ಫೆಬ್ರವರಿ 11, 2015

ಪ್ರಯಾಣದಿ ಕಾಣುವ peculiar ಪಾತ್ರಗಳು

ಹರಿಯೋ ನದಿಯು ಒಂದೇ ಕಡೆ ನಿಲ್ಲೋಕಾಗಲ್ಲ,
ಹುಟ್ಟಿದ ಮನುಷ್ಯ ಒಂದೇ ಕಡೆ ಬಾಳಕ್ ಆಗಲ್ಲ.


ಸಾಂದರ್ಭಿಕ ಚಿತ್ರ: ಸವಾರಿ

ಜಿಮ್ಮೀಗಲ್ಲು ಚಿತ್ರದ ತುತ್ತು ಅನ್ನ ತಿನ್ನೋಕೆ ಹಾಡು ಇಂದಿಗೂ ಹಲವರ ಫೇವರೇಟ್. ಹಾಡಿನ ಮೇಲಿನ ಸಾಲು ಮಾನವನ ಬದುಕಿನಲ್ಲಿ ಪ್ರಯಾಣ ಎಷ್ಟು ಪ್ರಮುಖವಾದುದು ಎಂದು ಪ್ರದಿಪಾದಿಸುತ್ತದೆ. ವಿವರವಾಗಿ ಹೇಳೋದಾದ್ರೆ ಪ್ರಯಾಣಕ್ಕೂ, ಪ್ರವಾಸಕ್ಕೂ ಒಂದು ಸಣ್ಣ ಅಂತರ ಇದೆ. ಕೆಲಸದ ನಿಮಿತ್ತ ಹೋಗೋದು ಪ್ರಯಾಣ, ಇರೋ ಕೆಲಸ ಬಿಟ್ಟು ಹೋಗೋದು ಪ್ರವಾಸ, ಅಷ್ಟೇ! ಪ್ರವಾಸದ ಬಗ್ಗೆಯೇ ಬೇರೆ ಅಂಕಣದ ಯೋಚನೆ ತಲೆಯಲ್ಲಿದೆ, ಅದರ ಬಗ್ಗೆ ಇನ್ನೊಮ್ಮೆ ಬರೆದು ನಿಮಗೆ ಹೇಳ್ತೀನಿ, ಸದ್ಯಕ್ಕೆ ನಮ್ ಟಾಪಿಕ್ ಪ್ರಯಾಣ. ಪ್ರಯಾಣದಲ್ಲಿ ಸಿಕ್ಕ ಕೆಲವು ಸಣ್ಣ ಕಥೆಗಳೇ ಅಂಕಣದ ಸಾರ.

ಬಸ್ ಅಥವಾ ರೈಲಿನ ಪ್ರಯಾಣ ಅಂದ್ರೆ ಅಷ್ಟೇ, ನಿಮ್ ಪಾಡಿಗೆ ನೀವು ಪ್ರಯಾಣ ಮಾಡೋದು ಸಾಧ್ಯವೇ ಇಲ್ಲ. ಒಂದು ವೇಳೆ ಬ್ರೇಕಪ್ ಆಗಿ Jab We Met ಫಿಲಂನ ಶಾಹೀದ್ ಕಪೂರ್ ಥರ ಎಲ್ಲೋ ಒಬ್ಬನೇ ಒಂಟಿಯಾಗಿ ಹೋಗಿಬಿಡೋಣ ಅನ್ನಿಸಿದರೆ ಬಸ್ ಅಥವಾ ರೈಲನ್ನು ಆಯ್ಕೆ ಮಾಡಿದ್ರಿ ಅಂದ್ರೆ ಅದರಂಥ ದಡ್ಡ ಕೆಲಸ ಇನ್ನೊಂದಿಲ್ಲ. ಯಾಕೆ ಮಾತು ಹೇಳ್ತಾ ಇದ್ದೀನಿ ಅಂದ್ರೆ privacy ಕೊಲೆಯಾಗೋದು ಜಾಗಗಳಲ್ಲಿ! ಹೊಟ್ಟೆಪಾಡಿಗಾಗಿ ದಿನಪತ್ರಿಕೆ, ಚಿಪ್ಸು, ಮಜ್ಜಿಗೆ ಮಾರುವವರಿಂದ ಹಿಡಿದು, ಸ್ವಲ್ಪ ಜರುಗಿ ಸಾರ್ ಇನ್ನೊಬ್ರು ಕೂತ್ಕೊಬಹುದು ಅನ್ನುವವರು ಕೂಡ ಸಿಗ್ತಾರೆ. ಇನ್ನೂ ಕೆಲವು ಸಲ ಚೆಂದದ ಕಾಲೇಜ್ ಹುಡುಗಿಯರು ಹೇಳದೇ ಕೇಳದೇ ತಮ್ಮ ಬ್ಯಾಗ್ ನಮ್ಮ ಜವಾಬ್ದಾರಿಗೆ ವಹಿಸಿ ಮೊಬೈಲ್ ನಲ್ಲಿ ಹಾಡು ಕೇಳ್ತಾ ನಿಂತು ಬಿಡ್ತಾರೆ. ಹಿಂಗಾದ್ರೆ ಖುಷಿನೇ, ಆದ್ರೆ ಮಿಸ್ ಆಗಿ ಒಂದೊಂದು ಸಲ ಅಂಕಲ್ ಅಂತ ಕೂಡ ಕರೆಸಿಕೊಳ್ಳಬೇಕಾಗುತ್ತೆ, ನಮ್ ವಯಸ್ಸಿನ ಹುಡುಗರಿಗೆ ಅದಕ್ಕಿಂತ ಡೊಡ್ಡ ಸಮಸ್ಯೆ ಇದೆಯಾ? ಊಹೂಂ! ದಿನಾ ಬೆಳಿಗ್ಗೆ ಮನೆಗೆ ಬಂದಿರುವ ಪೇಪರ್ ನಲ್ಲಿ ಹೇಳಿಕೊಳ್ಳುವ ಸುದ್ದಿ ಏನೂ ಇಲ್ಲವಲ್ಲ ಅಂತ ಅಲ್ಲೇ ಎಸೆದು ಬಂದಿರ್ತೀವಿ, ಅದೇ ಬಸ್ ಅಲ್ಲಿ ಯಾರಾದ್ರೂ ಪೇಪರ್ ಓದುತ್ತಾ ಇದ್ದಾಗ, ಅರೆರೇ ಅವ್ರು ಬೇಜಾರಾದ್ರೂ ಅಡ್ಡಿ ಇಲ್ಲ ಪೇಪರ್ ಕೇಳಿ ಬಿಡೋಣ ಅಂದ್ಕೊಂಡು ಕೇಳಿರ್ತೀವಿ. ಒಂದು ಲೆಕ್ಕದಲ್ಲಿ ಈಗ ಇನ್ನೊಬ್ಬರ ಪ್ರೈವಸಿನ ನಾವು ಭಂಗ ಮಾಡಿದ ಹಾಗಾಯ್ತು. ಬಸ್ ನಿಧಾನವಾಗಿ ಹೋಗ್ತಿದೆ ಅಂತ ಗಲಾಟೆ ಮಾಡುವವರು, ಟೋಲ್ ಬೂತ್ ಮುಂತಾದ ಕಡೆ ನಿಲ್ಲಿಸಿದಾಗ ಪ್ರಕೃತಿಯ ಫೋನ್ ಕಾಲ್ ಉತ್ತರಿಸೋಕೆ ಹೋಗೋರು (ಅರ್ಥ ಆಯ್ತು ತಾನೆ?!), ನಿಂತು ನಿಂತು ಸಾಕಾಗಿ ನೀವು ಎಲ್ಲಿ ಇಳಿಯೋದು ಅಂತ ಇರೋರನ್ನೆಲ್ಲಾ ಕೇಳುವವರು ಸರ್ವೇ ಸಾಮಾನ್ಯ.

ಒಂದು ಸಲ ಬೆಂಗಳೂರಿಗೆ ನಮ್ ಅಪ್ಪ, ಅಮ್ಮ ಮತ್ತು ನಮ್ ಕಸಿನ್ ಜೊತೆ ಸಿಇಟಿ ಕೌನ್ಸಿಲಿಂಗ್ ಗೆ ಬಂದಿದ್ದೆ. ಬೆಂಗಳೂರನ್ನು ಬರೀ ಫಿಲಂ ಅಲ್ಲಿ ನೋಡಿದ್ದ ನನಗೆ, ಅವನೇ ದಾರಿ ದೀಪ. ಅವನು ಇಳಿರಿ ಅಂದ ಕಡೆ ಇಳಿಯೋದು, ಹತ್ತು ಅಂದ ಬಸ್ ಅನ್ನು ಹತ್ತೋದಷ್ಟೇ ನಮ್ ಕೆಲಸ. ಹಿಂಗಿದ್ದಾಗ ಒಂದು ಸಲ ಮಲ್ಲೇಶ್ವರದ 18ನೇ ಕ್ರಾಸಲ್ಲಿ ಯಾವುದೋ ಬಸ್ ಹತ್ಕೊಂಡ್ವಿ. ನಮ್ ಅಪ್ಪ-ಅಮ್ಮನಿಗೆ ಹೆಂಗೋ ಸೀಟು ಸಿಕ್ಕಿ ಬಿಡ್ತು. ನಂಗೂ ನನ್ ಅಣ್ಣನಿಗೂ (ಅದೇ ಕಸಿನ್, ನಮ್ ದೊಡ್ಡಪ್ಪನ ಮಗ, ನನಗೆ ಅಣ್ಣ ಅಂತ ಕರೆದು ಅಭ್ಯಾಸ) ಸೀಟ್ ಸಿಗಲಿಲ್ಲ. ಇಬ್ರೂ ಕಂಬಕ್ಕೆ ಒರಗಿ ಏನೇನೋ ಮಾತಾಡ್ತಾ ಇದ್ವಿ. ನನಗೆ ಮೊದ್ಲೇ ಬೆಂಗಳೂರು ಅಂದ್ರೆ ಏನೋ ಕೆಟ್ಟ ಕುತೂಹಲ, ಸಿನಿಮಾ ಪೋಸ್ಟರ್ ಗಳು, ಮಾಲ್-ಅಂಗಡಿಗಳ ಬೋರ್ಡ್, ಮತ್ತು ಸುಳ್ಳು ಯಾಕೆ ಹೇಳೋಣ, ಬೆಂಗಳೂರು ಹುಡುಗಿಯರನ್ನ ಕಿಟಕಿಯಿಂದ ನಮ್ ಅಣ್ಣನಿಗೆ ಗೊತ್ತಾಗದ ಹಾಗೆ ಕಷ್ಟಪಟ್ಟು ನೋಡ್ತಾ ಇದ್ದೆ. ಓದುವ ವಿಷಯವಾಗಿ ಅಷ್ಟು ಕಷ್ಟ ಪಟ್ಟಿದ್ರೆ ಇಷ್ಟು ಹೊತ್ತಿಗೆ ಎಲ್ಲೋ ಇರ್ತಿದ್ದೆ, ಅದು ಬೇರೆ ಮಾತು! ಯಾವುದೋ ಸ್ಟಾಪ್ ಹತ್ರ ಮಧ್ಯವಯಸ್ಸಿನ ಒಬ್ರು ಹೆಂಗಸು ಬಸ್ ಹತ್ತಿದರು. ಅಲ್ಲಿ ಇಲ್ಲಿ ಸೀಟು ಹುಡುಕಿದ ಅವ್ರಿಗೆ ನಮ್ ಅಪ್ಪ ಲೇಡೀಸ್ ಸೀಟಲ್ಲಿ ನಮ್ ಅಮ್ಮನ ಜೊತೆ ಕೂತಿದ್ದು ನೋಡಿ ಏನು ಅನ್ನಿಸಿತೋ ಏನೋ, ಸ್ವಲ್ಪ ಕೂಗಾಡಿ ಸೀಟಿಂದ ಎದ್ದೇಳಿಸಿ ಅವರು ಕೂತ್ಕೊಂಡ್ರು. ಬೇರೆ ವಿಧಿಯಿಲ್ಲದ ಅಪ್ಪ ನಮ್ ಬ್ಯಾಚುಲರ್ ಸಂಘದ ಹತ್ರ ಬಂದ್ರು. Technically, ನಮ್ ಅಪ್ಪಾಜಿಗೆ ಹಿಂಗಾಯ್ತು ಅಂತ ಬೇಜಾರಾಗಬೇಕು. ಆದ್ರೆ ಅವತ್ತು ನಾನು ಮತ್ತು ನನ್ನಣ್ಣ ಸಿಕ್ಕಾಪಟ್ಟೆ ನಕ್ಕಿದ್ವಿ. ವಿಚಿತ್ರ ಏನಪ್ಪ ಅಂದ್ರೆ, ಅವತ್ತು ಯಾಕೆ ನಾವು ಇಬ್ರೂ ಪರಿ ನಕ್ಕಿದ್ವಿ ಅಂತ ಯೋಚನೆ ಮಾಡಿದಾಗೆಲ್ಲಾ ನಗು ಬರುತ್ತೆ.

ಸಾಂದರ್ಭಿಕ ಚಿತ್ರ: ಡ್ಯೂ ಡೇಟ್

ನನ್ನ ಪ್ರಯಾಣದ most funny incident ಅದಲ್ಲ, ಇದು. ಒಂದು ಸಲ ಚಿತ್ರದುರ್ಗದಿಂದ ಶಿವಮೊಗ್ಗಕ್ಕೆ ಹೋಗ್ತಾ ಇದ್ದೆ. As usually ಒಬ್ನೇ ಹೋಗ್ತಾ ಇದ್ದೆ. ಯಾವ್ದಾದ್ರೂ ಹುಡುಗಿ ಬಂದು ಪಕ್ಕದಲ್ಲಿ ಕುಳಿತುಕೊಳ್ಳಲಿ ದೇವರೇ ಅಂತ ಎಷ್ಟೋ ಸಲ ಪ್ರಾರ್ಥನೆ ಮಾಡಿದ್ದೂ ಉಂಟು. ಅದೆಲ್ಲಾ ನಮ್ ಊರಿನ ಕಡೆ ಆಗಲ್ಲ ಬಿಡು ಅಂತ ಸುಮ್ಮನಾಗಿದ್ದೂ ಅಯಿತು. ಒಂದು ಸಲ ಹಿಂಗಾಯ್ತು, ಹೊಳಲ್ಕೆರೆಯ ಬಳಿ ಮಲ್ಲಾಡಿಹಳ್ಳಿ ಅನ್ನೋ ಊರಿಗೆ ಹೋಗೋಕೆ ಬಸ್ diversion ತಗೊಳ್ತು. ಇದೊಳ್ಳೆ ಶೆಕೆ ಗುರೂ, ಹೊಳಲ್ಕೆರೆಯಿಂದ ಸೀದಾ ಚೆನ್ನಗಿರಿಗೆ ಹೋಗೋದು ಬಿಟ್ಟು ಸೈಡ್ ಸರ್ಕಸ್ ಯಾಕೆ ಅಂತ ಮನಸಲ್ಲೇ ಬೈಕೊಂಡೆ. ಊರಲ್ಲಿ ಬಹಳ ಜನ ಕಾಲೇಜ್ ಹುಡುಗರೂ, ಹುಡುಗಿಯರು ಬಸ್ ಹತ್ತಿದರು. ನಾನು ನನ್ನ ಪಾಡಿಗೆ ಕಿವಿಗೆ earphones ಸಿಕ್ಕಿಸಿಕೊಂಡು ಹಾಡು ಕೇಳ್ತಾ ಇದ್ದೆ. ಬಸ್ ಹೊರಟಿತು. ಕಿಟಕಿಯ ಹೊರಗೆ ನೋಡಿ ಕಡೆ ನೋಡುವ ಹೊತ್ತಿಗೆ ನನ್ನ ಪಕ್ಕದಲ್ಲಿ ಒಂದು ಹುಡುಗಿ ಕುಳಿತಿದ್ದಳು. ಅವಳ ಮುಖವನ್ನೇ ಸರಿಯಾಗಿ ನೋಡೋಕಾಗಲಿಲ್ಲ. ಮೊದಲೇ ನಮ್ ಕಾಲೇಜಿನಲ್ಲಿ mechanical branch ಹುಡುಗರು ಅಂದರೆ ಹುಡುಗಿಯರ ವಿಷಯದಲ್ಲಿ ಅಪ್ಪಟ ಬರಗೆಟ್ಟಿರೋರು ಅನ್ನೋ ಮಾತಿತ್ತು. ಆದ ಕಾರಣ ನಾನು gentleman ಥರ ನನ್ನ ಪಾಡಿಗೆ ನಾನು ಸುಮ್ಮನೆ ಕುಳಿತಿದ್ದೆ. ಮುಂದೆ ಯಾವುದೋ ಸೀಟಲ್ಲಿ ಕುಳಿತಿದ್ದ ಒಬ್ಬ ಸುಮಾರು 40 ವರ್ಷದ ಅಂಕಲ್ ಬಂದು, ಪರಿಚಯವೇ ಇಲ್ಲದ ಹುಡುಗಿಗೆ  "ಇಲ್ಲಿ ಯಾಕೆ ಕುಂತಿದ್ದೀಯಮ್ಮ, ಬಾ, ಮುಂದೆ ಇರೋ ನನ್ ಸೀಟಲ್ಲಿ ಕೂತ್ಕೋ" ಅಂದ್ರು. ನಖಶಿಕಾಂತ ಉರಿದುಹೋಗೋದು ಅನ್ನೋ ಮಾತಿನ ಅರ್ಥ ಆಗಲೇ ಗೊತ್ತಾಗಿದ್ದು. ಈವಯ್ಯನಿಗೆ ಯಾಕೆ ಸಮಾಜ ಸೇವೆ ಅಂದ್ಕೊಂಡೆ, ಇರಲಿ ಬಿಡು ನಮಿಗ್ಯಾಕೆ ಅಂತ ಸುಮ್ಮನಾಗಿದ್ದೆ. ವ್ಯಕ್ತಿ ಮತ್ತೆ ಬಲವಂತ ಮಾಡಿ ಹುಡುಗಿಯನ್ನ ತನ್ನ ಸೀಟಲ್ಲಿ ಕುಳ್ಳಿರಿಸಿ ನನ್ ಪಕ್ಕದ ಸೀಟಲ್ಲಿ ಬಂದು ಕುಳಿತುಕೊಂಡರು. ನಿಂತಿದ್ದ ಕಾಲೇಜ್ ಹುಡುಗರು ಒಳಗೊಳಗೇ ಖುಷಿ ಪಡ್ತಾ ಇದ್ರು. ಹಾಳಾಗ್ ಹೋಗ್ಲಿ ಬಿಡಪ್ಪ ಅಂತ ನಾನೂ ಕೂಡ ನಕ್ಕು ಸುಮ್ಮನಾದೆ. ಎಷ್ಟೋ ಸಲ ನಾವು ಇನ್ನೊಬ್ಬರನ್ನು ಹಾಸ್ಯ ಮಾಡಿ ನಕ್ಕಿರುತ್ತೇವೆ, ನಾವೇ ನಗೆಪಾಟಲಿಗೆ ಈಡಾದರೆ ಅದರ ಪಾಡು ನಾಯಿಪಾಡು, ಸಾರಿ, ಬದಲಾದ ಸಮಯದಲ್ಲಿ ಇಂಜಿನಿಯರ್ ಪಾಡು ಅಂದರೆ ತಪ್ಪಿಲ್ಲ. ರೀತಿಯಾಗಿ ನನ್ನ ಬಸ್ ಪ್ರಯಾಣದ most funny incident ನನ್ನ ಪಾಲಿಗೆ funny ಅಲ್ಲ. ಜೊತೆಗೆ, ನಿಮ್ಮ ಜೀವನದ ಇಂಥದ್ದೇ ಯಾವಾದಾದ್ರೂ ಕಥೆ ಇದ್ರೆ ಕಾಮೆಂಟ್ ಮಾಡಿ.


P.S.: ಬೆಂಗಳೂರು ಮತ್ತು ಮೈಸೂರಿನ ನಡುವೆ ರೈಲಿನಲ್ಲಿ ಹೋಗಬೇಕಾದ ಅವಕಾಶ ಸಿಕ್ಕರೆ ನಿಮ್ಮ earphones ಬದಿಗಿಟ್ಟು ಮದ್ದೂರು ವಡೆ ಮಾರಲು ಬರುವವರನ್ನು ಕಾಯುತ್ತಿರಿ. ಮಾತಿನಲ್ಲೇ ಮೋಡಿ ಮಾಡುವ ಇವರು ಮಾತಾಡೋ ಶೈಲಿ ನೋಡಿ ಮದ್ದೂರು ವಡೆ ತಿನ್ನಲು ಮನಸ್ಸು ಬಾರದೇ ಇರದು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ