ಜನವರಿ 21, 2016

ಕಿಲ್ಲಿಂಗ್ ವೀರಪ್ಪನ್ ಕಥಾನಕ


(“ಕೆಲವು ಸಿನಿಮಾಗಳಲ್ಲಿ ಸೆನ್ಸಾರ್ ಪ್ರಮಾಣಪತ್ರ ತೋರಿಸಿದ ನಂತರ ' ಚಿತ್ರದಲ್ಲಿ ಬರುವ ಪಾತ್ರಗಳು ಹಾಗೂ ಸನ್ನಿವೇಶಗಳು ಕೇವಲ ಕಾಲ್ಪನಿಕ...” ಎಂಬ disclaimer ತೋರಿಸಲಾಗುತ್ತದೆ. ಅದೇ ರೀತಿಯಲ್ಲಿ ಬಾರಿ ನಮ್ಮದೂ ಒಂದು ಇದೆ, ಓದಿಬಿಡಿ. ಅಂಕಣವು ಕಿಲ್ಲಿಂಗ್ ವೀರಪ್ಪನ್ ಚಿತ್ರವನ್ನು ನೋಡುವ ಮೊದಲು, ನೋಡುವಾಗ, ಮತ್ತು ನೋಡಿದ ನಂತರದ ನನ್ನ ಅನುಭವ ಅಭಿಪ್ರಾಯಗಳ ಸಂಗ್ರಹವೇ ಹೊರತು ಚಿತ್ರವಿಮರ್ಶೆ ಖಂಡಿತಾ ಅಲ್ಲ. ಕಿಲ್ಲಿಂಗ್ ವೀರಪ್ಪನ್ ಚಿತ್ರವನ್ನು ನೀವಿನ್ನೂ ನೋಡಿಲ್ಲವಾದರೆ, ಅಥವಾ ನೋಡುವ ಉದ್ದೇಶವಿದ್ದರೆ, ದಯವಿಟ್ಟು ಅಂಕಣವನ್ನು bookmark ಗೆ ಸೇರಿಸಿ, ಚಿತ್ರ ನೋಡಿದ ನಂತರ ಓದಿದರೆ ಒಳ್ಳೆಯದೆಂಬ ಬಿಟ್ಟಿ ಸಲಹೆ ಕೊಡುತ್ತಿದ್ದೇನೆ. ಇದರ ಮೇಲೆ ನಿಮ್ಮಿಷ್ಟ, ತೀರಾ ಮಿಸ್ಸಾಗಿ ಲಿಂಕ್ ಮೇಲೆ ಕ್ಲಿಕ್ಕಿಸಿ, ಅಥವಾ ವಿಷಯ ಏನಿರಬಹುದು ಅಂತ ನೋಡುತ್ತಿರುವ ಹಾಗೂ ಖಾಯಂ ಆಗಿ ನನ್ನ ಶೆಕೆ ತಡೆದುಕೊಳ್ಳಲಾರದೆ ಓದುವ ನನ್ನ ಎಲ್ಲ ಸನ್ಮಿತ್ರರಿಗೂ, ", ಹೋಗ್ರೋ, ಹೋಗ್ರೋ, ಆಮೇಲೆ ಬರ್ರಿ" ಎಂದು ಬೋರ್ಡ್ ಹಾಕುವ ದೊಡ್ಡ ಮಟ್ಟದ ಓದುಗರ ಬಳಗ ನನ್ನದಲ್ಲ. ಇನ್ನು ಜಾಸ್ತಿ ಮಾತನಾಡದೇ ವಿಷಯಕ್ಕೆ ಬರುವೆ.)
ಅದೇ ಬಾಳು, ಅದೇ ಗೋಳು, ದಿನಾಂಕ ಮಾತ್ರ ಬೇರೆ ಅಷ್ಟೇ, ಉಳಿದದ್ದೆಲ್ಲಾ ಹಾಗೆ ಇರಲಿದೆ ಎಂದು ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಡಿಸೆಂಬರ್ 31 ರಾತ್ರಿ ಟ್ವೀಟಿಸಿದ್ದರು. ಎಲ್ಲಾ ಅಂದುಕೊಂಡ ಹಾಗೆ ಆಗಿದ್ದರೆ ಅದೇ ಡಿಸೆಂಬರ್ 31 ಮಧ್ಯರಾತ್ರಿ, ದಾಂಡೇಲಿಯ ಚಳಿಯಲ್ಲಿ, ಬೆಂಕಿ ಹಾಕಿದ ಕಟ್ಟಿಗೆಯ ರಾಶಿಯ ಮುಂದೆ ನಿಂತು, ಕೈಯಲ್ಲಿ ಫಾಂಟಾ ತುಂಬಿದ ಲೋಟ ಹಿಡಿದು, "Happy New Year" ಎನ್ನುತ್ತಾ ನಾನೂ ಕೂಡ ನಮ್ ಹುಡುಗರೊಂದಿಗೆ ಕೂಗಿರುತ್ತಿದ್ದೆ. ಹಾಗೇನಾದರೂ ಆಗಿದ್ದರೆ ಪ್ರವಾಸದಲ್ಲಿದ್ದ ಕಾರಣ ಪ್ರಾಯಶಃ ನಾನು ಮೇಲೆ ತೋರಿಸಿರುವ ಟ್ವೀಟನ್ನು ನಾನು ನೋಡಬಹುದಾದ ಸಾಧ್ಯತೆ ತುಂಬಾ ಕಡಿಮೆ ಇರುತಿತ್ತು. ಆದರೆ ಎಲ್ಲ ಸಮಯ ನಾವು ಅಂದ್ಕೊಂಡ ಹಾಗೆ ಆಗಬೇಕಲ್ಲಾ? ಹಂಗಾಗಿ, ಅದರಿಂದ ಹಿಂಗಾಗಿ, ಒಟ್ಟ್ನಲ್ಲಿ ಡಿಸೆಂಬರ್  31 ರಾತ್ರಿ ಎಲ್ಲಾ ಸಾಮಾನ್ಯ ವಯಸ್ಕರಂತೆ ನಾನೂ ಕೂಡ ರೂಮಿನಲ್ಲಿ ಹೊದಿಕೆ ಹೊದ್ದು ಮಲಗಿದ್ದಾಯಿತು. ಮರುದಿನ ಬ್ಯಾಂಕಿಗೆ ಬಂದ ಕೆಲವು ಗ್ರಾಹಕರು "ಹ್ಯಾಪ್ಪಿ ನ್ಯೂ ಈಯರ್ ಸಾರ್" ಅಂತ ಕೈ ಕುಲುಕಿದರೂ "ಸೇಮ್ ಟು ಯು ಬಾಸು" ಅಂತ ತಿರುಗಿ ವಿಶ್ ಮಾಡಲಾಗದ ಮಟ್ಟಿಗೆ ಬೇಜಾರಾಗೋಗಿತ್ತು. ಹಿಂಗೇ ಆದರೆ ಆಗಲಮ್ಮ, ಬೇಜಾರು ಹೋಗಲಿಕ್ಕೆ ಏನಾದರೂ ವ್ಯವಸ್ಥೆ ಮಾಡಿಕೊಳ್ಳಲೇ ಬೇಕು, ಇಲ್ಲಾಂದ್ರೆ ಕಷ್ಟ ಆಗುತ್ತೆ ಅಂತ ಯೋಚಿಸುತ್ತಿದ್ದೆ. ತಕ್ಷಣ ಅದೇ ದಿನ ಕಿಲ್ಲಿಂಗ್ ವೀರಪ್ಪನ್ ಚಿತ್ರ ಬಿಡುಗಡೆ ಅನ್ನೋದು ನೆನಪಾಯಿತು. ವೀರಪ್ಪನ್ ಕೊಲ್ಲೋದಕ್ಕೆ ಶಿವಮೊಗ್ಗಕ್ಕೆ ಹೋಗಲು ಮುಹೂರ್ತ ಫಿಕ್ಸ್ ಮಾಡಿಕೊಂಡೆ

 ಸಾಂದರ್ಭಿಕ ಚಿತ್ರ: ರಾಕೇಶ್ ಮೈಯಾ


ಸರಿ, ಮುಹೂರ್ತ ಇಟ್ಟಿದ್ದ ಭಾನುವಾರ ಏನೋ ಬಂತು, ಆದರೆ ಕೊಲೆ ನಡೆಯುವ 'ಸ್ಪಾಟ್' ಗೊತ್ತಿರಲಿಲ್ಲ. ಮೊದಲು ಶಿವಮೊಗ್ಗ ಹೋಗೋಣ, ಉಳಿದದ್ದು ಆಮೇಲೆ ಅಂತ ಹೊರಟೇ ಬಿಟ್ಟೆ. ಶಿವಮೊಗ್ಗ ನಿಲ್ದಾಣದಲ್ಲಿ ಇಳಿದಾಗ ದೂರದೂರಕ್ಕೆ ಎಲ್ಲೂ ಕಿಲ್ಲಿಂಗ್ ವೀರಪ್ಪನ್ ಚಿತ್ರದ ಪೋಸ್ಟರ್ ಗಳೇ ಕಾಣಿಸುತ್ತಿರಲಿಲ್ಲ. ಒಳ್ಳೆಇದಕ್ಕೆ’ ಬಂದು ಸಿಕ್ಕಕ್ಕೊಂಡಂಗಾಯ್ತಲ್ಲಪ್ಪಾ, ಸರಿ HPC ಹತ್ರ ಹೋಗೋಣ, ಮುಂದಿನದು ಮುಂದಕ್ಕೆ ಅಂತ ಅಂದುಕೊಂಡು ಆಟೋ ಹತ್ತಿದೆ. ಗೋಪಿ ವೃತ್ತದಲ್ಲಿ ಇಳಿದು ನೋಡಿದೆ, ಕಡೆ ಮಲ್ಲಿಕಾರ್ಜುನ 'ಟೇಟ್ರು', ಕಡೆ HPC 'ಟೇಟ್ರು', ನಮ್ ಕರ್ಮಕ್ಕೆ ಎರಡರಲ್ಲೂ ಕಿಲ್ಲಿಂಗ್ ವೀರಪ್ಪನ್ ಇರಲಿಲ್ಲ. ಇದೊಳ್ಳೆ ಸರಿ ಹೊಯ್ತಲ್ಲಪ್ಪ ಅಂದ್ಕೊಂಡು ಮಲ್ಲಿಕಾರ್ಜುನ ಟೇಟ್ರಿನ ಬಳಿ ನಿಂತಿದ್ದಾಗ ಸ್ವಲ್ಪ ದೂರದಲ್ಲಿ ಕಿಟ್ಟು-ಪುಟ್ಟು ಥರ ನಿಂತಿದ್ದ ಇಬ್ಬರು ಕಾಲೇಜ್ ಹುಡುಗರು ಕಂಡರು.

ನಾನು: ಬಾಸ್, ಸ್ವಲ್ಪ ಬನ್ನಿ

(ಪುಟ್ಟು ನೋಡಿದ, ಹತ್ತಿರ ಬರೋಕೆ ಯಾಕೋ ಹೆದರಿಕೊಂಡ. ನಾವಿರೋ ಬಣ್ಣಕ್ಕೆ ಇದೆಲ್ಲ ಮಾಮೂಲಿ ಅಂದ್ಕೊಳ್ಳುತ್ತಿರುವಾಗಲೇ ಪಕ್ಕದಲ್ಲಿ ನಿಂತಿದ್ದ ಕಿಟ್ಟು ಹೆಂಗೋ ಧೈರ್ಯ ಮಾಡಿ ಮುಂದೆ ಬಂದ.)

ನಾನು: ಬಾಸ್, ಕಿಲ್ಲಿಂಗ್ ವೀರಪ್ಪನ್ ಹಾಕಿಲ್ವಾ?

ಕಿಟ್ಟು: ಅಂಕಲ್, ಅದು ವೀರಭದ್ರೇಶ್ವರ.

ನಾನು: ಓಹ್, ಥ್ಯಾಂಕ್ ಯು ಬಾಸ್, ಥ್ಯಾಂಕ್ ಯು" ಎಂದವನೇ ವೀರಭದ್ರೇಶ್ವರ 'ಟೇಟ್ರಿ' ಕಡೆ ಓಡಿದೆ. ಸಮಯ ಆಗಲೇ 10:23 ಆಗಿತ್ತು, ಅಯ್ಯೋ ಶಿವಾ, ಫಿಲಂ 10:30 ಕ್ಕೆ ಅನ್ಸುತ್ತೆ, ಆಗಲೇ ಟಿಕೆಟ್ ಕೊಡಲು ಶುರು ಮಾಡಿದ್ದರೆ ನಾನು ಹೋಗೋ ಹೊತ್ತಿಗೆ 'ಧೂಮ್ರಪಾನ ಆರೋಗ್ಯಕ್ಕೆ ಹಾನಿಕರ' ಜಾಹೀರಾತು ಮುಗಿದು ಹೋಗಿದ್ರೆ ಏನು ಮಾಡೋದು? ಎಂದುಕೊಳ್ಳುತ್ತಾ ಹೆಂಗೋ 'ಸ್ಪಾಟ್' ತಲುಪಿದೆ. ಬೆಳಗಿನ ಪ್ರದರ್ಶನ 11 ಕ್ಕೆ ಅಂತ ನೋಡಿ ಸಿಕ್ಕಾಪಟ್ಟೆ ಸಮಾಧಾನ ಆಯಿತು. ಹೇಗಿದ್ರೂ ಸಮಯ ಇದ್ಯಲ್ಲ ಅಂತ ಪೋಸ್ಟರ್ ಗಳನ್ನು ನೋಡುತ್ತಾ ನಿಂತೆ. ಕಿಲ್ಲಿಂಗ್ ವೀರಪ್ಪನ್ ಚಿತ್ರದ ವೀರಪ್ಪನ್ ಪೋಸ್ಟರ್ ಮುಂದೆ ನಿಂತು ಒಂದು ಸೆಲ್ಫೀ ತೆಗೆದುಕೊಳ್ಳೋಣ  ಅಂದ್ಕೊಂಡೆ, ದೂರದಿಂದ ಯಾರೋ "ಅಣ್ಣಪ್ಪ, you are too old for this stuff" ಅಂತ Lethal Weapon ಶೈಲಿಯಲ್ಲಿ  ಬೈದಂಗಾಯಿತು. ಸೆಲ್ಫೀ ಬೇಡ, ಯಾವುದಕ್ಕೂ ಒಂದು ಸ್ಟಿಲ್ ಆದರೂ ಇರಲಿ ಅಂತ ಸುಮ್ಮನೆ ಒಂದು ಚಿತ್ರ ಕ್ಲಿಕ್ಕಿಸಿಕೊಂಡೆ.

ಸಾಂದರ್ಭಿಕ ಚಿತ್ರ: ವೀರಭದ್ರೇಶ್ವರ ಚಿತ್ರಮಂದಿರ, ಶಿವಮೊಗ್ಗಊಟಕ್ಕೆ ಮುಂಚೆ ಊಟ ಮಾಡಲು ಬಂದಿದ್ದೇವೆ ಅನ್ನೋ 'ಫೀಲ್' ಬರಲಿ ಅಂತ ಡಾಬಾ ಗಳಲ್ಲಿ ಈರುಳ್ಳಿ - ಸೌತೆಕಾಯಿ - ನಿಂಬೆ ಹೋಳನ್ನು ಒಳಗೊಂಡ ನಂಚಿಕೆಯನ್ನು ಕೊಡುವುದು ವಾಡಿಕೆ. ಜನ ಹೇಳಿದ ಆರ್ಡರ್ ಬರುವುದು ತಡವಾದರೆ, ಕೊನೆ ಪಕ್ಷ ಇದನ್ನಾದರೂ  ತಿನ್ನುತ್ತಾ ಇರಲಿ ಅನ್ನೋದು ಅದರ ಹಿಂದಿನ ವ್ಯಾವಹಾರಿಕ ಲೆಕ್ಕಾಚಾರ ಅನ್ನೋದು ಬೇರೆ ಮಾತು. ಅದೇ ರೀತಿಯಲ್ಲಿ ಕಿಲ್ಲಿಂಗ್ ವೀರಪ್ಪನ್ ಚಿತ್ರದ ಬಗ್ಗೆ ಅಂತ ಹೇಳಿ ಏನೇನೋ ಶೆಕೆ ಕೊಡ್ತಿದ್ದಾನೆ ಅಂತ ಬೈಕೋಬೇಡಿ, ವಿಷಯಕ್ಕೆ ಬರೋಕೆ ಮುಂಚೆ ಎಲ್ಲಾ ಕಡೆ ರೌಂಡ್ ಹೊಡೆದುಕೊಂಡು ಬರೋದು ನಮಗೆ ಅಭ್ಯಾಸ ಆಗೋಗಿದೆ. ಕಿಲ್ಲಿಂಗ್ ವೀರಪ್ಪನ್ ಚಿತ್ರ ನನಗೆ ವೈಯಕ್ತಿಕವಾಗಿ ತುಂಬಾ ಮೆಚ್ಚುಗೆಯಾದ ಚಿತ್ರ. ಹಿಂದೊಮ್ಮೆ ಉಪ್ಪಿ 2 ಚಿತ್ರದ ಕುರಿತ ಅಂಕಣದಲ್ಲಿ ಹೇಳಿರುವಂತೆ ಥ್ರಿಲ್ಲರ್ ಚಿತ್ರಗಳು ಅಂದರೆ ನನಗೆ ಒಂಥರಾ ಲವ್ ಜಾಸ್ತಿಥ್ರಿಲ್ಲರ್ ಚಿತ್ರಗಳನ್ನು ಪರಿಗಣನೆಗೆ ತೆಗೆದುಕೊಳ್ಳೋದಾದರೆ ಕಳೆದ ವರ್ಷ ನನ್ನ ಪಾಲಿಗೆ ಒಬ್ಬಟ್ಟು - ಹೋಳಿಗೆ ಸಾರು - ಜಾಮೂನು ಸೇರಿದ ಫುಲ್ ಮೀಲ್ಸ್ ಎಂದೇ ಹೇಳಬಹುದು. ಉಪ್ಪಿ 2, ರಂಗಿತರಂಗ ಹಾಗೂ ಆಟಗಾರ ಚಿತ್ರ ಗಳಿಂದ ಮನೋರಂಜನೆಯ ಲೆಕ್ಕದಲ್ಲಿ 2015 ನೇ ವರ್ಷ ಸೂಪರ್ ಎಂದು ಹೇಳಲಡ್ಡಿಯಿಲ್ಲ. ಅದಾದ ನಂತರ ಹೇಳಿಕೊಳ್ಳುವಂತಹ ಥ್ರಿಲ್ಲರ್ ಚಿತ್ರಗಳು ನೋಡಿರಲಿಲ್ಲ. ಇಂಗ್ಲಿಷ್ Edge of the Seat Thriller ಸಿನಿಮಾಗಳನ್ನು ಲ್ಯಾಪ್ಟಾಪ್ ನಲ್ಲಿ ನೋಡಿದೆನಾದರೂ, ಥ್ರಿಲ್ಲಿಂಗ್ ಸಿನಿಮಾಗಳನ್ನು ಥಿಯೇಟರಿನಲ್ಲಿ ನೋಡೋ ಕಿಕ್ಕೇ ಬೇರೆ. ಹಾಗಾಗಿ ಕಿಲ್ಲಿಂಗ್ ವೀರಪ್ಪನ್ ಚಿತ್ರ ನನ್ನ ಪಾಲಿಗೆ ಥ್ರಿಲ್ಲಿಂಗ್ ವೀರಪ್ಪನ್ ಆಗಬೇಕಾದ ಅನಿವಾರ್ಯತೆ ತುಂಬಾ ಇತ್ತು. ಫಿಲಂ ಏನೋ ನೋಡಾಯ್ತು, ಹೊರ ಬಂದಾಗ ತಲೆಯನ್ನು ಹಲವು ವಿಷಯಗಳು ಆವರಿಸಿದ್ದವು, ಎಲ್ಲವೂ ಕಿಲ್ಲಿಂಗ್ ವೀರಪ್ಪನ್ ಚಿತ್ರದ ಕುರಿತ ವಿಷಯಗಳೇ ಎಂದು ಬೇರೆ ಹೇಳಬೇಕಿಲ್ಲ ಅಂದ್ಕೊಳ್ತೀನಿ.

ಸಾಂದರ್ಭಿಕ ಚಿತ್ರ: ಕಿಲ್ಲಿಂಗ್ ವೀರಪ್ಪನ್  ಹೆಸರೇ ಹೇಳುವಂತೆ ಕಿಲ್ಲಿಂಗ್ ವೀರಪ್ಪನ್ ಚಿತ್ರ ಕೇವಲ ವೀರಪ್ಪನ್ ನನ್ನು ಹಿಡಿಯಲು ಮಾಡಿದ ಕಾರ್ಯಾಚರಣೆಯ ಬಗ್ಗೆ ಮತ್ತು ಸ್ವಾಭಾವಿಕವಾಗಿ ವೀರಪ್ಪನ್ ಸಾವಿನೊಂದಿಗೆ ಚಿತ್ರ ಕೊನೆಯಾಗುತ್ತದೆ. "It's the journey that matters, not the destination ಎಂಬ ಮಾತಿನಂತೆ ಹೋಗೋ ಜಾಗ ನೋಡಿರೋದೇ ಆಗಿದ್ರೂ ಅವಳು ಜೊತೆ ಇದ್ರೆ, ಎಲ್ಲಿಗೆ ಬೇಕಾದರೂ ಹೋಗೋಕೆ ಮನಸ್ಸು ರೆಡಿಯಾಗುತ್ತೆ" ಅಂತ ನಮ್ ಹುಡುಗ 'ಗ್ಯಾಪ್' ಒಂದ್ ಸಲ ಹೇಳಿದ್ದ. ಯಾಕೋ ಕಿಲ್ಲಿಂಗ್ ವೀರಪ್ಪನ್ ಚಿತ್ರ ನೋಡಿ ಮೇಲಿನ ಸಾಲು ಚಿತ್ರಕ್ಕೂ ಅನ್ವಯಿಸುತ್ತೆ ಅನಿಸಿತು. ಯಾಕಂದ್ರೆ ವೀರಪ್ಪನ್ ಬಗ್ಗೆ, ಅವನು ವರನಟ ರಾಜ್ ಕುಮಾರ್ ಅವರನ್ನು ಕಿಡ್ನಾಪ್ ಮಾಡಿದ್ದು, ಕರ್ನಾಟಕ ಹಾಗೂ ತಮಿಳುನಾಡು ಸರ್ಕಾರ ಅವನನ್ನು ಹಿಡಿಯಲು ಜಂಟಿ ಕಾರ್ಯಾಚರಣೆ ಮಾಡಿದ್ದು, ಎಲ್ಲರಿಗೂ ಗೊತ್ತೇ ಇರುವಂಥ ವಿಷಯ. ರೀತಿ ಎಲ್ಲರಿಗೂ ಗೊತ್ತಿರುವ ವಿಷಯಗಳನ್ನೇ ಸೇರಿಸಿ, ಅತ್ಯಂತ ಕುತೂಹಲ ಉಳಿಸಿಕೊಂಡು ಕಥೆಯನ್ನು ನಿರೂಪಿಸುವ ಕೆಲಸವನ್ನು ವರ್ಮಾ ತುಂಬಾ ಅಚ್ಚುಕಟ್ಟಾಗಿ ಮಾಡಿದ್ದಾರೆ. Rammy ಛಾಯಾಗ್ರಹಣ ಹಾಗೂ Sandy Keys ಹಿನ್ನಲೆ ಸಂಗೀತಕ್ಕೆ ನಾನಂತೂ ಮಾರುಹೋದೆ. ಯಾಕೆ ಅಂತ ಒಂದು ಚಿಕ್ಕ ಸನ್ನಿವೇಶ ಹೇಳ್ತೀನಿ: ವೀರಪ್ಪನ್ ಸಹಚರನೊಬ್ಬ ಮುತ್ತುಲಕ್ಷ್ಮಿ ಕೊಟ್ಟ ಕ್ಯಾಸೆಟ್ ಅನ್ನು ವೀರಪ್ಪನ್ ಗೆ ಕೊಡಲು ಹೋಗ್ತಾ ಇರ್ತಾನೆ, ದೂರದಲ್ಲಿ ಹುಡುಗ ಬರುತ್ತಿರುವಂತೆ, ನಿಧಾನಕ್ಕೆ ಅವನ ಮೇಲೆ ಕ್ಯಾಮೆರಾ ಫೋಕಸ್ ಆಗುತ್ತಿರುತ್ತದೆ. ಇದ್ದಕ್ಕಿದ್ದಂತೆ ಕ್ಯಾಮೆರಾದ ಮುಂದೆ ಹಾವೊಂದು ಸುರ್ರ್ ಅಂತ ನಿಧಾನಕ್ಕೆ ತೆವಳುತ್ತದೆ. ಅರ್ರೇ ಭಗವಂತ ಅಂತ ಒಂದು ಕ್ಷಣ ನಿಟ್ಟು ಬೀಳೋ ಹಾಗೋಗೋದು ಇಲ್ಲಿ. ಅದು CGI ಹಾವಿರಬಹುದು, ಇಲ್ಲಾ ಹಲ್ಲು ಕಿತ್ತ ಹಾವಾಗಿರಬಹುದು; ಏನಾದರೂ ಆಗಲಿ, ಸಡನ್ ಆಗಿ ಅದೆಲ್ಲ ಯಾರಿಗೆ ತಾನೇ ಫ್ಲಾಶ್ ಆಗುತ್ತೆ? ಇನ್ನೊಂದು ದೃಶ್ಯದಲ್ಲಿ ವೀರಪ್ಪನ್ ಕಡೆಯವರು ಮತ್ತು STF ನವರ ನಡುವೆ ಬುಲೆಟ್ ಗಳ ದಾಳಿ, ಎಲ್ಲ ಮುಗಿಯಿತು ಅನ್ನೋ ಹೊತ್ತಿಗೆ ಮತ್ತೊಂದ್ ಸಲ ಢಣ್ ಅಂತ ಮತ್ತೊಂದು ಬುಲೆಟ್ ಸೌಂಡು, ಇಂಥ ಹಲವು ಚಿಕ್ಕ ಚಿಕ್ಕ ವಿಷಯಗಳು ಸಿನಿಮಾದಲ್ಲಿ ತುಂಬಾ ಇದೆ. ಅದನ್ನು ಸ್ವತಃ ತಾವೇ ಅನುಭವಿಸುವುದರ ಮಜವೇ ಬೇರೆ. “Experience cannot be explained, ಅನುಭವಾನ ಅನುಭವಿಸಬೇಕಷ್ಟೇ” ಅನ್ನೋ ಆಪ್ತಮಿತ್ರ ಡೈಲಾಗ್ ಮಾತಿಗೆ ಪುಷ್ಟಿ ಕೊಡುತ್ತದೆ. ವೀರಪ್ಪನ್ ಪಾತ್ರಧಾರಿ ಸಂದೀಪ್ ಭಾರಧ್ವಾಜ್ ಗೆ ಹೆಚ್ಚಿನ ಮಾತಿಲ್ಲ, ಆದರೂ ಅವರು ಪರದೆಯಲ್ಲಿ ಕಂಡಾಗ ಕೈಯಲ್ಲಿ ನರಳುತ್ತಿದ್ದ ಚಿಪ್ಸ್ ಗೆ ಒಂದು ಕ್ಷಣ ವಿರಾಮ ಸಿಕ್ಕಿ, ಮೌನವಾಗಿ ಕುತೂಹಲದಿಂದ ನೋಡೋ ಹಾಗಾಗುತ್ತೆ. ರಾಜೇಶ್ ನಟರಂಗ, ಸಂಚಾರಿ ವಿಜಯ್, ರಾಕ್ ಲೈನ್ ವೆಂಕಟೇಶ್, ಕೆ.ಎಸ್.ಶ್ರೀಧರ್ (ಪೊಲೀಸ್ ಕಮಿಷನರ್), ಕುಮಾರ್ ಪಾತ್ರಧಾರಿ, ತಮಿಳ್ ಟೆರರಿಸ್ಟ್ ಪಾತ್ರಧಾರಿ, ರಮೇಶ್ ಪಂಡಿತ್ (ಕದಾನಿ), ಪರುಲ್ ಯಾದವ್ ಹಾಗೂ ಯಜ್ಞಾ ಶೆಟ್ಟಿ ಪಾತ್ರಗಳು ಎಷ್ಟು ಬೇಕೋ ಅಷ್ಟು ಮಾತ್ರವೇ ಇರುವುದರಿಂದ ಬೇಡದೇ ಇರೋ ದೃಶ್ಯಗಳು ತುಂಬಾ ಕಮ್ಮಿ. ಬೇರೆ ಯಾರದರೂ ಫಿಲಂ ಮಾಡಿದ್ರೆ ಅಲ್ಲೊಂದು ಹೀರೋ ಗೆ ಗ್ರಾಂಡ್ ಎಂಟ್ರಿ ಸಾಂಗು, ಕಡೆ ಪರೂಲ್ ಗೆ ಮಳೆಯಲ್ಲೊಂದು ಸಾಂಗು ಆಗಿ ಚಿತ್ರ ಸಿಕ್ಕಾಪಟ್ಟೆ ಹಿಟ್ ಆಗುವ ಸಂಭವ ಇತ್ತು!!
ಸಾಂದರ್ಭಿಕ ಚಿತ್ರ: ಕಿಲ್ಲಿಂಗ್ ವೀರಪ್ಪನ್


ಇನ್ನು ಶಿವಣ್ಣ ವಿಷಯಕ್ಕೆ ಬರೋದಾದ್ರೆ, ಶಿವಣ್ಣ ಒಂಥರಾ ಗಾಜಿನ ಸೀಸೆಯಲ್ಲಿ ತೆಗೆದಿಟ್ಟ ವೈನಾದ ಹಳೇ ವೈನಿನಂತೆ. ಹಾಡು ಹಳೆಯದಾದರೇನು, ಭಾವ ನವನವೀನ ಎಂಬುವ ಮಾತಿನಂತೆ ವಯಸ್ಸಲ್ಲೂ ಅವರ ನಟನೆ, ಹುಮ್ಮಸ್ಸು ನೋಡಿದರೆ Ray Bradbury ಅವರು ಹೇಳಿರುವ "Love what you do and do what you love" ಸಾಲುಗಳು ಅಕ್ಷರಶಃ ನಿಜ ಎನಿಸುತ್ತೆ. ನಾವು ಏನು ಇಷ್ಟ ಪಡ್ತೀವೋ, ಅದನ್ನೇ ವೃತ್ತಿಯನ್ನಾಗಿಸಿಕೊಳ್ಳಬೇಕು, ಇಲ್ಲಾಂದ್ರೆ ಪ್ರವೃತ್ತಿಯಾಗಿಯಾದರೂ ರೂಢಿಸಿಕೊಳ್ಳಬೇಕು. ಇಲ್ಲವಾದರೆ ಬದುಕು ಗಾಳಿ ಕಮ್ಮಿ ಇರುವ ಗಾಡಿ ಓಡಿಸಿದಂತಾಗುತ್ತದೆ; ಮುಂದಕ್ಕೆ ಏನೋ ಹೋಗುತ್ತೆ, ಆದರೆ ಪ್ರಯಾಣ ಸುಗಮವಾಗಿರೋದಿಲ್ಲ. ಮೇಲಿನ ಸಾಲಿನಲ್ಲಿ 'ಹಳೇ' ಅನ್ನೋ ಪದ ಯಾಕೆ ಬಳಸಿದೆ ಅಂದ್ರೆ ಮದುವೆಗೆ ಮುಂಚೆ ನಮ್ ಅಮ್ಮನನ್ನು ಅವರ ಗೆಳತಿಯರು " ರಾಜ್ ಕುಮಾರ್ ಮಗ ಹೀರೋ ಅಂತೆ ಕಣೇ, ಬರ್ರೆ ಹೋಗೋಣ" ಅಂತ ಆನಂದ್ ಫಿಲಂಗೆ ಕರೆದುಕೊಂಡು ಕೊಂಡು ಹೋಗಿದ್ರಂತೆ. ಕಟ್ ಮಾಡಿದ್ರೆ 2016, ಆಗಲೇ ನನಗೆ 25 ವರ್ಷ, ನಮ್ಮಮ್ಮನ ಮಗ ನಾನು, ಮಿಸ್ಸಾಗಿ ಎಲ್ಲಾದ್ರೂ 'ನಿರುದ್ದೇಶಕ' ಆಗಿದ್ರೆ ಶಿವಣ್ಣಂಗೆ ಆಕ್ಷನ್ ಕಟ್ ಹೇಳಬಹುದಿತ್ತಲ್ಲಾ ಅಂತ ಹಗಲುಗನಸು ಕನಸು ಕಾಣುತಿದ್ದೇನೆ. ಮುಂದೊಂದಿನ ಶಿವಣ್ಣ ಆಕ್ಟಿಂಗ್ ಕರಿಯರ್ ಮುಗಿಯುತ್ತೆ, ನಮ್ ಸಿನಿಮಾ ವೀಕ್ಷಣೆ ಪ್ರಯಾಣ ಕೂಡ ಮುಗಿಯುತ್ತೆ, ಎಲ್ಲಿವರೆಗೂ ನನಗೆ ಫಿಲಂ ನೋಡೋ ಆಸೆ ಇರುತ್ತೋ, ಅಲ್ಲಿವರೆಗೂ ಶಿವಣ್ಣ ಇರಲಪ್ಪ ಅನ್ನೋದು ಒಂದು ಸಣ್ಣ ಸ್ವಾರ್ಥ ತುಂಬಿದ ಪ್ರಾರ್ಥನೆ. ಫಿಲಂಗಳು ಚೆನ್ನಾಗಿದ್ರೆ ಸಾಕು, ಹೀರೋ, ತಾರಾಬಳಗ ಹಾಗೂ ಬಜೆಟ್ ಮುಖ್ಯ ಅಲ್ಲ ಅನ್ನೋದು ನನ್ನ  ಪಾಲಿಸಿ, ಆದರೆ ವೈಯಕ್ತಿಕವಾಗಿ ಶಿವಣ್ಣ On-screen and off-screen ನನಗೆ ತುಂಬಾ ಇಷ್ಟ. ಯಾಕೆ? ನಮಗೂ ಗೊತ್ತಿಲ್ಲ! ಕಿಲ್ಲಿಂಗ್ ವೀರಪ್ಪನ್ ಬಗ್ಗೆ ವಾಪಸ್ ಬಂದು ಹೇಳೋದಾದ್ರೆ, ಸಿನಿಮಾಗಳಲ್ಲಿನ Hero introduction scene ಗಳನ್ನು ಎಷ್ಟು ಜನ ನೋಡಿ analyze ಮಾಡ್ತಾರೋ ಗೊತ್ತಿಲ್ಲ, ನಾನಂತೂ ವಿಷಯದ ಮೇಲೆ ಒಂದು ಕಣ್ಣು ಇಟ್ಟಿರ್ತೀನಿ. ಎಷ್ಟೋ ಫಿಲಂ ಗಳಲ್ಲಿ ನಾಯಕನ ಪ್ರವೇಶ ಹಂಗಿರಬೇಕು, ಹಿಂಗಿರಬೇಕು ಅಂತ ಏನೇನೋ ಪ್ಲಾನ್ ಹಾಕಿ, ಅದ್ಧೂರಿಯಾಗಿ ಚಿತ್ರೀಕರಿಸುವುದಲ್ಲದೆ, "ಅಂತ ಹೀರೋ ಅವನು", "ಇಂಥ ಸ್ಟಾರ್ ಇವನು" ಅಂತ ಸಿ.ಜಿ. ನಲ್ಲಿ ಬಣ್ಣ ಬಣ್ಣದ ಅಕ್ಷರಗಳಲ್ಲಿ ಕೂಡ ತೋರಿಸಲಾಗುತ್ತೆ. ಒಂದ್ ಒಂದ್ ಸಲ ಅದು ಚೆನ್ನಾಗೆ ಇರುತ್ತೆ ಅನ್ನಿ, ಆದ್ರೆ ಚೆನ್ನಾಗಿರುತ್ತೆ ಅಂತ ದಿನಾ ಒಬ್ಬಟ್ಟು ತಿನ್ನೋಕಾಗುತ್ತಾ?! ಕಿಲ್ಲಿಂಗ್ ವೀರಪ್ಪನ್ ಚಿತ್ರ ಶುರುವಿನಲ್ಲಿ, ಆಗಲೇ ವೀರಪ್ಪನ್ ಬಂದು ತನ್ನ ಪರಾಕ್ರಮ ತೋರಿಸಿ ಆಗಿತ್ತು, ನಂತರ ಟೈಟಲ್ ಕಾರ್ಡು, ಆಮೇಲೆ ಪೋಲಿಸ್ ಅಧಿಕಾರಿಗಳ ಮೀಟಿಂಗು, ಅಲ್ಲೊಂದು ಸಖತ್ ಡೈಲಾಗ್ ಇದೆ, "ಒಬ್ಬ ಹಿರಿಯ ಪೋಲಿಸ್ ಆಫಿಸರ್ ಹೇಳಿದ್ರು, ವೀರಪ್ಪನ್ ವಯಸ್ಸಾಗಿ ಯಾವ್ದಾದರೂ ರೋಗ ಬಂದು ತಾನೇ ಸತ್ತು ಹೋಗಬೇಕೇ ಹೊರತು, ಪೊಲೀಸ್ ನವರು ಖಂಡಿತಾ ಹಿಡಿಯೋಕಾಗಲ್ಲ" ಅಂತ. ಡೈಲಾಗ್ ಕೇಳಿದ ಕೂಡಲೇ ವೀರಪ್ಪನ್ ರೇಂಜ್ ಹೆಂಗಿತ್ತು ಅನ್ನೋದು ಆಗ್ಲೇ ನೆನಪಾಗ್ತಾ ಇರುತ್ತೆ, ಎಲ್ಲಾ ಪೊಲೀಸ್ ಅಧಿಕಾರಿಗಳು ಅಲರ್ಟ್ ಆಗಿ ನಮ್ ಕಮಿಷನರ್ ಸಾಹೇಬರ ಮಾತು ಕೇಳ್ತಿದ್ದಾರೆ, ಹೀರೋ ಎಲ್ಲಿ ಅಂತ ನಾನೂ ನೋಡ್ತಾ ಇದ್ದೀನಿ, ಪಾರ್ಟಿ ಮೂಲೆಯಲ್ಲಿ ಗೋಡೆಗೆ ಒರಗಿ ಸೈಲೆಂಟಾಗಿ ನಿದ್ದೆ ಮಾಡೋದಾ? ಹೀರೋ ಎಂಟ್ರಿ ಸೀನ್ ಹಿಂಗೂ ಮಾಡಬಹುದಾ ಅಂತ ಒಂದು ಕ್ಷಣ ಅಚ್ಚರಿಯಾಯಿತು. ಓಹ್, ಇದು RGV ಫಿಲಂ ಗುರೂ, ಬೇಡದೇ ಇರೋದನ್ನೆಲ್ಲಾ ಫಿಲಂ ಅಲ್ಲಿ ಹಾಕೋಕೆ ಇದು ಬೇರೆಯವರ ಫಿಲಂ ಅಲ್ಲ, ತೆಪ್ಪಗೆ ಮೊಬೈಲ್ ಜೇಬಲ್ಲಿಟ್ಟು ಫಿಲಂ ನೋಡು ಅಂತ ಮನದ ಪಕ್ಷಿ ಸೌಂಡು ಮಾಡಿತು.


ಸಾಂದರ್ಭಿಕ ಚಿತ್ರ: ಕಿಲ್ಲಿಂಗ್ ವೀರಪ್ಪನ್ 


ಇನ್ನುಳಿದಂತೆ ಕಿಲ್ಲಿಂಗ್ ವೀರಪ್ಪನ್ ಚಿತ್ರದಲ್ಲಿ ಕೆಲವು ಪಾತ್ರಗಳ ಮ್ಯಾನರಿಸಂ ಹಾಗೂ ಕೆಲವು ದೃಶ್ಯಗಳನ್ನು ತೋರಿಸಿರುವ ಶೈಲಿ ತುಂಬಾ ಹೊಸತಾಗಿದೆ. ಅಂದರೆ ಅವೆಲ್ಲ ತೀರಾ ಚಿಕ್ಕ ಚಿಕ್ಕ ವಿಷಯಗಳು, over the time, ಅದೆಲ್ಲಾ ಯಾರಿಗೂ ನೆನಪಾಗೋದೇ ಇಲ್ಲ. ಆದರೂ ಕಥಾ ನಿರೂಪಣೆಗೆ ಅವು ಪೂರಕವಾಗಿರುತ್ತವೆ. ಉದಾಹರಣೆಗೆ, ಕಾಫಿ ಕಪ್ಪನ್ನು ಒಂದು ಕಣ್ಣಿಗೆ ಅಡ್ಡಹಿಡಿದು ಗಂಭೀರವಾಗಿ ಆಲೋಚಿಸುತ್ತಿರುವ ಶಿವಣ್ಣ ಫೋಟೋ. ಸುಮ್ಮನೆ ನೋಡಿದರೆ ಏನಿದೆ ಚಿತ್ರದಲ್ಲಿ ಅನ್ನಿಸುತ್ತೆ. ಆದರೆ ಕಥೆಯ ಒಳಹೊಕ್ಕಿ ನೋಡಿದಾಗ ಪಾತ್ರದ ಗುರಿ ಏನು, ವೀರಪ್ಪನ್ ನನ್ನು ಹಿಡಿಯೋ ಪ್ರಯತ್ನದಲ್ಲಿ ನಾವು ಎಲ್ಲಿ ಸೋಲುತಿದ್ದೇವೆ ಅಂತ ಆಳವಾಗಿ ಯೋಚಿಸುತ್ತಿರುವ ಪೊಲೀಸ್ ಅಧಿಕಾರಿ ಕಾಣುತ್ತಾನೆ. ಸಾಮಾಜಿಕ ಜಾಲತಾಣಗಳಲ್ಲಿ ಈಗಾಗಲೇ ಪೋಸು ಟ್ರೆಂಡ್ ಸೃಷ್ಟಿಸಿರುವುದು ಈಗ ಹಳೇ ಸುದ್ದಿ. ಅದೇ ವಿಷಯದ ಕುರಿತು WhatsApp ನಲ್ಲಿ ಹರಟುತಿದ್ದಾಗ ನಮ್ 'ಗುಡ್ಡೆ' ಅವರು "ಶಿವಣ್ಣ ಲಾಂಗ್ ಹಿಡಿದರೂ craze, ಕಾಫಿ ಕಪ್ ಹಿಡಿದರೂ craze ಅಂದಿದ್ದರು. ರಾಮ್ ಗೋಪಾಲ್ ವರ್ಮಾ ಮೆಚ್ಚುಗೆಯಾಗೋದೇ ಇಂಥ ಚಿಕ್ಕ ಚಿಕ್ಕ detailed storytelling ಕಾರಣದಿಂದ. ಹೆಚ್ಚು ಕಮ್ಮಿ ಎಲ್ಲರೂ ಕಾಫಿ / ಟೀ ಕುಡಿತಾರೆ. ಕೆಲವರು ಕಪ್ಪಿನಿಂದ ಕುಡಿದರೆ, ಇನ್ನೂ ಕೆಲವರು ಸಾಸರ್ ಗೆ ಸುರಿದುಕೊಂಡು ಕಾಫಿ ಹೀರುತ್ತಾರೆ, ಅದು ಅವರವರ ಅಭಿರುಚಿಗೆ ಬಿಟ್ಟಿದ್ದು. ಅದರಲ್ಲೂ, ಚಳಿಗಾಲದಲ್ಲಿ ಬಿಸಿ ಬಿಸಿ ಕಾಫಿ / ಟೀ ಕಪ್ಪನ್ನು ಬೆರಳಿಗೆ, ಕೈಗೆ, ಕೆನ್ನೆಗೆ ತಾಕಿಸಿಕೊಂಡು ಬಿಸಿ ಕಾಯಿಸಿಕೊಳ್ಳುವ ಮಜಾ ಕಾಫಿ ಹಾಗೂ ಟೀ ಪ್ರಿಯರಿಗೇ ಗೊತ್ತು. ಟೀ ಅನ್ನು ಸಾಸರ್ ಗೆ ಸುರಿದುಕೊಂಡು ಕುಡಿಯುವ ಅಮಿತಾಭ್ ಬಚ್ಚನ್ ಶೈಲಿ ಇದೇ RGV ಅವರ Sarkar ಚಿತ್ರದಲ್ಲಿ ಸದ್ದು ಮಾಡಿತ್ತು, ಈಗ ಅದರದೇ ಇನ್ನೊಂದು ಆಯಾಮ ಸೌಂಡು ಮಾಡುತ್ತಿದೆ

ಸಾಂದರ್ಭಿಕ ಚಿತ್ರ: ಕಿಲ್ಲಿಂಗ್ ವೀರಪ್ಪನ್ 

ಕಿಲ್ಲಿಂಗ್ ವೀರಪ್ಪನ್ ಚಿತ್ರದ ಪಾತ್ರಗಳ ವಿಭಿನ್ನ mannerisms ಬಗ್ಗೆ ಹೇಳ್ತಾ ಇದ್ದೆ, ಅದರಲ್ಲಿ ಕೆಲವು ತುಂಬಾ ಹೊಸತು. ಒಂಟಿ ಕಣ್ಣಿನ ಗನ್ ಸಪ್ಲೈಯರ್ ವೀರಪ್ಪನ್ ಜೊತೆ ಡೀಲ್ ಕುದುರಿಸುವಾಗ ಹೊಸದಾಗಿ ಬಂದ ಕದಾನಿ ಕಡೆಯವರಿಗೆ ಸೂಚನೆಗಳನ್ನು ಕೊಡುವುದು, ಕುಮಾರ್ ಪಾತ್ರಧಾರಿ ತೊದಲುವ ಹಾಗೆ ಬಿಟ್ಟು ಬಿಟ್ಟು ಮಾತನಾಡುವುದು, ವೀರಪ್ಪನ್ ಸಹಚರನೊಬ್ಬ ಕೊಲೆ ನೆಡೆಯುವಾಗ ಎಲೆ ತಿನ್ನುತ್ತಾ ಕುತೂಹಲವಾಗಿ ನೋಡುವುದು, ಮರಗಳ ಮರೆಯಲ್ಲಿ ಪೊಲೀಸರಿಗಾಗಿ ಹೊಂಚು ಹಾಕಿದ್ದ ವೀರಪ್ಪನ್ ಪಕ್ಕಕ್ಕೆ ಥೂ ಅಂತ ಉಗಿಯೋದು, ಇತ್ಯಾದಿ. ಎಲ್ಲಾ ದೃಶ್ಯಗಳು ಕಥೆಯ ರೂಪದಲ್ಲಿ ಹೇಳುವಾಗ ಯಾರೂ ಎಲ್ಲೂ ಹೇಳೋದಿಲ್ಲ, ಆದರೆ ದೃಶ್ಯ ಕಥಾ ನಿರೂಪಣೆಯಲ್ಲಿ ಪಾತ್ರಗಳು ಮನದಲ್ಲಿ ಗಟ್ಟಿಯಾಗಿ ನೆಲೆಯೂರಲು ಇಂಥ ಚಿಕ್ಕ ಪುಟ್ಟ ಡೀಟೇಲ್ ಗಳೇ ಕಾರಣ. ಕೊನೆಯದಾಗಿ ಹೇಳೋದಾದ್ರೆ 2016 ರ ಸಿನಿಮಾ ವೀಕ್ಷಣೆ ಪ್ರಯಾಣ ಶುರುಮಾಡಲು ಕಿಲ್ಲಿಂಗ್ ವೀರಪ್ಪನ್ ಚಿತ್ರ ಒಂದು ಒಳ್ಳೆಯ ಆರಂಭ.
ಪೋಸ್ಟ್ ಮಾರ್ಟಂ ರಿಪೋರ್ಟ್ (ಮುಗಿಸುವ ಮುನ್ನ): ವೀರಪ್ಪನ್ ಅಟ್ಟಹಾಸದ ಬಗ್ಗೆ ಇನ್ನೊಂದು ಚಿತ್ರ ಇದೆ, ಅದು .ಎಂ.ಆರ್.ರಮೇಶ್ ನಿರ್ದೇಶನದ ಅಟ್ಟಹಾಸ. ಫಿಲಂ ಕೂಡ ತುಂಬಾ ಚೆನ್ನಾಗಿತ್ತು, ಆದರೆ ಹಿಟ್ ಆಗಲಿಲ್ಲ ಅಂತ ನಮ್ 'ಬಾಸು' ಹೇಳಿದರು. ಚಿತ್ರ ನಾನು ಪೂರ್ತಿ ನೋಡಿಲ್ಲ, ಕೊನೆ 20 ನಿಮಿಷ ಮಾತ್ರ ನೋಡಿದ್ದೇನೆ. ಅದರಲ್ಲಿ ವೀರಪ್ಪನ್ ಆರಂಭದಿಂದ ಹಿಡಿದು, ವರನಟ ರಾಜ್ ಕುಮಾರ್ ಅವರ ಕಿಡ್ನಾಪ್ ಒಳಗೊಂಡು, ವೀರಪ್ಪನ್ ಸಾಯುವಲ್ಲಿನ ವರೆಗಿನ ಪೂರ್ಣ ಚಿತ್ರಣ ಇದೆ. ಅದರ ಕೊನೆ ದೃಶ್ಯದಲ್ಲಿ ಪತ್ರಕರ್ತರೊಬ್ಬರು ಡಾ. ರಾಜ್ ಕುಮಾರ್ ಅವರನ್ನು "ವೀರಪ್ಪನ್ ಸಾವಾಗಿದೆ, ಇದರ ಬಗ್ಗೆ ನಿಮ್ ಅಭಿಪ್ರಾಯ ತಿಳಿಸಿ" ಎಂದು ಕೇಳುತ್ತಾರೆ. "ಅಭಿಪ್ರಾಯ ಅಂತ ಕೇಳಿದ್ರೆ ಏನ್ ಹೇಳೋದು, ವೀರಪ್ಪನ್ ಕೂಡ ಒಂದು ಜೀವನೇ ಅಲ್ಲವೇ?" ಎಂಬ ರಾಜ್ ಅವರ ಪ್ರಶ್ನೆಗೊಂದಿಗೆ ಚಿತ್ರ ಕೊನೆಯಾಗುತ್ತದೆ. ಅದೇ ವಿಷಯದ ಕುರಿತ ಕಿಲ್ಲಿಂಗ್ ವೀರಪ್ಪನ್ ಚಿತ್ರವು "ರಾಕ್ಷಸರನ್ನು ಕೊಲ್ಲೋಕೆ ಒಂದ್ ಒಂದ್ ಸಲ ನಾವೂ ಕೂಡ ರಾಕ್ಷ ಸರಾಗಬೇಕಾಗುತ್ತದೆ" ಎಂದು ಶಿವಣ್ಣ ಹೇಳುವುದರೊಂದಿಗೆ ಚಿತ್ರ ಮುಗಿಯುತ್ತದೆ. ಎರಡೂ ಚಿತ್ರಗಳು ಒಂದೇ ವಿಷಯದ ಕುರಿತೇ ಆದರೂ ಎರಡರ ಕೊನೆ ಆಯಾಮ ಮೇರೆ.

Perspectives. ಯಾವುದು ಸರಿ? ಯಾವುದು ತಪ್ಪು? ಯಾವುದು ಸತ್ಯ? ಯಾವುದು ಸುಳ್ಳು? ಅವರವರ ದೃಷ್ಟಿಕೋನದಲ್ಲಿ ನಿಂತು ನೋಡಿದಾಗ ಎಲ್ಲಾನೂ ಬದಲಾಗುತ್ತೆ.

- ಉಳಿದವರು ಕಂಡಂತೆ (2014)

3 ಕಾಮೆಂಟ್‌ಗಳು: