ಜುಲೈ 10, 2015

ಆ? ಎಲ್ಲಿದ್ದೆ??: ಒಂದು ಕಿರುಬರಹ

ಸಾಂದರ್ಭಿಕ ಚಿತ್ರ Amma Nanna O Tamila Ammayi


6 ದಿನಗಳ ಟ್ರೈನಿಂಗ್ ಗಾಗಿ ಕಳೆದ ವಾರ ಬೆಂಗಳೂರಿಗೆ ಹೋಗಿದ್ದೆ. ಟ್ರೈನಿಂಗ್ ಅಂದರೆ ಪ್ರತಿದಿನ ಒಂದೂವರೆ ಗಂಟೆ ಅವಧಿಯ 4 ಕ್ಲಾಸುಗಳನ್ನು ಕೇಳಬೇಕು ಅಂತ ಮೊದಲೇ ಗೊತ್ತಾಗಿದ್ದರೆ ಹೊಟ್ಟೆ ನೋವೋ, ಮೈ ಕೈ ನೋವೋ ಆಗೋ ಅಂಥ ಕೆಲಸ ಮಾಡಬಹುದಿತ್ತು. ಅಲ್ಲಿಗೆ ಹೋದಾಗ ವಿಷಯ ಗೊತ್ತಾಯಿತು, ಆದ್ದರಿಂದ ಎಸ್ಕೇಪ್ ಆಗೋಕೆ ಯಾವ ದಾರಿಯೂ ಇರಲಿಲ್ಲ. ಒಂಥರಾ 'ಚಕ್ರವ್ಯೂಹ' ಫಿಲಂ ಅಂಬರೀಶ್ ಮತ್ತು ನಮ್ ಕಥೆ ಒಂದೇ ಅನಿಸಿತು. ಟ್ರೈನಿಂಗ್ ಅಲ್ಲಿ ಅವರೇನು ಪಾಠ ಚೆನ್ನಾಗಿ ಮಾಡಿಲ್ಲ ಅಂತ ಹೇಳುತ್ತಿಲ್ಲ, ಪಾಠ ಕೇಳೋ ವಯಸ್ಸು ನಮಿಗೆ ಆಗಲೇ ಆಗ್ಹೋಗಿದೆ ಅನ್ನೋದು ವಿಷಯ. ಕಾಲೇಜಲ್ಲಿ 50 ನಿಮಿಷಗಳ 5 ಇಲ್ಲವೇ 6 ಕ್ಲಾಸ್ ಗಳು ಇರುತ್ತಿದ್ದ ಕಾಲದಲ್ಲೇ ಎರಡನೇ ಕ್ಲಾಸ್ ಗೆ ಬಂದು ಕೊನೆ ಕ್ಲಾಸ್ ಬಂಕ್ ಮಾಡಿ ಹೋಗ್ತಾ ಇದ್ವಿ, ಇದೊಳ್ಳೆ ತಾಪತ್ರಯ ಆಯ್ತಲ್ಲಾ ಅಂತ ಯೋಚಿಸುತ್ತಿದ್ದೆ. ಅಯ್ಯೋ ಬಿಡಪ್ಪ, happenedella happendu (ಆಗಿದ್ದೆಲ್ಲಾ ಆಗ್ಹೋಯಿತು) ಅಂತ ಸುತ್ತಲೂ ಕಣ್ಣು ಹಾಯಿಸಿದೆ. ಎಲ್ಲರೂ ತುಂಬಾನೇ ಸೀರಿಯಸ್ಸಾಗಿ ಪಾಠ ಕೇಳ್ತಾ ಇದ್ರು. ಕಡೆ ದೂರದಲ್ಲಿ ಕುಳಿತಿದ್ದ ಚೆನ್ನೈ ಹುಡುಗಿಯನ್ನು ಒಂದು ಎರಡು ಸಲ ನೋಡಿದೆ ಅಷ್ಟೇ, ಅಷ್ಟರಲ್ಲಿ ಥಟ್ ಅಂತ ಹಿಂದೆ ತಿರುಗಿಬಿಟ್ಟಳು. ನಾನು ಅದಕ್ಕಿಂತ ಸ್ಪೀಡಾಗಿ ಬೋರ್ಡ್ ಕಡೆ ತಿರುಗಿ ಪಾಠ ಕೇಳೋ ಥರ ನಾಟಕ ಮಾಡೋದನ್ನು ಮುಂದುವರೆಸಿದೆ. Background ಅಲ್ಲಿ ತಲೆಯಲ್ಲಿ ಸುಮಾರು ಯೋಚನೆಗಳು ಶುರುವಾದವು. Amma Nanna O Tamila Ammayi ಚಿತ್ರದ 'ಚೆನ್ನೈ ಚಂದ್ರಮ' ಹಾಡು ಸಣ್ಣಗೆ ಕೇಳುತ್ತ್ತಿರುವಂತೆ ಹಾಸ್ಟೆಲ್ ನಲ್ಲಿ ಒಂದು ಫಿಲಂ ನೋಡಲು ಏನಿಲ್ಲ ಅಂದರೂ 10 ಜನ ಜೊತೆಯಾಗಿ ಕುಳಿತುಕೊಳ್ಳುತ್ತಿದ್ದ ದಿನಗಳು ನೆನಪಾದವು. ನಂತರ ಕ್ಲಾಸ್ ಬಂಕ್ ಮಾಡುವಾಗ ಸಿಕ್ಕಿಬಿದ್ದಾಗ ನಮ್ ಸರ್ ಒಬ್ಬರು “Where you're going? Where you're pushing your life to?” ಅಂತ ಮಾರ್ಮಿಕವಾಗಿ ಹೇಳಿದ ಮಾತುಗಳು ಹಾಗೇ ಕಿವಿಯಲ್ಲಿ ಧ್ವನಿಸಿದವು. ಇಂಜಿನಿಯರಿಂಗ್ ಸೀಟು ಸಿಕ್ಕಾಗ ಪರಿಚಯದ ಒಬ್ಬರಿಗೆಅಂಕಲ್, ಮೆಕ್ಯಾನಿಕಲ್ ಇಂಜಿನಿಯರಿಂಗ್ ಸೀಟ್ ತಗೊಂಡೆಅಂದಾಗಓಹ್, ಮೆಕ್ಯಾನಿಕಲ್ !” ಅಂತ ಹೀಯಾಳಿಸುವ ಧ್ವನಿಯಲ್ಲಿ ಮಾತನಾಡಿದ್ದು, ಅದರ ಹಿಂದೆಯೇ, ಮೊನ್ನೆ ಕೆಲಸಕ್ಕೆ ಸೇರಿದ ಹೊಸತರಲ್ಲಿ ನಮ್ಮ ಸಿಬ್ಬಂದಿಯೊಬ್ಬರುಮೆಕ್ಯಾನಿಕಲ್ ಇಂಜಿನಿಯರ್ ಆಗಿ ಬ್ಯಾಂಕಿಂಗ್ ಗೆ ಯಾಕೆ ಬಂದಿರಿ?” ಅಂತ ಆಶ್ಚರ್ಯಕರವಾಗಿ ಕೇಳಿದ್ದು ನೆನಪಾಯಿತು. (ಪಾಪ, ಇಂಜಿನಿಯರಿಂಗ್ ಅಂದರೆ ಏನೋ ಅಂದ್ಕೊಂಡಿದ್ದಾರೆ ಅವರು, ನಾವು ಕಾಲಿಟ್ಟ ಮೇಲೆ ಏನೂ ಅಲ್ಲ ಅನ್ನೋ ವಿಷಯ ಗೊತ್ತಿಲ್ಲ!) ಅದೆಲ್ಲಾ ಏನೇ ಇರಲಿ, ಏನೋ ಓದಿದೆ, ಏನೋ ಕೆಲಸ ಮಾಡ್ತಾ ಇದ್ದೀನಿ, ಲೈಫಲ್ಲಿ ಒಂದು ಗೋಲ್ ಅಂತ ಏನೂ ಇಲ್ಲ, ಎಲ್ಲಿಗೆ ಹೋಗ್ತಾ ಇದ್ದೀನಿ ಎನ್ನುವ ಹಲವಾರು ಯೋಚನೆಗಳಲ್ಲಿ ಮುಳುಗಿ oxygen ಸಿಗದಿರುವಂತ ಹಂತ ಬಂದಾಗ ಮೊಬೈಲ್ ವೈಬ್ರೇಟ್ ಆಯಿತು. ವಾಸ್ತವಕ್ಕೆ ಬಂದ ನಾನು ಮೆಸೇಜ್ ನೋಡಿದಾಗ Salary is credited ಅಂತ ಬರೆದಿತ್ತು. ಅಲ್ಲಿವರೆಗೆ ಏನು ಯೋಚನೆ ಮಾಡುತ್ತಿದ್ದೆ ಅನ್ನೋದೆ ಮರೆತುಹೋಯಿತು. ಅದೇ ಟೈಮಿಗೆ ಕ್ಲಾಸ್ ಕೂಡ ಮುಗಿಯಿತು, notepad ಎತ್ತಿಕೊಂಡು 'ಚೆನ್ನೈ ಚಂದ್ರಮ' ಹಾಡು ಗುನುಗುತ್ತ ಬಂದ ಸಂಬಳ ಖರ್ಚು ಮಾಡಲು ಸಪ್ನ ಬುಕ್ ಹೌಸ್ ಕಡೆ ಹೊರಟೆ
ಇನ್ನೂ ಇದೆ: ಓದಿದ್ದೇ ಒಂದು, ಕೆಲಸವೇ ಇನ್ನೊಂದು ಆಥವಾ ಸ್ವಂತ ಕಂಪನಿ ಮಾಡುವ ಕನಸು ಹಾಗೇ ಉಳಿಯಿತಲ್ಲ ಎಂಬ ಜಿಜ್ಞಾಸೆ ಪ್ರಾಯಶಃ ಎಲ್ಲರಿಗೂ ಇರಬಹುದು. ಅದರ ಬಗ್ಗೆಯೇ ಒಂದು ಅಂಕಣ ಸಿದ್ಧವಾಗ್ತಿದೆ. ಮತ್ತೆ ಸಿಗೋಣ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ