ಜುಲೈ 31, 2015

ಹೆಸರಲ್ಲೇನಿದೆ ಸ್ವಾಮಿ?


“What's in a name? That which we call a rose
By any other name would smell as sweet.”

ಇಂಗ್ಲಿಷ್ ಸಾಹಿತ್ಯ ಲೋಕದಲ್ಲಿ ವಿಲಿಯಂ ಷೇಕ್ಸಪಿಯರ್ ನದ್ದು ತುಂಬಾ ದೊಡ್ಡ ಹೆಸರು. ಅವನ ಕೃತಿಗಳ ಆಯ್ದ ಭಾಗಗಳನ್ನು ಹಲವೆಡೆ ಪಠ್ಯ ಪುಸ್ತಕಗಳಲ್ಲಿ ಅಳವಡಿಸಲಾಗಿದೆ ಹಾಗೂ ಅನೇಕ ಭಾಷೆಗಳಿಗೆ ಅನುವಾದಿಸಲಾಗಿದೆ. ಅವನ Romeo and Juliet ನಾಟಕವನ್ನು ಓದದಿದ್ದರೂ ಅವರ ಕಥೆಯನ್ನು ಎಲ್ಲರೂ ಬಲ್ಲರು ಎಂಬುದು ವಿಶೇಷ. ನಾಟಕದ ಒಂದು ಭಾಗದಲ್ಲಿ ಮೇಲಿನ ಸಾಲುಗಳನ್ನು ಜೂಲಿಯೆಟ್ ಅತ್ಯಂತ ಭಾವುಕಳಾಗಿ ನುಡಿಯುತ್ತಾಳೆ. ಅವರಿಬ್ಬರ ನಡುವಣ ಅನುಬಂಧಕ್ಕೆ ಹೆಸರಿನ ಹಂಗೇಕೆ ಎಂಬ ಅವಳು ಪ್ರಶ್ನಿಸುವುದನ್ನು ಇಲ್ಲೇಕೆ ಪ್ರಸ್ತಾಪಿಸುತಿದ್ದೇನೆ ಅಂತ ನಿಮಗೆ ಆಗಲೇ ಗೊತ್ತಾಗಿರಬಹುದು. ಅಂಕಣ ಹೆಸರಿನ ಕುರಿತಾದದ್ದು. ಹೆಸರಿನಲ್ಲೇನಿದೆ ಸ್ವಾಮಿ? ಅಂತ ಅಂಕಣದ ಹೆಸರು ನೋಡಿದಾಗಲೇ ಅಂಕಣ ಹೆಸರಿನ ಬಗ್ಗೆ ಅಂತ ನಮಿಗೆ ಆಗ್ಲೇ ಗೊತ್ತಾಯ್ತು. ಇಷ್ಟೆಲ್ಲಾ ಬ್ಲೇಡ್ ಹಾಕಿ ಸಿಟ್ಟಾಗದೆ ಓದು ಅಂದ್ರೆ ಹೇಗೋ ಪಿಟಿ? ಅಂತ ನೀವು ಕೇಳಬಹುದು. ಪ್ರಶ್ನೆಗೆ ಉತ್ತರ as usually ಕೊನೆಯಲ್ಲಿ ಕೊಡುವೆ.

ಹೆಸರಲ್ಲೇನಿದೆ ಸ್ವಾಮಿ? ಅಂತ ಯಾರದ್ರೂ ನನ್ನನ್ನು ಕೇಳಿದರೆಎಲ್ಲವೂ ಉಂಟು, ಆದರೆ ಎನೂ ಇಲ್ಲಅಂತ ಕನ್ನಡಕ ಸರಿ ಮಾಡಿಕೊಂಡು ಸ್ವಲ್ಪ ಸ್ಟೈಲಿಶ್ ಆಗಿ ಹೇಳಬೇಕು ಎಂಬುದು ಬಹಳ ದಿನಗಳ ಆಸೆ. ಆದರೆ ನಮ್ ದುರಾದೃಷ್ಟಕ್ಕೆ ಒಬ್ಬರೂ ನನ್ನನ್ನು ಥರ ಕೇಳಲೂ ಇಲ್ಲ, ನಾನೂ ಯಾರಿಗೂ ಥರ ಯಾರಿಗೂ ಹೇಳಲೂ ಇಲ್ಲ. ಇರಲಿ ಬಿಡಿ, ನಮ್ಮಂಥ ಮಾನಸಿಕ ಅಸ್ವಸ್ಥರ ದೈನಿಕ ಪಾಡು ಇದು. ಒಂದು ಹಳೇ ಜೋಕ್ ಹೇಳ್ತೀನಿ, ನಗು ಬರದಿದ್ದರೂ ಹ್ಹ ಹ್ಹ ಹ್ಹ ಅಂತ ಒಮ್ಮೆ ನಕ್ಕುಬಿಡಿ.
ಮೇಷ್ಟ್ರು: ಕಿವಿ ಕೇಳದೆ ಇರೋರಿಗೆ ಏನೆಂದು ಕರೆಯುತ್ತಾರೆ?
ಗುಂಡ: ಏನ್ ಬೇಕಾದರೂ ಕರಿಯಬಹುದು ಸಾರ್, ಅವರಿಗೆ ಕಿವಿ ಕೇಳಲ್ವಲ್ಲಾ!!
ಹೆಸರಿನ ಬಗ್ಗೆ ಬರೆದಿರುವ ಈ ಜೋಕ್ ಈಗ ತುಂಬಾನೇ ಸಿಲ್ಲಿ ಅನಿಸಬಹುದು. ಆದರೆ ಇಸ್ಕೂಲಲ್ಲಿ ಓದುವಾಗ ಎಲ್ಲರೂ ಬಿದ್ದು ಬಿದ್ದು ನಕ್ಕಿದ್ದೇವೆ. ಯಾಕಂದ್ರೆ ಆಗೆಲ್ಲ ಎಲ್ಲರದ್ದು ತುಂಬಾ ಡೀಸೆಂಟ್ ವ್ಯಕ್ತಿತ್ವ. ಅಯ್ಯಯ್ಯೋ, ಟಾಪಿಕ್ ಕೈ ಬಿಟ್ಟು ಹೋಗ್ತಾ ಇದೆ, focus pt, focus! 

ಒಂದು ಆಸ್ಪತ್ರೆ. ಆಗ ತಾನೇ ಜನಿಸಿದ ಮಗುವನ್ನು ನೋಡಿ ನೆರೆದಿರುವ ಎಲ್ಲರ ಮೊಗದಲ್ಲೂ ಸಂಭ್ರಮ. ಮುದ್ದಾದ ಮಗುವನ್ನು ಎತ್ತಿಕೊಂಡ ಅವಳು ಆ ಪುಟ್ಟ ಪಾದಗಳನ್ನು ಮತ್ತೆ ಮತ್ತೆ ಸ್ಪರ್ಶಿಸಿ ಪುಳಕಿತಳಾಗುತ್ತಾಳೆ. ತಾಯಿ-ಮಗು ಇಬ್ಬರೂ ಕ್ಷೇಮವಾಗಿದ್ದಾರೆಂದು ಅವನು ನಿರಾಳನಾಗುತ್ತಾನೆ. ಇಂಥ ಅಪರೂಪದ ಸಂಭ್ರಮದ ಸಮಯದಲ್ಲಿ What can possibly go wrong? ಅಂತ ನೋಡುವವರು ಯೋಚಿಸುವಷ್ಟರಲ್ಲೇ ಮಗು ಸಣ್ಣಗೆ ಅಳುತ್ತದೆ. ಅದನ್ನು ಸಮಾಧಾನ ಮಾಡಲು ಅವಳು, ಓನಮ್ಮ ಬಂಗಾರ, ಸ್ವೀಟಿ, ಅಳಬಾರದಮ್ಮ ಅಂತಾಳೆ. ಮಾತಿಗೆ ಅವನಿಗೆ ಅದ್ಯಾರು ನೆನಪಾಗ್ತಾರೋ ಏನೋ, ಸ್ವೀಟಿ ಎಲ್ಲ ಬೇಡ, ನೋಡೋಕೆ ಅಕ್ಷರಶಃ ಚಂದ್ರನ ಹಾಗಿದ್ದಾಳೆ, ಚಂದ್ರಿಕಾ ಅಂತ ಹೆಸರಿಡೋಣ, ಹಾಗೆ ಕರಿ” ಅಂತ ಅವನು ಹೇಳುತ್ತಾನೆ. ಚಂದ್ರಿಕಾ ಹೆಸರು ತುಂಬಾ ಹಳೆದಾಯಿತು ಅಳಿಯಂದ್ರೆ, ಸನಾ ಅಂತ ಇರಲಿ ಅಂತ ಅವಳ ತಂದೆ ಹೇಳುತ್ತಾರೆ. ಅಲ್ಲಿಂದ ಮುಂದಕ್ಕೆ ಅವರೊಂದು ಹೆಸರು ಹೇಳಿ, ಅದನ್ನ ಇವರು ಜರಿದು, ಇವರು ಒಂದು ಹೆಸರು ಸೂಚಿಸಿ, ಅದನ್ನು ಅವರು ನಿರಾಕರಿಸಿ, ಕೊನೆಗೊಂದು ಹೆಸರು ಓಕೆ ಮಾಡೋದರ ಒಳಗೆ ಮಗು ಮಾತು ಕಲಿತರೂ ಆಶ್ಚರ್ಯವಿಲ್ಲ. “ಮಕ್ಕಳಿಗೆ ಹೆಸರಿಡೋದು ಸುಮ್ನೆ ಅಲ್ಲ, ದೊಡ್ಡ ತಲೆನೋವಿನ ಕೆಲಸ ಅದುಅಂತ ನಮ್ ದೊಡ್ಡಣ್ಣ ಒಂದು ಸಲ ಹೇಳಿದ್ದ. ಮೊದಲೇ ಒಂದೇ ವಾಕ್ಯದಲ್ಲಿ ಉತ್ತರಿಸೋ ಮಕ್ಕಳು ನಾವು ಖಂಡಿತಾ ಅಲ್ಲ, ಆದ್ದರಿಂದ ಚಿಕ್ಕ ಉಪಕಥೆ.
ಸಾಂದರ್ಭಿಕ ಚಿತ್ರ: ಲೈಫು ಇಷ್ಟೇನೇ!

ನನಗೆ ಗೊತ್ತಿರೋ ಹಾಗೇ almost ಎಲ್ಲಾ ಹುಡುಗರುಅರ್ಧ ಸೆಕೆಂಡ್ ಸಾಕು ನಂಗೆ, ಬೀಳೋದಕ್ಕೆ ಲವ್ವಿನಲ್ಲಿಟೈಪು. ಅದರೆ ಒಬ್ಬೊಬ್ಬರದು ಒಂದೊಂದು ಬಗೆಯ ಅಭಿರುಚಿ. ಲವ್ ಪದಕ್ಕೆ ತುಂಬಾ ಗಾಢವಾದ ಅರ್ಥ / ಒಳಾರ್ಥ / ಪದಾರ್ಥ / ನಿಶ್ಚಿತಾರ್ಥ ಇರುವುದರಿಂದ ಕ್ಷಣಿಕ ಆಕರ್ಷಣೆಗೆ ಲವ್ ಅಂತ ಹೇಳಿದರೆ ಸರಿ ಹೋಗಲ್ಲ, crush ಎಂದು ಹೇಳುವೆ. ಕೆಲವು ಹುಡುಗರಿಗೆ ಹೆಚ್ಚು ಮಾತನಾಡದ ಸೈಲೆಂಟ್ ಹುಡುಗಿಯರು ತುಂಬಾ ಇಷ್ಟ ಆಗ್ತಾರೆ, ಇನ್ನು ಕೆಲವರು ಅವರ ಕಣ್ಣಿನ ಸೌಂದರ್ಯಕ್ಕೆ ಕರಗಿ ಹೋಗುತ್ತಾರೆ, ಮತ್ತಿನ್ನು ಕೆಲವರು ಆಂತರಿಕ ಸೌಂದರ್ಯಕ್ಕೆ ಮಾರು ಹೋಗ್ತಾರೆ (ಗುಣ, ನಡತೆ ಇತ್ಯಾದಿ, ಬರೀ ಸಿಂಗಲ್ ಮೀನಿಂಗು). ಆದರೆ ನನಗೆ ಹುಡುಗಿಯರ ಹೆಸರಿನ ಮೇಲೆ ಏನೋ ಒಂಥರಾ ಕ್ರಷ್. ಇಂಥ ವಿಚಿತ್ರ ಖಾಯಿಲೆ ಮತ್ತಿನ್ನೆಷ್ಟು ಜನಕ್ಕೆ ಇದೆಯೋ ಗೊತ್ತಿಲ್ಲ, ನನಗಂತೂ ಇದೆ. ಕೆಲವು ಹೆಸರುಗಳನ್ನು ಕೇಳಿದರೆ ಮನದ ಬ್ಯಾಕ್ ಗ್ರೌಂಡಲ್ಲಿಎದೆಯೊಳಗೆ ಗಿಟಾರು ಡಿಂಗ್ ಡಿಂಗ್ ಡಿಂಗ್ ಡಿಂಗ್ ಅನ್ನುತ್ತೆಹಾಡು ಕೇಳಿಸುತ್ತೆ. ಅದಿತಿ, ಆಕಾಂಕ್ಷ, ಅನುರಾಧಾ, ಅನುಪಮ ಹಾಗೂ ಅಪೂರ್ವ ಹೆಸರುಗಳ ಮೇಲೆ ಇನ್ನೂ ಸ್ವಲ್ಪ ಕ್ರಷ್ ಜಾಸ್ತಿ ಎಂದೇ ಹೇಳಬಹುದು. ಪ್ರಾಯಶಃ ಎಲ್ಲಾ ಹೆಸರುಗಳು '' ಅಕ್ಷರದಿಂದಲೇ ಶುರುವಾಗುವುದು ನನ್ನ ಹೆಸರಿನ ಮೇಲೆ ನನಗಿರುವ heavy love ಪ್ರತಿಬಿಂಬವೂ ಇರಬಹುದು. ಹೋಗ್ಲಿ ಬಿಡಿ.

ಹೆಸರಿನ ಬಗ್ಗೆ ಮಾತನಾಡಿ ಆಯಿತು. ಈಗ ಅಡ್ಡಹೆಸರುಗಳ ಬಗ್ಗೆ ಒಂದಿಷ್ಟು ನೋಡೋಣ. ಸಣ್ಣವರಿದ್ದಾಗ ಇದ್ದ ಬುದ್ಧಿವಂತಿಕೆಯನ್ನೆಲ್ಲಾ ಓದೋಕೆ ವ್ಯಯಿಸುತಿದ್ದೆವು. ಆದ್ದರಿಂದ ಆಗೆಲ್ಲ ಬರೀ ಸುಮಾರಾದ ಅಡ್ಡಹೆಸರುಗಳಿರುತಿದ್ದವು: ಡುಮ್ಮ, ಕಡ್ಡಿ, ಕೋಳಿ, ಕತ್ತೆ ಇತ್ಯಾದಿ. ದೊಡ್ಡವರಾಗುತ್ತಾ ಅಡ್ಡಹೆಸರುಗಳಲ್ಲೂ ಕ್ರಿಯೇಟಿವಿಟಿ ಪ್ರಯೋಗ ಆಗಿ ಎಂತೆಂಥ ಹೆಸರುಗಳು ಬಂದವು ಅಂದರೆ, ಅಬ್ಬಾ!! ದೊಡ್ಡವರು ಯಾರಾದರೂ ಕೇಳಿಸಿಕೊಂಡರೆ ಕಿವಿ ಹೋಗೋದು ಗ್ಯಾರಂಟಿ. ಪ್ರತಿನಿತ್ಯ ನಮ್ ಹುಡುಗರೊಂದಿಗೆ ಮಾತನಾಡುವಾಗ ಹೆಸರುಗಳಿಂದಲೇ ಕರೆಯುತ್ತೇವೋ ಇಲ್ಲವೋ ಅದು ಬೇರೆ, ಆದರೆ ನಮ್ ಗ್ಯಾಂಗಲ್ಲಿ ನೋಂದಣಿಯಾಗಿರುವ ಹೆಸರುಗಳು ಇಂತಿವೆ: ಗುಡ್ಡೆ, ಜಾತ್ರೆ, ಗ್ಯಾಪ್, ವಡ್ಡ, ಬುಕಾಳಿ, ಮಚಾ/ಎಂ.ಎಲ್., ಸಕ್ರೆಬೈಲು, ಢುಕ್ಕು, 3ಜಿ, ರಾಜ ನನ್ನ ರಾಜ, Mr.Yellow, Lieutenant, ಮುಳ್ಳು, ಭಾಯ್, ಲಕ್ಕಿ, ಸಲೀಮ, ಶೇಕ್ರಿ, ಶೆಕೆ, ಗುರೂಜಿ, ಬಿಲ್ ಗೇಟ್ಸ್, ಚಿಟ್ಟಿ, ಬಾಸು, ಹಂಟರ್, ರಾಮು, ಸೋನ, ಹೆಬ್ಬುಲಿ, ಶಾದ್ರೆ, ದೈತ್ಯ, ಡ್ಯಾಮೇಜರ್, ಅಗ್ನಿ, ಚಡ್ಡಿ, ಬುಡ್ದ, ಇಟ್ಟಿಗೆ, ಭೂಪ, ಗೆಳೆಯ, ಹಸಿರು, ಉಪ್ಪಿ ಹಾಗು ತಲೆಮುಳ್ಳ. ಇವೆಲ್ಲ ನಮ್ ಗೆಳೆಯರ ಗುಂಪಲ್ಲಿರೋ ತೀರಾ weird, ವಿಚಿತ್ರ ಹಾಗು popular ಹೆಸರುಗಳು. ಇನ್ನು ನನ್ನ ವಿಷಯಕ್ಕೆ ಬಂದರೆ: ಶೆಕೆ, ಶೆಕೆ ಪಿಟಿ, ಜಾತ್ರೆ, ಜಾತ್ರೆ ಪಿಟಿ, ಬುಜ್ಜಿ, ಅಣ್ಣಪ್ಪ, ಪಾಂಡು, ಪಿಪಿಟಿ, ಗಾಬರಿ ಗೋಪಾಲಯ್ಯ, ಡೈರೆಕ್ಟರ್ ಇತ್ಯಾದಿ ಹೆಸರುಗಳಿವೆ. ನಮ್ ಹುಡುಗರ ಅಡ್ಡಹೆಸರುಗಳನ್ನು ಹಿಂಗೆ ಪಬ್ಲಿಕ್ಕಲ್ಲಿ ಬಿಟ್ಟ ನಂತರವೂ ಅವರು ನನ್ನನ್ನು ಸುಮ್ನೆ ಬಿಡಬೇಕಲ್ವಾ, ಅದಿಕ್ಕೆ ನನ್ ಹೆಸರುಗಳನ್ನೂ ಕೂಡ ಸೇರಿಸಿ ಕಾಂಪ್ರೋಮೈಸ್ ಮಾಡ್ಕೊಳ್ತಾ ಇದ್ದೀನಿ ಅಷ್ಟೇ. ಒಂದೊಂದು ಸಲ ನನ್ ಹೆಸರು ಏನಪ್ಪಾ ಇಷ್ಟು ಉದ್ದ ಇದೆ ಅಂತ ಅನಿಸುತ್ತೆ - ಅರುಣ್ ಕುಮಾರ್ ಪಿ ಟಿ. ಹೆಸರು ಹಿಡಿದು ಯಾರಾದರೂ ನನ್ನನ್ನು ಕರೆಯೋದರೊಳಗೆ ಬಾಹುಬಲಿ: The Conclusion ಬಿಡುಗಡೆಯಾದರೂ ಆಗಬಹುದು.


ಸಾಂದರ್ಭಿಕ ಚಿತ್ರ: How I Met Your Mother

 

ಸಿನಿಮಾ ಹೆಸರುಗಳ ವಿಷಯಕ್ಕೆ ಬಂದರೆ ಕೆಲವೆಲ್ಲಾ ಬೆಂಗಳೂರು-ಮೈಸೂರು ಹೈವೇಯಷ್ಟು  ಉದ್ದ: ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ, ಸೈಬರ್ ಯುಗದೊಳ್ ನವಯುವ ಮಧುರ ಪ್ರೇಮ ಕಾವ್ಯಂ, ಕಠಾರಿವೀರ ಸುರಸುಂದರಾಂಗಿ, The Curious Case of Benjamin Button, Dawn of the Planet of the Apes, Harry Potter and the Prisoner of Azkaban, Jagadeka Veerudu Athiloka Sundari ಇತ್ಯಾದಿ. ಇನ್ನು ಕೆಲವು ಯಾರಾದರೂ ಅಕ್ಷಿ ಅಂತ ಶೀನುವುದರೊಳಗೆ ಹೇಳಿಬಿಡಬಹುದು. ಉದಾಹರಣೆಗೆ: A, ಶ್!, Z, 13B, Se7en, 2012, ಇತ್ಯಾದಿ. ಅದರಲ್ಲೂ ಇನ್ನು ಕೆಲವು ಹೆಸರುಗಳನ್ನು ಕೇಳಿದರೇನೇ ಫಿಲಂ ನೋಡೋಕೆ ಅರ್ಧ ಇಂಟರೆಸ್ಟ್ ಹೋಗಿಬಿಡುತ್ತೆ: ಗೊಂಬೆಗಳ ಲವ್, ಜಂಗ್ಲಿ, ಕಡ್ಡಿಪುಡಿ, ದನ ಕಾಯೋನು ಇತ್ಯಾದಿ. ಆದರೆ ಪುಸ್ತಕಗಳ ಲೋಕದಲ್ಲಿ Don't judge a book by its cover ಎಂಬ ಮಾತಿದೆ. ಹಾಗೆ, ನಾನು ಕಂಡಂತೆ ಸಿನಿಮಾಗಳಿಗೆ Don't judge a film by its Title ಎಂದು ಸೇರಿಸಲಡ್ಡಿಯಿಲ್ಲ. ಯಾಕೆಂದರೆ ಮೇಲಿನ ಅಭಿಪ್ರಾಯದಂತೆ ನಾನು ಕಡ್ಡಿಪುಡಿ ಚಿತ್ರ ನೋಡದೆ, ಕೊನೆಗೊಂದು ದಿನ ಸಾಯುವಾಗ ಈ ಫಿಲಂ ನೋಡಿದ್ದರೆ. ಛೇ!, ಎಂಥಾ ಒಳ್ಳೆ ಫಿಲಂ ಮಿಸ್ ಮಾಡ್ಕೊಂಡೆ ಅನ್ನೋ guilt ಕಾಡುತ್ತಾ ಕಾಡುತ್ತಾ ಪ್ರಾಣ ಹೋಗುತಿತ್ತು. ಅನ್ಯಾಯವಾಗಿ ಬೇತಾಳ ಆಗುವ ಅವಕಾಶ ಫ್ರೀ ಆಗಿ ಸಿಗ್ತಾ ಇತ್ತು. “ನೂರು ಹೊಗೆ ಫಿಲಂ ನೋಡಿದರೂ ಓಕೆ, ಒಂದ್ ಒಳ್ಳೆ ಫಿಲಂ ಮಿಸ್ ಆಗಬಾರದು” ಎಂಬುದು ನಮ್ ಘೋಷವಾಕ್ಯ. ಮತ್ತಿನ್ನು ಕೆಲವು ಫಿಲಂ / ಧಾರಾವಾಹಿಗಳ ಅರ್ಧ ಮುಕ್ಕಾಲು ಕಥೆ ಅವುಗಳ ಹೆಸರಿನಲ್ಲೇ ಇರುತ್ತದೆ, ಉದಾಹರಣೆಗೆ: ಪ್ರೀತಿ ಮಾಡು ತಮಾಷೆ ನೋಡು, ಮಾಡುವೆ ಮಾಡು ತಮಾಷೆ ನೋಡು, ಸುಖ ಸಂಸಾರಕ್ಕೆ 12 ಸೂತ್ರಗಳು, How I Met Your Mother, Attarintiki Daredi, Amma Nanna O Tamil Ammayi ಇತ್ಯಾದಿ.

 

ಸಾಂದರ್ಭಿಕ ಚಿತ್ರ: ಉಪೇಂದ್ರ

 

ಕೆಲವು ಸಲ ಹೆಸರು / ಅಡ್ಡಹೆಸರು ಇಡುವಾಗ (ವ್ಯಕ್ತಿಗಳಿಗೆ ಅಥವಾ ಪಾತ್ರಗಳಿಗೆ) ತಮ್ಮ ಸೃಜನಶೀಲತೆಯನ್ನು ತೋರಿಸುವವರೆಂದರೆ ನನಗೆ ತುಂಬಾ ಇಷ್ಟ. ವಿಷಯದಲ್ಲಿ ಉಪೇಂದ್ರರ ಬಗ್ಗೆ ಒಂದಿಷ್ಟು ಹೇಳಬೇಕು. ಸಾಮಾನ್ಯವಾಗಿ ಒಂದು ಜನಸಾಮಾನ್ಯ ಕಥೆ ಬರೆಯುವಾಗ ಜನಜನಿತ ಹೆಸರುಗಳಾದ ರಾಮ, ಗೀತಾ, ರಾಜ, ಆನಂದ ಎಂಬಿತ್ಯಾದಿ ಹೆಸರುಗಳನ್ನಿಡಲಾಗುತ್ತದೆ. ಆದರೆ ಸಾಮನ್ಯ ಜನಜೀವನದಿಂದ ದೂರವಾದ ಕಥೆಗಳಲ್ಲಿ ಬಭ್ರುವಾಹನ, ಚಂಗುಮಣಿ, ರಾಜ ವಿಜಯ ರಾಜೇಂದ್ರ ಬಹದ್ದೂರ್, ಅಮರೇಂದ್ರ ಬಾಹುಬಲಿ ಇತ್ಯಾದಿ ಹೆಸರುಗಳನ್ನು ಬಳಸಲಾಗುತ್ತದೆ. ಆದರೆ ಎಲ್ಲರೂ ತಮ್ಮನ್ನು ಒಂದು ಕಥೆಯೊಂದಿಗೆ relate ಮಾಡಿಕೊಳ್ಳಲಿ ಎಂದು ಚಿತ್ರದ ಮುಖ್ಯ ಪಾತ್ರಕ್ಕೆ ನಾನು ಅಂತ ಹೆಸರಿಟ್ಟಿದ್ದನ್ನು ನೋಡಿ ನಾನು ಉಪ್ಪಿಗೆ ಮಾರುಹೋದೆ. ನಾನು ಎಂಬ ಹೆಸರಷ್ಟೇ ಸಿಂಪಲ್, ಪಾತ್ರ ತೀರಾ complicated, ಮತ್ತೆ ಮತ್ತೆ ನೋಡಿದಷ್ಟು ಇನ್ನು ಹೊಸ ಹೊಸ ವಿಷಯಗಳು ಅರ್ಥವಾಗುವುದರಲ್ಲಿ ಸಂದೇಹವಿಲ್ಲ. ಇನ್ನು ನಿರ್ದೇಶಕ ಸೂರಿ ಫಿಲಂಗಳಿಗೆ ಹೋಗುವ ಕಾಲೇಜ್ ಹುಡುಗರು ಜೊತೆಯಲ್ಲಿ ಪೆನ್ನು-ಪೇಪರ್ ಒಯ್ಯುವುದು ಒಳಿತು. ಸೂರಿ ಫಿಲಂಗಳು ಒಂಥರಾ ಅಡ್ಡಹೆಸರುಗಳ ಭಂಡಾರ ಎಂದೇ ಹೇಳಬಹುದು. ಲೂಸ್ ಮಾದ, ವಾಸನೆ ಬಾಬು, ಕಡ್ಡಿಪುಡಿ, ಗಾಳಿ, ರೆಕ್ಕೆ, ಜಂಗ್ಲಿ, ಔಷಧಿ, ಗುಡ್ಡೆ ಹಾಗು ಇನ್ನು ಸುಮಾರು ಹೆಸರುಗಳು ಅವರ ಫಿಲಂಗಳಲ್ಲಿ ಬಳಕೆಯಾಗಿರುವುದನ್ನು ಕಾಣಬಹುದು. ಚಿತ್ರಮಂದಿರದಿಂದ ಹೊರಗೆ ಬರುತ್ತಲೇ ಯಾರಾದರೂ ಪಾಪದ ಹುಡುಗನಿಗೆ ಅದರಲ್ಲೇ ಒಂದು ಹೆಸರು ಸುಲಭವಾಗಿ ಅಂಟಿಸಿಬಿಡಬಹುದು. ಮಠ ಚಿತ್ರದ ಆತ್ಮಸಾಕ್ಷಿ, ಉಳಿದವರು ಕಂಡಂತೆಯ Democracy, ಮದುವೆ ಮಾಡು ತಮಾಷೆ ನೋಡು ಚಿತ್ರದ ಜಲಂಧರ್ ಸುಬ್ಬು, ಹುಚ್ಚ ಚಿತ್ರದ ಅಭಿಷ್ಟೇ ಶೋಭಿತ ಪ್ರಸನ್ನಾಕ್ಷಿ ಹೆಸರುಗಳು ಇಂಥದೇ ಕೆಲವು ಕಾರಣಗಳಿಂದ ನೆನಪಾಗುತ್ತವೆ. ನಮ್ ಹುಡುಗ 'ರಾಮು' ಗೆ ಪರಿಚಯ ಇರೋ ರವಿ ಅನ್ನೋರು ಗೌರಿ ಹೆಸರಿನವರನ್ನು ಮದುವೆ ಆದರು. ಅವರ ಮಕ್ಕಳಿಗೆ ಅವರು ಇಟ್ಟಿದ್ದ surname: 'ಗೌರವಿ'. ಏನ್ ಸಖತ್ತಾಗಿ ಹೆಸರು ಇಟ್ಟಿದ್ದಾರಲ್ಲ ಅಂತ ಅನಿಸಿತು. ಹೆಸರು ಕೇಳಿ ಎರಡು ದಿನ ಅದರ ಗುಂಗು ಇಳಿದಿರಲಿಲ್ಲ.


ಹೆಸರುಗಳ ಬಗ್ಗೆ ಒಂದಿಷ್ಟು ಹಾಸ್ಯ ಘಟನೆಗಳಿವೆ, ಅವನ್ನು ಹೇಳಿ ಅಂಕಣಕ್ಕೆ ಇತಿಶ್ರೀ ಹಾಡಿಬಿಡುವೆ. ಪ್ರಾಣೇಶ್ ಗಂಗಾವತಿಯವರ ಹಾಸ್ಯ ವೀಡಿಯೊಗಳನ್ನು ನೀವು ನೋಡಿರಬಹುದು. ಗೊಮಟೇಶ್ವರ ಕ್ಲಾತ್ ಸೆಂಟರ್, ಮಾಹಾತ್ಮ ಗಾಂಧಿ ಹೇರ್ ಸಲೂನ್ ಎಂಬಿತ್ಯಾದಿ ಉಲ್ಟಾ ಅರ್ಥಗಳಿರುವ ಅಂಗಡಿಗಳ ಹೆಸರುಗಳ ಬಗ್ಗೆ ಅವರು ಹೇಳುವುದನ್ನು ಅವರ ಮಾತಿನಲ್ಲೇ ಕೇಳುವ ಮಜವೇ ಬೇರೆ. ಆಗಿನಿಂದ ನನಗೆ ಅಂಗಡಿಗಳ ಹೆಸರು ಓದುವ ಸೈಡ್ ಹವ್ಯಾಸ ಶುರುವಾಯಿತು. ಉಲ್ಟಾ ಅರ್ಥವಿರುವ ಅಂಗಡಿಗಳ ಹೆಸರು ಸಿಗಲಿಲ್ಲವಾದರೂ perfect ಅನಿಸುವ ಕೆಲವು ಹೆಸರುಗಳು ಕಂಡವು. ಚಿತ್ರ ಸ್ಟುಡಿಯೋ, ಚರಣ್ ಫುಟ್ ವೇರ್, ರಸವಂತಿ ಜ್ಯೂಸ್ ಸೆಂಟರ್, Double Click ಎಂಬುವ ಕಂಪ್ಯೂಟರ್ ಸೈಬರ್ ಕೇಂದ್ರ - ಇಂಥದೇ ರಿಸರ್ಚ್ ಅಲ್ಲಿ ಸಿಕ್ಕ ರಿಸಲ್ಟುಗಳು. ಇನ್ನು ಕೆಲವು ಅಂಗಡಿ / ಬ್ರಾಂಡ್ ಗಳ ಹೆಸರು ತೀರಾ ವಿಭಿನ್ನ ಹಾಗು ಶ್ಲಾಘನೀಯ. ಹಟ್ಟಿ ಕಾಪಿ, ಹೋಟೆಲ್ ನಮ್ಮೂರ ತಿಂಡಿ, ವಿಷಯದಲ್ಲಿ ನನಗೆ ತುಂಬಾ ಇಷ್ಟ ಆದಂಥವು, ಇನ್ನು ಇವೆ ಸದ್ಯಕ್ಕೆ ನೆನಪಾಗ್ತಿಲ್ಲ.

ಕೆಲವು ಮಕ್ಕಳಿಗೆ ಹುಟ್ಟಿದಾಗ ಒಂದು ಹೆಸರು ಇರುತ್ತೆ, ಶಾಲೆಗೆ ಸೇರಿಸೋ ಹೊತ್ತಿಗೆ ಬೇರೆ ಹೆಸರಿಂದ ಸೇರಿಸುವುದನ್ನು ನಾವೆಲ್ಲಾ ಕಂಡಿರುತ್ತೇವೆ. ನಮ್ ಹುಡುಗರಾಮು’ನ ಬಾಲ್ಯದ ಹೆಸರು ಪ್ರೀತಂ ಅಂತ ಇತ್ತಂತೆ. ಪ್ರೀತಂ ಅಂದ್ರೆ ಸಾಮಾನ್ಯವಾಗಿ ನಮ್ಮಂಥವರಿಗೆ ಮುಂಗಾರು ಮಳೆ ಫಿಲಂ ನೆನಪಾಗುತ್ತೆ. “ನಿನ್ನ ಹೆಸರು ಪ್ರೀತಂ ಅನ್ನೋದನ್ನು ಬಿಟ್ಟು ಈಗಿರುವ ಹೆಸರಿಗೆ ಬದಲಾಯಿಸಿದ್ದು ಒಳ್ಳೇದಾಯಿತು ಬಿಡು ಮಗಾ, ಪ್ರೀತಂ ಅಂತಾನೆ ಇದ್ದಿದ್ದರೆ ಫಿಲಂ ಅಷ್ಟು ಹಿಟ್ ಆಗ್ತಿರಲಿಲ್ಲಅಂತ ನಾವೆಲ್ಲರೂ ಆಗಾಗ ಕಿಚಾಯಿಸುತ್ತಿರುತ್ತೇವೆ.

ಅಲ್ಲಿಗೆ 'ಹೆಸರಿನಲ್ಲೇನಿದೆ ಸ್ವಾಮಿ' ಅಂಕಣ ಕೊನೆಯಾಯಿತು. ಹೆಸರಿನಲ್ಲೇನಿದೆ ಅನ್ನೋ ಪ್ರಶ್ನೆಗೆ ಈಗ ಉತ್ತರ ಕೊಟ್ಟಿದ್ದೀನಿ ಅಂದ್ಕೊಳ್ತೀನಿ. ಇನ್ನು ಡೌಟ್ ಇದ್ರೆ ತುಂಬಾ ಒಳ್ಳೇದು, ಬೇಗ ನಂಗೆ ಮೆಸೇಜ್ ಮಾಡಿ,ಎಲ್ಲವೂ ಇದೆ, ಆದರೆ ಇನ್ನು ಇಲ್ಲಎಂಬ ಮೆಸೇಜ್ ನನ್ನ ಮೊಬೈಲ್ drafts ಫೋಲ್ಡರ್ ಅಲ್ಲಿ ಯಾವಗಿಂದಲೋ ಕಾಯುತಿದ್ದೆ. ಅದಿಕ್ಕೆ ಮೋಕ್ಷ ಕೊಟ್ಟು ಬಿಡುವೆ. ನಾನು ಅಷ್ಟೊಂದು desperate ಏನಲ್ಲ, ಸುಮ್ನೆ ಮಾತಿಗ್ ಹೇಳಿದ್ದು.

P.s: ನಮ್ 'ಹೆಬ್ಬುಲಿ' ಕಾಲೇಜಲ್ಲಿ ಒಬ್ಬನಿಗೆ USB ಅಂತ ಅಡ್ಡಹೆಸರಿಟ್ಟಿದ್ದರಂತೆ. ನಾನು ಕಂಡಂತೆ most geeky and technical ಅಡ್ಡಹೆಸರು ಅದು. ಯಾಕೆ ಹೆಸರು ಇಟ್ಟಿರಬಹುದು? ಉತ್ತರ ನಿಮ್ಮ ಕಲ್ಪನೆಗೆ ಬಿಟ್ಟಿದ್ದು.

2 ಕಾಮೆಂಟ್‌ಗಳು: