ಮೇ 28, 2016

ಹೆಣ್ಣ್ ಮಕ್ಳೇ ಸ್ಟ್ರಾಂಗು ಗುರೂ...




ಅವನು: ಒಂದು ದಿವಸ ಅವಳು mouth-organ ಪ್ಲೇ ಮಾಡ್ತಾ ಇದ್ಳು, ನಾನ್ ಕೂತ್ಕೊಂಡ್ ಕೇಳ್ತಾ ಇದ್ದೆ. ನಿಂಗ್ play ಮಾಡಕ್ ಬರುತ್ತಾ ಅಂದ್ಳು, ನಾ.... ಬರುತ್ತೆ ಅಂದೆ.
ಇನ್ನೊಬ್ಬಳು: ನಿಲ್ಸು, ನಿಲ್ಸು, ಯಾಕ್ ಗೊತ್ತು ಅಂದೆ? ಗೊತ್ತಿಲ್ಲ ಅಂತ ಹೇಳಬೇಕಾಗಿತ್ತು.
ಅವನು: ಯಾಕೆ? ಗೊತ್ತಿರೋದನ್ನ ಗೊತ್ತು ಅಂತ ತಾನೇ ಹೇಳ್ಬೇಕು? ನಂಗೆ ಸುಳ್ಳು ಹೇಳಕ್ ಇಷ್ಟ ಇಲ್ಲ, ಉಹೂ.
ಇನ್ನೊಬ್ಬಳು: ಅಯ್ಯೋ ಪೆದ್ದು, ಹೆಂಗಸರಿಗೆ ಗೊತ್ತಿದೆ ಅನ್ನೋ ಗಂಡಸರಿಗಿಂತ ಗೊತ್ತಿಲ್ಲ ಅನ್ನೋ ಗಂಡಸರನ್ನ ಕಂಡರೇನೇ ತುಂಬಾ ಇಷ್ಟ. ನೀನು ಅವತ್ತು ಗೊತ್ತಿಲ್ಲ ಅಂದಿದ್ರೆಅವಳೇ ನಿಂಗೆ ಹೇಳಿ ಕೊಡೋಳು. ಹಾಗೋ ಹೀಗೋ ದೊಡ್ಡ ರೋಮ್ಯಾನ್ಸ್  ನೆಡೆದಿರೋದೇ?! ಛೇ, ನೀನ್ ಮಿಸ್ ಮಾಡ್ಕೊಂಡ್ಬಿಟ್ಟೆ!
***

ಇಷ್ಟು ಓದುವ ಹೊತ್ತಿಗೆ ಕನಿಷ್ಠ 10 ರಲ್ಲಿ 8 ಜನಕ್ಕಾದರೂ ಇದು ವಾಲಿ ಚಿತ್ರದ 'ಓಹ್ ಸೋನಾ' ಹಾಡಿನ ನಡುವಲ್ಲಿ ಬರುವ ಸಂಭಾಷಣೆ ಅಂತ ಗೊತ್ತಾಗಿರುತ್ತೆ. ಒಂದು ಕಾಲದಲ್ಲಿ ನಾನೂ ಕೂಡ ಈ ಹಾಡು ಕೇಳಿಕೊಂಡು, ಕಾಣದ ಲೋಕದಲ್ಲಿ ಇಲ್ಲದಿರೋ 'ಸೋನ'ಳನ್ನು ಊಹಿಸಿಕೊಂಡು ಹಾಡಿದ್ದಿದೆ. ಆಮೇಲೆ 'ಚಕ್ಲಿ' ಪರಿಚಯವಾಗಿ, ಅವನಿಗೆ ಸೋನ ಹೆಸರು ಬಂದು, ಮೊದಲು 'ಸೋನ' ಹೆಸರಿನ ಮೇಲಿದ್ದ ರೋಮ್ಯಾಂಟಿಕ್ ಫೀಲ್ ಹೋಗೇಬಿಡ್ತು. ಆಗಿದ್ದಾಯಿತು, ಹೋಗ್ಲಿ ಬಿಡಿ. ನೀವು ನೋಡಿದ್ರೋ ಇಲ್ವೋ ಗೊತ್ತಿಲ್ಲ. ಮೇಲಿನ ಸಂಭಾಷಣೆಯಲ್ಲಿ ಒಂದು generalized statement ಇದೆ. ಅದು, ಹೆಂಗಸರಿಗೆ ಗೊತ್ತಿದೆ ಅನ್ನೋ ಗಂಡಸರಿಗಿಂತ ಗೊತ್ತಿಲ್ಲ ಅನ್ನೋ ಗಂಡಸರನ್ನ ಕಂಡರೇನೇ ತುಂಬಾ ಇಷ್ಟ ಅನ್ನೋದು. ಈ ಹೆಂಗಸರು ಮತ್ತು ಗಂಡಸರು ಅನ್ನೋ ಪದಗಳು ಕೊಡುವ ಅರ್ಥವ್ಯಾಪ್ತಿಯೇ ಸರಿಯಿಲ್ಲ. ಈ ಪದ ಕೇಳಿದ ಕೂಡಲೇ 35 ವರ್ಷದಾಚೆಗಿನ ಜನರ ಜೀವನ ಮನಸ್ಸಿಗೆ ಬರುತ್ತೆ. ಆದ್ದರಿಂದ ಪರಿಸ್ಥಿತಿಗೆ ಅನುಗುಣವಾಗಿ ಹುಡುಗರು ಮತ್ತು ಹುಡುಗಿಯರು ಎಂದು ಬದಲಾಯಿಸಿಕೊಂಡು ಮುಂದೆ ಹೋಗೋಣ. ಹಾಗಾದ್ರೆ ಅದು ನಿಜಾನ? ಹುಡುಗಿಯರಿಗೆ ಗೊತ್ತಿದೆ ಅನ್ನೋ ಹುಡುಗರಿಗಿಂತ ಗೊತ್ತಿಲ್ಲ ಅನ್ನೋ ಹುಡುಗರನ್ನ ಕಂಡರೆ ತುಂಬಾ ಇಷ್ಟಾನ? ಏನೋ ಪ, ನಮಗೂ ಅಷ್ಟು ಗೊತ್ತಿಲ್ಲ. ಮೊದಲೇ ನಾವು ಮೆಕ್ಯಾನಿಕಲ್ ಹುಡುಗರು, ನಾವು ಎಷ್ಟೇ ' Nakoka Girlfriend Kavali Ra’ ಎಂದು ಓಡಾಡಿದರೂ, ಯಾರೂ ನಮ್ ಸಿಲಬಸ್ ಒಳಗೆ ಬರಲೇ ಇಲ್ಲ. ಗೊತ್ತಿರುವ ವಿಷಯದ ಬಗ್ಗೆ ಎಷ್ಟಾದರೂ ಬರೆಯಬಹುದು. ಆದರೆ ನಮಗೆ ಗೊತ್ತೇ ಇಲ್ಲದ ವಿಷಯವಾದ ಹುಡುಗಿಯರ (women) ಬಗ್ಗೆ ಏನಂತ ಬರೆಯೋದು? ಅಂಥದೇ ಒಂದು ಚಿಕ್ಕ ಪ್ರಯತ್ನವೇ ಈ ಅಂಕಣ.

ಸಾಂದರ್ಭಿಕ ಚಿತ್ರ:  Boys


ಸುಮಾರು 15 ವರ್ಷಗಳ ಹಿಂದಿನ ಮಾತು. 6 ಇಲ್ಲವೇ 7ನೇ ಕ್ಲಾಸಲಿದ್ದೆ ಅಂತಿಟ್ಟುಕೊಳ್ಳೋಣ. ಆಗೆಲ್ಲಾ ನಮ್ ಕ್ಲಾಸಲ್ಲಿ ಅಗ್ನಿ, ಬುಡ್ದ, ಮೇಟಿ, ಬಾಂಡ್-ಲೀ, ಮತ್ತಿನ್ನು ಕೆಲವರೆಲ್ಲ ಪಕ್ಕಾ 1st Rank ಆಕಾಂಕ್ಷಿಗಳು. ಮೂಲೆಯಲ್ಲಿ ನಾವು ಕೂಡ ಒಂದು ಮಟ್ಟಕ್ಕೆ 1st Rank ಬರಲು ಪ್ರಯತ್ನ ಪಡುತ್ತಿದ್ದೆವಾದರೂ, ಪರಿಸ್ಥಿತಿ ಸ್ವಲ್ಪಕಷ್ಟ ಇತ್ತು ಬಿಡಿ. ಒಂಥರಾ, ಹರಭಜನ್ ಸಿಂಗ್ ಗೆ ಬ್ಯಾಟಿಂಗ್ ಸಿಕ್ಕಂಗೆ: ಸಿಗೋದು ತುಂಬಾ ವಿರಳ, ಸಿಕ್ಕಾಗ ನೋಡಲು ಯಾರೂ ಇರೋದೇ ಇಲ್ಲ. ಹೀಗಿದ್ದಾಗ  ನಮ್ ಹುಡುಗರಲ್ಲಿ ಏನೋ ಒಂದು ಕೆಟ್ಟ ಒಗ್ಗಟ್ಟಿತ್ತು. ಎಲ್ಲರೂ ಕಷ್ಟ ಪಟ್ಟು ಓದೋಣ, ನಮ್ಮಲ್ಲಿ ಯಾರಿಗಾದ್ರೂ 1st Rank ಬರಲಿ, ನೋ ಪ್ರಾಬ್ಲಮ್, ಆದ್ರೆ ಈ ಹುಡುಗಿಯರಿಗೆ ಮಾತ್ರ 1st Rank ಬರಲು ಚಾನ್ಸ್ ಕೊಡಬಾರದು ಅಂತ ಎದ್ನೋ ಬಿದ್ನೋ ಅಂತ ಎಲ್ಲರೂ ಓದಿದ್ದೇ ಓದಿದ್ದು. ಎಷ್ಟೇ ಆಗ್ಲಿ 1st Rank ಅನ್ನೋದು ಆಗ ಮರ್ಯಾದೆ ವಿಷಯವಾಗಿತ್ತು. 'A' ಚಿತ್ರದ ಸಂಭಾಷಣೆಯನ್ನು quote ಮಾಡೋದಾದರೆ ಹುಡುಗೀರನ್ನ ಕಂಡರೆ ಆಗ್ತಿರ್ಲಿಲ್ಲ, ಲವ್ ಅಂದ್ರೆ ಆಗ್ತಿರ್ಲಿಲ್ಲ, ಡೈರೆಕ್ಟ್ರು ಸೂರಿ, ಬೆಂಕಿ, ಬೆಂಕಿ ಥರ ಇದ್ರು ಅನ್ನೋ ಥರಾನೇ ನಾವೆಲ್ಲಾ ಇದ್ವಿ. ಈಗ ಅದೆಲ್ಲಾ ನೆನೆಸಿಕೊಂಡರೆ ತುಂಬಾ ನಗು ಬರುತ್ತೆ. ಪರಿಸ್ಥಿತಿ ಹೀಗಿದ್ದಾಗ ನಮ್ ಕ್ಲಾಸ್ ರೂಮಲ್ಲಿ ಮುಂದೆ ಮತ್ತು ಹಿಂದಿರುವ ಎರಡೂ ಗೋಡೆಗಳ ಬೋರ್ಡ್ ಮಾಡಲಾಗಿತ್ತು. ಮೊದಲು ಒಂದು ಕಡೆ ಮಾಡಿ ವಾಸ್ತು ದೋಷ ಅಂತ ಇನ್ನೊಂದು ಕಡೆ ಮಾಡಿ, ಮೊದಲನೆಯದನ್ನು ಹಾಗೆ ಬಿಟ್ಟಿದ್ದರೋ ಹೆಂಗೋ ಗೊತ್ತಿಲ್ಲ! ಹಿಂದೆ ತಿರುಗಿ ಫ್ರೆಂಡ್ ಜೊತೆ ಮಾತಾಡುವಾಗ ಏ ದನ ಕಾಯೋನೆ, ಬೋರ್ಡ್ ನೋಡೋ ಸುಮ್ನೆ ಅಂತ ಮೇಷ್ಟ್ರು ಬೈದರೆ ಈ ಕಡೆನೂ ಬೋರ್ಡ್ ಇದ್ಯಲ್ಲ ಸಾರ್, ಅದನ್ನೇ ನೋಡ್ತಿದ್ದೆ ಅನ್ನೋ ಪಂಚ್ ತಲೆಗೆ ಬರ್ತಿತ್ತು, ಆದರೆ ಯಾಕೆ ಬೇಕಪ್ಪ ಅಂತ ಸುಮ್ಮನಾಗ್ತಿದ್ವಿ. ಹೀಗಿದ್ದಾಗ ಒಂದು ದಿನ ನಮ್ ಮೇಷ್ಟ್ರು ಹಿಂದಿನ ಬೋರ್ಡ್ ಖಾಲಿ ಬಿಡಬೇಡಿ, ಅದರ ಮೇಲೆ ಏನಾದ್ರೂ, ಸುಭಾಷಿತ ಅಥವಾ ಇಂಗ್ಲೀಷ್ ನಲ್ಲಿ ‘Thought for the Day' ಬರೆದುಬಿಡಿ ಅಂತ ಹೇಳಿದರು. ನಾವ್ ಗೊತ್ತಲ್ಲ, ಆಗ್ಲಿಂದಲೂ ಬೇಕಿರೋದು ಬಿಟ್ಟು ಬೇಡದೇ ಇರೋದನ್ನ ಮಾಡೋಕೆ ಫೇಮಸ್ಸು. ಹಾಗಾಗಿ ಪ್ರತಿ ದಿನ ಮನೆಗೆ ಬರುತಿದ್ದ ಪ್ರಜಾವಾಣಿ ಪೇಪರ್ ತಗೊಂಡು ಅದರಲ್ಲಿನ ಸುಭಾಷಿತವನ್ನು ರಫ್ ಬುಕ್ ಗೆ ಬರೆದುಕೊಂಡು, ಕ್ಲಾಸ್ ರೂಮಲ್ಲಿ ಹಿಂದೆ ಇತ್ತು ಅಂದ್ನಲ್ಲ, ಆ ಬೋರ್ಡ್ ಮೇಲೆ ಬರೆಯುತಿದ್ದೆ. ಅದೇ ರೀತಿ ಇಂಗ್ಲಿಷ್ ನಲ್ಲಿ Thought for the Day ಬರೆಯುವ ಕೆಲಸ ಒಂದು ಹುಡುಗಿಗೆ ಒಪ್ಪಿಸಿದ್ದರು. ಒಂದು ದಿನ ನಾನು ನನ್ ಪಾಡಿಗೆ ಕನ್ನಡದಲ್ಲಿ ಸುಭಾಷಿತ ಬರೆದು ನಮ್ ಹುಡುಗರ ಜೊತೆ ಪ್ರೇಯರ್ ಗೆ ಹೋಗಿ ಬಂದೆ. ಬೋರ್ಡ್ ಮೇಲೆ ಬರೆದಿದ್ದ ಇಂಗ್ಲೀಷ್ ನ Thought for the Day ನಮ್ ಹುಡುಗರಿಗೆಲ್ಲ ಉಗ್ರಂ ಮುರುಳಿ ರೇಂಜ್ ಗೆ ಕೋಪ ಬರಿಸಿತ್ತು.

ಸರಳ ಮಾತಿನಲ್ಲಿ: ಹೆಣ್ಣ್ ಮಕ್ಳೇ ಸ್ಟ್ರಾಂಗು ಗುರೂ  
ಚಿತ್ರ ಕೃಪೆ:  outfoxxed.com

ಮೇಲಿನ ಚಿತ್ರದಲ್ಲಿರುವ ವಿಲಿಯಂ ಗೊಲ್ದಿಂಗ್ ಅವರ ಹೇಳಿಕೆಯನ್ನು ಬೋರ್ಡ್ ಮೇಲೆ ನೋಡಿ ಅಕಟಕಟ, ಎಂಥಾ ಘೋರ ಘಟನೆ ನಡೆಯಿತು ಎಂದು ಕೋಪ ನೆತ್ತಿಗೇರಿ ತಲೆ ಸಿಡಿಯೋದೊಂದು ಬಾಕಿ. ಆದರೆ ಸುಮ್ನಿರಬೇಕು, ಯಾಕಂದ್ರೆ ಹೆಚ್ಚು ಕಮ್ಮಿ ನಮ್ಮ ಎಲ್ಲಾ ಮೇಷ್ಟ್ರುಗಳು ಹುಡುಗೀರ ಸಪೋರ್ಟ್. ಬರೆದಿರೋದನ್ನ ಅಳಿಸಲು ಹೋಗಿ ಸಿಕ್ಕಿಹಾಕ್ಕೊಂಡು ಸುಮ್ನೆ ಯಾಕೆ ಒದೆ ತಿನ್ನೋದು ಅಂತ 'ಓಂ ಶಾಂತಿ' ಎಂದು ಮಂತ್ರ ಜಪಿಸಲು ಹೋಗಿ, ಶಾಂತಿ ಅನ್ನೋದು ಕೂಡ ಹುಡುಗಿ ಹೆಸರು, ಏ ಹೋಗಪ್ಪ ಈ ಸಿಸ್ಟಮ್ಮೇ ಸರಿ ಇಲ್ಲ ಅಂತ ಬೈಕೊಂಡು ಓಡಾಡಿದ್ದು ಈಗ ಹಳೇ ವಿಷಯ.
ಕಟ್ ಮಾಡಿದ್ರೆ 2016:
ತನಗೆ 1st Rank ಬಂದಿದ್ದಕ್ಕಿಂತ ಹುಡುಗೀರಿಗೆ 1st Rank ಬರಲಿಲ್ಲವಲ್ಲ ಅಂತ ಸಂಭ್ರಮಿಸಿದ್ದ ಮೇಟಿ ಇವತ್ತು ಜೇಬಿಂದ ಮೊಬೈಲ್ ಆಚೆ ತೆಗೆದರೆ ತನ್ನ ಸಹೋದ್ಯೋಗಿ ಗೆಳತಿಯರೊಂದಿಗೆ ಸ್ವಂತಿ ಚಿತ್ರ ತೆಗೆದ ನಂತರವೇ ಮೊಬೈಲನ್ನು ವಾಪಸ್ ಜೇಬಿಗಿಡುತ್ತಾನೆ.
ನಮ್ ಅಗ್ನಿ ಇಂಜಿನಿಯರಿಂಗ್ ಮಾಡುವಾಗ ಮೂಗುತಿ ಸುಂದರಿ ಮುಂದೆ ಮೇಣದಂತೆ ಕರಗಿ ಹೋದ.
ಬಾಂಡ್-ಲೀ ಚೆನ್ನೈ ಅಲ್ಲಿ ಅದೇನು ಮಾಡ್ತಿದ್ದಾನೋ ದೇವರಿಗೇ ಗೊತ್ತು.
ಬುಡ್ಡ ಹಗಲು-ರಾತ್ರಿ ಸೋನು ನಿಗಮ್ ಹಾಡು ಕೇಳುವ ಮಟ್ಟಿಗೆ ಹಾಳಾಗೋದ.
ಇನ್ನೂ ನಮ್ ಕಥೆ, ಕೇಳದೇ ಇರೋದೇ ಒಳ್ಳೆಯದು.
ಹೆಂಗೋ ಇದ್ದ ಬದುಕು ಈಗ ಈ ರೀತಿ ಇಲ್ಲಿಗೆ ಬಂದು ನಿಂತಿದೆ. ಈ ಪ್ರಪಂಚದಲ್ಲಿ ಹುಡುಗೀರು ಇಲ್ಲದೆ ಇದ್ದರೆ ಎಷ್ಟು ಆರಾಮಾಗಿ ಇರುತಿತ್ತಲ್ಲ ಎಂದು ಯೋಚಿಸಿದ ಮನಸ್ಸುಗಳು ಈಗ ಹೆಣ್ಣಿರದ ಭೂಮಿ ಹಂಗೇಕೆ, ಹೆಣ್ಣಿರದ ಸ್ವರ್ಗ ನಂಗೇಕೆ ಎಂದು ರವಿಮಾಮನ ಹಾಡು ಗುನುಗುತ್ತಿವೆ. Girls Vs Boys ಎಂದು ಇದ್ದ ಪುಸ್ತಕಕ್ಕೆ Girls ಹಿಂದೆ ಹಿಂದೆ Boys ಎಂದು ಮರುನಾಮಕರಣವಾಗಲು ಜಾಸ್ತಿ ಸಮಯ ಬೇಕಾಗಲಿಲ್ಲ.


ಸಾಂದರ್ಭಿಕ ಚಿತ್ರ:  ಲೈಫು ಇಷ್ಟೇನೇ


ಅರ್ಧ ಸೆಕೆಂಡ್ ಸಾಕು ನಂಗೆ, ಬೀಳೋದಕ್ಕೆ ಲವ್ವಿನಲ್ಲಿಎಂಬ ಭಟ್ಟರ ಸಾಲು ಹೆಚ್ಚು ಕಮ್ಮಿ ಎಲ್ಲಾ ಹುಡುಗರಿಗೂ ಅನ್ವಯವಾಗುತ್ತೆ, ನಮ್ ಯೋ-ಯೋ ಮ್ಯಾನೇಜರ್ ಒಬ್ಬನನ್ನು ಬಿಟ್ಟು. ಆದರೆ ನಾನು ಕಂಡಿರೋ ಹಾಗೆ, ಪ್ರೀತಿಸುವುದರಲ್ಲಿ, ಪ್ರೀತಿಗೆ ಒಪ್ಪಿಗೆ ಸೂಚಿಸುವುದರಲ್ಲಿ ಹುಡುಗಿಯರು ಸ್ವಲ್ಪ ನಿಧಾನ. ಇನ್ನೂ ಎಷ್ಟೋ ಸಲ ಸರ್ಕಾರಿ ಕಚೇರಿ / ಬ್ಯಾಂಕಲ್ಲಿ ಕೆಲಸ ಬೇಗ ಆಗುತ್ತೇನೋ, ಹುಡುಗಿಯರಿಂದ ಒಪ್ಪಿಗೆ ಪಡೆಯೋ ಕೆಲಸ ಸ್ವಲ್ಪ ಕಷ್ಟವೇ ಅಂತ ಅಂತ ನಮ್ ಗ್ಯಾಪ್ ಹೇಳ್ತಿದ್ದ. ಪ್ರೀತಿ  ಮಾಡೋದು, ಒಪ್ಪಿಗೆ ಪಡೆಯೋದು, ಜೊತೆಗೆ ಬಾಳೋದು ಎಲ್ಲಾ ಎಷ್ಟು ಕಷ್ಟ ಅಂತ ಗೊತ್ತಿರೋದಕ್ಕೆ ಆಲ್ವಾ, ಹುಡುಗರು ಫಿಲಂ ಅಲ್ಲಿ ಎಲ್ಲರೂ ಅಷ್ಟು ಕಷ್ಟ ಪಡೋದು. ಆದರೆ ಆ ಪ್ರೀತಿ ಅನ್ನೋದು ಒಂದು ಸಲ ಶುರುವಾದರೆ ಇಡೀ ಜಗತ್ತೇ ಎದುರು ಬಿದ್ದರೂ ಮುನ್ನುಗ್ಗುವ ಕಾನ್ಫಿಡೆನ್ಸ್ ಸಿಗುತ್ತೆ. ಪ್ರೀತಿಗಿರುವ ಶಕ್ತಿ ಅಂತದ್ದು. ಸಾಮಾನ್ಯವಾಗಿ ನಾನು ಕಂಡು ಕೇಳಿರುವಂತೆ ಹುಡುಗರಿಗೆ ತಾಯಿ ಮೇಲೆ ಪ್ರೀತಿ ಜಾಸ್ತಿ, ಹುಡುಗಿಯರಿಗೆ ತಂದೆ ಮೇಲೆ ಪ್ರೀತಿ ಜಾಸ್ತಿ ಅಂತ. ಇದು ಎಲ್ಲರಿಗೂ ಅನ್ವಯಿಸೋದಿಲ್ಲವಾದರೂ ಈ ಸಾಮಾನ್ಯ ಅಭಿರುಚಿಗೆ psychological explanation ಕೂಡ ಇದೆ. ಆದ್ದರಿಂದಲೇ ಏನೋ 'ಊರಿಗೆ ಅರಸನಾದರೂ ತಾಯಿಗೆ ಮಗ' ಮತ್ತು 'daddy's little girl' ಎಂಬ ನುಡಿಗಟ್ಟುಗಳು ಬಳಕೆಗೆ ಬಂದಿದ್ದು.


ಸಾಂದರ್ಭಿಕ ಚಿತ್ರ: Lucy

ಪ್ರಕಾಶ್ ಜಯರಾಂ ಅವರ 'ಸಿದ್ಧಾರ್ಥ' ಚಿತ್ರದಲ್ಲಿ ಹೀಗೊಂದು ಸಂಭಾಷಣೆ ಇದೆ. ಹುಡುಗರು ತುಂಬಾ ಸುಲಭವಾಗಿ ಪ್ರೀತಿಸುತ್ತಾರೆ ಮತ್ತು ಹುಡುಗಿಯರು ತುಂಬಾ ಈಸಿಯಾಗಿ ಮರೆತುಬಿಡುತ್ತಾರೆ ಅಂತ. ಈ ಹೇಳಿಕೆಯ converse version ಹೇಳೋದಾದರೆ ಹುಡುಗಿಯರು ತುಂಬಾ ಲೇಟಾಗಿ ಲವ್ ಮಾಡುತ್ತಾರೆ ಮತ್ತು ಹುಡುಗರು ತುಂಬಾ ಟೈಮ್ ತಗೊಂಡು ಬ್ರೇಕ್ ಅಪ್ ನಿಂದ ಹೊರಬರುತ್ತಾರೆ ಎನ್ನಬಹುದು. ಫಿಲಂಗಳಲ್ಲಿ ಹೇಳೋದು, ತೋರಿಸೋದು ಎಲ್ಲವೂ ಸತ್ಯವಲ್ಲ. ಆದರೆ ಒಂದು ವಿಷಯವಂತೂ ಸತ್ಯ. ಹುಡುಗಿಯರು ತಾವಾಗಿ ಬಂದು ಪ್ರಪೋಸ್ ಮಾಡಿರೋದು ತೀರಾ ಅಂದರೆ ತೀರಾ ಕಮ್ಮಿನೇ. ಆ ಥರ ಹುಡುಗಿಯರಿಂದ ಪ್ರಪೋಸಲ್ ಪಡೆದ ಹುಡುಗರಿಗೆ ಸ್ವರ್ಗದಲ್ಲಿ ವಿಶೇಷ ಸ್ಥಾನ ಸಿಗಲೇ ಬೇಕು ಬಿಡಿ. ವಿಷಯ ಅದಲ್ಲ, ಆಗಲೇ ಹೇಳಿದಂತೆ ಹುಡುಗರು ಲವ್ ಮಾಡೋ ವಿಷಯದಲ್ಲಿ ಬೆಳಕಿಗಿಂತಲೂ ಸ್ಪೀಡು (Figuratively ಹೇಳಿದ್ದು, Practicallyಆಗೋದಿಲ್ಲ ಅಂತ ನನಗೂ ಯೋಚನೆ ಮಾಡಿದ ಮೇಲೆ ಹೊಳೆಯಿತು). ಪಾಪ ಇನ್ನೂ ಆ ಹುಡುಗಿ ಕ್ಯಾಂಪಸ್ ಗೆ ಕಾಲಿಟ್ಟು ತನ್ನ department building ಕಡೆ ತಲೆ ಎತ್ತಿ ನೋಡಿರೋದಿಲ್ಲ, ಆಗಲೇ ಮಗಾ, ವೈಟ್ ಚೂಡಿದಾರ್, ಅದೇ ಈ ಕಡೆಯಿಂದ ಮೂರನೆಯವಳು, ಇವತ್ತಿಂದ ನಿಮ್ ಅತ್ತಿಗೆಅಂದುಬಿಡುತ್ತಾರೆ. ಆದರೆ ಹುಡುಗಿಯರ ವಿಷಯ  ಹಾಗಲ್ಲ, ತಾನು ಪ್ರೀತಿಸುವ ಹುಡುಗ ತನಗಿಂತ ಎತ್ತರ ಇರಬೇಕು ಎಂಬ ಸಿಲ್ಲಿ ವಿಚಾರಗಳಿಂದ ಹಿಡಿದು, ಈ ಹುಡುಗ ನಿಜವಾಗ್ಲೂ ಮದುವೆಯಾಗುವ ಇರಾದೆ ಹೊಂದಿದ್ದಾನೋ ಇಲ್ಲಾ ಬರೀ ಟೈಮ್ ಪಾಸಿಗೆ ಹಿಂದೆ ಬಿದ್ದಿದ್ದಾನ? ಎಂಬ ಗಂಭೀರ ವಿಷಯದವರೆಗೂ ಯೋಚಿಸಿ, ಪುನಃ ಪುನಃ ಯೋಚಿಸಿ ಕೊನೆಗೊಮ್ಮೆ ಹೂ ಅನ್ನುತ್ತಾರೆ. ಅದೇ ಖುಷಿಗೆ ಹುಡುಗರು ಮನಸ್ಸಲ್ಲೇ ಗಂಗ್ನಂ ಸ್ಟೈಲ್ ಸ್ಟೆಪ್ ಹಾಕಿ, ನಂತರ ದೇವಸ್ಥಾನ, ಪಾರ್ಕು, ಸಿನಿಮಾ, ಹೋಟೆಲ್ ಎಲ್ಲಾ ಆದಮೇಲೆ ಒಂದು ದಿನ I Love You too ಎಂದು ಹುಡುಗಿಯ ಬಾಯಿಂದ ಕೇಳಿದ ದಿನ ಆ ಹುಡುಗ ಖುಷಿಯಲ್ಲಿ ಏನಾಗುತ್ತಾನೆ ಎಂಬುದರ ಅಂದಾಜು ನನಗಿಲ್ಲ, ಗೊತ್ತಿದ್ದವರು ಹೇಳಿಬಿಡಿ. ಮೊದಲ ಪ್ರೀತಿ, ಮೊದಲ ಸಂಬಳ, ಬೇಸಿಗೆಯ ನಂತರದ ಮೊದಲ ಮಳೆ ಎಷ್ಟು ವಿಶೇಷವೋ ಮೊದಲ ಅಪ್ಪುಗೆ / ಚುಂಬನವೂ ಅಷ್ಟೇ ವಿಶಿಷ್ಟವಾದ ಅನುಭವಗಳು. ಮಾತಲ್ಲಿ, ಬರವಣಿಗೆಯಲ್ಲಿ ವಿವರಿಸಲಾಗದ ವಿಷಯಗಳು ಇವೆಲ್ಲಾ. ಇಂತ ಅನುಭವಗಳು ಇದ್ದರೆ ಒಳ್ಳೇದು, ಇಲ್ಲದಿದ್ದರೆ ಮೆಸೇಜ್ ಮಾಡಿ, Tom & Jerry ಯಲ್ಲಿ, Jerry ಮಾಡುತ್ತಿದ್ದ ತರಲೆಗಳ ನೆನೆಯೋಣ.

ಮೊದಲ ಮಳೆಯಂತೆ, ಎದೆಗೆ ಇಳಿದೆ ಮೆಲ್ಲಗೆ
ಸಾಂದರ್ಭಿಕ ಚಿತ್ರ: ಮೈನಾ

ನಾನು ನನ್ನ ಹೆಂಡ್ತೀರು ಚಿತ್ರದಲ್ಲೊಂದು ದೃಶ್ಯ ಇದೆ. ರವಿಚಂದ್ರನ್ ಮತ್ತು ಸೌಂದರ್ಯ ಇಬ್ಬರೂ ಒಂದು ಮಗುವನ್ನು ದತ್ತು ಪಡೆಯಲು ಅನಾಥಾಶ್ರಮಕ್ಕೆ ಹೋಗಿರುತ್ತಾರೆ. ಆಗ ಅಲ್ಲಿ ಒಂದು ಮಗುವನ್ನು ತುಂಬಾ ಇಷ್ಟ ಪಟ್ಟು, ದತ್ತು ಪಡೆಯಲು ನಿರ್ಧರಿಸಿ ಇನ್ನೇನು ಎಲ್ಲಾ formalities ಮುಗಿಸಿ ಹೊರಡಬೇಕೆನ್ನುವಷ್ಟರಲ್ಲಿ ಹಿಂದಿನ ದಿನ ಆ ಮಗುವನ್ನು ಅನಾಥಾಶ್ರಮದಲ್ಲಿ ಬಿಟ್ಟು ಹೋಗಿದ್ದ ಆ ತಾಯಿ ಬಂದು ನನ್ನ ಮಗು ನನಗೆ ಕೊಟ್ಟುಬಿಡಿ, ಹೇಗಾದರೂ ಕಷ್ಟ ಪಟ್ಟು ಸಾಕುತ್ತಿನಿ ಅಂತ ವಾಪಸ್ ಮಗುವನ್ನು ಎತ್ತಿಕೊಂಡು ಹೋಗುತ್ತಾಳೆ. ಈ ದೃಶ್ಯ ಕಾಲ್ಪನಿಕವೇ ಆದರೂ ತಾಯಿ ಪ್ರೀತಿ ಎಂಥದ್ದು ಎಂದು ಪರಿಣಾಮಕಾರಿಯಾಗಿ ಬಿಂಬಿಸಿದೆ. ಪಕ್ಕಾ ವೈಜ್ಞಾನಿಕವಾಗಿ ಯೋಚಿಸುತ್ತಾ ಹೋದರೆ "Reproduction is the natural process among organisms by which new individuals are generated and the species perpetuated" ಎಂಬ ಹೇಳಿಕೆಗೆ ತೀರಾ ಹತ್ತಿರವಿದ್ದ definition ಓದಿದ್ದ ನೆನಪು. ಅಂದರೆ ಒಂದು ಜೀವ ಸಂಕುಲ ಜೀವಂತವಿರಬೇಕಾದರೆ ಅದಕ್ಕೆ ಅನುಕೂಲಕರ ವಾತಾವರಣ / ಊಟ / ನೀರು / ಗಾಳಿ ಎಷ್ಟು ಮುಖ್ಯವೋ ಅದರ ಸಂತತಿಯನ್ನು ಮುಂದೆ ಕೊಂಡೊಯ್ಯುವುದೂ ಕೂಡ ಅಷ್ಟೇ ಮುಖ್ಯ. ಅಲ್ಲಿಗೆ ಒಂದು ಸಂತತಿ ಜನನವಾಗಲು ಹೆಣ್ಣು-ಗಂಡು ಪ್ರಾಣಿಯ ಪ್ರಾಮುಖ್ಯತೆ ಸಮಾನವಾಗಿದೆ ಅಂದ ಹಾಗಯಿತು. ಆದರೂ ಕೆಲವು ಕಾರಣಗಳಿಂದ ತಾಯಿಗೆ ತನ್ನ ಸಂತತಿಯ ದೈಹಿಕ ಮತ್ತು ಮಾನಸಿಕ ಸೆಳೆತ ಜಾಸ್ತಿಯೇ ಅನ್ನಬಹುದು. ಕಾಲೇಜು, ಲವ್ವು, ಅದು ಇದು ಅಂದ್ಕೊಂಡು ಬರೆಯುತ್ತಿದ್ದೆ, ನಡುವಲ್ಲಿ ಇದ್ದಕ್ಕಿದ್ದ ಹಾಗೆ reproduction ಟಾಪಿಕ್ ಓದಿ ಕಸಿವಿಸಿಯಾಗಿದ್ದರೆ ದಯವಿಟ್ಟು ಕ್ಷಮೆಯಿರಲಿ. ಒಂದು ಪಾಯಿಂಟ್ ಪ್ರೂವ್ ಮಾಡಬೇಕಿತ್ತು, ಅದಕ್ಕೆ ಇದೆಲ್ಲಾ. ಪಾಯಿಂಟ್ ಏನಪ್ಪಾ ಅಂದರೆ ಪ್ರಕೃತಿ, ಅದರ ರಚನೆ, ಮಾನವನನ್ನು ಒಳಗೊಂಡಂತೆ ಪ್ರಾಣಿಗಳ ಜನನ, ಜೀವನ, ಮರಣವೆಲ್ಲಾ ಆ ಭಗವಂತನ ಅದ್ಭುತ ರಚನೆ. ಮಗು ಆದ ಮೇಲೆ ಗಂಡ ಹೆಂಡತಿ ಎನಿಸಿಕೊಂಡವರು ತಂದೆ-ತಾಯಿಯಾಗುತ್ತಾರೆ ಎಂದು ಸಮಾಜ ಹೇಳುತ್ತದೆ. ಆದರೆ ಒಂದು ಮಗುವಾದಾಗ ಮಾತ್ರ ಅವನು ತಂದೆಯಾಗಬಹುದೇನೋ, ಆದರೆ ಆ ಮಗು ಜನನವಾದ ನಂತರವೇ ಅವಳು ತಾಯಿ ಅನಿಸಿಕೊಳ್ಳುತ್ತಾಳೆ ಅನ್ನೋದು ಸುಳ್ಳು. ಏಕೆಂದರೆ ಚಿಕ್ಕ ವಯಸ್ಸಿನಿಂದಲೂ ಹೆಣ್ಣು ಮಕ್ಕಳಲ್ಲಿ ತಾಯಿ ಹೃದಯವೊಂದು ಜಾಗೃತಾ ಗಿರುವುದನ್ನು ಕಾಣಬಹುದು. ಅದೇ ಅವರು ಆಟವಾಡುವ ವಸ್ತುಗಳನ್ನು ಗಮನಿಸಿ ನೋಡಿ: ಚಿಕ್ಕ ಹುಡುಗಿ ತನ್ನ ಬೊಂಬೆಗೆ ಯಾವ ಬಟ್ಟೆ ಚೆನ್ನಾಗಿ ಕಾಣುತ್ತೆ, ಟೋಪಿ, ಗಡಿಯಾರ ಏನಿದೆ ಎಂದೆಲ್ಲ ಸೂಕ್ಷ್ಮವಾಗಿ ಗಮನಿಸುತ್ತಾ ಅದನ್ನೂ ತನ್ನ ಮಗುವೆಂದು ಭಾವಿಸಿ ಆರೈಕೆ ಮಾಡುತ್ತಿರುತ್ತಾಳೆ. ಇನ್ನು ನಮ್ ಗಂಡು ಹೈಕಳು ಗೊತ್ತಲ್ಲ, ವಜ್ರ ಕೊಟ್ಟರೂ, ಕಾರ್ ಥರ ನೆಲದ ಮೇಲೆ ಉರುಳಿಸಿ ಉಯ್.ಜುಯ್ ಎಂದು ಸದ್ದು ಮಾಡು ತ್ತಿರುತ್ತಾರೆ. ಇದೆಲ್ಲ ತುಂಬಾ stereotypical scenario ಎನಿಸಿದರೂ ನಿಜ. ಕೆಲವು ಘಟನೆಗಳನ್ನು ವಿವರಿಸಿದರೆ ವಿಷಯ ಇನ್ನೂ ಚೆನ್ನಾಗಿ ಕ್ಲೀಯರ್ ಆಗುತ್ತದೆ.


ಸಾಂದರ್ಭಿಕ ಚಿತ್ರ: Mr & Mrs ರಾಮಾಚಾರಿ

ಒಂದು ದಿವಸ ನಾನು ಸಾಗರದಿಂದ ಶಿವಮೊಗ್ಗಕ್ಕೆ ಬಂದಾಗ ಸಮಯ ಸಂಜೆ 6 ಆಗಿತ್ತು. ಮಧ್ಯಾಹ್ನ ಊಟ ಬೇರೆ ಮಾಡಿರಲಿಲ್ಲ. ರಾತ್ರಿ ಮಾಡಬೇಕಿದ್ದ ಊಟ ಈಗಲೇ ಮಾಡೋಣ ಅನಿಸಿತು, ಆದರೆ ಇನ್ನೂ 6 ಗಂಟೆ, ಒಂದು ಪ್ಲೇಟ್ ಪಾನಿಪುರಿ ತಿನ್ನೋಣ ಸಾಕು, ಆಮೇಲಿಂದ್ ಆಮೇಲೆ ಅಂತ ಪಾನಿಪುರಿ ಅಂಗಡಿ ಹುಡುಕಿದೆ. ಹೆಂಗೋ ನಮ್ ಪುಣ್ಯಕ್ಕೆ ಒಂದು ಗೋಲ್-ಗಪ್ಪಾ ಸ್ಟಾಂಡ್ ಇತ್ತು. (ನನಗೆ ಗೊತ್ತಿರೋ ಹಾಗೆ ನಾಲ್ಕು ಚಕ್ರದ ತಳ್ಳುವ ಗಾಡಿಯಲ್ಲಿ ಮಾರೋದು ಪಾನಿಪುರಿ, ಸ್ಟೂಲ್ ಮೇಲೆ ಬುಟ್ಟಿ ತುಂಬಾ ಪೂರಿ ಇರುತ್ತಲ್ಲಾ, ಅದು ಗೋಲ್ ಗಪ್ಪ, ಸದ್ಯಕ್ಕೆ ಅದು ಇಂಪಾರ್ಟೆಂಟ್ ಅಲ್ಲ). ಪ್ರಾಯಶಃ ನನ್ನದು ಮೂರನೇ ಗೋಲ್-ಗಪ್ಪಾ ಪ್ರಗತಿಯಲ್ಲಿದ್ದಾಗ ಒಂದು ಹುಡುಗ-ಹುಡುಗಿ ಬಂದು ನಿಂತರು. ರಸ್ತೆ ಆಚೆ ನಿಂತಿರೋ ಹುಡುಗಿ ಮುಖ ಅಸ್ಪಷ್ಟವಾಗಿ ಕಂಡರೂ ನೋಡ್ಕೊಂಡೇ ನಿಲ್ಲೋ ಹುಡುಗರು ನಾವು, ಹತ್ತಿರ ನಿಂತರೆ ಸುಮ್ಮನಿರ್ತೀವಾ? ಹಂಗೇ ನೋಡುತ್ತಾ ಕಣ್ಣು ತುಂಬಿಕೊಳ್ಳಬೇಕಿತ್ತು, ಆದರೆ ನೋಡಲಿಲ್ಲ. ಯಾಕೆ ಅಂತೀರಾ? ಅವಳ ಜೊತೆ ಒಬ್ಬ ಹುಡುಗ ಇದ್ದನಲ್ಲಾ ಅದಿಕ್ಕೆ! ಅದೆಷ್ಟು ಜನ ಹುಡುಗುಗೀರನ್ನ ನೋಡಿದ್ದರೂ, ನೋಡುವುದಿದ್ದರೂ, ಹುಡುಗರ ಜೊತೆ ಇರೋ ಹುಡುಗಿಯರನ್ನ ನಾವು ಕಣ್ಣೆತ್ತಿ ನೋಡೋದೇ ಇಲ್ಲ. ಅದು ನಮ್ Barney Stinson ರಚನೆಯ The Bro Code ಬ್ರೇಕ್ ಮಾಡಿದ ಹಾಗೆ. Coming back to ಗೋಲ್ ಗಪ್ಪಾ, ಆ ಹುಡುಗಿ ಒಂದು ಪ್ಲೇಟ್ ಮಾತ್ರ ಆರ್ಡರ್ ಮಾಡಿದಳು. ಅವನಿಗೆ ತಿನ್ನುವ ಮನಸ್ಸಿರಲಿಲ್ಲವೇನೋ ಸ್ವಲ್ಪ ದೂರವೇ ನಿಂತಿದ್ದ. ಮೊದಲ ಪೂರಿ ಆಕೆಯ ಪ್ಲೇಟ್ ಗೆ ಬಿದ್ದ ಕೂಡಲೇ ಆಕೆ ಹೋಗಿ ಅವನಿಗೆ ಒತ್ತಾಯ ಮಾಡಿ ತಿನ್ನಿಸಿದಳು. ರೋಡಲ್ಲಿ, ಹೋಟೆಲಲ್ಲಿ, ಪಾರ್ಕಲ್ಲಿ, ನಮ್ಮ ಮೆಟ್ರೋದಲ್ಲಿ, ಅಷ್ಟ್ ಯಾಕೆ ಥಿಯೇಟರಲ್ಲಿ ಕೂಡ ಹುಡುಗ ಹುಡುಗಿಯರು ಕೈ ಹಿಡಿದೇ ಕೂರುವುದನ್ನು, ಒಂದೇ ಎಳನೀರಿಗೆ ಎರಡು ಸ್ಟ್ರಾ ಹಾಕಿ ಕುಡಿಯೋದನ್ನು, ಇತ್ಯಾದಿ ಇತ್ಯಾದಿಗಳನ್ನು ನಾವು- ನೀವು ನೋಡೇ ಇರ್ತೀವಿ. ಕೆಲವೊಮ್ಮೆ “Awww, so cute ಅಲಾ?!” ಅನಿಸಬಹುದು ಮತ್ತು ಕೆಲವೊಮ್ಮೆ ಏನ್ ಶೆಕೆ ಗುರೂ ಇವ್ರುದು, ಹೊತ್ತಿಲ್ಲ, ಗೊತ್ತಿಲ್ಲ ಅನಿಸಬಹುದು. ಅದು ಅವರವರ ಮನೋಸ್ಥಿತಿಗೆ ಬಿಟ್ಟಿದ್ದು. ಇದನ್ನ PDA: Public Display of Affection ಎಂದು ಕರೆಯುತ್ತಾರೆ. ಆ ಹುಡುಗಿ ಜಾಗದಲ್ಲಿ ನಾನು ಇದ್ದಿದ್ರೆ ಮೊದಲು ನಾನು ಹೊಟ್ಟೆ ತುಂಬಾ ತಿಂದು ಆಮೇಲೆ ಪಕ್ಕ ಯಾರು ನಿಂತಿದ್ದಾರೆ ಅನ್ನೋದನ್ನು ನೋಡ್ತಾ ಇದ್ದೆ. ಆದರೆ ಆ ಹುಡುಗಿ ನೋಡಿ, ಅವಳು ಅಷ್ಟು ಆಸೆಯಿಂದ ಆರ್ಡರ್ ಮಾಡಿದ ಗೋಲ್ ಗಪ್ಪ ಬಂದ ಕೂಡಲೇ ಮೊದಲು ಅವನಿಗೆ ತಿನ್ನಿಸಿ ಹೇಗಿದೆ ಅಂತ ಕೇಳಿದಳು. ಅವನು ಚೆನ್ನಾಗಿದೆ ಅಂತ ಕೈ ಸನ್ನೆ ಮಾಡಿದ. ನನ್ನ ಪಾಡಿಗೆ ಯಾವುದೋ ಹಾಡು ಗುನುಗುತಿದ್ದ ನನಗೆ ಇದ್ದಕ್ಕಿದ್ದ ಹಾಗೆ ಮೈಂಡ್ ಶಿಫ್ಟ್ ಆಗಿಬಿಡ್ತು. ಏನೋ ಯೋಚನೆ ಮಾಡ್ತಿದ್ದೆ, ಸಡನ್ನಾಗಿ ಎಲ್ಲಾ ಮರೆತು ಹೋಯಿತು. "ಅನ್ನಪೋರ್ನೆಶ್ವರಿಯೇ ಸ್ವತಃ ಅನ್ನದಮೃತ ಕಳಿಸಿ ತಿನಿಸೊ..." ಹಾಡು ಕೇಳಿಸಲು ಶುರುವಾಯಿತು. ಇದನ್ನೇ ನಾನು ಆಗ ತಾಯಿ-ಹೃದಯ ಎಂದು ರೆಫರ್ ಮಾಡಿದ್ದು. ಬರೀ ಗರ್ಲ್ ಫ್ರೆಂಡ್ ಅಂತ ಅಲ್ಲ, ಅಕ್ಕ-ತಂಗಿ ಇದ್ದವರಿಗೆ ಈ ವಿಷಯ ಇನ್ನೂ ಚೆನ್ನಾಗಿ ಗೊತ್ತಿರುತ್ತೆ. ಎಷ್ಟೇ ಕಯ್ಯ-ಮಯ್ಯ ಅಂತ ಇಡೀ ದಿನ ಜಗಳವಾಡಿದರೂ ಅಕ್ಕ ತಂಗಿಯರಷ್ಟು ಮಾರಲ್ ಸಪೋರ್ಟ್ ಯಾರೂ ಕೊಡೋದಿಲ್ಲ ಅನ್ನೋದು ಗೊತ್ತಿರುವ ವಿಷಯವೇ. ಇವತ್ತು ನನ್ ತಂಗಿಗೆ ಮದುವೆಯಾಯ್ತು, ನಾಳೆಯಿಂದ ಈ ರಿಮೋಟ್ ನಂದೇ ಎಂದು ಬೀಗಿದ್ದ ನಮ್ ಹುಡುಗ ಅವಳ ಇಲ್ಲದಿರುವಿಕೆಯನ್ನು ಮಿಸ್ ಮಾಡಿಕೊಳ್ಳಲು ಜಾಸ್ತಿ ಸಮಯ ಬೇಕಾಗಲಿಲ್ಲ. ಈ ಬಗೆಯ emotional attachment ಹುಡುಗರಿಗೆ ಸ್ವಲ್ಪ ಕಮ್ಮಿಯೆ. ಅಂದರೆ ಹುಡುಗರು ಕಷ್ಟ ಬಂದಾಗ ಅಳೋದಿಲ್ಲ ಅಂತ ಏನಿಲ್ಲ, ಆದರೆ coping ವಿಧಾನ ಬೇರೆಯದ್ದು. “ಅವನ ಹತ್ರ ಲೈಸೆನ್ಸ್ ಇಲ್ಲ, ಸಿಕ್ಕಾಕೊಂಡರೆ ಕಷ್ಟ ಅಂತ ನಾನೇ ಗಾಡಿ ಓಡಿಸುತ್ತಿದ್ದೆಅಂತ ಪೊಲೀಸ್ ಹತ್ರ ಸುಳ್ಳು ಹೇಳಿದವರು ಯಾರಿಗೆ ತಾನೇ ಗೊತ್ತಿಲ್ಲ ಹೇಳಿ?

ಸಾಂದರ್ಭಿಕ ಚಿತ್ರ: Ek Niranjan


‘Ee lifestyle Chaaladi Subject kosam’ ಎಂಬ Iddarammayilatho ಹಾಡಿನಂತೆ ಹೆಣ್ಣ ಮಕ್ಳು ಮತ್ತು ನಮ್ಮ ಅವರ ಜಟಾಪಟಿ, ಅನುಬಂಧ, ಹಾಸ್ಯ, ರೋಮ್ಯಾನ್ಸ್ ಇತ್ಯಾದಿ ಎಲ್ಲವನ್ನೂ ಬರೆದು ಮುಗಿಸಲು ಸಾಧ್ಯವೇ ಇಲ್ಲ. ಆದರೂ ಒಂದು 'ದೊಡ್ಡ ಅಂಕಣ' ಬರೆದು ಬಹಳ ದಿನ ಆಯ್ತು ಅಂತ, ಬೇಗ ಬೇಗ ಪ್ರಕಟಿಸಬೇಕು ಅಂತ 13 ಪುಟಗಳ ಬರವಣಿಗೆಯಲ್ಲಿ ಎಷ್ಟೋ ಸಾಲುಗಳನ್ನು ಎಗರಿಸಿ ಇಷ್ಟಕ್ಕೆ ತಂದು ನಿಲ್ಲಿಸಿದ್ದೆನೆ. Deadline ಅಂದರೆ ಹೀಗೆನೇ, ತಿಳಿದೂ ತಿಳಿಯದ ಹಾಗೆನೇ ಎಂದು ಮತ್ತೊಂದು ಹಾಡನ್ನು ಸೇರಿಸಲು ಹೋಗಿ ಸುಮ್ನೆ ನಿಮ್ ಹತ್ರ ಯಾಕೆ ಒದೆ ತಿನ್ನೋ ಕೆಲಸ ಮಾಡೋದು? ಈ ಅಂಕಣವನ್ನು ಇಲ್ಲಿಗೆ ನಿಲ್ಲಿಸುವೆ. ನನ್ನ ಮೂಗಿನ ನೇರಕ್ಕೆ ಕಂಡು, ಕೇಳಿ, ಅನಿಸಿದ್ದನ್ನು ಇಲ್ಲಿ ದಾಖಲಿಸಿದ್ದೇನೆ. ಇದರ ಬಗ್ಗೆ ನಿಮ್ಮ ಅಭಿಪ್ರಾಯವನ್ನು ಕೂಡ ಹೇಳಿದರೆ ತುಂಬಾ ಒಳ್ಳೆಯದು, ನಾನೂ ನನ್ ಪಾಡಿಗೆ ಆರಾಮಾಗಿ ಫೋನ್ ಚಾರ್ಜ್ ಗೆ ಇಟ್ಟು ಮಲಗುತ್ತೇನೆ. ಮತ್ತೆ ಸಿಗೋಣ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ