ಮಾರ್ಚ್ 22, 2016

ಸ್ಟಾರಾದೆ ನಂಗೆ ನೀನು..ಈ ನಡುವೆ ಸಂಬಂಧಗಳು ತೀರಾ complicated ಆಗಿ ಹೋಗಿವೆ. ಯಾವಾಗ ಹೇಗಿದ್ದರೂ ಮರುಕ್ಷಣದಲ್ಲಿ ಏನಾಗಿ ಹೋಗುತ್ತದೆ ಎಂದು ಹೇಳೋಕಾಗಲ್ಲ. LKG ಅಲ್ಲಿದ್ದಾಗ ಯಾವಾಗಲೂ ಜೊತೆಗಿರುತಿದ್ದ ಗೆಳತಿ ಸಂಪರ್ಕ ತಪ್ಪಿ ಮತ್ತೆ ನಂಬರ್ ಸಿಕ್ಕಾಗ ಮಾತಾಡಲು ವಿಷಯವೇ ಇಲ್ಲದಂತೆ ಅನಿಸಬಹುದು. ಹತ್ತು ವರ್ಷಗಳ ಗೆಳಯ ಇಂದು ಬ್ಯುಸಿಯಾಗಿ ತೋರಬಹುದು, ಮೂರು ವರ್ಷಗಳ ಹಿಂದೆ ಗೊತ್ತೇ ಇರದ ಈ ಹುಡುಗ ಇಂದು ಅವಳಿಗೆ ಊಟ, ನೀರು, ಗಾಳಿ, ನಿದ್ದೆ ಮತ್ತು ನೆಮ್ಮದಿಯಷ್ಟೇ ಅವಶ್ಯ ಅನಿಸಬಹುದು ಇತ್ಯಾದಿ. ಇವೆಲ್ಲ ನೇರ ಸಂಬಂಧಗಳು, ಅಂದರೆ ಅವರಿಗೆ ಇವರು, ಇವರಿಗೆ ಅವರು ಪರಸ್ಪರ ಗೊತ್ತಿರುವುದರಿಂದ ಇಬ್ಬರ ನಡುವೆ ಒಂದು ಸಂಬಂಧದ ಸೇತು ಮೂಡಿರುತ್ತದೆ. ಅದು ಸ್ನೇಹವೋ, ಪ್ರೀತಿಯೋ, ಗುರು-ಶಿಷ್ಯ ಸಂಬಂಧವೂ, ಜೂನಿಯರ್-ಸೀನಿಯರ್ ಬಾಂಧವ್ಯವೋ , ಸ್ನೇಹಕ್ಕಿಂತ ಜಾಸ್ತಿ ಆದರೆ ಪ್ರೀತಿ ಅಲ್ಲವೇ ಅಲ್ಲವೋ ಎಂಬುದು ಅವರವರ ಪರಿಕಲ್ಪನೆಗೆ ಬಿಟ್ಟಿದ್ದು. ಆದರೆ ಒಬ್ಬರಿಗೊಬ್ಬರು ಮುಖಾಮುಖಿ ಭೇಟಿಯಾಗದಿದ್ದರೂ, ಕೆಲವೊಮ್ಮೆ ಆ ಇಬ್ಬರ ನಡುವೆ ಒಂದು ವಿಶಿಷ್ಟ ಅನುಬಂಧ ಮೂಡಿರುತ್ತದೆ. ಆಗಿನ ಕಾಲದಲ್ಲಿ 'ಯಾರೇ ನೀನು ಚೆಲುವೆ' ಚಿತ್ರದ ಹಾಗೆ ಪತ್ರ ಮುಖೇನ ಪ್ರೇಮಿಸಿದವರ; ಇಲ್ಲವೇ ರಾಂಗ್ ನಂಬರ್ ಗೆ ಮೆಸೇಜ್ ಹೋಗಿ WhatsApp ಮೂಲಕ ಪ್ರೀತಿಸುತ್ತಿರುವ ಈಗಿನ ಕಾಲದವರ ಬಗ್ಗೆ ಹೇಳುತ್ತಿಲ್ಲ. ಈ ಕಥೆ ಇಂಥ ಎಲ್ಲಾ ಸಾಮಾನ್ಯ ಕಥೆಗಳನ್ನು ಮೀರಿದ ಒಂದು ವಿಶಿಷ್ಟ ಸಂಬಂಧವನ್ನು ಕುರಿತಾದದ್ದು. ಅದೇ ಖ್ಯಾತನಾಮರು ಮತ್ತು ಅಭಿಮಾನಿಗಳ ಅರ್ಥಾತ್ ಸ್ಟಾರ್ ಹಾಗು ಫ್ಯಾನ್ ನ ನಡುವಿನ ಅನುಬಂಧದ ವಿಷಯದ್ದು.


ಸಾಂದರ್ಭಿಕ ಚಿತ್ರ: Fan

ಶಾರುಕ್ ಖಾನ್ ಅಭಿನಯದ ಮುಂಬರುವ ಚಿತ್ರ Fan trailer ನೋಡಿ ನಾನಂತೂ ಆ ಚಿತ್ರಕ್ಕೆ Fan ಆಗಾಯ್ತು. ತನ್ನ ಮೆಚ್ಚಿನ ನಟನನ್ನು ವೈಯಕ್ತಿಕವಾಗಿ ಭೇಟಿಯಾಗಬೇಕೆಂಬ ಹಂಬಲ ಪ್ರತಿಯೊಬ್ಬ ಅಭಿಮಾನಿಗೂ ಇದ್ದೇ ಇರುತ್ತದೆ. ಆದರೆ ಆ ಆಸೆಯು ಎಲ್ಲೆ ಮೀರಿದರೆ ಆಗಬಹುದಾದ ಅನಾಹುತಗಳೇನು? ಒಂದು ವೇಳೆ ತಾನು ಆರಾಧಿಸುವ ಆ ನಟ ತಾನಂದುಕೊಂಡಂತ ವ್ಯಕ್ತಿತ್ವದವನಲ್ಲ ಎಂದು ತಿಳಿದಾಗ ಆ ಅಭಿಮಾನಿ ಏನೇನೆಲ್ಲಾ ಮಾಡಬಹುದು ಅನ್ನೋದೇ ಚಿತ್ರದ ಕಥೆ ಎಂಬುದನ್ನು ಬರೀ ಟ್ರೈಲರ್ ನೋಡಿ ಅಂದಾಜಿಸಬಹುದು. ಆ ಕಾಲದಲ್ಲಿ ಹೊಟ್ಟೆಗೆ ಹಿಟ್ಟು ಇಲ್ಲದಿದ್ದರೂ ಜುಟ್ಟಿಗೆ ಮಲ್ಲಿಗೆ' ಎಂಬ ಮಾತು ಚಾಲ್ತಿಯಲ್ಲಿತ್ತು. ಅದೇ ರೀತಿ, ಈ ಕಾಲದಲ್ಲಿ, ಫಿಲಂ ಹೇಗಾದರೂ ಇರಲಿ, ಆದರೆ ಟ್ರೈಲರ್ ಚೆನ್ನಾಗಿರಬೇಕು ಅಂತ ತುಂಬಾ ಕಷ್ಟ ಪಡುತ್ತಾರೆ ಅನಿಸುತ್ತೆ. ಅದಿಕ್ಕೆ ಏನೋ, ಯಾವ್ ಚಿತ್ರದ ಟ್ರೈಲರ್ ಬಂದರೂ, "ಓಓಓಓಓ, ಫಸ್ಟ್ ಸಾಟರ್ಡೆ, ಸೆಕೆಂಡ್ ಷೋ ನೋಡಲೇಬೇಕು" ಎಂಬ ಆಲೋಚನೆ ಮೂಡುವುದು ಗ್ಯಾರಂಟಿ. ಸುಮಾರು ನಾಲ್ಕು ತಿಂಗಳುಗಳಿಂದ ಈಚೆಗೆ ಬಿಡುಗಡೆಯಾದ ಟ್ರೈಲರ್ ಗಳಾದ Captain America: Civil War, Batman v Superman: Dawn of Justice ನಿಂದ ಹಿಡಿದು ರಥಾವರ, ಮಾಸ್ಟರ್ ಪೀಸ್, ಗೋಧಿ ಬಣ್ಣ ಸಾಧಾರಣ ಮೈಕಟ್ಟು, ಯು ಟರ್ನ್, ಸಿಂಪಲ್ಲಾಗ್ ಇನ್ನೊಂದು ಲವ್ ಸ್ಟೋರಿ, ಹೀಗೆ ಎಲ್ಲವೂ ಟ್ರೈಲರ್ ನಿಂದ ಮೋಡಿ ಮಾಡಿದ್ದು ಗೊತ್ತೇ ಇದೆ. ಮೇಲೆ ಇರುವ ಚಿತ್ರಗಳಲ್ಲಿ ಬಿಡುಗಡೆಗೆ ಮುಂಚೆ ಅವುಗಳ ಕುರಿತು expectation ಇದ್ದದ್ದು, ಇನ್ನೂ ಬಿಡುಗಡೆಯಾಗಬೇಕಿರುವ ಚಿತ್ರಗಳ ಮೇಲೆ expectation ಇಮ್ಮಡಿಯಾಗಿರುವುದಂತೂ ನಿಜ. ಬಿಡುಗಡೆಯಾದ ಮೇಲೆ ಏನಾಗುತ್ತೋ ಅದು ಬೇರೆ ಮಾತು. Don't judge a book by its cover ಎಂಬ ಮಾತು ಪುಸ್ತಕ ಪ್ರಿಯರು ಎಂದಿಗೂ ನೆನಪಿಡುವ ವಿಷಯವಾಗಿದೆ. ಮುಖಪುಟ ಚೆನ್ನಾಗಿದ್ದರೆ ಪುಸ್ತಕ ಚೆನ್ನಾಗಿರುತ್ತೆ ಅಂತ ಏನಿಲ್ಲ, ಮುಖಪುಟ ಚೆನ್ನಾಗಿಲ್ಲದಿದ್ದರೆ ಪುಸ್ತಕ ಕೂಡ ಚೆನ್ನಾಗಿರುವುದಿಲ್ಲ ಎಂದು ಹೇಳಲಾಗದು ಎಂಬುದೇ ಅದರ ಸಾರಾಂಶ. ಈ ಮಾತನ್ನು ಸಿನಿಮಾಗಳಿಗೆ ಕೂಡ ಹೊಂದಿಸಬಹುದು. ಅದಕ್ಕೆ ಪಾಪ ಎಷ್ಟೋ ಜನ ಟ್ರೈಲರ್ ಎಷ್ಟೇ ಚೆನ್ನಾಗಿದ್ರೂ, ಚಿತ್ರ ನೋಡಿಕೊಂಡು ಬಂದವರ ಮಾತು ಕೇಳಿ ಆಮೇಲೆ ಸಿನಿಮಾಗೆ ಹೋಗುವ ನಿರ್ಧಾರ ಮಾಡುತ್ತಾರೆ. ಟ್ರೈಲರ್ ಚೆನ್ನಾಗಿರುವ 'ಹೊಗೆ' ಸಿನಿಮಾಗಳು ಮಾಡಿರುವ ಅನಾಹುತ ಇದೇ ಅಲ್ಲವೇ? ಇದೇ ಟಾಪಿಕ್ ನ ಮೇಲಿನ fun fact ಏನಪ್ಪಾ ಅಂದರೆ, ಟ್ರೈಲರ್ ನಿಂದ ಅದ್ಭುತ ಪ್ರತಿಕ್ರಿಯೆಯನ್ನು ಪಡೆದು ಚಿತ್ರಮಂದಿರಗಳಲ್ಲಿ ಸೂಪರ್ ಹಿಟ್ ಆದ 'ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ' ಚಿತ್ರದಲ್ಲೇ "ಟ್ರೈಲರ್ ನೋಡಿ ಯಾವತ್ತೂ ಫಿಲಂ ಗೆ ಹೋಗಬಾರದು ರಾಜ, ಫಿಲಂ ಅಲ್ಲಿರೋ ಒಳ್ಳೊಳ್ಳೆ ಸೀನ್ ಗಳನ್ನ ಸೇರಿಸಿ ಟ್ರೈಲರ್ ಮಾಡಿರ್ತಾರೆ" ಅನ್ನೋ ಡೈಲಾಗ್ ಇರುವುದು.

ಸಾಂದರ್ಭಿಕ ಚಿತ್ರ: Fan

Coming back to topic, ಎಲ್ಲರೊಳಗೆ 'ನಾನು' ಇರುವಂತೆ, ಒಬ್ಬ 'Fan' ಕೂಡ ಇದ್ದೇ ಇರುತ್ತಾನೆ. ಯಾವಾಗಲೂ ಮಲಗೇ ಇರುವ ಅವನು ತನ್ನ ಮೆಚ್ಚಿನ ನಟ / ನಟಿ / ಸಿನಿಮಾ ಬಂದಾಗ ಇನ್ನಿಲ್ಲದಂತೆ ಸಂಭ್ರಮಿಸುತ್ತಾನೆ. Fan ಎಂದರೆ ಕೇವಲ ಸಿನಿಮಾಗಳ ಕುರಿತೇ ಆಗಬೇಕೆಂದಿಲ್ಲ. ಮೆಚ್ಚಿನ ಗುರು, ಹಿತೈಷಿ, ರಾಜಕೀಯ ನಾಯಕ, ಸಮಾಜ ಸೇವಕ, ಸ್ವಾತಂತ್ರ್ಯ ಹೋರಾಟಗಾರ, ಅಂತರಾಷ್ಟ್ರೀಯ ಉದ್ಯಮಿ, ವಿಜ್ಞಾನಿ ಯಾರೇ ಆಗಿರಬಹುದು. ಅವರನ್ನು ನಾವು ನೇರವಾಗಿ ನೋಡಿರದಿದ್ದರೂ, ಟಿವಿಯಲ್ಲಿ ಕಂಡಾಗ, ಇಲ್ಲವೇ Weekend with Ramesh ಕಾರ್ಯಕ್ರಮದಲ್ಲಿ ಬಂದಾಗ ಮನಸ್ಸು ಗುಟ್ಟಾಗಿ ಪ್ರಶಂಸೆ ಮಾಡುವುದಂತೂ ಸುಳ್ಳಲ್ಲ. ನಾನೂ, ಒಂದಲ್ಲ ಒಂದು ದಿನ ಹಾಗಾಗಬೇಕು ಎಂಬ ಆಸೆ ಚಿಗುರೊಡೆಯುವುದು ಅವರನ್ನು ಕಂಡಾಗಲೇ. ತೆರೆಯ ಮೇಲೆ ಧೂಮಪಾನವಾಗಲೀ, ಹೆಣ್ಣಿಗೆ ಅವಮಾನಿಸುವ ದೃಶ್ಯಗಳಲ್ಲಿ ನಟಿಸುವುದಿಲ್ಲ ಎಂದು ನಿರ್ಧರಿಸಿ ಸ್ಟಾರ್ ದೊಡ್ಡವನಾಗುತ್ತಾನೆ. ಸುಖಾಸುಮ್ಮನೆ ಥಿಯೇಟರ್ ಬಳಿ ಹಾಲಿನ ಅಭಿಷೇಕ, ಫ್ಲೆಕ್ಸ್ ಗಳಿಗೆ ಹಾರ ಎಂದು ಹಣ ಖರ್ಚು ಮಾಡದೇ ವೃದ್ಧಾಶ್ರಮದ ಬಳಿಯ ಸಹಾಯ ನಿಧಿಗೆ ಗುಟ್ಟಾಗಿ ಹಣ ಹಾಕಿ ಒಬ್ಬ ಫ್ಯಾನ್ ತನ್ನ ಅಭಿಮಾನವನ್ನು ಮೆರೆಯುತ್ತಾನೆ. ಬದಲಾವಣೆ ನಮ್ಮಿಂದಲೇ ಶುರುವಾಗುತ್ತದೆ ಎಂಬ ಮಾತಿನಂತೆ ಆ ಪಕ್ಷದಲ್ಲಿ ಯಾರೂ ಸರಿಯಿಲ್ಲ, ಈ ಪಕ್ಷದಲ್ಲಿರೋ ಎಲ್ಲರೂ ಕಳ್ಳರೇ, ಸಿದ್ದು ಸರ್ಕಾರದ ಯೋಜನೆಗಳ್ಯಾವೂ ಸರಿ ಇಲ್ಲ, ಮೋದಿ ಬಂದು 2 ವರ್ಷವಾಗುತ್ತಾ ಬಂದರೂ ಇನ್ನೂ ಒಳ್ಳೆ ದಿನಗಳು (Acche Din) ಬಂದೆ ಇಲ್ಲ ಎಂಬಿತ್ಯಾದಿಯಾಗಿ ದೂರುವ ಬದಲು "ನಾವು ಏನು ಮಾಡಿದ್ದೇವೆ ಅನ್ನೋದು ಕೂಡ ಮುಖ್ಯ ಅಲ್ಲವೇ? ಇದೆಲ್ಲದರ ನಡುವೆ ಸದ್ದಿಲ್ಲದೇ ತಮ್ಮ ಕೆಲಸ ಮಾಡಿ ಯಾವುದೇ ಪ್ರಶಂಸೆ ಬಯಸದ ಅಭಿಮಾನಿಗಳೇ ಸಾವಿರ ಪಟ್ಟು ಮೇಲು.

ಆಗಲೇ ಹೇಳಿದಂತೆ ಪ್ರತಿಯೊಬ್ಬರೊಳಗಿರುವ ಆ ಅಭಿಮಾನಿ ತನಗೇ ಗೊತ್ತಿಲ್ಲದಂತೆ (ಕೆಲವೊಮ್ಮೆ ಬೇಕಂತಲೇ) ತನ್ನ ನೆಚ್ಚಿನ ನಟನ ಅನುಕರಣೆ ಮಾಡುವುದುಂಟು. 'ಬಂಗಾರದ ಮನುಷ್ಯ' ನೋಡಿ ಪಟ್ಟಣ ಬಿಟ್ಟು ವ್ಯವಸಾಯಕ್ಕೆ ಮರಳಿದವರು, 'ಮುತ್ತಿನ ಹಾರ' ನೋಡಿ ಸೈನ್ಯ ಸೇರಿದವರು ಕೂಡ ಇದ್ದಾರೆ ಎಂಬ ಗಾಸಿಪ್ ಕೇಳಿದ್ದೆ. ಅದೆಲ್ಲ ಎಷ್ಟು ನಿಜವೋ ಗೊತ್ತಿಲ್ಲ, ಆದರೆ ಗೂಗ್ಲಿ ನೋಡಿ ಹೇರ್ ಸ್ಟೈಲ್ ಬದಲಾಯಿಸಿಕೊಂಡವರು, ಟೈಟಾನಿಕ್ ಚಿತ್ರದಲ್ಲಿ ಹಡಗಿನ ತುದಿಯಲ್ಲಿ ನಿಂತ Jack-Rose ನ ಹಾಗೆ ಪ್ರವಾಸಿ ತಾಣಗಳಲ್ಲಿ ನಿಂತು ಫೋಟೋ ತೆಗೆಸಿಕೊಳ್ಳೋ ಪ್ರೇಮಿಗಳನ್ನು ನೋಡಿ ಮೇಲೆ ಹೇಳಿದ್ದು ಗಾಸಿಪ್ ಅಲ್ಲ ಅಂತ ನನಗಂತೂ ಖಾತರಿಯಾಗಿದೆ. ಯಾಕೆಂದರೆ, ಸಿನಿಮಾ ಅಷ್ಟೊಂದು ಪ್ರಭಾವಶಾಲಿ ಮಾಧ್ಯಮ. ಪುಸ್ತಕ ಓದುವುದು ಅದಕ್ಕಿಂತಲೂ ಹೆಚ್ಚಿನ ಪ್ರಭಾವ ಬೀರುತ್ತದೆಯಾದರೂ, ಪುಸ್ತಕ ಆಸ್ವಾದನೆಗೆ ಒಂದಷ್ಟು ಅಡ್ಡಿಗಳಿವೆ: ಬೆಳಕಿನ ತೊಂದರೆ ಇರಬಾರದು, ಗಲಾಟೆ ಕಮ್ಮಿ ಇರಬೇಕು, ಬಸ್ / ರೈಲು ಅಥವಾ ಸಂಚಾರದಲ್ಲಿ ಓದುವುದು ಸ್ವಲ್ಪ ಕಷ್ಟವೇ ಇತ್ಯಾದಿ. ಆದರೆ ಸಿನಿಮಾಗಳು ಹಾಗಲ್ಲ, ಆದ್ದರಿಂದಲೇ ಸಿನಿಮಾಗಳು ಬಹುಬೇಗ ತನ್ನ ವೀಕ್ಷಕ ಬಳಗವನ್ನು ವಿಸ್ತರಿಸಿಕೊಂಡವು. ಇದಕ್ಕೆ ಪೂರಕವೆಂಬಂತೆ ನಾನು ಬರೋವರೆಗೂ ಮಾತ್ರ ಬೇರೆಯವರ ಹವಾ, ನಾನ್ ಬಂದಮೇಲೆ ನಂದೇ ಹವಾ ಎನ್ನುವಂತ self-appreciation ಡೈಲಾಗ್ ಗಳು ಸೇರಿ ಅಭಿಮಾನಿಗಳ ಆನಂದ ಟೇಟ್ರು ಛಾವಣಿ ಮುಟ್ಟೋದಂತೂ ಗ್ಯಾರಂಟಿ. ನಿಜ ಜೀವನದಲ್ಲಿ ಸ್ಟಾರ್ ಗಳು, ಅವರ ಫಿಲಂಗೆ ಇವರು ಕ್ಲಾಪ್ ಮಾಡಿ, ಇವರ ಫಿಲಂನ ಆಡಿಯೋ ರಿಲೀಸ್ ಗೆ ಅವರು ಬಂದು ಹೋಗೋದು ಮಾಡಿ, ಒಂದು ಆರೋಗ್ಯಕರ ಸ್ಪರ್ಧಾ ಮನೋಭಾವ ಇಟ್ಟುಕೊಂಡಿರುತ್ತಾರೆ. ಆದರೆ, ಸ್ಟಾರ್ ಗಳ ಮಧ್ಯ ನಡೆಯುವ Star Wars ಗಿಂತಲೂ ಫ್ಯಾನ್ ಗಳ ಮಧ್ಯ ನಡೆಯುವ Fan Wars ಗಳೇ ಜೋರಾಗಿರುತ್ತದೆ ಎಂದು ಹೇಳಬಹುದು. ಅಪ್ಪು ಅಭಿನಯದ ಚಿತ್ರವೊಂದರ ಮೊದಲಲ್ಲಿ ತೋರಿಸುವ ಸೈಡ್ ರೀಲಲ್ಲಿ ಕಿಚ್ಚ ಅಭಿನಯದ ಚಿತ್ರವೊಂದರ ಟ್ರೈಲರ್ ತೋರಿಸಿದಾಗ ಆ ಟೇಟ್ರು ಒಳಗೆ ತುಂಬಾ ಗಲಾಟೆ ಆಗಿತ್ತು ಅಂತ ಒಂದು ಸುದ್ದಿ ಓದಿದ್ದೆ. ಇಂಥ ಒಂದು ಗಲಾಟೆಯ ಅವಶ್ಯಕತೆ ಆದರೂ ಏನಿತ್ತು? ಇದೆಲ್ಲಾ ಅಭಿಮಾನಿ ಅನ್ನೋ ಪದದ ಬೆಲೆ ಕಮ್ಮಿ ಮಾಡೋ ಕೆಲಸಗಳು ಅನ್ನೋದನ್ನು ಬಿಟ್ಟು ಬೇರೆ ಎನೂ ಹೇಳಲಾಗದು.


ಸಾಂದರ್ಭಿಕ ಚಿತ್ರ

ಫ್ಯಾನ್ ಗಳ ಮೇಲೆ ಸ್ಟಾರ್ ಗಳ ಪ್ರಭಾವಳಿಯ ಕುರಿತು ಹೇಳೋದಾದರೆ, ಇದೊಂದು ದೃಶ್ಯ ಹೇಳಲೇಬೇಕು. ಬೆಂಗಳೂರಲ್ಲಿದ್ದಾಗ 'ರಾಮ' ಎಂಬ ತೆಲುಗು ಹುಡುಗನ ಗೆಳೆತನವಾಗಿತ್ತು. ತೆಲುಗು ನಟ ಪವನ್ ಕಲ್ಯಾಣ್ ಅಂದರೆ ಭರ್ಜರಿ ಇಷ್ಟಪಡುತಿದ್ದ ಅವನಿಗೆ ಒಂದ್ ದಿನ ಯಾರೋ ಒಬ್ಬ ಮಿಸ್ಸಾಗಿ ಮಗಾ, ನೀನು ಪವನ್ ಕಲ್ಯಾಣ್ ಫ್ಯಾನ್ ಅಲ್ವಾ?” ಎಂದು ಕೇಳಿಬಿಟ್ಟ. ಅದಕ್ಕೆ ಅವನು, “ಫ್ಯಾನ್? ಇಲ್ಲ ಮಗಾ! I'm his devotee” ಎಂದು ಹೇಳಿ ದಂಗುಬಡಿಸಿದ್ದ. ಅವನು ಕೊಟ್ಟ ಡೋಸಿಗೆ (ಡೋಸ್, ದೋಸೆ ಅಲ್ಲ, ಡೋಸ್, ಡೋಸ್) ಮೂರು ದಿನ ತಲೆ ಗುಮ್ಮ್ ಅಂದಿತ್ತು. ಅದು ಬಿಟ್ಟರೆ, ನನ್ನ ಮಾತು, ಯೋಚನೆ, ಬರವಣಿಗೆ, ಕಿರು ಚಿತ್ರ ಕಥಾ ನಿರೂಪಣೆ ಎಲ್ಲದರ ಮೇಲೆ ಉಪ್ಪಿ ಪ್ರಭಾವ ಚೂರು ಜಾಸ್ತಿಯೇ ಎನ್ನಬಹುದು. (ಶಾರ್ಟ್ ಮೂವಿ ಅಂತ ಮಾಡಿರೋದೇ ಎರಡೋ ಮೂರು ಮಾತ್ರ, ಅವು ಕೂಡ ಫ್ರೆಂಡ್ಸ್ ಗ್ಯಾಂಗ್ ಅಲ್ಲಿ ಹಿಟ್ ಆಗಲಿಲ್ಲ ಅನ್ನೋದು ಬೇರೆ ಮಾತು). ಮೊದಲಿಗೆ ಯಾವುದೋ ಒಂದು ಹಾಡು, ಜಾಹೀರಾತು, ಅಂತ ಏನಾದರೂ ಶುರು ಮಾಡಿ, ಆಮೇಲೆ ವಿಷಯಕ್ಕೆ ಬಂದು, ವಿಷಯ ಹೇಳುತ್ತಾ ಎಲ್ಲೆಲ್ಲೂ ಹೋಗಿ, ಕೊನೆಗೆ ಏನೋ ಒಂದು ಒಂದು ಹೇಳಿ ಬ್ಲಾಗ್ ಅಂಕಣ ಮುಗಿಸಿರುತ್ತೇನೆ. ಇಷ್ಟೆಲ್ಲಾ ಕಷ್ಟ ಸಹಿಸಿಕೊಂಡು ಓದುತ್ತಿರೋರಿಗೆ ಸ್ವರ್ಗಕ್ಕೆ Business Class ಸೀಟ್ ಸಿಗಲಪ್ಪ ದೇವರೇ. “ಉಪ್ಪಿ straight ಮನುಷ್ಯ, ತಾನು ಏನು ಹೇಳಬೇಕು ಅಂತ ಇದ್ದಾರೋ ಅದರ ಬಗ್ಗೆ clarity ಇರುತ್ತೆ, ಆದ್ದರಿಂದ ಅವರು ಹೇಳೋದು ಎಲ್ಲರಿಗೂ ಅರ್ಥ ಆಗುತ್ತೆ. ಆದರೆ ನೀನ್ ಒಂಥರಾ Vicky Donor ಚಿತ್ರದಲ್ಲಿ ಹೇಳುವ ಹಾಗೆ confused spe*m ಮಗಾ, ನಿಂಗೇನೋ ಗೊತ್ತು, ಅದನ್ನು ಹೆಂಗೆಂಗೋ ಹೇಳ್ತೀಯಾ, ಆದರೆ ಹೇಳೋದು ಹೆಚ್ಚು ಕಮ್ಮಿ ಯಾರಿಗೂ ಅರ್ಥ ಆಗಲ್ಲ ಅಂತ ನಮ್ ಹುಡುಗರು ಆಗಾಗ ಹೇಳುತ್ತಿರುತ್ತಾರೆ. ಒಬ್ಬ ಫ್ರೆಂಡು, ಬಿಡುವಿನ ವೇಳೆಯ ಬರಹಗಾರ, ಸಾಕು ಬಿಡೋ ಎನಿಸುವಂತೆ ಮಾಡುವ ಶಾರ್ಟ್ ಮೂವಿಗಳ 'ನಿರುದ್ದೇಶಕ'ನಾಗಿ ನನಗೆ ಇದಕ್ಕಿಂತ ಇನ್ನೇನು ಬೇಕು ಅಂತ ಯೋಚಿಸುವಷ್ಟರಲ್ಲಿ 'ಬೇಕು ಬೇಕು ಬೇಕು ಎಂಬ ಬೇಕೂಫಾನೇ ನಾನು' ಹಾಡು ನೆನಪಾಗಿ ಮತ್ತೆಲ್ಲಾ ಮರೆತು ಹೋಗುತ್ತೆ. ನಮ್ ಬಗ್ಗೆ ನಾವೇ ಜಾಸ್ತಿ ಬರೆದುಕೊಳ್ಳಬಾರದು, ಆತ್ಮವಿಲ್ಲದವನ ಆತ್ಮಕಥೆ ಅಂತ ವಿಂಗಡಿಸಿಬಿಟ್ಟರೆ ಕಷ್ಟ ಆಲ್ವಾ?

ಈ ಅಂಕಣ ಶುರುವಾಗಿದ್ದೇ Fan ಚಿತ್ರದ ಟ್ರೈಲರ್ ಅನ್ನು ಸಾಕೆನಿಸುವಷ್ಟು ಸಲ ತಿರುಗಾ-ಮುರುಗಾ ನೋಡಿದ ಮೇಲೆ. ಸ್ಟಾರ್ ಮತ್ತು ಫ್ಯಾನ್ ಸಂಬಂಧದ ಕುರಿತು ಒಂದು ಸಣ್ಣ ವೇದಾಂತದ ಡೋಸ್ ಕೊಟ್ಟು, ಅಂಕಣ ಮುಗಿಸಿಬಿಡುವೆ. ಸ್ಟಾರ್ ಮತ್ತು ಫ್ಯಾನ್ ನಡುವಿನ ಸಂಬಂಧ ಹೂವು ಮತ್ತು ದುಂಬಿಯ ಹಾಗೆ. ಪರಸ್ಪರ ಒಬ್ಬರ ಮೇಲೊಬ್ಬರು ಅವಲಂಬಿತ. ದುಂಬಿಯ ಆಗಮನದಿಂದ ಹೂವು ಚೆಂದವಾಗಿ ಅರಳುತ್ತದೆ, ಆದ್ದರಿಂದ ಹೂವಿಗೆ ದುಂಬಿ ಬೇಕು. ತೋಟದಲ್ಲಿ ಹೂವೇ ಇಲ್ಲದಿದ್ದರೆ, ದುಂಬಿಗೆ 'purpose' ಇಲ್ಲದಂತಾಗುತ್ತದೆ, ಆದ್ದರಿಂದ ದುಂಬಿಗೆ ಕೂಡ ಹೂವು ಬೇಕು. ಆದರೆ ಈ ಅವಲಂಬನೆ ಒಂದು ಮಿತಿಯಲ್ಲಿರಬೇಕಷ್ಟೇ. The End.


ಮುಗಿಸುವ ಮುನ್ನ: 2014 ರ ಸೆಪ್ಟೆಂಬರ್ 17 ರ ರಾತ್ರಿ 10 ಗಂಟೆ ಸುಮಾರಿಗೆ ನಾನು, KL, ಭಾಯ್, ಲಕ್ಕಿ, ಬಿಟ್ಟಿ ಮತ್ತಿತರರು 'Suಮ್ಮನೆ' ಕಾಂಪೌಂಡ್ ಹೊರಗೆ Happy Birthday Uppi 2 ಉಪ್ಪಿಟ್ಟು ಅಂತ ಬರೆಸಿಕೊಂಡ ಕೇಕ್ ಹಿಡಿದುಕೊಂಡು ಕಾಯುತ್ತಿದ್ದೆವು. 

ಸಾಂದರ್ಭಿಕ ಚಿತ್ರ
 

12 ಗಂಟೆ ಆದ ಮೇಲೆ ಹಿಂಗೆ ಒಂದೆರಡು ನಿಮಿಷ ಉಪ್ಪಿ ಹೊರಗೆ ಬಂದರೋ ಇಲ್ವೋ, ಆ ಗಲಾಟೆಯಲ್ಲಿ ಏನೂ ನೊಡೋಕೇ ಆಗಲಿಲ್ಲ. ಮತ್ತೆ ಮತ್ತೆ ಪೊಲೀಸ್ ಲಾಠಿ ತಗೊಂಡು zugg zugg ಅಂತ ಬೀಸುತಿದ್ದರು. ಮಿಸ್ಸಾಗಿ ಬಿದ್ರೂ ಯಾಕೆ ಬೇಕಪ್ಪ ಅಂತ ಓಡಿ ಹೋಗೋಕೆ ಹೋಗಿ ಕೇಕ್ ನೆಲದ ಮೇಲೆ ಬಿದ್ದು ಅಪ್ಪಚ್ಚಿ ಆಗಿಬಿಡ್ತು. ಉಪ್ಪಿಗೆ ಉಪ್ಪಿ ಗೋಸ್ಕರ ವಿಷ್ ಮಾಡೋಕೆ ಅಂತ ಬಂದು, ತಂದ ಕೇಕ್ ಉಪ್ಪಿಟ್ಟಾಗಿ ಬಿಡ್ತಲ್ಲ ಮಗಾ ಅನ್ನೋ ಪಂಚ ಲೈನ್ ಸಿಕ್ತು, ಮತ್ತು ಒಂದು ಒಳ್ಳೆ night-out ಆಯಿತು ಅನ್ನೋದನ್ನು ಬಿಟ್ಟರೆ ಆ ದಿನ ಮತ್ತೇನೂ ಉಪಯೋಗ ಆಗಲಿಲ್ಲ. ಉಪ್ಪಿ ಅವರನ್ನು ಬರೀ ನೋಡಿ, ಮಾತನಾಡಿಸೋದಲ್ಲ, ಒಂದು ಇಂಟರ್ವ್ಯೂ ಕೂಡ ತೆಗೆದುಕೊಳ್ಳೋ ಆಸೆ ಇದೆ. ಅದೇನಾದರೂ ಆಗಿ 'ಅಪೂರ್ಣ ಕನಸು' ಬ್ಲಾಗ್ ಅಲ್ಲಿ ಬರೆಯುವಂತಾಗುತ್ತದೋ, ಇಲ್ಲ ಅದೂ ಕೂಡ 'ಅಪೂರ್ಣ ಕನಸು' ಆಗಿ ಉಳಿದು ಬಿಡುತ್ತದೋ, ಅದರ ಉತ್ತರ ಹಲವು ನಾಳೆಗಳ ಬಳಿ ಇದೆ. "ಜೀವನದಲ್ಲಿ ಮೇಲೆ ಬರಬೇಕು ಅಂದ್ರೆ ನಿನ್ನೆದು ಯೋಚನೆ ಮಾಡಬಾರದು, ನಾಳೆದು ಯೋಚನೆ ಮಾಡಬಾರದು, ಸದ್ಯದ್ದು ಮಾತ್ರ ಯೋಚನೆ ಮಾಡ್ಬೇಕು" ಮತ್ತೆ ಸಿಗೋಣ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ