ನವೆಂಬರ್ 1, 2015

ರಾಜ್ಯೋತ್ಸವದ ನೆಪದಲ್ಲಿ.. ರಾಜ್ಯೋತ್ಸವದ ನೆನಪಲ್ಲಿ..


ಬೆಳಿಗ್ಗೆ ಬೆಳಿಗ್ಗೆ ರಾಜ್ಯೋತ್ಸವದ ನೆನಪಾಗಿ ಎಚ್ಚರ ಆಯಿತು. 'ಅಂಜಿಕೆ ಬಿಡು ಕನ್ನಡ ಮಾತಾಡು' ಅಂತ ಕಾಲೇಜಲ್ಲಿ ರಾಜ್ಯೋತ್ಸವ ಆಚರಿಸಿದ ದಿನಗಳು ನೆನಪಾಗಿ ಒಂಥರಾ ಖುಷಿ ಆಯಿತು. ದಿನ ಒಟ್ಟಾಗಿ "ಜೈ ಭಾರತ ಜನನಿಯ ತನುಜಾತೆ, ಜಯಹೇ ಕರ್ನಾಟಕ ಮಾತೆ..." ಎನ್ನುತಾ ಒಟ್ಟಾಗಿ ದನಿಗೂಡಿಸಿದ ಒಬ್ಬಬ್ಬರೂ ಈಗ ಒಂದೊಂದು ಕಡೆ ಇದ್ದಾರೆ. "ಎಲ್ಲರ ಕಾಲೆಳೆಯುತ್ತೆ ಕಾಲ.." ಅನ್ನೋದು ನಿಜವಾದರೂ, ಕಾಲವೆಂಬುದು ಎಲ್ಲರ ಕಾಲು ಎಳೆದುಕೊಂಡು ಎಷ್ಟೊಂದು ದೂರ ಕರೆದುಕೊಂಡು ಹೋಯಿತಲ್ಲ ಎಂದೆನಿಸಿ ಲೈಫು ಇಷ್ಟೇನೇ ಬಿಡು ಶಿವಾ ಅಂದ್ಕೊಂಡೆ. "ಎಲ್ಲಾದರೂ ಇರು, ಎಂತಾದರೂ ಇರು, ಎಂದೆಂದಿಗೂ ನೀ ಕನ್ನಡವಾಗಿರು" ಎಂಬ ಕುವೆಂಪು ಅವರ ಸಾಲುಗಳು ನೆನಪಾಗಿ, ಎಲ್ಲೆಲ್ಲೋ ಇರುವ ನಮ್ ಎಲ್ಲಾ ಹುಡುಗರಿಗೆ ರಾಜ್ಯೋತ್ಸವದ ಕುರಿತು ಒಂದು ಸಂದೇಶ ಕಳುಹಿಸಿ ತಾಯಿ ಭುವನೇಶ್ವರಿಗೆ ಇದ್ದಲ್ಲಿಂದಲೇ ಒಂದು ಬಹುಪರಾಕ್ ಹಾಕೋಣ ಎಂದೆಣಿಸಿದೆ. (ಕರಾವಳಿ ಕನ್ನಡ: ಎಣಿಸಿದೆ = ಯೋಚಿಸಿದೆ). "ಸಹೃದಯಿ ಸನ್ಮಿತ್ರರೆಲ್ಲರಿಗೂ ಕನ್ನಡ ರಾಜ್ಯೋತ್ಸವದ ಹೃತ್ಪೂರ್ವಕ..." ಎಂದು ಟೈಪಿಸುವುದರೊಳಗೆ ಯಾರೋ ಬಾಗಿಲು ಬಡಿದರು. ಯಾರು ಅಂತ ಬಾಗಿಲು ತೆರೆದಾಗ ಮುದ್ದಣ, ಮನೋರಮೆ ಹಾಗೂ ಕವಿರತ್ನ ಕಾಳಿದಾಸ ಚಿತ್ರದ ಕುರುಬರ ಪಿಳ್ಳೆ ಕುರಿ ಕಾಯೋ ಕಾಳಿದಾಸ ನಿಂತಿದ್ದರು.

ನಾನು: ಬನ್ನಿ ಬನ್ನಿ, ಒಳಗೆ ಬನ್ನಿ

ಮುದ್ದಣ: ಏನು ಬರೆಯುತ್ತಿರುವೆ?

ನಾನು: ಮಹಾಸ್ವಾಮಿ, ಇಂದು ಕನ್ನಡ ನಾಡು ಏಕೀಕರಣವಾಗಿ ಕರ್ನಾಟಕವಾದ ದಿನ. ಆದ್ದರಿಂದ ರಾಜ್ಯೋತ್ಸವದ ಕುರಿತಾಗಿ ಸಂದೇಶ ಟೈಪಿಸುತಿದ್ದೆ.

ಮನೋರಮೆ: ಸಹೃದಯಿ? ಸನ್ಮಿತ್ರ? ಹೃತ್ಪೂರ್ವಕ? ಇದೇನು ಸಂದೇಶವೋ? ಇಲ್ಲ ಕಾವ್ಯವೂ? "ನೀರಿಳಿಯದ ಗಂಟಲೊಳ್ ಕಡುಬಂ ತುರಿಕಿದಂತಾಯಿತು". ಎಲ್ಲರಿಗೂ ಸುಲಭವಾಗಿ ತಲುಪುವ ಹಾಗೆ ಸರಳವಾಗಿ ಬರೆಯಬಹುದಲ್ಲವೇ?

ನಾನು: ರಾಜ್ಯೋತ್ಸವ, ಮನದ ಕಡಲಲ್ಲಿ ನಿತ್ಯೋತ್ಸವ. ಇದು ಹೇಗಿದೆ?

ಕಾಳಿದಾಸ: ಅದರಾಗ್ ವಸಿ ತುಂಡಾಕು

ನಾನು: ಅಯ್ಯೋ ಭಗವಂತ, ಇರೋದೇ ಒಂದು ಸಾಲು, ಅದನ್ನೂ ತುಂಡು ಹಾಕು ಅಂದ್ರೆ ಹೆಂಗೆ? 

ಸಾಂದರ್ಭಿಕ ಚಿತ್ರ: ಲೂಸಿಯಾ

"ಕಾಶಿಲಿ ಸ್ನಾನ ಮಾಡು, ಕಾಶ್ಮೀರ ಸುತ್ತಿ ನೋಡು, ಜೋಗದ ಗುಂಡಿ ಒಡೆಯ ನಾನೆಂದು ಕೂಗಿ ಹಾಡು" ಎಂದು ಹಾಡುತ್ತಾ ನನ್ನ ಫೋನ್ ರಿಂಗಣಿಸಿದಾಗ ಎಚ್ಚರ ಆಯ್ತು. ಅರೆ, ಏನಿದು ಎರಡೆರಡು ಸಲ ಎಚ್ಚರ ಆಗೋಕೆ ಹೇಗೆ ಸಾಧ್ಯ ಅಂತ ಯೋಚಿಸಿದಾಗ ಗೊತ್ತಾಯ್ತು, ಅದು ಕನಸು ಅಂತ!!

ಎಲ್ಲರಿಗೂ ಕನ್ನಡ ರಾಜ್ಯೋತ್ಸವದ... ಅರೆ ಒಂದು ನಿಮಿಷ, ಹೀಗಿರಲಿ: ರಾಜ್ಯೋತ್ಸವ, ಮನದ ಕಡಲಲ್ಲಿ ನಿತ್ಯೋತ್ಸವ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ