ಮಾರ್ಚ್ 7, 2016

ಮನದ ಹೆದ್ದಾರಿಯಲ್ಲೊಂದು ಲಾಂಗ್ ರೈಡ್ಒಂದು ಸುಂದರ ದಿನ, ಸಮಯ ಆಗಲೇ ಹತ್ತರ (10) ಹತ್ತಿರ ಬರುತಿತ್ತು. ರನ್ನ - ಸುಮನ್ ಇಬ್ಬರೂ ಇಸ್ಕಾನ್ ಗೆ ಹೋಗಿ, ಅವಳಿಗಿಷ್ಟ ಅಂತ ಅಲ್ಲೇ ಒಂದು ಕಡೆ ಪಾನಿಪೂರಿ ತಿಂದು ಅವಳ ಮನೆ ಕಡೆ ಮರಳುತಿದ್ದರು. ಅವನಿಗೋಸ್ಕರ ಅವಳು ಆಫೀಸಿನಿಂದ 2 ಗಂಟೆ ಮುಂಚೆಯೇ ಹೊರಟಿದ್ದಳು, ಅವಳಿಗೋಸ್ಕರ ಅವನು ಎಲ್ಲೆಡೆ ಎರಡು ಹೆಲ್ಮೆಟ್ ಒಯ್ಯುತ್ತಿದ್ದ. ಇಬ್ಬರಲ್ಲಿ ಯಾರು ಯಾರನ್ನು ಹೆಚ್ಚು ಪ್ರೀತಿಸುತಿದ್ದರು ಅಂತ ಹೇಳೋದೇ ಕಷ್ಟವಾಗಿತ್ತು ನಮಗೆ. ಹಾಗೇ ಇಬ್ಬರೂ ಬೈಕಲ್ಲಿ ಬರುವಾಗ ಅವಳು ತನ್ನಿಷ್ಟದ ಹಾಡನ್ನು ಮೆಲುಧ್ವನಿಯಲ್ಲಿ ಗುನುಗುತಿದ್ದಳು, ಕಿಕ್ಕಿರಿದ ಜನಸಂದಣಿಯಲ್ಲೂ ಅವನು ಅವಳ ಹಾಡಿಗೆ ದನಿಗೂಡಿಸಿ ಅವಳನ್ನು ಆಶ್ಚರ್ಯಗೊಳಿಸುತಿದ್ದ. ಹಾಗೋ ಹೀಗೋ ನಗುತ್ತಾ, ಹಾಡುತ್ತಾ, ಮಾತನಾಡುತ್ತಾ, ಅವಳ ಮನೆ ಬಂದಿದ್ದೇ ಗೊತ್ತಾಗಲಿಲ್ಲ. ಮನಸ್ಸಿಲ್ಲದ ಮನಸ್ಸಿನಿಂದ ಅವಳು ಬೈಕಿನಿಂದ ಇಳಿದಳು. ಇನ್ನೂ ತಡವಾಗಿ ಕತ್ತಲಾಗೋ ಥರ ಇದ್ದಿದ್ದರೆ ಚೆನ್ನಾಗಿರ್ತಿತ್ತು ಅಂತ ಇವನು ಮನಸಲ್ಲೇ ಅಂದುಕೊಳ್ಳುತ್ತಿದ್ದ.

ರನ್ನ: ಗುಡ್ ನೈಟ್ ಕಣೋ

ಸುಮನ್: ಗುಡ್ ನೈಟ್ ಚಿನ್ನಿ.

ರನ್ನ: ಬರೀ ಗುಡ್ ನೈಟ್ ಅಷ್ಟೇನಾ?

ಸುಮನ್: ಚಿನ್ನಿ, ಒದೆ ತಿಂತೀಯಾ ನೋಡು!

ರನ್ನ: ಹಂಗಲ್ಲ ಕಣೋ, ಬಾಯ್ತುಂಬಾ ಚಿನ್ನಿ, ರನ್ನ ಅಂತೀಯಾ, ಮನೆ ಒಳಗೆ ಕರೆದು ಒಂದು ಲೋಟ ಬಾದಾಮಿ ಹಾಲು ಏನಾದ್ರೂ ಮಾಡಿ ಕೊಡ್ತೀಯೇನೋ ಅಂತ ಅಂದ್ಕಂಡ್ನಪ್ಪ.

ಸುಮನ್: ಅಯ್ಯೋ, ಸಕ್ಕರೆ ಖಾಲಿ ಆಗಿದೆ ಚಿನ್ನಿ.

ರನ್ನ: ನೀನು ಮಾಡಿ ಕೊಡು ಸುಮ್ನೆ, ಅದು ತಾನಾಗೆ ಸ್ವೀಟಾಗುತ್ತೆ.

ಸುಮನ್: ಆಹಾಹಾ! ಇದಕ್ಕೇನು ಕಮ್ಮಿ ಇಲ್ಲ. ಬೆಳಿಗ್ಗೆ ಬೇಗ ಬಾ ಚಿನ್ನಿ, ನಾನು ಬಾದಾಮಿ ಹಾಲು ಮಾಡ್ತೀನಿ, ನೀನು ಪಲಾವ್ ಮಾಡು, ಚೆನ್ನಾಗಿರುತ್ತೆ.

ರನ್ನ: ಹಂಗಾ? ಸರಿ, ಗುಡ್ ನೈಟ್.

ಸುಮನ್: ಗುಡ್ ನೈಟ್.

(ಅವನು ಹೋಗಿ ಆಗಲೇ 15 ನಿಮಿಷ ಆಯ್ತು, ಮನೆ ತಲುಪಿದ್ದೀನಿ ಅಂತ ಒಂದು ಮೆಸೇಜ್ ಮಾಡೋಕಾಗಲ್ವಾ ಛೇ, ಏನ್ ಹುಡುಗನಪ್ಪಾ ಅಂತ ಸುಮನ್ ಒಬ್ಬೊಬ್ಬಳೇ ಮಾತನಾಡಿಕೊಳ್ತಾ ಇದ್ದಳು. ಇತ್ತ ಕಡೆ "Reached Home, Sleep Well" ಅಂತ ಮೆಸೇಜ್ ಟೈಪಿಸಿ ಇನ್ನೇನು 'Send’ ಒತ್ತುವುದರಲ್ಲಿ ರನ್ನನ ಫೋನ್ ಆಫ್ ಆಗೋಯ್ತು. ಅಯ್ಯೋ ಕರ್ಮವೇ ಅಂತ ನೋಡಿದಾಗ ಕರೆಂಟ್ ಹೋಗಿತ್ತು, ಪವರ್ ಬ್ಯಾಂಕ್ ನಲ್ಲಿ ಕೂಡ ಚಾರ್ಜ್ ಇರಲಿಲ್ಲ. ವಾಪಸ್ ಹೋಗೋಕೆ ಬರಿ 10 ನಿಮಿಷ ಸಾಕು ಅಂತ ಅಂದಾಜಿಸಿದ ರನ್ನ ಬೈಕನ್ನು ಸುಮನ್ ಮನೆ ಕಡೆ ತಿರುಗಿಸಿ ಹೊರಟೇ ಬಿಟ್ಟ. ಇಷ್ಟು ಹೊತ್ತಾದರೂ ರನ್ನ ಯಾಕೋ ಮೆಸೇಜ್ ಮಾಡಲಿಲ್ಲ ಅಂತ ಸುಮನ್ ಫೋನ್ ಮಾಡಿ ನೋಡಿದಾಗ ಫೋನ್ ಸ್ವಿಚ್ ಆಫ್ ಆಗಿತ್ತು. ಯಾವುದಕ್ಕೂ ಒಂದ್ ಸಲ ಅವನ ಮನೆಗೆ ಹೋಗಿಬಿಡೋಣ ಅಂತ ಮನೆಗೆ ಬೀಗ ಹಾಕುವ ಹೊತ್ತಿಗೆ ರನ್ನ ತನ್ನ ಬೈಕ್ ಅನ್ನು ಪಾರ್ಕ್ ಮಾಡುತ್ತಿರುವುದನ್ನು ನೋಡಿದಳು. ಮೆಟ್ಟಿಲು ಹತ್ತಿ ಮೇಲೆ ಬರುತ್ತಿದ್ದ ರನ್ನನನ್ನು ನೋಡಿ ಸುಮನ್ ಗೆ ಎಲ್ಲಿಲ್ಲದ ಖುಷಿ. ಒಂದು ಕೈಯಲ್ಲಿ ಫೋನ್ ಹಿಡಿದು ಇನ್ನೊಂದು ಕೈಯಲ್ಲಿ ಸಕ್ಕರೆ ತುಂಬಿದ ಕವರ್ ಹಿಡಿದಿದ ರನ್ನ, ಸುಮನ್ ಳನ್ನು ನೋಡಿ ಮುಗುಳ್ನಕ್ಕ.)

ರನ್ನ: ಫೋನ್ ಆಫ್ ಆಗ್ಬಿಡ್ತು. ಅದೇ ವಿಷಯ ಹೇಳೋಣ ಅಂತ ನಾನೇ ಬಂದುಬಿಟ್ಟೆ. ಹೆಂಗಿದ್ರೂ ಸಕ್ಕರೆ ಖಾಲಿ ಅಂತ ಹೇಳಿದ್ದಲ್ವಾ, ಅದಿಕ್ಕೆ ಹಾಗೇ ಬರ್ತಾ ಕವರ್ ಹಿಡ್ಕೊಂಡು ಬಂದುಬಿಟ್ಟೆ

ಸುಮನ್: ಒಳಗೆ ಬಾ ಚಿನ್ನಿ, ಬೊಂಬಾಟಾಗಿ ಬಾದಾಮಿ ಹಾಲು ಮಾಡಿ ಮಾಡಿಕೊಡ್ತೀನಿ.

(ಇಬ್ಬರೂ ಮನೆ ಒಳಗೆ ಹೋಗುತ್ತಾರೆ. ಕ್ಯಾಮೆರಾ ವನ್ನು ನಿಧಾನಕ್ಕೆ ಬೈಕ್ ನತ್ತ ಝೂಮ್ ಮಾಡಲಾಗುತ್ತದೆ. ಹಿನ್ನಲೆಯಲ್ಲಿಪ್ರಸ್ತುತವಿದೆ, ಬಲಿಷ್ಠ ಬ್ರೇಕ್, ಅದ್ಭುತ ಮೈಲೇಜ್ ಮತ್ತು ಇನ್ನೂ ಎಷ್ಟೋ ಅತ್ಯಾಕರ್ಷಕ ಫೀಚರ್ ಗಳುಳ್ಳ ಹೊಚ್ಚ ಹೊಸ PTA Travelogue, ಈಗ ದೂರವೆಂಬುದು ದೊಡ್ಡ ವಿಷಯವೇ ಅಲ್ಲಎಂಬ ಧ್ವನಿಯೊಂದಿಗೆ ಜಾಹೀರಾತು ಮುಗಿಯುತ್ತದೆ.)

ಒಂದು ಮಾಮೂಲಿ 150CC ಇಂಜಿನ್ ಬೈಕ್, ಅದಕ್ಕೊಂದು ಚೆನ್ನಾಗಿರೋ ರೋಮ್ಯಾಂಟಿಕ್ ಜಾಹೀರಾತು ಮಾಡ್ಬೇಕು, ಒಂದೊಳ್ಳೆ ಸ್ಕ್ರಿಪ್ಟ್ ಇದ್ರೆ ಕೊಡು ಮಗಾ ಅಂತ ಯಾರಾದರೂ ಕೇಳಿದರೆ ಮೇಲೆ ಬರೆದಿರುವ ಸ್ಟೋರಿ ಗ್ಯಾರಂಟಿ ಕೊಡ್ತಾ ಇರಲಿಲ್ಲ. ಯಾಕೆಂದರೆ ಇದೇ ಕಾನ್ಸೆಪ್ಟ್ ಇರೋ ಜಾಹೀರಾತೊಂದನ್ನು ಹೀರೋ ಹೋಂಡಾ ಕಂಪನಿಯ ಯಾವುದೋ ಒಂದು ಬೈಕ್ ಗಾಗಿ ಮಾಡಿದ್ದನ್ನು ನೋಡಿದ್ದೆ. ಅಂತರ್ಜಾಲದಲ್ಲಿ ಎಷ್ಟು ಹುಡುಕಿದರೂ ವಿಡಿಯೋ ಸಿಗಲೇ ಇಲ್ಲ, ಸರಿ ಬಿಡು, ಹ್ಯಾಗೋ ಅರ್ಧಂಬರ್ಧ ನೆನಪಿದೆಯಲ್ಲ, ಅದರ ಆಧಾರದ ಮೇಲೆ ಈಗಿನ ಕಾಲಕ್ಕೆ ತಕ್ಕಂತೆ, ನನಗೆ ಗೊತ್ತಿರುವ ವ್ಯಕ್ತಿಗಳನ್ನು ಕೇಂದ್ರೀಕರಿಸಿಕೊಂಡು, ‘ನಮ್ ನೇಟಿವಿಟಿಗೆ ತಕ್ಕ ಹಾಗೆ ರೀಮೇಕ್ ಮಾಡಿಬಿಡುವ ಅಂತ ಯೋಚಿಸಿದೆ, ಅದರ ಫಲಿತಾಂಶವೇ ಮೇಲಿನ ರನ್ನ-ಸುಮನ್ ಕಥೆ. ಬುದ್ಧಿವಂತರು ರೀಮೇಕ್ ಮಾಡಬಾರದು, ದಡ್ಡರು ಸ್ವಮೇಕ್ ಮಾಡಬಾರದು ಅಂತ ಗುರುಪ್ರಸಾದ್ ಹೇಳಿದ್ದಾರೆ. ನಾನೇನು ಬುದ್ಧಿವಂತನಲ್ಲ. ಆದ್ದರಿಂದ, ಓಕೆ ಬಿಡು ಅಂತ ಬರೆದು ಮುಗಿಸಿದೆ. ಎಲ್ಲಾ ಮುಗಿದ ಮೇಲೆ ಜಾಹೀರಾತು ಸಿಕ್ಕಿಬಿಡ್ತು. ಇದು ಪಿ.ವಾಸು ಥರ ಸೃಜನಾತ್ಮಕ ರೀಮೇಕೋ, ಇಲ್ಲಾ ಉಳಿದವರ ಥರ ಕಾಪಿ ಪೇಸ್ಟ್ ರೀಮೇಕೋ ಅಂತ ನೀವೇ ಹೇಳಬೇಕು. ಚೆಂಡು ಈಗ ನಿಮ್ಮ ಅಂಗಳದಲ್ಲಿದೆ.

 
Hero Honda Splendor NXG ಜಾಹೀರಾತು 

ಬರೀ ಒಂದು ಜಾಹೀರಾತು, ಅದರಲ್ಲೂ ಬೈಕಿನ ಜಾಹೀರಾತಿನ ಬಗ್ಗೆ ಇಷ್ಟು ಹೊತ್ತು ಕೊಂಕಣ ಸುತ್ತಿರೋದನ್ನು ನೋಡಿ, ಪ್ರಾಯಶಃ ನಿಮಗೆ ಈಗಾಗಲೇ ಗೊತ್ತಾಗಿರಬಹುದು; ಇದು ವಾಹನ ಪ್ರಪಂಚದ ಬಗೆಗಿನ ಅಂಕಣ ಎಂದು. ಗೊತ್ತಾಗಿದ್ದರೂ, ಇಲ್ಲದಿದ್ದರೂ, ನಿಮ್ಮ ನಿಮ್ಮ ಅನುಕೂಲಕ್ಕೆ ತಕ್ಕಂತೆ ಹೆಲ್ಮೆಟ್ / ಸೀಟ್ ಬೆಲ್ಟ್ ಧರಿಸಿಕೊಳ್ಳಿ. It's gonna a be a long ride / drive!


ಚಿಕ್ಕವರಿದ್ದಾಗ ನಾವೆಲ್ಲರೂಸೂರ್ಯ ಯಾಕೆ ಭೂಮಿ ಸುತ್ತ ಸುತ್ತೋದಿಲ್ಲ?” ಎಂಬ ವೈಜ್ಞಾನಿಕ ಪ್ರಶ್ನೆಗಳಿಂದ ಹಿಡಿದು, “ನಾನು ಹೇಗೆ ಹುಟ್ಟಿದೆ?” ಎಂಬ advanced ವೈಜ್ಞಾನಿಕ ಪ್ರಶ್ನೆಗಳವರೆಗೂ ಏನೇನನ್ನೋ ಕೇಳಿ ಶಿಕ್ಷಕರು / ಪೋಷಕರನ್ನು ಆಶ್ಚರ್ಯಗೊಳಿಸಿರುತ್ತೇವೆ ಇಲ್ಲಾ ಮುಜುಗರಕ್ಕೀಡು ಮಾಡಿರುತ್ತೇವೆ. “ ವಿಷಯದ ಬಗ್ಗೆ ಮಾಸ್ಟರ್ಸ್ ಡಿಗ್ರಿ ಓದುವಾಗ ಪ್ರತ್ಯೇಕ ಸಬ್ಜೆಕ್ಟ್ ಗಳೇ ಇವೆ, ಆಗ ಗೊತ್ತಾಗುತ್ತೆಅಂತಲೋ, “ಅವೆಲ್ಲ ಕೇಳಬಾರದು, ಬಾ ಚಾಕ್ಲೆಟ್ ಕೊಡಿಸ್ತೀನಿಅಂತಲೋ ಹೇಳಿ ಅವರು ಜಾರಿಕೊಂಡಿದ್ದು ಈಗ ಹಳೆ ಸುದ್ದಿ. ಆದರೆ ಈಗ ಎಲ್ಲರಿಗೆ ಎಲ್ಲವೂ ಗೊತ್ತು. ಸಮಯ 6:09 ಆಗಿದೆ ಅನ್ನೋದನ್ನೂ ಕೂಡ ಪೋಲಿ ಆಯಾಮದಿಂದ ನೋಡುವಂತಾಗಿದೆ ಲೈಫು. ಆದರೆ ಚಿಕ್ಕ ವಯಸ್ಸಿನ ಮುಗ್ಧತೆ ಈಗ ಎಷ್ಟು ಕಾಸು ಕೊಟ್ಟರೂ ಸಿಗೋದಿಲ್ಲ ಅನ್ನೋದು ಎಷ್ಟು ನಿಜವೋ, ದೊಡ್ಡವರಾಗಿ ಲೋಕ ತಿರುಗೋದರ ಆನಂದ ಮಕ್ಕಳಾಗಿಯೇ ಇದ್ದರೆ ಸಿಗೋದಿಲ್ಲ ಅನ್ನೋದು ಕೂಡ ಅಷ್ಟೇ ನಿಜ. ಅಂಥದ್ದೊಂದು ಚಿಕ್ಕ ಕಥೆ ಇದೆ, ಹಾಗೇ ಓದಿ ಬಿಡಿ.

ನಟ / ನಿರ್ದೇಶಕ ರವಿಚಂದ್ರನ್ ಎರಡು ವಿಷಯಗಳಿಗೆ ಭರ್ಜರಿ ಫೇಮಸ್ಸು. ಒಂದು: ಶಾಂತಿ ಕ್ರಾಂತಿ, ಏಕಾಂಗಿ, ಸಿಪಾಯಿ, ಪ್ರೇಮಲೋಕದಂತಹ ವಿಭಿನ್ನ, pattern break ಮಾಡುವ out of the box-office ಸಿನಿಮಾಗಳ ನಿರ್ದೆಶನಕ್ಕಾಗಿ. ಮತ್ತೊಂದು: ಹೀರೋಯಿನ್ ಗಳ ಜೊತೆಗಿನ ಸುಂದರ ಪ್ರಣಯಭರಿತ ಹಾಡು / ದೃಶ್ಯಗಳಿಗಾಗಿ. ನಾನು ಚಿಕ್ಕವನಿದ್ದಾಗ ರವಿಚಂದ್ರನ್ ಫಿಲಂ, ಹಾಡುಗಳನ್ನು ಎಗ್ಗಿಲ್ಲದೆ ನೋಡುತ್ತಿದೆ. ಆದರೆ ಆಗ ನೋಡುತ್ತಿದ್ದ ಆಯಾಮವೇ ಬೇರೆ, ಈಗ ನೋಡುವಾಗಿನ ಆಲೋಚನೆಗಳೇ ಬೇರೆ ಅನ್ನೋದನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲ ಅಂದ್ಕೊಳ್ತೀನಿ. ಕಾಲದಲ್ಲೇ ರವಿಚಂದ್ರನ್ ಅಭಿನಯದ ಬಹುತೇಕ ಹಾಡುಗಳು ವಿದೇಶಗಳಲ್ಲಿ ಚಿತ್ರೀಕರಣ ಆಗುತಿದ್ದವು. ಮತ್ತು ರವಿಚಂದ್ರನ್ ಅವರಿಗೆ ಡಾನ್ಸ್ ಬರೋದಿಲ್ಲ ಎಂಬ ಕಾರಣಕ್ಕಾಗಿ ಅತ್ಯಾಧುನಿಕ ಬೈಕು / ಕಾರು ಓಡಿಸುವುದನ್ನು ತೋರಿಸಿ ಹೆಂಗೋ ಹಾಡು ಮುಗಿಸುತ್ತಿದ್ದರು. ನಮಗೂ ಅದೇ ಬೇಕಾಗಿತ್ತು, “ಆಹಾ ಆಹಾ, ಒಹೋ ಒಹೋ” ಅಂತ ಬೈಕು - ಕಾರುಗಳನ್ನು ನೋಡಿ ಆನಂದ ಪಡುತ್ತಿದ್ದೆ. ಪ್ರಾಯಶಃ ನನಗೆ ಬೈಕು - ಕಾರುಗಳ ಬಗ್ಗೆ ಒಲವು ಅಂತ ಮೂಡಿದ್ದು ಅಂದರೆ ಆಗಲೇ ಇರಬೇಕು, all thanks to him.

ಸಾಂದರ್ಭಿಕ ಚಿತ್ರ; ಪ್ರೀತ್ಸೋದ್ ತಪ್ಪಾ?


ಇಂಥ ಒಳ್ಳೆ ಕಾಲೇಜ್ ಸಿಗೋಕೆ ನೀನು ಪುಣ್ಯ ಮಾಡಿರಬೇಕು, ಆದರೆ ನೀನು ಮಾತ್ರ ಯಾಕೆ ಓದೋದಿಲ್ವೋ ನಮಿಗಂತೂ ಗೊತ್ತಾಗ್ತಾ ಇಲ್ಲಅಂತ ಪೋಷಕರು ಯಾವಾಗಾದರೂ ಒಮ್ಮೆ ಬೈದಿರುತ್ತಾರೆ. ನಿಮ್ ಬಗ್ಗೆ ಗೊತ್ತಿಲ್ಲ, ನಾನಂತೂ ಮಾತನ್ನು ಲೆಕ್ಕ ತಪ್ಪಿ ಹೋಗುವಷ್ಟು ಸಲ ಕೇಳಿಸಿಕೊಂಡಿದ್ದೇನೆ. ಪುಣ್ಯ ಮಾಡಿದ್ರೆ ಮಾತ್ರ ಒಳ್ಳೆ ಕಾಲೇಜ್ ಸಿಗುತ್ತೋ ಇಲ್ಲವೋ ಗೊತ್ತಿಲ್ಲ, ಆದರೆ ಬೈಕ್ / ಕಾರು ಪಾರ್ಕಿಂಗ್ ಮಾಡಲು ಒಂದೊಳ್ಳೆ ಜಾಗ ಸಿಗಬೇಕೆಂದರೆ ನಿಜವಾಗಲೂ ಪುಣ್ಯ ಮಾಡಿರಲೇಬೇಕು. ಅದರಲ್ಲೂ ರಾಜಧಾನಿ ಬದುಕು ನಡೆಸುತ್ತಿರುವ ಜನರಿಗೆ ಕಷ್ಟದ ಅರಿವು ಇನ್ನೂ ಚೆನ್ನಾಗಿ ಆಗಿರುತ್ತದೆ ಎಂಬುದರಲ್ಲಿ ಅನುಮಾನವೇ ಬೇಡ. ನೆರಳಿದೆ ಅಂತ ಮರದ ಕೆಳಗೆ ನಿಲ್ಲಿಸಿದರೆ, ಕಾಗೆ ಬಂದು ಸೀಟ್ ತುಂಬಾ ಬಿಳಿ ಇಂಕ್ ಸಹಿ ಹಾಕಿ ಹೋಗುತ್ತೆ. ಎಲ್ಲರೂ ನಿಲ್ಲಿಸಿದ್ದಾರಲ್ಲ, ಅಂತ ಸಂದಿಯಲ್ಲೊಂಚೂರು ಜಾಗ ಮಾಡಿ ಗುಂಪಲ್ಲಿ ಗೋವಿಂದ ಎಂದುಕೊಂಡು ನಾವೂ ಗಾಡಿ ನಿಲ್ಲಿಸಿ ಹೋದರೆ ಪೊಲೀಸ್ ಟೋಯಿಂಗ್ ವಾಹನದಲ್ಲಿ ಬಂದು ನಮ್ಮದೇ ಬೈಕನ್ನು ಎತ್ತಿಕೊಂಡು ಹೋಗಿಬಿಡುತ್ತಾರೆ. ಎಲ್ಲಾ ಸರಿ ಇರೋ ಕಡೆ ವಾಹನ ನಿಲ್ಲಿಸಿ ಒಂದ್ ಐದು ನಿಮಿಷ ಆರಾಮಾಗಿ ಕಾಫಿ ಹೀರಿ ಬರೋಣ ಅಂದ್ಕೊಂಡು ಸಮೀಪದ ದರ್ಶಿನಿಗೆ ಹೋಗಿ ಬರೋದ್ರೊಳಗೆ ಯಾರದ್ರೂ ಅಡ್ಡಕಸುಬಿಗಳು ತಮ್ಮ ಗಾಡಿ ಅಡ್ಡ ನಿಲ್ಲಿಸಿ ಹೋಗಿಬಿಡ್ತಾರೆ. ವಾಹನ ಸವಾರರ ಕಷ್ಟಗಳು ಒಂದಾ? ಎರಡಾ? ಯಾರಿಗ್ ಹೇಳೋಣ ನಮ್ಮ ಪ್ರಾಬ್ಲಮ್ಮು ಅಂತ ಭಟ್ಟರು ವಿಷಯವಾಗಿ ಯಾಕೋ ಹಾಡು ಬರೆದಿಲ್ಲ ಅನ್ನೋದೇ ಬೇಜಾರು. ಬರೀ ಇಷ್ಟೇ ಆದರೆ ಪರವಾಗಿಲ್ಲ, ನಿಂತಿರೋ ಗಾಡಿ ಪಕ್ಕ ನಿಧಾನಕ್ಕೆ ಬಂದು ತಮ್ಮ ಸೊಂಟ ಒರಗಿಸಿ ಹರಟೆ ಹೊಡೆಯೋರ ಸಂಖ್ಯೆ ಕಡಿಮೆ ಏನಿಲ್ಲ ಬಿಡಿ. ಎಷ್ಟೋ ಸಲ ನಮಿಗೆ ಗೊತ್ತಿಲ್ಲದೇ ನಾವೂ ಇನ್ನೊಬ್ಬರ ವಾಹನಕ್ಕೆ ಒರಗಿ ಥರ ನಿಂತಿರುತ್ತೇವೆ. ವಾಹನ ಮಾಲೀಕ ಬಂದಾಗ ಇಬ್ಬರಿಗೂ ಒಂಥರಾ awkward situation. ಡಬ್ಬಲ್ ಸ್ಟಾಂಡ್ ಹಾಕಿ ಬೈಕ್ ನಿಲ್ಲಿಸಿ ಹೋಗಿದ್ದರಂತೂ ಮುಗಿದೇ ಹೋಯಿತು, ಅದೇ ಇಂದ್ರನ ಸಿಂಹಾಸನ ಎಂಬಂತೆ ಕೆಲವರು ಕಾಲು ಮೇಲೆ ಕಾಲು ಹಾಕಿ ಕುಳಿತು ಒಂದು ಕೈಯಲ್ಲಿ ಚಹಾ ಹಿಡಿದು ಇನ್ನೊಂದು ಕೈಯಲ್ಲಿ ಸಿಗರೇಟ್ ಸೇದುತ್ತಾ ಕುಳಿತಿರುತ್ತಾರೆ. ಅಂಥವರನ್ನು ಕಂಡರೆ ಸಾಕು, ಸಾಯಿ ಕುಮಾರ್ ಆತ್ಮ ಮೈ ಮೇಲೆ ಬಂದಂತಾಗಿ , ಇಳಿಯೋ ಕೆಳಗೆ ಅಂತ ಬೈದುಬಿಡುವಷ್ಟು ಸಿಟ್ಟು ಬರದೇ ಇರದು. ಉಪ್ಪಿ ಹೇಳುವಂತೆ ಮನುಷ್ಯರನ್ನು ಪ್ರೀತಿಸಬೇಕು, ವಸ್ತುಗಳನ್ನು ಉಪಯೋಗಿಸಬೇಕು” ನಿಜ. ಆದರೆ, ಈಗಂತೂ ವಾಹನಗಳು ನಮ್ಮ ಜೀವನದ ಅವಿಭಾಜ್ಯ ಅಂಗ ಆಗಿವೆ, ಅಷ್ಟಾದರೂ ಕಾಳಜಿ ಇರಲೇಬೇಕಲ್ಲಾ?


ಸಾಂದರ್ಭಿಕ ಚಿತ್ರ: The Dark Knight Rises (ಸಂಭಾಷಣೆ Batman Begins)


Alfred Pennyworth: Why do we fall sir? So that we can learn to pick ourselves up. (Batman Begins – 2005)

Christopher Nolan ಅವರ The Dark Knight Trilogy ಯಲ್ಲಿ ಇಂಥ ಹಲವು motivational dialogues ಇರುವುದನ್ನು ಕಾಣಬಹುದು. ಅದೇ ಗುಂಗಿನಲ್ಲಿ ಯೋಚಿಸುತ್ತಿದ್ದಾಗಮುಳುಗದೆ ಈಜು ಬರಲ್ಲ, ಬೀಳದೆ ಬೈಕ್ ಬರಲ್ಲಅಂತ ಒಂದು ಸಾಲು ಬರೆದೆ. ಬೀಳದೆ ಬೈಕ್ ಓಡಿಸೋದನ್ನು ಕಲಿತು, ಈಗ ರಂಗದಲ್ಲಿ ಒಳ್ಳೆ ಪಂಟ್ರು ಆಗಿರೋರು ನಮ್ಮ ನಿಮ್ಮ ನಡುವೆ ಇದ್ದಾರೆ ನಿಜ, ಇಲ್ಲವೆಂದು ಹೇಳುತ್ತಿಲ್ಲ, ಆದರೆ ಬೈಕ್ ಕಲಿಯಲು ಶುರು ಮಾಡಿದಾಗ ಒಂದ್ ಸಲವಾದರೂ ಬೀಳಲೇಬೇಕು. ಆಗಲೇ ಎಲ್ಲಿ ಎಡವಟ್ಟಾಯಿತು ಎಂದು ತಿಳಿದು ವಿಷಯ ಚೆನ್ನಾಗಿ ನೆನಪಿರುತ್ತೆ. ಇನ್ನೂ ಬೈಕ್ ಕಲಿಕೆಯ ವಿಷಯಕ್ಕೆ ಬಂದರೆಇದು ಕ್ಲಚ್, ಇದು ಬ್ರೇಕ್, ಕ್ಲಚ್ ನಿಧಾನವಾಗಿ ಬಿಡುತ್ತಾ accelerator ಏರಿಸು, ಬೈಕ್ ತಾನೆಗೇ ಮುಂದೆ ಹೋಗುತ್ತದೆಎಂಬುದು ವಾಹನ ಕಲಿಕಾ ಶಾಲೆಯ ಪಾಠ #1. ಅದರಿಂದ ಮುಂದಿನ ಪಾಠಗೆಳೆಲ್ಲಾ ಸ್ವ ಕಲಿಕೆಯಲ್ಲಿ ಹೆಚ್ಚು ಮನದಟ್ಟಾಗುತ್ತದೆ ಎಂಬುದು ಸುಳ್ಳಲ್ಲ. ಕ್ಲಚ್ ಹಿಡಿಯದೆ ಗಿಯರ್ ಹಾಕಿದರೆ ಏನಾಗುತ್ತದೆ? ತಿರುವುಗಳಲ್ಲಿ ಎಷ್ಟು ಕೋನದಲ್ಲಿ ಬಾಗಿಸಿದಾಗ ಅದೇ ವೇಗದಲ್ಲಿ ಮುಂದೆ ಹೋಗಬಹುದು? ಇನ್ನೊಂದು ವಾಹನವನ್ನು ಹಿಂದೆ ಹಾಕಿದ ನಂತರ ಎಷ್ಟು ದೂರ ಹೋಗಿ ವಾಪಸ್ ಎಡಪಥಕ್ಕೆ ಬರಬೇಕು? ಇತ್ಯಾದಿ ವಿಷಯಗಳೆಲ್ಲ ಯಾರೋ ಹೇಳಿಕೊಡುವುದಕ್ಕಿಂತ, ನಾವೇ ಕಲಿಯುವುದರ ಗಮ್ಮತ್ತೇ ಬೇರೆ. ಬೀಳೋದು ಮತ್ತು ಕಲಿಯೋದರ ಬಗ್ಗೆ ಹೇಳುತ್ತಿದ್ದೆ. ಕಲಿಯೋದರ ಬಗ್ಗೆ ಆಯಿತು, ಈಗ ಬೀಳೋದರ ಬಗ್ಗೆ ಹೇಳುವೆ. ನಮ್ ಗೆಳೆಯರ ಬಳಗದಲ್ಲಿ ಸಖತ್ 'ಸೇಫ್ ಡ್ರೈವರ್' ಅಂತ ಯಾರಾದರೂ ಇದ್ದರೆ ಅದು ನಾನೇ, ಆದರೆ ಹೆಚ್ಚಿನ ಸಲ ಬೈಕಿಂದ ಬೀಳೋದರಲ್ಲಿ ರೆಕಾರ್ಡ್ ಹೋಲ್ಡರ್ ಕೂಡ ನಾನೇ, ಎಂಥ ವಿಪರ್ಯಾಸ ನೋಡಿ! ಎಷ್ಟೋ ಸಲ ಬೀಳಬಾರದ ಜಾಗಗಳಲ್ಲಿ ಬಿದ್ದಿದ್ದೀನಿ, ಕತ್ತಲಲ್ಲಿ ಗುಂಡಿ ಕಾಣದೇ ಬಿದ್ದಿದ್ದೀನಿ, ಬೆಳಕಲ್ಲಿ ಸ್ಟಾಂಡ್ ಹಾಕೋಕೆ ಹೋಗಿ ಬಿದ್ದಿದ್ದೀನಿ, ಫ್ರೆಂಡನ್ನು ಹಿಂದೆ ಕೂರಿಸಿಕೊಂಡು ಹೋಗುವಾಗ ಬಿದ್ದಿದ್ದೀನಿ, ಫ್ರೆಂಡು ಗಾಡಿ ಓಡಿಸುವಾಗ ನಾನು ಹಿಂದೆ ಕುಳಿತು ಬಿದ್ದಿದ್ದೀನಿ, ಬರೀ ಬಿದ್ದಿರೋದರ ಬಗ್ಗೆ ಹೇಳುತ್ತಾ ಹೋದರೆ ಅದರದ್ದೇ ಒಂದು ದೊಡ್ಡ ಅಂಕಣ ಆಗಬಹುದೇನೋ. ಆದ್ದರಿಂದ ನನ್ನ ಬಿದ್ದೆ ಬಿದ್ದೆ ಬಾತುರೂಮಲ್ಲಿ, ಥೋ, ಸಾರಿ, ಬಿದ್ದೆ ಬಿದ್ದೆ ರಿಂಗುರೋಡಲ್ಲಿ, ಕ್ರಾಸಲ್ಲಿ ಬಿದ್ದೆ, ಬೈಕಿಂದ ಬಿದ್ದೆಹಾಡನ್ನು ಇಷ್ಟಕೆ ಬಿಡ್ತಾ ಇದ್ದೀನಿ. ಬಿಟ್ಟೇ ಬಿಟ್ಟೆ.


You’re not stuck in the traffic, you are the traffic!
ಇಂಥದ್ದೊಂದು ಖಡಕ್ ಸಾಲನ್ನು ಫೇಸ್ ಬುಕ್ ನಲ್ಲೊಮ್ಮೆ ಓದಿದ್ದೆ. ಅರೆ ಹೌದಲ್ಲಾ, “ಎಷ್ಟೊಂದು ಜನರಪ್ಪ, ಮನೆಗೆ ಹೋಗದೆ ಸುಮ್ಮನೆ ರೋಡಿಗೆ ಬಂದು ಯಾಕಿಷ್ಟು ಟ್ರಾಫಿಕ್ ಉಂಟು ಮಾಡುತ್ತಾರೋ” ಅಂತ ಒಂದು ಸಲವಾದರೂ ನಾವು ಬೈದುಕೊಂಡಿರುತ್ತೇವೆ. ಆದರೆ ಅದೇ ಸಮಯದಲ್ಲಿ ಇನ್ನೊಬ್ಬರೂ ಕೂಡ ನಮ್ಮನ್ನು ನೋಡಿ ಬೈದುಕೊಂಡಿರಬಹುದಲ್ಲಾ? ಇರಲಿ ಬಿಡಿ, ಟ್ರಾಫಿಕ್ ವಿಷಯವೇ ಹಾಗೆ, ಒಬ್ಬರ ದೃಷ್ಟಿಯಲ್ಲಿ ಇನ್ನೊಬ್ಬರು ಕಬಾಬ್ ಮೇ ಕಡ್ಡಿ. ಒಂದು ಮಾರುತಿ 800 ಕಾರಲ್ಲಿ ಒಬ್ಬ ಆರಾಮಾಗಿ ಪಯಣಿಸಬಹುದು. 5 ಜನ ಕುಳಿತರೆ ಮುಂದೆ ಹಿಂದೆ ಕುಳಿತುಕೊಂಡು ಹೆಂಗೋ ವಸಿ ಅಡ್ಜಸ್ಟ್ ಮಾಡಿಕೊಂಡು ಹೋಗಬಹುದು. ಅದೇ 9 ಜನ ಕುಳಿತುಕೊಂಡು ಹೋಗಬೇಕಾಗಿ ಬಂದಾಗ ತಲೆ ಸಿಡಿದು ಹೋಗುವಂತಾಗುತ್ತದೆ. ಟ್ರಾಫಿಕ್ ಸಮಸ್ಯೆ ಕೂಡ ಕೊಂಚ ಇದೇ ಲಾಜಿಕ್ ಅನ್ನು ಅನುಸರಿಸುತ್ತದೆ. ಬೆಂಗಳೂರು ಇರೋದೇ ಇಷ್ಟು, ಮತ್ತು ಪ್ರತಿ ವರ್ಷ ಉದ್ಯೋಗ ಅರಸಿ ರಾಜಧಾನಿಗೆ ಬರುತ್ತಿರುವವರ ಸಂಖ್ಯೆ ಕಡಿಮೆಯೇನಿಲ್ಲ. ಆದ್ದರಿಂದ ಬೆಂಗಳೂರು ಮುಂತಾದ ಮಹಾ ನಗರಗಳಲ್ಲಿ ಟ್ರಾಫಿಕ್ ಸಮಸ್ಯೆ ಉಂಟಾಗಿರುವುದರಲ್ಲಿ ಆಶ್ಚರ್ಯವೇನಿಲ್ಲ. ಸಿಲ್ಕ್ ಬೋರ್ಡ್ ಸಿಗ್ನಲ್ ದಾಟಿ ಕಡೆ ಹೋಗೋದ್ರೊಳಗೆ ಊರಲ್ಲಿ ಮೂರು ಸಲ ಪೇಟೆಗೆ ಹೋಗಿ ಬರಬಹುದು ಅನ್ನೋದೊಂದು ಮಹಾನಗರ ನಿವಾಸಿಗಳಿಗೆ ಮಾತ್ರ ಅರ್ಥವಾಗುವ ಟ್ರಾಫಿಕ್ ಜೋಕು. ಅಂದಹಾಗೆ ಟ್ರಾಫಿಕ್ ನಲ್ಲಿ ಕೂಡ ಸುಮಾರು ವಿಧಗಳಿವೆ. ಅವು ಕೆಳಗಿನಂತಿವೆ.
Ø ಜನಗಳಿಂದ ಆಗೋ ಟ್ರಾಫಿಕ್ಕು
Ø ದನಗಳಿಂದ ಆಗೋ ಟ್ರಾಫಿಕ್ಕು (ಮಲೆನಾಡು ಮತ್ತು ಗ್ರಾಮೀಣ ಜನರಿಗೆ ಪರಿಚಿತ)
Ø ದನಗಳಂತೆ ಒಟ್ರಾಶಿ ವಾಹನ ಚಲಾಯಿಸಿ ಹೋಗೋ ಜನಗಳಿಂದ ಆಗೋ ಟ್ರಾಫಿಕ್ಕು
Ø ಜನನಾಯಕರಿಂದ ಆಗೋ ಟ್ರಾಫಿಕ್ಕು (ವಿರೋಧ ಪಕ್ಷಗಳ ಪ್ರತಿಭಟನೆ, ಸಚಿವರ ಕಾರು ಸಂಚಾರಕ್ಕಾಗಿ ಟ್ರಾಫಿಕ್ ನಿಲ್ಲಿಸೋದು) ಇತ್ಯಾದಿ.
ಎಲ್ಲೋ ಇದ್ದೀಯಾ ಬೇಗ ಬಾರೋಅಂತ ಫೋನ್ ಮಾಡಿದಾಗ, “ಅಯ್ಯೋ ಸೌತ್ ಎಂಡ್ ಹತ್ರ ಸಿಕ್ಕಾಪಟ್ಟೆ ಟ್ರಾಫಿಕ್ಕು ಕಣೋ, ಇನ್ನು 20 ನಿಮಿಷ max" ಅಂತ ಮನೆ ಇಂದ ಹೊರಟೇ ಇರದ ಕಾಗೆ ಹಾರಿಸೋ ಗೆಳೆಯನನ್ನು ಬಿಟ್ಟರೆ ಟ್ರಾಫಿಕ್ ನಿಂದ ಪ್ರಯೋಜನ ಆಗೋದು ಸಿಗ್ನಲ್ ವ್ಯಾಪಾರಿಗಳಿಗೆ ಮಾತ್ರ.ಸಾಂದರ್ಭಿಕ ಚಿತ್ರ; ಕೆಂಡಸಂಪಿಗೆ 

ಲಿಫ್ಟ್ ಕೇಳೋದು ಕಷ್ಟ, ಕೊಡೋದು ಇನ್ನೂ ಕಷ್ಟ. ಮೊದಲೇ ಮಹಾನಗರಗಳಲ್ಲಿ ಕಳ್ಳರ ಕಾಟ ಜಾಸ್ತಿ, ಲಿಫ್ಟ್ ಕೇಳುವ ನೆಪದಲ್ಲಿ ಮೊಬೈಲನ್ನೋ ವಾಲೆಟ್ ಅನ್ನೋ ಎತ್ತಿಬಿಡುತ್ತಾರೆ ಅಂತ ಎಷ್ಟೋ ಜನ ಲಿಫ್ಟ್ ಕೊಡೋದೇ ಇಲ್ಲ. ಲಿಫ್ಟ್ ಕೊಡೋದು ಕೂಡ ಎಗ್ಸಾಮ್ ಹಾಲ್ ನಲ್ಲಿ ದಿನಾಂಕ ಹೇಳೋ ಥರ, ವರ್ಣಿಸಲಾಗದಷ್ಟು ದೊಡ್ಡ ಮಟ್ಟದ ಸಹಾಯ. ರೋಡಲ್ಲಿ ಲಿಫ್ಟು, ಬಾರಲ್ಲಿ ಟಿಪ್ಸು, ಕೊಟ್ರೆ ಮಾತ್ರ ತಗೋಬೇಕು, ಒತ್ತಾಯ ಮಾಡಿ ಕೇಳಬಾರದು. ಬಾರ್ ಅಂದ ತಕ್ಷಣ ಒಂದು ಘಟನೆ ನೆನಪಾಯ್ತು. ಮೊನ್ನೆ ಹಿಂಗೆ ಕೆಲಸ ಮುಗಿಸಿಕೊಂಡು ಉಳವಿಯಿಂದ ಸಾಗರಕ್ಕೆ ಬೈಕಲ್ಲಿ ಬರ್ತಾ ಇದ್ದೆ. ಅರ್ಧದಾರಿಯಲ್ಲಿ ಹಳ್ಳಿಯೊಂದರ ಹತ್ತಿರ ಒಬ್ಬ ವ್ಯಕ್ತಿ ಲಿಫ್ಟ್ ಕೇಳಿದ, ಸರಿ ಅಂತ ಹತ್ತಿಸಿಕೊಂಡೆ.

ಕಾಲ್ ಕೆಜಿ ಬೆಣ್ಣೆ ಬಾಯಲ್ಲಕ್ಕೋ ಸುಮ್ನೆ, ವಾಲಾಡು ಗೊಂಬೆ
ವಾಲಾಡು ಬಿಯರ್ ಹಾಕ್ಕೊಂಡ್ ತೇಲಾಡು”

ಅನ್ನೋ ಭಟ್ಟರ ಸಾಲುಗಳನ್ನು ತೀರಾ ಸೀರಿಯಸ್ಸಾಗಿ ತಗೊಂಡಿದ್ದ ಅವನು ಅಂತ 2-3 ಕಿಲೋಮೀಟರ್ ಮುಂದೆ ಹೋದ ಮೇಲೆಯೇ ಗೊತ್ತಾಗಿದ್ದು. ಹಿಂದೆ ಕುಳಿತಿದ್ದ ಬಿಯರ್ ಬೊಂಬೆ ಕಸ್ತೂರಿ ನಿವಾಸ ಚಿತ್ರದ ಆಡಿಸಿ ನೋಡು ಬೀಳಿಸಿ ನೋಡು” ಹಾಡಲ್ಲಿ ಬರೋ ಬೊಂಬೆ ಥರ ವಾಲಾಡಿದ್ದೇ ವಾಲಾಡಿದ್ದು. Don't Drink and Drive ಅಂತ ಹೇಳಿದ್ದಾರೆ ನಿಜ, ಆದರೆ Don't Drink and ask Lift ಅಂತ ಯಾರೂ ಹೇಳಿಲ್ಲ. ಹೆಂಗೋ ಬೇತಾಳ ಬೆನ್ನೇರಿದೆ, ಸಾಗರದಲ್ಲಿ ಇಳಿಸಿ ಸುಯ್ ಟಪಕ್ ಅಂತ ಎಸ್ಕೇಪ್ ಆಗೋಣ ಅಂತ ಸುಮ್ಮನಾದೆ. ಸಾಗರ ಬಂದಾಗ ಬೈಕಿಂದ ಇಳಿದ ಬಿಯರ್ ಬೊಂಬೆ ನನ್ನ ಬೈಕ್ ಹ್ಯಾಂಡಲ್ ಗೆ ಶೇಕ್ ಹ್ಯಾಂಡ್ ನೀಡಿ ಹೋದಾಗಲೇ ಗೊತ್ತಾಗಿದ್ದು, ಲಿಫ್ಟ್ ಕೇಳೋದು ಕಷ್ಟ, ಕೊಡೋದು ಇನ್ನೂ ಕಷ್ಟ ಅಂತ.


ಒಂದು ಕಾರಿಗೆ ಒಳ್ಳೆ ಟೈರ್ ಗಳು, ಉತ್ತಮ ಬ್ರೇಕಿಂಗ್ ಸಿಸ್ಟಮ್, ಉತ್ಕೃಷ್ಟ ಮೈಲೇಜ್ ಇರಬೇಕಾದ್ದು ಎಷ್ಟು ಅವಶ್ಯಕವೋ, ಒಂದು ಒಳ್ಳೆ ಮ್ಯೂಸಿಕ್ ಪ್ಲೇಯರ್ ಇರಬೇಕಾದ್ದು ಅಷ್ಟೇ ಅನುಕೂಲಕರ ಅನ್ನೋದು ನನ್ನ ವೈಯಕ್ತಿಕ ಅನಿಸಿಕೆ. ನಾನು ನೋಡಿರೋ ಹಾಗೆ, ಹಾಡು ಕೇಳುತ್ತಾ ಮಜವಾಗಿ ವಾಹನ ಚಲಾಯಿಸಿಕೊಂಡು ಹೋಗೋದು ಟ್ರ್ಯಾಕ್ಟರ್ ಸಾರಥಿಗಳು ಮಾತ್ರ. ಬರೀ ಹಾಡು ಕೇಳಿಸಿದ ಕೂಡಲೇ ಒಹೋ, ಹಿಂದೆ ಟ್ರ್ಯಾಕ್ಟರ್ ಬರ್ತಾ ಇದೆ ಅಂತ ಗೊತ್ತಾಗುತ್ತದೆ ಅಂದರೆ ಸುಮ್ನೆನಾ?! ಅದು ಬಿಟ್ಟರೆ, ಜೋರಾಗಿ ಹಾಡು ಕೇಳಿಸುವ ಸ್ಪರ್ಧೆಯಲ್ಲಿ ಖಾಸಗಿ ಬಸ್ ನವರು ಒಂದು ಮಟ್ಟಕ್ಕೆ ಸ್ಪರ್ಧೆ ಒಡ್ಡಬಹುದು. ಶಿವಮೊಗ್ಗ, ಉಡುಪಿ, ಮಂಗಳೂರು ಕಡೆ ಖಾಸಗಿ ಬಸ್ ನವರ ಸಂಗೀತ ಪ್ರೇಮದ ಪರಿಚಯ ಭಾಗದ ಪ್ರಯಾಣಿಕರಿಗೆ ಮಾತ್ರ ಗೊತ್ತು. ಅದೇನೇ ಇರಲಿ, ಮನಸ್ಸಿಗಿಂತ ಮಸ್ತ್ ಮಸ್ತ್ ಮ್ಯೂಸಿಕ್ ಪ್ಲೇಯರ್ ಮತ್ತೊಂದಿಲ್ಲ, ನಿಜ ತಾನೇ? ಮನಸ್ಸಿನ ಮ್ಯೂಸಿಕ್ ಪ್ಲೇಯರ್ ದೆಸೆಯಿಂದ

“ಎಗ್ಸಾಮು ಹಾಲಿನಲ್ಲಿ ನನ್ನ ಪರಮಾತ್ಮ, ಮಾರ್ನಿಂಗು ಷೋಗೆ ಹೋಗು ಕಂದ ಅಂತಾನೆ


ಅಂತ ಎಗ್ಸಾಮ್ ಹಾಲ್ ನಲ್ಲಿ ಸಿನಿಮಾ ಹಾಡುಗಳನ್ನೇ ನೆನೆಯುತ್ತಾ ಬರೆಯಬೇಕಾದ derivation ಗಳು ಮರೆತು ಹೋಗಿದ್ದೂ ಇದೆ. ಇಂಥ ಮ್ಯೂಸಿಕ್ ಪ್ಲೇಯರ್ ಇದ್ದಮೇಲೆ ತೆಪ್ಪಗೆ ಗಾಡಿ ಓಡಿಸೋಕೆ ಎಲ್ಲಿ ಆಗುತ್ತೆ ಹೇಳಿ? ಯಾವಾಗಲೋ ಕೇಳಿದ I'm a Barbie girl, in the Barbie world ಹಾಡಿಂದ ಹಿಡಿದು ಇತ್ತೀಚಿನ ಮೆಚ್ಚುಗೆಯ ನೆನಪೇ ನಿತ್ಯ ಮಲ್ಲಿಗೆ, ಕನಸು ಕೆಂಡಸಂಪಿಗೆ” ಹಾಡಿನವರೆಗೂ ಅದು ಹೆಕ್ಕಿಕೊಡದ ಹಾಡೇ ಇಲ್ಲ (ಒಂದೊಂದು ಸಲ ಡೈಲಾಗ್ ಅಥವಾ ನೆನಪುಗಳು). ಎರಡು ಕನಸು ಚಿತ್ರದಲ್ಲಿ ಡಾ.ರಾಜ್ ಅವರು ಬಜಾಜ್ ಚೇತಕ್ ಓಡಿಸಿಕೊಂಡುಎಂದು ನಿನ್ನ ನೋಡುವೆ, ಎಂದು ನಿನ್ನ ಸೇರುವೆಎಂದು ಹಾಡುತ್ತ ಹೋಗುವ ಹಾಗೆ, ಮನಸ್ಸಿಗೆ ನೆನಪಾದ ಹಾಡು ಹಾಡುತ್ತಾ ಕಡ್ಡಿಪುಡಿ ಜೊತೆ ಹೋಗೋದಷ್ಟೇ ನಮ್ಮ ಕೆಲಸ.


ಇದೇನು ಇದ್ದಕ್ಕಿದ್ದ ಹಾಗೆ ಯಾರಿದು 'ಕಡ್ಡಿಪುಡಿ' ಅಂತ ಯೋಚಿಸಬೇಡಿ. ನಮ್ ಚಳ್ಳಕೆರೆ ಹುಡುಗರಿಗೆ 'ಕಡ್ಡಿಪುಡಿ' ಚಿರಪರಿಚಿತ, he needs no introduction! ಗೊತ್ತಿಲ್ಲದವರಿಗಾಗಿ ಹೇಳುತಿದ್ದೇನೆ, ಕಡ್ಡಿಪುಡಿ ಅಂದರೆ ನನ್ನ ಬೈಕ್ Hero Honda Glamour ಗೆ ಇಟ್ಟಿರುವ ಅಡ್ಡಹೆಸರು. ಅದ್ಧೂರಿ ಚಿತ್ರದಲ್ಲಿ ಧ್ರುವ ಸರ್ಜಾ ತನ್ನ ಬೈಕ್ ಗೆ 'ಅಂಬಾರಿ' ಎಂದು ಕರೆಯುವಾಗ, ಮಗಧೀರ ಚಿತ್ರದಲ್ಲಿ ರಾಮ್ ಚರಣ್ ತನ್ನ ಕುದುರೆಗೆ 'ಬಾದ್ ಷಾ' ಅಂದು ಕರೆಯುವಾಗ, ಯಾವ್ ತರ್ಲೆನನ್ಮಗ ತಾನೇ ತನ್ನ ಬೈಕ್ ಗೆ ಕಡ್ಡಿಪುಡಿ ಅಂತ ಹೆಸರಿಡುತ್ತಾನೆ ಎಂದು ನೀವು ಕೇಳಬಹುದು. ಹೆಸರಿಗೆ ಒಂದು flashback ಕೂಡ ಇದೆ. ಇಂಜಿನಿಯರಿಂಗ್ ಮುಗಿದ ಮೇಲೆ ಎಲ್ಲರ ಹಾಗೆ ನಾನೂ ಬೆಂಗಳೂರು ಸೇರಿಕೊಂಡೆ. ಜೀವನ, ಪ್ರೀತಿ, ಹಸಿವು, ಬಡತನ, ನಿರುದ್ಯೋಗ, ನಲಿವು, ಪಾರ್ಟಿಗಳು, ಸಿನಿಮಾ ಇನ್ನು ಹಲವು ವಿಷಯಗಳ ಬಗ್ಗೆ ಮರೆಯಲಾಗದ ಪಾಠ ಕಲಿಸಿದ್ದು ನಮ್ಮೂರು ಬೆಂಗಳೂರು. ಎಲ್ಲಾ ಸಂದರ್ಭಗಳಲ್ಲಿ ಕೂಡ ನನ್ನ ಜೊತೆಯಾಗಿ ಇದ್ದದ್ದು ನನ್ನ 'ಕಡ್ಡಿಪುಡಿ'. ಕಡ್ಡಿಪುಡಿ ಚಿತ್ರ ನೀವು ನೋಡಿರಬಹುದು. ಅದರಲ್ಲಿ ಶಿವಣ್ಣ ರೌಡಿಸಂ ಇಂದ ಹೊರ ಬಂದಿದ್ದರೂ ಬಿಟ್ಟೆನೆಂದರೂ ಬಿಡದೀ ಮಾಯೆ ಎಂಬಂತೆ ಆಗಾಗ ರೌಡಿಗಳು, ಪೊಲೀಸರು, ರಾಜಕಾರಣಿಗಳು ಕಾಟ ಕೊಡ್ತಾನೇ ಇರ್ತಾರೆ. (ಇದು ಬಿಟ್ಟೆನೆಂದರೂ ಬಿಡದೀ ಮಾಯೆ - ಅವನು ಬಿಡದಿ ಮಾಯಾ ಮನುಷ್ಯ, ಕನ್ಫ್ಯೂಸ್ ಆಗಬೇಡಿ). ನಮ್ Hero Honda Glamour aka ಕಡ್ಡಿಪುಡಿ ಕಥೆ ಕೂಡ ಇಂಥದ್ದೇ. No Parking ಅಲ್ಲಿ ನಿಲ್ಲಿಸಿದಾಗ, ಇರುತಿದ್ದ ಎಲ್ಲಾ ವಾಹನಗಳಲ್ಲಿ ಕಡ್ಡಿಪುಡಿ ಟೋಯಿಂಗ್ ವಾಹನ ಏರುತ್ತಿದ್ದ. Triple Riding, One Way, No Entry, Signal Jump, Insurance ಇಲ್ಲ, Emission Test Report ಇಲ್ಲ, ಅಂತ ಬುಕ್ ಆಗೋದು ಬಿಡಿ, ಬೈಕಲ್ಲಿ ನಂಬರ್ ಪ್ಲೇಟ್ ಸರಿಯಾಗಿ ಹಾಕಿಸಿಲ್ಲ ಅಂತ ಕೂಡ ಸಿಕ್ಕಿಹಾಕಿಕೊಂಡಿದ್ದಾನೆ ನಮ್ ಕಡ್ಡಿಪುಡಿ. ಪ್ರಾಯಶಃ ಕಡ್ಡಿಪುಡಿಗೆ ಅಂಟಿರೋ ಬ್ಯಾಡ್ ಲಕ್ ಅಂದ್ರೆ ನಾನೇ ಇರಬೇಕು ಅನ್ನೋ ಯೋಚನೆಗಳು ಕೆಲವೊಮ್ಮೆ ಬಂದಿದ್ದಿದೆ. ಆದರೆ ಒಂದೊಂದು ಸಲ ನಮ್ ಹುಡುಗರು ಎಲ್ಲಿಗಾದರೂ ಕಡ್ಡಿಪುಡಿ ಜೊತೆ ಹೋದಾಗ ಚಿಕ್ಕ ಪುಟ್ಟ ಫೈನ್ ಕಟ್ಟಿ ಬಂದಿದ್ದು ಇದೆ. ಅಲ್ಲಿಗೆ ಕಡ್ಡಿಪುಡಿ ಹೆಸರಿಂದ ನಾವ್ ಸೇಫ್ ಆದ್ವಿ, ನಮ್ ಬೈಕ್ ತಗಲಾಕ್ಕೊಳ್ತು. ಎಲ್ಲಾ ಕಾರಣಗಳಿಂದ ನಮ್ Glamour ಬೈಕ್ ಗೆ ಕಡ್ಡಿಪುಡಿ ಅನ್ನೋ ಹೆಸರು ಬಂತು. ಆಗಲೇ ಹೇಳಿದಂತೆ ನಾನು ಬೈಕಿಂದ ಬೀಳೋದರಲ್ಲಿ ರೆಕಾರ್ಡ್ ಹೋಲ್ಡರ್, ಆದರೆ ಕಡ್ಡಿಪುಡಿ ಯಾವತ್ತೂ ನನ್ನ ಬೀಳಿಸಿಲ್ಲ. ಅಷ್ಟಕ್ಕಾದರೂ ಕಡ್ಡಿಪುಡಿಗೆ ನಾನೊಂದು ಥ್ಯಾಂಕ್ಸ್ ಹೇಳಲೇಬೇಕು.ಸಾಂದರ್ಭಿಕ ಚಿತ್ರ; ಸವಾರಿ 

ಹೃದಯ ಅಂದರೆ ದೇಹಕ್ಕೆ ಪರಿಶೋಧಿಸಿದ ರಕ್ತ ಕಳಿಸುವ ಅಂಗ ಅನ್ನೋ ವೈಜ್ಞಾನಿಕ ವಿಷಯ ಪಕ್ಕಕ್ಕಿಟ್ಟು, ಪ್ರೀತಿಯ ಸಂಕೇತ ಅನ್ನೋ ಥರ ನೋಡೋದಾದ್ರೆ ಹೃದಯದಲ್ಲಿರುವ ಪ್ರೀತಿಯನ್ನು ನಾಲ್ಕು ಭಾಗಗಳಾಗಿ ನೋಡಬಹುದು.
Ø Love for Parents - ತಂದೆ ತಾಯಿ / ಬಂಧು-ಬಳಗ / ಗೆಳೆಯರು ಇತ್ಯಾದಿ
Ø Self Love - ಸ್ವಂತ ಇಷ್ಟ-ಕಷ್ಟಗಳು, ಪ್ರಿಯವಾದ ಊಟ, ನೆಚ್ಚಿನ ನಾಯಕಿ, ಇಷ್ಟದ ಸಿನಿಮಾ, ಕ್ರಿಕೆಟ್, ಫುಟ್ ಬಾಲ್ ಇತ್ಯಾದಿ
Ø Partner Love - ಇದರ ಬಗ್ಗೆ ಹೆಚ್ಚು ಹೇಳಬೇಕಿಲ್ಲ, ನಮ್ ಎಲ್ಲಾ ಹುಡುಗರು ಆಗಲೇ Ph.D ಪಡೆದಿದ್ದಾರೆ
Ø Automobile Love - ಬೈಕು, ಕಾರು, ಅಥವಾ ಇನ್ಯಾವುದೇ ಇಷ್ಟದ ವಸ್ತುಗಳ ಮೇಲಿನ ಪ್ರೀತಿ, ಕಾಳಜಿ ಇತ್ಯಾದಿ.
ಇಷ್ಟೆಲ್ಲಾ ವಿವರಣೆ ಯಾಕೆ ಕೊಟ್ಟೆನೆಂದರೆ ಪ್ರೀತಿಗೆ ಅದೇನೋ ಒಂದು ಗಾಢ ಶಕ್ತಿ ಇದೆ. ಇದೇ ವಿಷಯವಾಗಿ Love moves the World ಎಂದು ಕೂಡ ಹೇಳಲಾಗುತ್ತೆ. ಎಷ್ಟೋ ಸಲ ನಾವು ತೆಗೆದುಕೊಳ್ಳೋ ರಿಸ್ಕ್ ಗಳು ಪ್ರೀತಿಗಾಗಿಯೇ ಎಂದರೆ ಅತಿಶಯೋಕ್ತಿ ಆಗಲಾರದು. ಅದರಲ್ಲೂ Automobile Love ಅನ್ನು ಪರಿಗಣನೆಗೆ ತೆಗೆದುಕೊಳ್ಳೋದಾರೆ ಒಬ್ಬೊಬ್ಬರಿಗೆ ಒಂದೊಂದು ಬೈಕ್ / ಕಾರ್ ಮೇಲೆ heavy love ಆಗಿರುತ್ತೆ, ಬೈಕ್ / ಕಾರ್ ಅವರ ಬಳಿ ಇರುತ್ತೋ ಬಿಡುತ್ತೋ ಅದು ಬೇರೆ ಮಾತು. ಕೆಲವರಿಗೆ ಆರ್ಮುಗಂ ರವಿಶಂಕರ್ ಧ್ವನಿಯಂತ Royal Enfield ಇಷ್ಟ, ಮತ್ತಿನ್ನು ಕೆಲವರಿಗೆ ಟೆನಿಸ್ ಕೃಷ್ಣ ಥರ ಕುಯ್ಕು ಸದ್ದು ಮಾಡುವ KTM Duke ಇಷ್ಟ.ಅವರವರ ಇಷ್ಟ / ಮೆಚ್ಚುಗೆಗಳು ಅವರವರಿಗೆ ದೊಡ್ಡದು.


 ಸಾಂದರ್ಭಿಕ ಚಿತ್ರ: ಸಂದೀಪ್ ಬಿ ಎಸ್ 

ಎಷ್ಟೋ ಲವ್ ಸ್ಟೋರಿ ಗಳು ಬಂದಿವೆ, ಉಳಿದಿವೆ, ಕಣ್ಮರೆ ಕೂಡ ಆಗಿವೆ. ಆದರೆ ಅಲ್ಲೆಲ್ಲಾ ಇದ್ದೂ ಇಲ್ಲದಂತೆ ಯಾವುದೇ ಕ್ರೆಡಿಟ್ಸ್ ಬಯಸದೆ ಮರೆಯಾಗಿ ದೂರ ನಿಲ್ಲೋದು ಬೈಕ್ ಗಳು. ಕೆ.ಆರ್.ಪುರದಲ್ಲಿರೋ ರನ್ನ, BTM ನಲ್ಲಿರುವ ಸುಮನ್ ಳನ್ನು ಮತ್ತೆ ಮತ್ತೆ ಭೇಟಿಯಾಗಿ ತನ್ನ ಪ್ರೀತಿ ವ್ಯಕ್ತಪಡಿಸುತ್ತಾನೆ ಎಂದರೆ, ಬಗೆಯ ಪ್ರೇಮಿಗಳನ್ನು ಬೆಸೆಯುವ ಕಾರ್ಯವನ್ನು ಸದ್ದಿಲ್ಲದೇ ಮಾಡುತ್ತಿರೋ ಬೈಕ್ ಗಳ ಪಾತ್ರ ಎಷ್ಟು ದೊಡ್ಡದು ಅಂತ ಒಮ್ಮೆ ಯೋಚಿಸಬೇಕು. ಇಷ್ಟೆಲ್ಲಾ ನಮ್ಮನ್ನು ಪ್ರೀತಿಸೋ ಬೈಕ್ ಕಡೆ ನಾವೆಷ್ಟು ಪ್ರೀತಿ ತೋರಿಸುತ್ತೇವೆ? “ನೀನು ನಿನ್ನ ಬೈಕನ್ನು ಮನಸಾರೆ ಪ್ರೀತಿಸು, ಅವಳು ಮುಂದೊಂದಿನ ಚಿಕ್ಕ ಪುಟ್ಟ ಅಪಘಾತಗಳಾದಾಗ ತಾನು ಘಾಸಿಗೊಂಡು ನಿನ್ನನ್ನು ಕಾಪಾಡುವ ಮೂಲಕ ನಿನ್ನ ಮೇಲಿನ ತನ್ನ ಒಲವನ್ನು ನಿರೂಪಿಸುತ್ತಾಳೆ" ಅಂತ ನಮ್ ರಾಮಣ್ಣ ಒಂದ್ ಸಲ ಹೇಳಿದ್ದ. ಪ್ರಾಯಶಃ ವಾಹನಗಳ ಕುರಿತ ಅಂಕಣವನ್ನು ಮುಗಿಸಲು ಇದಕ್ಕಿಂತ ಒಳ್ಳೆ ಸಾಲುಗಳು ಇಲ್ಲವೆನಿಸಿ ಲಾಂಗ್ ರೈಡ್ ಗೆ ಇಲ್ಲೇ ಹೀಗೆ ನ್ಯೂಟ್ರಲ್ ಗಿಯರ್ ಹಾಕುತಿದ್ದೇನೆ.

Ignition Off ಮಾಡುವ ಮುನ್ನ:
ಬೈಕಲ್ಲಿ ಹೋಗ್ತಾ ಇರುವಾಗ, ಎಲ್ಲಿವರೆಗೂ 'ಹೆಡ್ ಲೈಟ್ ಆನ್ ಆಗಿದೆ ಅಂತ ಕೈಸನ್ನೆ ಮಾಡೋರು', ಸ್ಟಾಂಡ್ ಎತ್ತಿಕೊಳ್ಳದೇ ಹೋಗುತ್ತಿರುವಾಗ "ಸ್ಟ್ಯಾಂಡ್, ಸ್ಟ್ಯಾಂಡ್" ಅಂತ ಕೂಗುವವರು, ಹಿಂದಿನ ಸೀಟಲ್ಲಿ ಕುಳಿತ ಹುಡುಗಿ / ಹೆಂಗಸರ ದುಪಟ್ಟಾ / ಸೀರೆ ಸೆರಗು ಉದ್ದವಾಗಿ ಜೋತು ಬಿದ್ದಿದ್ದರೆ ಟೈಯರ್ ಗೆ ಸಿಕ್ಕಬಹುದೆಂದು ಪ್ರೀತಿಯಿಂದ ಎಚ್ಚರಿಸುವವರು' ಇರುವವವರೆಗೂ ಮಳೆ ಬೆಳೆ ಆಗುತ್ತಾ ಇರುತ್ತೆ ಅನ್ನೋದರಲ್ಲಿ ಡೌಟೇ ಬೇಡ.
ನಿಮ್ಮಂತ ಒಳ್ಳೆಯವರು ಇರೋದಿಕ್ಕೆ ಮಳೆ ಬೆಳೆ ಆಗ್ತಾ ಇರೋದು ಅನ್ನೋ ಹಳೇ ಸಿನಿಮಾ ಡೈಲಾಗಿನ ಮುಂದುವರೆದ ಭಾಗ ಇದು. ಬೇಡದೇ ಇದ್ರೂ ಸೀಕ್ವೆಲ್ ಮಾಡಲು ಹೋದ್ರೆ ಹಿಂಗೆ ಆಗೋದು ಅಂತ ನನಗೂ ಕೂಡ ಈಗಲೇ ಗೊತ್ತಾಗಿದ್ದು. ಇನ್ನಷ್ಟು ಮತ್ತಷ್ಟು ವಿಷಯಗಳೊಂದಿಗೆ ಅತೀ ಶೀಘ್ರದಲ್ಲಿ, ನಿಮ್ಮ ಮುಂದೆ.
ಬ್ಲಾಗ್ ಅಂಕಣದ ಕುರಿತು, ಥರದ್ದೊಂದು ಟೀಸರ್ ಥರ ಮೆಸೇಜ್ ಬರೆದು ಕೆಲವು ದಿನಗಳ ಹಿಂದೆ WhatsApp ಅಲ್ಲಿ ನಮ್ ಹುಡುಗರಿಗೆ ಕಳುಹಿಸಿದ್ದೆ. ಅಂಕಣ ಶುರುವಿನಿಂದ ಕೊನೆಯವರೆಗೂ ಎಲ್ಲೂ ಮೇಲಿನ ಚಿಕ್ಕ ವಿಷಯ ತೂರಿಸಲು ಜಾಗ ಆಗಲೇ ಇಲ್ಲ. ಅಂಕಣ ಏನೋ ಮುಗಿಸಿದ್ದಾಯಿತು, ಆದರೆ ಅಣ್ಣಾಬಾಂಡ್ ಬೈಕ್, ಮದ್ದೂರಲ್ಲಿ ಕಾಫಿ ಕಥೆ, ಭಲೇ ಬೆಕ್ಕು, Garage Gundi Genius, ಬ್ಯಾಕ್ ಸೀಟ್ ಮೇಲೆ ಬೆಳದಿಂಗಳ ಬಾಲೆ, ಸಿದ್ಧಣ್ಣನ ಅವಾಂತರಗಳು ಇತ್ಯಾದಿ ವಿಷಯಗಳ ಬಗ್ಗೆ ಹೇಳೋದು ಇನ್ನೂ ಬಾಕಿ ಉಳಿದಿವೆ. ಮುಗಿಯಿತೆನ್ನುವ ಪಯಣ ಇಲ್ಲ ಎಲ್ಲೂ, ಆದಿ ಅಂತ್ಯಗಳೆರಡೂ ಸುಳ್ಳೇ ಸುಳ್ಳು ಎಂಬ ಭಟ್ಟರ ಸಾಲಿನಂತೆ ಅಂಕಣಕ್ಕೂ ಒಂದು ಸಿಕ್ವೆಲ್ ಬರಬಹುದಾ? ಗೊತ್ತಿಲ್ಲ!
ಇಂದು ಏನು ಬೇಕು, ಅದರ ಚಿಂತೆ ಸಾಕು, ನೋಡಿ ಸ್ವಾಮಿ ನಾವಿರೋದು ಹೀಗೇ

4 ಕಾಮೆಂಟ್‌ಗಳು: