಲಿ ನ್ಯಾಯ-ಧರ್ಮ ಹೇಳಲು ಹೇಗೆ ಗೌಡರಿರಬೇಕೋ, ಹಾಗೆ ಒಂದು ಕಂಪನಿ ದೊಡ್ಡ ಮಟ್ಟಕ್ಕೆ ಬೆಳೆಯಬೇಕು ಅಂದರೆ ಅದಕ್ಕೆ ಒಬ್ಬ ಸೂಕ್ತವಾದ CEO ಇರಲೇಬೇಕು. ಮೊದೆಲೆಲ್ಲ ವ್ಯವಸ್ಥೆ ತುಂಬಾ ಚೆನ್ನಾಗಿತ್ತು. ಉದ್ಯೋಗದಾತರಿಗೆ ಉದ್ಯೋಗಿಗಳ ಮೇಲೆ ವಿಶ್ವಾಸವಿತ್ತು, ಮತ್ತು ಉದ್ಯೋಗಿಗಳಿಗೆ ಉದ್ಯೋಗದಾತರ ಮೇಲೆ ನೀಯತ್ತು ಮತ್ತು ಗೌರವ ಇತ್ತು. Welcome to 2016, ಇಲ್ಲಿ ಯಾವುದೇ ಬಾಸ್ ಗು ತನ್ನ ಉದ್ಯೋಗಿಗಳು The Best ಅಂತ ಅನಿಸೋದೇ ಇಲ್ಲ, ಮತ್ತು ಯಾವುದೇ ಉದ್ಯೋಗಿಯ ಮುಂಜಾನೆ ತನ್ನ ಬಾಸ್ ಬೈದುಕೊಳ್ಳದೆ ಶುರುವಾಗೋದೇ ಇಲ್ಲ. "ಅವನ್ ಕಂಡರೆ ಇವನಿಗೆ ಆಗಲ್ಲ, ಇವನ್ ಕಂಡರೆ ಅವನಿಗೆ ಆಗಲ್ಲ, ಒಟ್ನಲ್ಲಿ ಯಾರೂ ಉದ್ಧಾರ ಆಗಲ್ಲ" ಎಂಬ ರಕ್ತ ಕಣ್ಣೀರು ಡೈಲಾಗ್ ತಮಾಷೆ ಎನಿಸಿದರೂ ನಿಜ. ಬೇಕು ಅಂತಾನೆ ಬೇಗ ಬರುವ Boss ಯಾರ್ ಲೇಟ್ ಆಗಿ ಬರ್ತಾರೋ ಅವರನ್ನು ಹಿಡಿಯಬೇಕು ಅಂತ ಕಾಯುತ್ತಿರುತ್ತಾನೆ, ಅದೇ Employee ಆಫೀಸ್ ಸಮಯದಲ್ಲಿ ಕೆಲಸ ಬಿಟ್ಟು naukri.com , moster.com ಜಾಲತಾಣಗಳ ಸುತ್ತ ಗಿರಾಕಿ ಹೊಡೆಯುತ್ತಿರುತ್ತಾನೆ. ರಾಜಕೀಯ ಎಲ್ಲರಿಗೂ ಗೊತ್ತು, ಆದರೆ ಅದು ಆಫೀಸ್ ಒಳಗೂ ನುಗ್ಗಿ Office Politics ರೂಪದಲ್ಲಿ ಅಸ್ತಿತ್ವದಲ್ಲಿರುವುದು ತುಂಬಾ ನೋವಿನ ಸಂಗತಿ.ಸಾಂದರ್ಭಿಕ ಚಿತ್ರ:  The Chain / Circle / Pyramid of Screaming on How I Met Your Mother


ಶಾಲಾದಿನಗಳ ಒಂದು ಸಣ್ಣ flashback ಇದೆ, ಹಾಗೆ ಓದಿಬಿಡಿ. 10 ಗಂಟೆಗೆ ಪ್ರಾರ್ಥನೆ, ಆಮೇಲೆ ಪಾಠ ಶುರು, ಸಂಜೆ ಗಂಟೆಗೆ ಶಾಲೆ ಮುಗಿಸಿಕೊಂಡು ಮನೆಗೆ ಹೋಗ್ತಿದ್ವಿ, ಇದು ಪ್ರತಿದಿನದ ಕಥೆ. ಆದರೆ ಒಮ್ಮೊಮ್ಮೆ ಮೇಷ್ಟ್ರುಗಳು ಪಾಠ ಮಾಡುವಾಗ ಯಾರೋ ಬಂದು ಹೊರಗೆ ಕರೆದರು ಅಂತಲೋ, ಅಥವಾ ಫೋನ್ ಕರೆ ಬಂತು ಅಂತಲೋ ಹೊರಗೆ ಹೋಗ್ಬಿಟ್ರೆ ಏನೋ ಒಂಥರಾ ಖುಷಿ. ಟೈ ಸಡಿಲ ಮಾಡಿಕೊಂಡು ನಿಂತಲ್ಲೇ ಉಗ್ರಂ ಸ್ಟೆಪ್ಸ್ ಹಾಕಿಬಿಡುವಷ್ಟು ಸಂತೋಷ ಆಗ್ತಿತ್ತು. (ಉಗ್ರಂ ಸಿನಿಮಾ ಬಂದಿದ್ದು ವರ್ಷದ ಹಿಂದೆ, ನನ್ನ ಸ್ಕೂಲ್ ಜೀವನ ಮುಗಿದು ಆಗಲೇ ೧೦ ವರ್ಷ ಆಗಿದೆ ಅಂತ ನನಗೂ ನೆನಪಿದೆ, ಇರಲಿ, ವಾಪಸ್ ವಿಷಯಕ್ಕೆ ಬರೋಣ) ಇಂಥ ಅನುಭವ ಎಲ್ಲರ ಶಾಲಾ / ಕಾಲೇಜು ದಿನಗಳಲ್ಲಿ ಆಗಿರುತ್ತೆ ಅಂದುಕೊಳ್ತೀನಿ. ಅದು Common Human Psychology. ಆಫೀಸ್ ದೃಶ್ಯಗಳು ಕೂಡ ಇದಕ್ಕಿಂತ ಭಿನ್ನವೇನಲ್ಲ. ಯಾವತ್ತಾದ್ರೂ Boss ಆಫೀಸ್ ಗೆ ಬಂದಿಲ್ಲ ಅಂದ್ರೆ ಆಗೋ ಖುಷಿನೇ ಬೇರೆ. ಛೇ, ಮೊದಲೇ ವಿಷಯ ಗೊತ್ತಿದೆ ಬರುವಾಗ ಇನ್ನೊಂದು ಇಡ್ಲಿ ಜಾಸ್ತಿ ತಿಂದುಕೊಂಡು ಬರ್ತಾ ಇದ್ನಲ್ಲ ಅಂತ ಯಾರು ಯೋಚನೆ ಮಾಡಲ್ಲ ಹೇಳಿ?! Horrible Bosses ಕೊಡುವ ಗೋಳು ಅಂಥದ್ದು. ಇಂಥದ್ದೇ ಹಲವು ವಿಷಯಗಳ ಗುಂಗಿನಲ್ಲಿ ಯೋಚಿಸಿ ಒಮ್ಮೆ ನಮ್ ಹುಡುಗರ ಮುಂದೆ "ಬೆಕ್ಕು ಇಲ್ಲದ ಊರಲ್ಲಿ ಇಲಿಗಳು ಪಲ್ಟಿ ಹೊಡಿತಿದ್ವಂತೆ" ಅನ್ನೋದೊಂದು ಡೈಲಾಗ್ ಹೊಡೆದಿದ್ದೆ. ಅದು ಮೂಲವಾಗಿ ಯಾರು ಹೇಳಿದ್ದೋ, ಎಲ್ಲಿ ಓದಿದ್ದೋ, ಇಲ್ಲಾ ಸಿನಿಮಾದಲ್ಲಿ ನೋಡಿದ್ದೋ, ಇಲ್ಲಾ ಸ್ವ ರಚನೆಯೋ ಗೊತ್ತಿಲ್ಲ, ಡೈಲಾಗ್ ಮಾತ್ರ SIlver Jubilee Hit ಆಗಿದ್ದು ಈಗ ಇತಿಹಾಸ. ನಮ್ಮೆಲ್ಲರ  ಕಥೆ ಕೂಡ ಒಂದು ಲೆಕ್ಕದಲ್ಲಿ ಹಾಗೆ ಆಗಿದೆ. ಬಾಸ್ ಬಂದಿಲ್ಲ ಅಂದರೆ CCTV Surveillance ಇಲ್ಲದ ಜಾಕ್ಕೆ ಹೋಗಿ 'ಬೆಕ್ಕು ಇಲ್ಲದ ಊರಲ್ಲಿ ಪಲ್ಟಿ ಹೊಡೆಯುತಿದ್ದ ಇಲಿಗಳ ಹಾಗೆ ಸಂಭ್ರಮಿಸಿಯೇ ಆಚೆ ಬರೋದು. ಆದ್ದರಿಂದ  ಸಾಲಿಗಿಂತ ಸೂಕ್ತವಾದ ಶೀರ್ಷಿಕೆ ಬೇರೆ ಸಿಗೋದಿಲ್ಲ ಅಂತ ಅಂಕಣಕ್ಕೆ "ಬೆಕ್ಕು ಇಲ್ಲದ ಊರಲ್ಲಿ..." ಎಂಬ ಹೆಸರು ಕೊಟ್ಟೆ.To conclude, ಆಫೀಸ್ ಕೆಲಸ ಒಂಥರಾ... ಹೆಂಗೆ ಅಂತ ಹೇಳೋಕೆ ಆಗ್ತಿಲ್ಲ, ಬಿಡಿ ಅತ್ಲಾಗೆ. 2 ಗಂಟೆ ಹೆಚ್ಚು ಕೆಲಸ ಮಾಡಿದ್ರೆ ಯಾರು ನಮ್ಮ ಪರಿಶ್ರಮಕ್ಕೆ ಮೆಚ್ಚುಗೆ ವ್ಯಕ್ತ ಪಡಿಸೋದಿಲ್ಲ, ಆದರೆ 5 ನಿಮಿಷ ಬೇಗ ಹೋದಾಗ ಗಂಭೀರವಾಗಿ ಪರಿಗಣಿಸುತ್ತಾರೆ. ಏನೂ ಮಾಡಕ್ ಆಗಲ್ಲ, ವ್ಯವಸ್ಥೆ ಇರೋದೇ ಹಾಗೇ. ಒಂದು ವೇಳೆ ನಾವೇ ಬಾಸ್ ಆದರೂ ನಾವೂ ಹಾಗೇ ಆಗುತ್ತೇವೆ. ಮತ್ತು ಆಗ ನಮ್ಮನ್ನೂ ಕೂಡ ಬೈದುಕೊಳ್ಳೋ ಉದ್ಯೋಗಿಗಳು ಇದ್ದೇ ಇರುತ್ತಾರೆ. It's the circle of life. StartUp ಗಳ ಕಥೆ ಕೊಂಚ ಭಿನ್ನ. ಎಲ್ಲಾ ಹೊಸಬರೇ ಸೇರಿಕೊಂಡು ಮಾಡಿದ ಹೊಸದೊಂದು ಸಿನಿಮಾ ಇದ್ದ ಹಾಗೆ. ಅಲ್ಲಿ ಎಲ್ಲರಿಗೂ ಎಲ್ಲಾ ಕೆಲಸ ಗೊತ್ತಿರಬೇಕು. ಎಲ್ಲರೂ ಎಲ್ಲಾ ಕೆಲಸವನ್ನು ಮಾಡಬೇಕು. ಆದರೆ ಹೊಸ ಹೊಸ 'ಐಡೀರಿಯಾ'ಗಳು ಹುಟ್ಟೋದು ಅಲ್ಲೇ. ಅಂತಹ ಒಂದು ಹೊಸ ಪ್ರಯತ್ನ ರಂಗಿತರಂಗದ ಹಾಗೆ ಯಶಸ್ಸು ಕಾಣಬಹುದು, ಇಲ್ಲಾ ಪ್ರತಿ ವರ್ಷ ಬಿಡುಗಡೆಯಾಗಿ ಹೇಳ ಹೆಸರಿಲ್ಲದಂತೆ ಕಣ್ಮರೆಯಾಗುವ 120 ಚಿತ್ರಗಳ ಹಾಗೆ ಅನಾಮಿಕವಾಗೆ ಉಳಿದುಬಿಡಬಹುದು. ಎಗ್ಸಾಮ್ ಬರೆಯೋದು ಮುಖ್ಯ, ಪಾಸಾದರೆ 1st Rank ರಾಜು, ಫೇಲಾದರೆ ಪರಮಾತ್ಮ, ಅಷ್ಟೇ. StartUp India ಎಂಬ ಹೊಸ ಅಲೆಯೊಂದು ಎದ್ದಿದೆ, ಅದು ಎಲ್ಲಿಗೆ ಕರೆದೊಯ್ಯುತ್ತೋ  ಹೋಗಲಿ, ಹೋಗೇ ಬಿಡೋಣ ಅಂತ ನುಗ್ಗುವವರಿಗೆ All The Best. ಬೇಡ ಬಿಡಪ್ಪ ಅಂತ ದಡದಲ್ಲೇ ಉಳಿದು ಸೂರ್ಯಾಸ್ತ ನೋಡೋಣ ಎನ್ನುವವರಿಗೆ Have a break, Chill maadi.
ಸಾಂದರ್ಭಿಕ ಚಿತ್ರAfter Office Hours Meeting: ಕಾಲೇಜ್ ದಿನಗಳಲ್ಲಿ ಪಾಠ ಮುಗಿದ ಮೇಲೆ ಹೆಚ್ಚಿನ ಓದಿಗೆ ಅಂತ ಒಂದಿಷ್ಟು reference books ಗಳನ್ನು ಓದಿಕೊಳ್ಳಲು ಸಲಹೆ ಕೊಡುತಿದ್ದರು. ಬರೆದುಕೊಳ್ಳೋ ಥರ ಡವ್ ಮಾಡಿ, ಸುಮ್ನೆ ಏನೋ ಗೀಚಿಕೊಂಡು ಆಚೆ ಬಂದು ಬಸ್ ಶೆಲ್ಟರ್ ಇಲ್ಲಾ ಮೆಸ್ ಕಡೆ ಓಡ್ತಾ ಇದ್ವಿ. ವಿಪರ್ಯಾಸ ಏನಪ್ಪಾ ಅಂದರೆ ಅಲ್ಲಿ ಅಂದು ಏನನ್ನು ಬರೆದುಕೊಳ್ಳದ ನಾನು ಇಲ್ಲಿ ಇಂದು ಹೀಗೆ ಬ್ಲಾಗ್ ಅಂಕಣದ ಕೊನೆಯಲ್ಲಿ ಹೆಚ್ಚಿನ ವೀಕ್ಷಣೆಗೆ ಒಂದಷ್ಟು ಸಿನಿಮಾ / ಟಿವಿ ಧಾರವಾಹಿ / ವೆಬ್ ಧಾರವಾಹಿಗಳನ್ನು reference ಗೆ ಅಂತ ಸಲಹೆ ಕೊಡ್ತಾ ಇದ್ದೀನಿ. ಬಿಡುವಾದರೆ ನೋಡಿ, ನೋಡದಿದ್ದರೂ ಪರವಾಗಿಲ್ಲ, ಬಿಡುವು ಮಾಡಿಕೊಳ್ಳಿ ಸಾಕು.ಮತ್ತೆ ಸಿಗೋಣ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ