ಫೆಬ್ರವರಿ 14, 2017

ನಾಳೆ ನಮ್ಮದಲ್ಲ, ಪ್ರೀತಿ ನಮ್ಮದು



ಮಗಾ, ಏನು ಪ್ಲಾನ್ ಇವತ್ತು? ನೀನು ಬಿಡಪ್ಪಾ ಕಲಾಕಾರ, ಒಂದಲ್ಲ, ಮೂರು 'ಪ್ಲಾನ್' ಇರುತ್ತೆ.”

ಬೆಳಿಗ್ಗೆ ಬೆಳಿಗ್ಗೆ ರೋಧನೆ ಕೊಡುವ ಇಂಥ ಸಂದೇಶದಿಂದ ದಿನ ಆರಂಭ. ನಾವು ಒಂದು ಕಾಲದಲ್ಲಿ ಫೀಲ್ಡಲ್ಲಿ ಒಳ್ಳೆಯ ಹೆಸರು ಮಾಡಿದ್ವಿ, ಈಗ ಅರೇಂಜ್ ಮ್ಯಾರೇಜಲ್ಲಿ ಆರೆಂಜ್, ಮೂಸಂಬಿ ಥರ ಯಾರಾದರೂ ಸಿಗುವರಾ ಅಂತ hope ಇಟ್ಟುಕೊಂಡು ಎದುರು ನೋಡುತ್ತಿರುವ ಸಮಯದಲ್ಲಿ ಏನ್ ಮಗಾ ಪ್ಲಾನ್ ಅಂದರೆ ನಾವು singles ಗಳಿಗೆ ಹೊಟ್ಟೆ ಉರಿಯೋದಿಲ್ವೆ? ಅಷ್ಟು ಸಾಲದೆಂಬಂತೆ ಎರಡು ಮೂರು ಪ್ಲಾನ್ ಇಟ್ಟಿರ್ತೀನಂತೆ!! ನಮ್ ಹುಡುಗರಿಗೆ ನಮ್ ಮೇಲೆ ಇರುವ ಕಾನ್ಫಿಡೆನ್ಸ್ ನೋಡಿ ನಗುವುದೋ ಅಳುವುದೋ ನೀವೇ ಹೇಳಿ ಎಂಬಂತಾಗಿದೆ. Anyway, ಅನ್ವಯಿಸುವ ಎಲ್ಲರಿಗೂ Happy Valentine's Day.

ಸಾಂದರ್ಭಿಕ ಚಿತ್ರ: ಲೂಸಿಯಾ

ಪ್ರತಿ ವರ್ಷ ಸಂಕ್ರಾಂತಿ ಬಂದಾಗ, ಬೆಳೆ ಕಟಾವಿಗೆ ಬರುವುದು, ರಾಸುಗಳ ಪೂಜೆ ಮಾಡುವುದು, ಸಂಕ್ರಾಂತಿ ಮಾಡೋಣ some-ಕ್ರಾಂತಿ ಎಂಬ forward message ಗಳು ಸಾಮಾನ್ಯ. ಅಂತೆಯೇ ಫೆಬ್ರವರಿ 14 ಪ್ರೇಮಿಗಳ ದಿನ ಲಾಲ್ ಬಾಗ್ ಅಲ್ಲಿ ಭರ್ಜರಿ ಜನಸಂದಣಿ ಅಂತೆ, I'm proud to be single, Happy Independence Day to all Singles, ಪ್ರೇಮ ಪ್ರೀತಿ ನಮ್ಮುಸಿರು ಎಂಬ couples ಫೋಟೋಗಳು ಸಾಮಾನ್ಯ. ಅದರಂತಯೇ ನಮ್ ಹುಡುಗ ಸರ್ಕಾರ್ “I'm proud to be single” ಎಂಬುವಂತೆ ಸ್ಟೇಟಸ್ ಹಾಕಿದ್ದರು. ನಾವು ಗೊತ್ತಲ್ಲಾ, Jack of all, Master of none ಎಂಬಂತೆನೂರೂ ಜನ್ಮಕೂ, ನೂರಾರು ಜನ್ಮಕೂಎಂದು ಹಾಡಿದ್ದೇನೆ ಕೂಡ, ಪ್ರೀತಿ ಪ್ರೇಮ ಎಲ್ಲಾ ಪುಸ್ತಕದ ಬದನೆಕಾಯಿ ಎಂಬ ಉಪ್ಪಿ ಡೈಲಾಗ್ ಗೆ ಜೋರು ಶಿಳ್ಳೆ ಕೂಡ ಹಾಕಿದ್ದೇನೆ. ತೀರಾ, ರೋಮಿಯೋ ಜೂಲಿಯೆಟ್, ಡಾ. ಹರೀಶ್ ಮತ್ತು ಡಾ. ನಂದಿನಿ, ಕರ್ಣ ಮತ್ತು ಸಾನ್ವಿ ಥರ iconic ಲವ್ ಸ್ಟೋರಿ ನನ್ನದಲ್ಲದಿದ್ದರೂ ಒಂದು ಮಟ್ಟಿಗೆ ಪ್ರಪಂಚವನ್ನು ಅಧ್ಯಯನ ಮಾಡಿರೋದರಿಂದ ಕೆಲವು ವಿಷಯಗಳು ಗೊತ್ತು ಎನ್ನಬಹುದು. ಅನುಭವದ ಮೇಲೆ ಸಿಂಗಲ್ ಆಗಿರೋದು ಸಮುದ್ರದ ತೀರದಲ್ಲಿ ನಿಂತಂತೆ, ಪ್ರೀತಿ ಅಥವಾ ಮದುವೆ ಎಂಬ commitment ಅಲ್ಲಿ ಇರುವುದು ದ್ವೀಪದಲ್ಲಿ ನೆಲೆಸಿದಂತೆ ಎಂಬ analogy ನೀಡಿದ್ದೆ. ಅದನ್ನು ಇಲ್ಲಿ ವಿಸ್ತರಿಸಿ ಹೇಳುವೆ, ಓದಿ ಬಿಡಿ.


ಸಾಂದರ್ಭಿಕ ಚಿತ್ರ: 500 Days of Summer

ಎಲ್ಲಿದ್ದೆ? ಹಾ! ದ್ವೀಪದಲ್ಲಿ! ಪ್ರೀತಿ ಅಥವಾ ಮದುವೆ ಎಂಬ commitment ಗಳು ನಮ್ಮದೇ ಆದ ಒಂದು ದ್ವೀಪದಲ್ಲಿ ನೆಲೆಸಿದಂತೆ. ಅಲ್ಲಿ ಒಮ್ಮೆ ಹೋಗಿ ತಲುಪಿದ ಮೇಲೆ ನನಗೆ ನೀನು, ನಿನಗೆ ನಾನು ಎಂಬಂತೆ ಒಬ್ಬರಿಗೊಬ್ಬರು ಸಂಗಾತಿಯಾಗಿ ಬದುಕಬೇಕು. Yes, soulmate! ತಕ್ಷಣಕ್ಕೆ ಪದ ನೆನಪಾಗಲೇ ಇಲ್ಲ. Soulmate is not finding someone who loves the same bizarre cr*p you like ಎಂದು 500 Days of Summer ಚಿತ್ರದಲ್ಲಿ ಹೇಳಿದ್ದಾರೆ. ಅದರನ್ವಯ ಒಂದು ಜೀವನ ಪೂರ್ತಿ ನಮ್ಮ ಜೊತೆ ಏಗುತ್ತಾ ಬದುಕುವ ಒಂದು ಜೀವ ಹುಡುಕುವುದು ಒಂದು ಚಾಲೆಂಜ್ ಎನ್ನಬಹುದು. ರೀತಿ ಸಂಸಾರ ಎಂಬ ದ್ವೀಪದಲ್ಲಿ ಬದುಕಲು ಸಂಗಾತಿಯನ್ನು ಕೆಲವರು ತಾವಾಗಿಯೇ ಹುಡುಕಿಕೊಳ್ಳುತ್ತಾರೆ, ಅದೇ ಲವ್ ಮ್ಯಾರೇಜು. ಇನ್ನು ಕೆಲವು ಸಲ ಹುಡುಗ ಮತ್ತು ಹುಡುಗಿ ಅಪ್ಪ ಅಮ್ಮ ನಿರ್ಧಾರ ಮಾಡಿ ನೀವಿಬ್ಬರೂ ಸಂಸಾರ ಮಾಡಿ ಎಂದು ದ್ವೀಪಕ್ಕೆ ಕಳುಹಿಸಿಕೊಡುತ್ತಾರೆ, ಇದೇ ಅರೇಂಜ್ ಮ್ಯಾರೇಜು. ಲವ್ ಮ್ಯಾರೇಜ್ ಪಯಣ ಒಮ್ಮೊಮ್ಮೊ ತೀರದಿಂದ ದ್ವೀಪ ತಲುಪುವುದರೊಳಗೆ lack of commitment, ಅಪ್ಪ ಅಮ್ಮ ಬೈತಾರೆ ಎಂಬಿತ್ಯಾದಿ ಅಲೆಗಳಿಗೆ ಸಿಲುಕಿ ಹುಡುಗ ಒಂದು ದ್ವೀಪದಲ್ಲಿ ಬೇರೆ ಹುಡುಗಿ ಜೊತೆ, ಹುಡುಗಿ ಬೇರೆ ಹುಡುಗನ ಜೊತೆ ಮತ್ತೊಂದು ದ್ವೀಪದಲ್ಲಿ ಸೆಟಲ್ ಆಗಿಬಿಡುತ್ತಾರೆ. ಇದೇ ಬ್ರೇಕಪ್. ಇನ್ನೂ ಕೆಲವು ಸಂದರ್ಭಗಳಲ್ಲಿ ದ್ವೀಪ ಸೇರಿದ ಹುಡುಗ ಹುಡುಗಿ ಸಂಗಾತಿಗಳಾಗಿ ಸ್ವಲ್ಪ ಕಾಲದ ನಂತರ ತಮಗೆ ಏನೋ ಸರಿ ಹೋಗುತ್ತಿಲ್ಲ ಎಂದು ವಾಪಸ್ ತೀರಕ್ಕೆ ಅಥವಾ ಬೇರೆ ದ್ವೀಪಕ್ಕೆ ಹೊರಡಲು ಅಣಿಯಾಗುತ್ತಾರೆ. ಇದೇ ವಿಚ್ಛೇದನ ಅಥವಾ ಎರಡನೇ ಮದುವೆ. Since, that's clear, ಮೇಲೆ ಹೇಳಿದಂತೆ ಕಮಿಟ್ ಆಗಿರೋರು, ಆಗ್ತಾ ಇರೋರು ಒಂದು ಮಟ್ಟಿಗೆ ಸಮುದ್ರಯಾನ ಮಾಡಿರುತ್ತಾರೆ. ಹಾಗಾಗಿ ದಾರಿಯಲ್ಲಿ ಒಂದು ಹುಡುಗ ಹುಡುಗಿ ಕೈ ಹಿಡಿದು ನೆಡೆಯುವುದಾಗಲೀ, ಸಿನಿಮಾಗಳಲ್ಲಿ ನಾಯಕ ನಾಯಕಿಯ ರೊಮ್ಯಾಂಟಿಕ್ ದೃಶ್ಯಗಳು ಅವರಿಗೆ ತುಂಬಾ ಮಾಮೂಲಿ ಎನಿಸುತ್ತವೆ. ವಿಷಯದಲ್ಲಿ ನಿಜವಾದ ಕಷ್ಟ ಇರುವುದು ಪಾಪದ ಕುರಿಗಳಾದ ಸಿಂಗಲ್ ಹುಡುಗ ಹುಡುಗಿಯರಿಗೆ. ಕಡೆ ಹುಡುಗ / ಹುಡುಗಿ ಸಿಕ್ಕಿಲ್ಲ ಅನ್ನೋ ಗೋಳು ಒಂದು ಕಡೆ, ಜೊತೆಯಲ್ಲಿಬಾರೇ ಸಂತೆಗೆ ಹೋಗೋಣ ಬಾ, ಸಿನಿಮಾ ಟೆಂಟಲ್ಲಿ ಕೂರೋಣ ಬಾಹಾಡು ಹಾಡುತ್ತಾ couples ಓಡಾಡುವುದು ಗಾಯದ ಮೇಲೆ ನಿಂಬೆ ಹುಳಿ ಹಿಂಡಿದ ಹಾಗಾಗುತ್ತೇ. ಅದನ್ನು ointment ಹಚ್ಚಿ ವಾಸಿ ಮಾಡಿಕೊಳ್ಳುವ ರೀತಿಯೇ I'm proud to be single ಸ್ಟೇಟಸ್ ಗಳು. ಎಲ್ಲಾ ಗೊತ್ತಿರೋದೇ, ಹೊಸತೇನು ಇಲ್ವಾ ಎಂದೆನಿಸಿದ್ದರೆ, ಅಲ್ಲೇ ಇರಿ, ಈಗ ವಿಷಯಕ್ಕೆ ಬರುವೆ.

ಚಿತ್ರ ಕೃಪೆ: The Best Movie Lines
ಸಾಂದರ್ಭಿಕ ಚಿತ್ರ: Predestination
ಪ್ರೇಮಿಗಳ ದಿನ ನಮ್ಮ ಸಂಸ್ಕೃತಿ ಅಲ್ಲ, ಅದರಿಂದ ಯುಗದ ಯುವ ಸಮೂಹ ತಪ್ಪು ದಾರಿಗೆ ಹೋಗುತ್ತಿದೆ ಎಂಬ ಪರಿಕಲ್ಪನೆ ಸುಳ್ಳು. ಜಗವೇ ಒಂದು glocal village ಆಗಿರುವ ಸಂದರ್ಭದಲ್ಲಿ ಅಮೆರಿಕದಲ್ಲಿ ಲಕ್ಷ್ಮಿ ಪೂಜೆ, ಮೆಕ್ಸಿಕೊದಲ್ಲಿ ಪರ್ಷಿಯನ್ ಹೊಸ ವರ್ಷ ಆಚರಣೆ ಎಲ್ಲವೂ ಸಾಮಾನ್ಯ. ಇವತ್ತು ಬ್ಯಾನ್ ಮಾಡಬಹುದು, ಆದರೆ ನಾಳೆಯೂ ಇದೇ ಆಗುತ್ತೆ ಎಂಬುದರ ಬಗ್ಗೆ ಗ್ಯಾರಂಟಿ ನೀಡಲಾಗದು. ಅದೇ ರೀತಿ ಪ್ರೇಮಿಗಳ ದಿನ ಅಂತ ಕಂಡ ಕಂಡವರಿಗೆ ರೋಸ್ ಹಿಡಿದುಕೊಂಡು ಪ್ರಪೋಸ್ ಮಾಡೋಣ ಎಂಬ ಆಲೋಚನೆಯೂ ತಪ್ಪು, ಪ್ರೀತಿ ಮಾಡುವಂಥದ್ದಲ್ಲ, ಆಗುವಂಥದ್ದು. ಅದು ನಮ್ಮ ಕಂಟ್ರೋಲ್ ಮೀರಿ ನೆಡೆಯುವ ಒಂದು ಮಾನಸಿಕ ಕ್ರಿಯೆ. ಅಂದ, ಮಾತು, ವರ್ಚಸ್ಸು ಇವು ಕೊಂಚ ಪ್ರಭಾವ ಬೀರುವುದಾದರೂ ಯಾವ ಟೈಮಿಗೆ, ಯಾರಿಗೆ, ಎಲ್ಲಿ, ಯಾರ ಮೇಲೆ ಲವ್ ಆಗುತ್ತೆ ಅಂತ ಹೇಳೋಕೆ ಆಗಲ್ಲ. ಆಹಾರ, ವಸ್ತ್ರ ಆಶ್ರಯದ ಜೊತೆ ಹಣ ಮತ್ತು ಧೇಯ ಇಂದಿನ ಆಧುನಿಕ ಮನುಜನ ಮೂಲ ಅಗತ್ಯಗಳಾಗಿದೆ ಎನ್ನಬಹುದು. ಧೇಯ ಅಥವಾ purpose ಎಂದು ಏನು ಹೇಳುತ್ತೀವಿ, ಪ್ರತಿಯೊಬ್ಬರ ಜೀವನದಲ್ಲಿ ಅದು ಇದ್ದೇ ಇರುತ್ತದೆ, ಆಥವಾ ಇದ್ದೂ ಅವರ ಅರಿವಿಗೆ ಬಂದಿರುವುದಿಲ್ಲ. ಅಪ್ಪ ಅಮ್ಮನಿಗೆ ಸ್ವಂತ ಮನೆ ಕಟ್ಟಿಸಿಕೊಡಬೇಕು, ನನ್ನ ಹುಡುಗನಿಗೆ ಒಂದು ಚೆಂದದ ಕೈ ಗಡಿಯಾರ ಕೊಡಿಸಬೇಕು, ನನ್ನದು ಅಂತ ಒಂದು ಕಂಪನಿ ಸ್ಥಾಪನೆ ಮಾಡಬೇಕು, ಇವು purpose ಹಲವು ಪ್ರಕಾರಗಳು. ಒಬ್ಬೊಬ್ಬರಿಗೆ ಒಂದೊಂದರ ಮೇಲೆ ಆಸಕ್ತಿ. ರೀತಿಯ purpose ಅಥವಾ ಧೇಯ ಈಡೇರಿಸುವ ಪಯಣ ಕಠಿಣವಾಗಬಹುದು ಎಂದು ಮದುವೆ, ಸಂಸಾರ, ಮಕ್ಕಳು ಇತ್ಯಾದಿ ಕಲ್ಪನೆ ನಮ್ಮ ಪೂರ್ವಜರಿಗೆ ಬಂದಿರಬಹುದು. ಅದೇನೇ ಆದರೂ, ಬರುವಾಗ ಖಾಲಿ ಕೈ, ಹೋಗುವಾಗಲೂ ಏನೂ ತೆಗೆದುಕೊಂಡು ಹೋಗುವುದಿಲ್ಲ ಎಂಬ ಭಗವದ್ಗೀತೆಯ ಸಾರ ಅರಿವಿರಬೇಕಾದ್ದು ಅವಶ್ಯ. ಮನುಷ್ಯನ ಲೈಫು ಎಷ್ಟು complicated ಎಂದರೆ ನಾಳೆ ಸತ್ತರೆ ನಮ್ಮದು ಅಂತ ಒಂದು ಹಳೇ 10 ನೋಟು ಕೂಡ ತೆಗೆದುಕೊಂಡು ಹೋಗಲಾಗದು, ಹಂಗಂತಾ, ದುಡಿಯದೇ ಸಾಯುವವರೆಗೆ ಓತ್ಲಾ ಹೊಡೆದುಕೊಂಡೂ ಇರಲಾಗದು. ಆದ್ದರಿಂದಲೇ ನಾಳೆ ನಮ್ಮದಲ್ಲ, ದಿನ, ಕ್ಷಣ ನಮ್ಮದು, ಅದನ್ನು ಸಾಕಾರ ಪಡಿಸಿಕೊಳ್ಳಬೇಕು. ಪಯಣ ಸುಲಭವಾಗಿ ಸಾಗಲು ಪ್ರೀತಿಯ ಸಾಂಗತ್ಯ ಇದ್ದರೆ ಒಳ್ಳೆಯದು, ಇಲ್ಲದಿದ್ದರೂ ನೆಡೆಯುತ್ತೆ. Predestination ಚಿತ್ರದ ಸಾಲುಗಳು ಸತ್ಯ ಎನಿಸೋದು ಲೈಫು ಸ್ನೇಹ, ಪ್ರೀತಿ, ಕನಸು, ಆಕಾಂಕ್ಷೆಗಳ ಮೇಲೆ ಟ್ವಿಸ್ಟ್ ಕೊಟ್ಟಾಗಲೇ. ಜಾಸ್ತಿ ತಲೆ ತಿನ್ನದೇ ಅಂಕಣ ಮುಗಿಸುವೆ, ಪ್ರೀತಿ ಮಾಡ್ತಾ ಇರೋಗೆಲ್ಲಾ, Happy Valentine's Day again. ಸಿಂಗಲ್ ಇರೋರು, ಬನ್ನಿ ಬೈಟು ಟೀ ಹೀರುತ್ತಾ LKG UKG ಕ್ರಷ್ ಗಳ ಮೆಲುಕು ಹಾಕೋಣ. ಜೈ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ