ನವೆಂಬರ್ 14, 2015

ಕತ್ತಲೆಯಿಂದ ಬೆಳಕಿನೆಡೆಗೆ...



ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ,

ಹೊಸ ವರುಷಕೆ ಹೊಸ ಹರುಷವ, ಹೊಸದು ಹೊಸದು ತರುತಿದೆ.


ಹಬ್ಬಕ್ಕೂ, ಹಬ್ಬಗಳ ಕುರಿತ ಹಾಡುಗಳಿಗೂ ಏನೋ ಒಂದು ಬಗೆಯ ಚೆಂದದ ನಂಟು. . ರಾ. ಬೇಂದ್ರೆಯವರ ಭಾವಗೀತೆಯನ್ನು ಕುಲವಧು ಎಂಬ ಹಳೇ ಕನ್ನಡ ಸಿನಿಮಾದಲ್ಲಿ ಬಳಸಿಕೊಂಡಿರುದನ್ನು ಕಾಣಬಹುದು. ದೀಪಾವಳಿ ಟೈಮಲ್ಲಿ ಯುಗಾದಿ ಬಗ್ಗೆ ಮಾತಾಡ್ತಾ ಇದ್ದಾನೆ, ದೀಪಕ್ಕೆ ಹಾಕೋದನ್ನ ಇವನು ಬಾಯಿಗೆ ಹಾಕೊಂಡ್ನಾ ಹೆಂಗೆ? ಅಂತ ಬಾಯಿ ಬಿಟ್ಟು ನೋಡಬೇಡಿ, ಅದನ್ನೇ ವಿವರಿಸ್ತೀನಿ, ಓದ್ಕೊಳ್ಳಿ. ನಮ್ ಟಿವಿ ಚಾನಲ್ ಆಪರೇಟರ್ ಗಳು ಇಂತಿಂಥ ಸಮಾರಂಭಕ್ಕೆ ಹಿಂಗಿಂಗೆ ಅಂತ ಒಂದು ನಿರ್ದಿಷ್ಟ ಪ್ಲೇಲಿಸ್ಟ್ ಮಾಡ್ಕೊಂಡಿರ್ತಾರೆ ಅನ್ಸುತ್ತೆ, ಗಣೇಶ ಹಬ್ಬಕ್ಕೆ ಗಣಪತಿ ಹಾಡುಗಳು, ನವರಾತ್ರಿ ಹಬ್ಬಕ್ಕೆ ದುರ್ಗಾ ಮಾತೆ ಹಾಡುಗಳು, ಇತ್ಯಾದಿ. ಹೀಗೆ ವಿವಿಧ ಬಗೆಯ ಹಾಡುಗಳು ಪ್ರಸಾರ ಆಗೋದು ಗೊತ್ತಿರುವ ವಿಷಯ. ಹಾಗಾಗಿ ಆಯಾ ಹಬ್ಬದ ದಿನ ಟಿವಿ ಆನ್ ಮಾಡಿ ಕುಳಿತರೆ ಅದೇ ಬಗೆಯ ಹಾಡುಗಳು ಕೇಳಿ ಹಬ್ಬದ ಹ್ಯಾಂಗೊವರ್ ತಲೆಗೆ ಏರಿ " ಇವತ್ತು ಹಬ್ಬ ಆಲ್ವಾ? ಥೋ, ನಮಿಗಂತೂ ರಜಾನೇ ಇಲ್ಲ, ಹೋಗಪ್ಪ, ಕರ್ಮಕಾಂಡ ಯಾರಿಗೆ ಬೇಕು" ಅಂತ ಬೈಕೊಂಡೇ ದಿನ ಶುರು ಮಾಡುವ ಹಾಗಾಗಿದೆ. ಅದೇನೇ ಆದರೂ ಹಬ್ಬಗಳಿಗೆ ನಮ್ಮ ದೇಶದಲ್ಲಿ ಒಂದು ಬಗೆಯ ವಿಶಿಷ್ಟ ಭಾವೈಕ್ಯತಾ ಗುಣವಿದೆ. ಹಬ್ಬದ ಕಾರಣದಿಂದಾಗಿ ಎಲ್ಲರೂ ತಮ್ಮೊಳಗಿನ ಬೇಧ-ಭಾವಗಳನ್ನು ಮರೆತು ಸಂಭ್ರಮಿಸುತ್ತಾರೆ. ಓಣಂ ಹಬ್ಬ ಏನು ಅಂತಾನೆ ಗೊತ್ತಿರದಿದ್ದರೂ Happy Onam ಅಂತ ನಮ್ಮ ಪರಿಚಯದ ಕೇರಳದ ಗೆಳೆಯರಿಗೆ ವಿಶ್ ಮಾಡುತ್ತೇವೆ. ಆಂಧ್ರದ ಗೆಳೆಯರಿಂದ Wishes to you on Kannada Raajyotsava ಎಂಬ ಸಂದೇಶ ಬಂದಾಗ ಒಂದು ವಿಶೇಷ ಬಗೆಯ ಖುಷಿಯಾಗದೇ ಇರದು. ಹಾಗಾಗಿ ನಮ್ಮ ದೇಶದಲ್ಲಿ ಹಬ್ಬಗಳಿಗೆ ಕೊಂಚ ವಿಶೇಷ ಸ್ಥಾನ ಇದೆ ಎನ್ನಬಹುದು.

 ಸಾಂದರ್ಭಿಕ ಚಿತ್ರ: ಪ್ರದೀಪ್ ಎಂ ಆಚಾರ್

ಒಂದು ಸಂಜೆ ಮನೆಗೆ ಬಂದಾಗ ಕರೆಂಟ್ ಇರಲಿಲ್ಲ. ಈಗ ಬರುತ್ತೆ, ಇನ್ನೊಂದು ಸ್ವಲ್ಪ ಹೊತ್ತಲ್ಲಿ ಬರುತ್ತೆ ಅಂತ ಕಾದು ಕಾದು ರಾತ್ರಿ 9 ಗಂಟೆಯಾಯಿತು. ಹೋದ್ರೆ ಹೋಯ್ತು ಬಿಡಪ್ಪ ಅಂತ ಸುಮ್ಮನಾಗಿ ಬಾಗಿಲು ಹಾಕಿ ಕಿಟಕಿ ಕೊಂಚ ತೆರೆದು ಮಲಗಿದೆ. ಅವತ್ತು ಒಂದು ವಿಚಿತ್ರ ಕನಸು ಬಿದ್ದಿತ್ತು. ಯಾವುದೋ ಜಾಗ, ಬರೀ ಕತ್ತಲು, ಅಗಲವಾದ ಊಟದ ಟೇಬಲ್ ನಲ್ಲಿ ನಾನೂ ನಮ್ ಹುಡುಗರು ಊಟ ಮಾಡ್ತಿದ್ವಿ. ಜೊತೆಯಲ್ಲಿ ಇಬ್ಬರು ಬೇರೆಯವರು ಇದ್ದರು: ಒಬ್ಬರು Dexter ಧಾರಾವಾಹಿಯ Michael C. Hall ಹಾಗೂ ಇನ್ನೊಬ್ಬರು ಯಾರೋ ಗೊತ್ತಿಲ್ಲ, ನಾನಂತೂ ಯಾವತ್ತೂ ನೋಡಿಲ್ಲ. ಏನಿದು ಎಲ್ಲಾ ವಿಚಿತ್ರವಾಗಿದೆಯಲ್ಲಾ ಅಂದುಕೊಂಡೆ. ಮರುಕ್ಷಣದಲ್ಲಿ ಯಾವುದೋ ಒಂದು ಆನೆ ನನ್ನನ್ನು ಅಟ್ಟಿಸಿಕೊಂಡು ಬಂದ ಹಾಗಾಯ್ತು. ಎದ್ದೆನೋ ಬಿದ್ದನೋ ಅಂತ ಓಡುತ್ತಿದ್ದೆ. "ಇದು ಕನಸು ಅಷ್ಟೇ, ನಿಜ ಅಲ್ಲ" ಅನ್ನೋ ರೇಡಿಯಂ ಹಾಕಿರುವ ಕಾರೊಂದು ನನ್ನ ಮುಂದೆ ಹಾದು ಹೋಯಿತು. ಜಾಗ ಯಾವುದೋ ಒಂದು ವಿದೇಶದ ಗಲ್ಲಿಯಂತಿತ್ತು. ಅಷ್ಟೊತ್ತಿಗೆ ಜೋರಾದ ಸದ್ದಾಗಿ ನನ್ನ ಬೆನ್ನಿಗೆ ಬುಲೆಟ್ ತಾಕಿದಂತಾಯಿತು. ಗಾಬರಿಯಾಗಿ ಎಚ್ಚರವಾಯಿತು. ಏನಾಯ್ತು? ಎಲ್ಲಿದ್ದೇನೆ? ಎಲ್ಲವೂ ಅಸ್ಪಷ್ಟ. ಒಂದು ಕ್ಷಣ ನಾನು ಎಲ್ಲಿದ್ದೇನೆ ಅಂತಾನೆ ಗೊತ್ತಾಗಲಿಲ್ಲ. ಅಷ್ಟೊತ್ತಿಗೆ ಮನೆ ಮುಂದೆ ಒಂದು ಕಾರು ಹಾದು ಹೋಯಿತು. ಅದರ ಬೆಳಕು ಕಿಟಕಿಯಿಂದ ಹಾದು ಮನೆಯೊಳಗೇ ಬಿದ್ದಾಗ ಸ್ವಲ್ಪ ಧೈರ್ಯ ತಂದುಕೊಂಡು, " ಏನೂ ಆಗಿಲ್ಲ, ಮನೆಯಲ್ಲೇ ಇದ್ದೀನಿ, Be strong" ಅಂತ ನನಗೆ ನಾನೇ ಹೇಳಿಕೊಂಡೆ. ನೀರು ಕುಡಿದು, ಕೊಂಚ ಸುಧಾರಿಸಿಕೊಂಡು ಮತ್ತೆ ಮಲಗಿದೆ. ಬೆಳಿಗ್ಗೆ ಎದ್ದಾಗ ಕರೆಂಟ್ ಇನ್ನು ಬಂದಿರಲಿಲ್ಲ. ಇದೊಳ್ಳೆ ಕಥೆ ಆಯ್ತಲ್ಲ ಶಿವಾ ಅಂದುಕೊಂಡು ಮೀಟರ್ ಬೋರ್ಡ್ ಹತ್ತಿರ ಹೋದಾಗ main switch ಆಫ್ ಆಗಿತ್ತು. ಮೈ ಸಚಿನ್ ತೆಂಡುಲ್ಕರ್, ರಾತ್ರಿ ಸ್ವಲ್ಪ ಹೊರಗೆ ಬಂದು ಮೀಟರ್ ಬೋರ್ಡ್ ನೋಡಿದ್ರೆ ಇದೆಲ್ಲಾ ಆಗ್ತಾ ಇರಲಿಲ್ವಲ್ಲಾ ಎಂದೆಣಿಸಿದೆ. ಬಹಳ ಹೊತ್ತಿನ ಬಳಿಕ ಯೋಚನೆ ಮಾಡಿದಾಗ ಒಂದು ವಿಷಯ ಗೊತ್ತಾಯ್ತು. ಕೆಟ್ಟ ಕನಸು ಬಿತ್ತು, ಸರಿ, ಆದರೆ ಎಚ್ಚರವಾದಾಗ ಒಂಚೂರು ಸಮಾಧಾನವಾಗಿದ್ದು ಕಾರ್ ಬೆಳಕಿನಿಂದ. ನಿಜಾ ಆಲ್ವಾ, ಕರೆಂಟ್ ಹೋಗಿತ್ತು, ಬೆಳಕು ಇರಲಿಲ್ಲ, ಅದರಿಂದ ಎದ್ದಾಗ ಸ್ವಲ್ಪ ಭಯ ಆಯ್ತು. ಬೆಳಕು ಇದ್ದಿದ್ರೆ ಇಷ್ಟೆಲ್ಲಾ ಆಗ್ತಾ ಇರಲಿಲ್ಲ ಅಂತ ಅಂದುಕೊಂಡೆ. ಅಷ್ಟೊತ್ತಿಗೆ ಮನೆ ಹತ್ತಿರದ ದೇವಸ್ಥಾನದಲ್ಲಿ ಮುಂಜಾನೆ ಪ್ರಾರ್ಥನೆ ಮೊಳಗುತ್ತಿತ್ತು. "... ತಮಸೋಮ ಜ್ಯೋತಿರ್ಗಮ" ಅನ್ನೋ ಸಾಲು ಕಿವಿಗೆ ಬೀಳ್ತಾ ಇದ್ದ ಹಾಗೇ ಥಟ್ ಅಂತ ಒಂದು ಯೋಚನೆ ತಲೆಗೆ ಬಂತು. ಬೆಳಕು ಅಂದ್ರೆ ಜ್ಞಾನ, ಬೆಳಕು ಅಂದರೆ ಸುರಕ್ಷತೆಯ ಭಾವನೆ ಮತ್ತು ಬೆಳಕು ಇದ್ದಲ್ಲಿ ಆಕ್ಸಿಡೆಂಟ್ ಗಳು ಕಡಿಮೆ. ಸ್ವಾತಂತ್ರ್ಯದ ಹೋರಾಟದ ನೆನಪುಗಳು ಮಾಸದಿರಲಿ ಅಂತ ಸ್ವಾತಂತ್ರ್ಯೋತ್ಸವ ದಿನಾಚರಣೆ ಆಚರಿಸುವ ಹಾಗೆ ಬೆಳಕಿನ ಪ್ರಾಮುಖ್ಯತೆ ಎಲ್ಲರಿಗೂ ತಿಳಿಯಲಿ ಅಂತ ನಮ್ಮ ಹಿರಿಯರು ರೂಢಿಸಿಕೊಂಡು ಆಚರಿಸುತ್ತಿರುವ ಹಬ್ಬ ದೀಪಾವಳಿ. ಹಾಗಾಗಿ ಹೀಗಾಯ್ತು. ಕೊನೆಯಲ್ಲಿ ಫಿಲಂ ಹೆಸರು - Happy Deepavali. Caption ತಮಸೋಮ ಜ್ಯೋತಿರ್ಗಮಯ. “ಏನಾದರೂ ಹೊಸ ಕಥೆ ಬರಿ, ಒಂದು ಶಾರ್ಟ್ ಮೂವಿ ಮಾಡೋಣ ಅಂತ ಹೇಳಿದ್ದಲ್ಲ ಮಗಾ, ಇದನ್ನು ಬರಿದಿದ್ದೇನೆ. ಹೆಂಗಿದೆ? ನೋಡಿ ಹೇಳು” ಅಂತ ಮೇಲಿನ ಕಥೆಯನ್ನು ನಮ್ ರನ್ನನಿಗೆ ಕಳುಹಿಸಿದ್ದೆ. ಆಗಿಂದ ಅವನ ಫೋನ್ ಸ್ವಿಚ್ ಆಫ್ ಆಗಿದೆ.


ಟ್ವಿಸ್ಟ್ ಕೊಡೋ ಸಿನಿಮಾ / ಧಾರವಾಹಿ ನೋಡಿ ನೋಡಿ ಬ್ಲಾಗ್ ನಲ್ಲೂ ಅಲ್ಲಲ್ಲಿ ಅದೇ ಛಾಯೆ ಕಾಣಿಸುತ್ತಿದೆ. ಹಾಗಾಗಿ ದೀಪಾವಳಿ ವಿಶೇಷ ಅಂತ ಒಂದು ಅಂಕಣ ಬರೆದು, ಅಂಕಣದೊಳಗೆ ಒಂದು ಕಥೆಯನ್ನು ಹೇಳಿ, ಹೀಗೆ ಟ್ವಿಸ್ಟ್ ಕೊಡುವಂತಾಯ್ತು. ಅಡಚಣೆಗಾಗಿ ಕ್ಷಮೆ ಇರಲಿ. Diwali ಅನ್ನಿ, ದೀಪಾವಳಿ ಅನ್ನಿ, ದೀಪಗಳ + ಹಾವಳಿ = ದೀಪಾವಳಿ ಅನ್ನಿ, ಏನಾದರೂ ಅನ್ನಿ, ದೀಪಾವಳಿ ಹಬ್ಬ ಹಲವು ಕಾರಣಗಳಿಂದ ವಿಶಿಷ್ಟ ಅನ್ನೋದು ನಿಜ. At the end, Happy Deepavali, ಪಟಾಕಿ ಹೊಡಿಬೇಕಾದ್ರೆ ಸ್ವಲ್ಪ ಜಾಗ್ರತೆ ವಹಿಸಿ ಅಷ್ಟೇ.

5 ಕಾಮೆಂಟ್‌ಗಳು: